ಬೆಂಗಳೂರು: ಅರಣ್ಯ ಇಲಾಖೆಯಿಂದ ಒಕ್ಕಲೆಬ್ಬಿಸಲ್ಪಟ್ಟ ರೈತರು ತಮ್ಮ ಬಗರ್ಹುಕ್ಕುಂ ಭೂಮಿಯನ್ನು ಮರಳಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್ಎಸ್), ತುಮಕೂರು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸತತ 5 ದಿನ ಹೋರಾಟ ನಡೆಸಿ ಹೋರಾಟದ ಮೂಲಕ ಜಯಗಳಿಸಿರುವುದಕ್ಕೆ ಕೆಪಿಆರ್ಎಸ್ ಕರ್ನಾಟಕ ರಾಜ್ಯ ಸಮಿತಿ ಅಭಿನಂದನೆ ಸಲ್ಲಿಸಿದೆ.
ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಕೆಪಿಆರ್ಎಸ್ ರಾಜ್ಯ ಅಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ, ಸುಮಾರು 70 ವರ್ಷಗಳಿಗೂ ಹೆಚ್ಚು ಕಾಲದಿಂದ ಬಗರ್ ಹುಕ್ಕುಂ ಬೇಸಾಯ ಮಾಡಿಕೊಂಡು ಬರುತ್ತಿದ್ದ ಚೇಳೂರು ಹೋಬಳಿ ಮಂಚಲದೊರೆ, ಅಂಕಸಂದ್ರ ಗ್ರಾಮ ಪಂಚಾಯತಿ ಸೇರಿದಂತೆ ವಿವಿಧ ಪಂಚಾಯತಿ ವ್ಯಾಪ್ತಿಯ ಸುಮಾರು 35 ಗ್ರಾಮಗಳ ಬಗರ್ ಹುಕ್ಕುಂ ರೈತರನ್ನು ಅರಣ್ಯ ಭೂಮಿ ಎಂದು ಭಯಪಡಿಸಿ, ವಿವಿಧ ಕಿರುಕುಳ, ಅತ್ಯಂತ ಅಮಾನವೀಯ ದೌರ್ಜನ್ಯ-ಹಿಂಸೆ, ಬಂಧನ-ಜೈಲು ಮುಂತಾದ ಕ್ರಮಗಳ ಮೂಲಕ ಬಲವಂತವಾಗಿ 2014 ರಿಂದ 2020 ರವರೆಗೆ ಸುಮಾರು ಎರಡು ಸಾವಿರ ಕುಟುಂಬಗಳನ್ನು ಒಕ್ಕಲೆಬ್ಬಿಸಲಾಗಿತ್ತು. ಈ ದೌರ್ಜನ್ಯದಿಂದ ಅಪಾರವಾಗಿ ನೊಂದಿದ್ದ ರೈತರು ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಸಂಘಟಿತರಾಗಿ ತಮ್ಮ ಉಳುಮೆ ಭೂಮಿಯನ್ನು ವಾಪಸ್ಸು ಪಡೆಯಲು ಹೋರಾಟಕ್ಕೆ ಮುಂದಾದರು. ಇದೀಗ ರೈತರ ಸತತ ಹೋರಾಟದ ಪರಿಣಾಮ ಅರಣ್ಯ ಇಲಾಖೆ ತನ್ನ ಕ್ರಮದಿಂದ ಹಿಂದೆ ಸರಿಯುವಂತೆ ಮಾಡಿರುವುದು ಅಭಿನಂದನಾರ್ಹರು ಎಂದಿದ್ದಾರೆ.
