ಬೆಂಗಳೂರು : ಚಾರಿತ್ರಿಕ ದೆಹಲಿ ರೈತ ಹೋರಾಟ ಬೆಂಬಲಿಸಿ ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಇಂದು ಹದಿನೈದನೆಯ ದಿನಕ್ಕೆ ಕಾಲಿಟ್ಟಿದೆ.
ಸಮಾಜವಾದಿ ಸಮಾಗಮ ಹಾಗೂ ಸಮಾಜವಾದಿ ಅಧ್ಯಯನ ಕೇಂದ್ರದ ಕಾರ್ಯಕರ್ತರು ಭಾಗವಹಿಸಿದ್ದ ಇಂದಿನ ಧರಣಿಯನ್ನು ಪ್ರಖ್ಯಾತ ಲೇಖಕ ಬಂಜಗೆರೆ ಜಯಪ್ರಕಾಶ್ ಉದ್ಘಾಟಿಸಿದರು.
ಭಾರತದ ಕೃಷಿಯ ಬಹುದೊಡ್ಡ ಭಾಗವಾಗಿರುವ ಸಣ್ಣ ಮತ್ತು ಅತಿಸಣ್ಣ ರೈತರನ್ನು ಕೃಷಿ ರಂಗದಿಂದಲೇ ಶಾಶ್ವತವಾಗಿ ಹೊರ ಹಾಕುವ ಉದ್ದೇಶದ ಈ ಹೊಸ ಕೃಷಿ ಕಾಯ್ದೆಗಳಿಂದ ಬಹುದೊಡ್ಡ ಹೊಡೆತ ಆಹಾರ ಭದ್ರತೆಯ ಮೇಲೆ ಬೀಳುತ್ತದೆ ಇದರಿಂದ ಸಾರ್ವಜನಿಕ ಪಡಿತರ ವ್ಯವಸ್ಥೆಯಿಂದಾಗಿ ಕನಿಷ್ಟ ಆಹಾರ ಪಡೆದು ಜೀವಿಸುತ್ತಿರುವ ಕೋಟ್ಯಾಂತರ ಕುಟುಂಬಗಳು ಹಸಿವಿಗೆ ಸಿಲುಕಲಿವೆ ಎಂದು ಬಂಜಗೆರೆ ಜಯಪ್ರಕಾಶ್ ಆತಂಕ ವ್ಯಕ್ತಪಡಿಸಿದರು.
ಜಾಗತೀಕರಣ ಧೋರಣೆಗಳ ಭಾಗವಾಗಿ ಬಂದಿರುವ ಇಂತಹ ಕೃಷಿ ಕಾನೂನುಗಳು ಕಾರ್ಪೊರೇಟ್ ವ್ಯವಸ್ಥೆಯನ್ನು ಕೃಷಿ ರಂಗದಲ್ಲೂ ಬಲಗೊಳಿಸುತ್ತವೆ. ದೊಡ್ಡ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ಕ್ರಮೇಣ ರೈತರ ಮಾಲೀಕತ್ವದಲ್ಲಿ ಇರುವ ಕೃಷಿ ಭೂಮಿಯನ್ನು ಕಬಳಿಸಲಿವೆ ಹಾಗಾಗಿ ದೇಶದ ಆಹಾರ ಭದ್ರತೆ ದೃಷ್ಟಿಯಿಂದ ಈ ಕಾನೂನು ಗಳು ರದ್ದಾಗಬೇಕು ಎಂದು ಒತ್ತಾಯಿಸಿದರು.
ರಾಷ್ಟ್ರೀಯ ಕಾನೂನು ಕಾಲೇಜಿನ ಪ್ರೊಫೆಸರ್ ಬಾಬು ಮ್ಯಾಥ್ಯೂ, ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್, ಮಾಜಿ ಉಪ ಸಭಾಪತಿ ಬಿ.ಆರ್ ಪಾಟೀಲ್, ಹಿರಿಯ ಕಾರ್ಮಿಕ ನಾಯಕ ಮೈಕೆಲ್ ಫರ್ನಾಂಡೀಸ್, ಸಾಮಾಜಿಕ ಕಾರ್ಯಕರ್ತ ಎಸ್ ಆರ್ ಹಿರೇಮಠ್, ಹಿರಿಯ ಸಮಾಜವಾದಿ ಬಾಬು ಹೆದ್ದೂರುಶೆಟ್ಟಿ, ಹಿರಿಯ ಹೋರಾಟಗಾರ ಜಿ.ಎನ್ ನಾಗರಾಜ್, ನಮ್ಮೂರ ಭೂಮಿ ಆಂದೋಲನದ ಗಾಯಿತ್ರಿ ರವರು ಕೂಡ ಮಾತಾನಾಡಿದರು.
ಇಂದಿನ ಪ್ರತಿಭಟನಾ ಧರಣಿ ನೇತೃತ್ವವನ್ನು ಐಕ್ಯ ಹೋರಾಟದ ಡಾ.ಪ್ರಕಾಶ್ ಕಮ್ಮರಡಿ ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಅಧ್ಯಕ್ಷ ಬಡಗಲಪುರ ನಾಗೇಂದ್ರ, ರಾಜ್ಯ ಕಾರ್ಯದರ್ಶಿ ರವಿಕಿರಣ್ ಪೂಣಚ್ಚ, ಹಿಂದ್ ಮಜ್ದೂರ್ ಕಿಸಾನ್ ಪಂಚಾಯಿತ್ ನ ಕಾಳಪ್ಪ, ಕರ್ನಾಟಕ ಪ್ರಾಂತ ರೈತ ಸಂಘದ ಹೆಚ್ ಆರ್ ನವೀನ ಕುಮಾರ್, ಟಿ ಯಶವಂತ, ಎಐಸಿಸಿಟಿಯು ನ ಮಣಿ ಆರ್ ಕೆ ಎಸ್ ನ ಶಿವಪ್ರಕಾಶ್ ಎಐಕೆಎಸ್ ನ ಪ್ರಸನ್ನ, ಕರ್ನಾಟಕ ಜನಶಕ್ತಿ ಸಂಘಟನೆಯ ಸಿರಿಮನೆ ನಾಗರಾಜ್ ಕಬ್ಬು ಬೆಳೆಗಾರರ ಸಂಘದ ಅತ್ತಹಳ್ಳಿ ದೇವರಾಜ್ ಮುಂತಾದವರು ವಹಿಸಿದ್ದರು.