ಇದನ್ನು ಓದಿ: ಅರಣ್ಯ ಇಲಾಖೆ ಕಿರುಕುಳ ಖಂಡಿಸಿ-ಬಗರ್ ಹುಕುಂ ಸಾಗುವಳಿ ಭೂಮಿ ಹಕ್ಕುಪತ್ರಕ್ಕೆ ಆಗ್ರಹಿಸಿ ಕೆಪಿಆರ್ಎಸ್ ಪ್ರತಿಭಟನೆ
ಕೆಪಿಆರ್ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ ಮಾತನಾಡಿ, ಕರ್ನಾಟಕ ಪ್ರಾಂತ ರೈತ ಸಂಘದಿಂದ ರೈತರಿಂದ ಮರು ಸ್ವಾಧೀನ ಹೋರಾಟದಿಂದ ಅರಣ್ಯ ಇಲಾಖೆಯನ್ನು ಹೊರಹಾಕುವಲ್ಲಿ ನಿರ್ಣಾಯಕ ಜಯಗಳಿಸಿರುವುದಕ್ಕೆ ಅಭಿನಂದನೆಗಳು. ಈ ಮಹತ್ವದ ಹೋರಾಟವನ್ನು ದಾಖಲಿಸಿದ ಎಲ್ಲಾ ಚೇಳೂರು ಹೋಬಳಿ ಬಗರ್ ಹುಕ್ಕುಂ ರೈತರನ್ನು, ಸಂಘದ ಕಾರ್ಯಕರ್ತರನ್ನು ರಾಜ್ಯ ಸಮಿತಿ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇವೆ.
ಈಗಾಗಲೇ ಹಲವು ವರ್ಷಗಳಿಂದ ವಿವಿಧ ಹಂತಗಳ ಹೋರಾಟಗಳನ್ನು ನಡೆಸಿ ಅಂತಿಮವಾಗಿ 2023 ಮಾರ್ಚ್ 17 ರಂದು ಮರುಸ್ವಾಧೀನಕ್ಕೆ ರೈತರು ನಿರ್ಧರಿಸಿದರು. ಅಲ್ಲದೆ, ತಮ್ಮನ್ನು ಜೈಲಿಗೆ ಹಾಕಿದರೂ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಸಿದರು. ಈ ಹೋರಾಟ ಅರಣ್ಯ ಇಲಾಖೆ ಹಾಗೂ ಪೊಲೀಸ್ ರ ಅಪಾರ ದೌರ್ಜನ್ಯ-ದಬ್ಬಾಳಿಕೆ ಎದುರಿಸಿ ನಿರಂತರವಾಗಿ ಐದು ದಿನಗಳ ಕಾಲ ಹಗಲು-ರಾತ್ರಿ ನಡೆದು ಅಂತಿಮವಾಗಿ ಭೂಮಿ ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಮುಂದೆ ಈ ಬಗರ್ ಹುಕ್ಕುಂ ಭೂಮಿಯಲ್ಲಿ ಅರಣ್ಯ ಇಲಾಖೆ ಯಾವುದೇ ಟ್ರಂಚ್ ತೆಗೆಯುವುದಾಗಲಿ ಅಥವಾ ಗಿಡ ನೆಡುವುದಾಗಲಿ ಅಥವಾ ಮತ್ಯಾವುದೇ ಕಾಮಗಾರಿ ಚಟುವಟಿಕೆಗಳನ್ನು ನಡೆಸುವುದಾಗಲಿ ಮಾಡಬಾರದು ಎಂಬ ಷರತ್ತು ವಿಧಿಸಿ ಕಳೆದ ಐದು ದಿನಗಳ ರೈತ ಹೋರಾಟವನ್ನು ತಾತ್ಕಾಲಿಕವಾಗಿ ಹಿಂದೆ ಪಡೆದಿದೆ. ಈ ಷರತ್ತನ್ನು ಅರಣ್ಯ ಇಲಾಖೆ ಉಲ್ಲಂಘಿಸಿದ ದಿನವೇ ಭೂಮಿ ಉಳುಮೆ ಆರಂಭಿಸುವುದಾಗಿ ಕರ್ನಾಟಕ ಪ್ರಾಂತ ರೈತ ಸಂಘ ಎಚ್ಚರಿಕೆ ನೀಡಿದೆ.
ಇದನ್ನು ಓದಿ: ಭೂಸ್ವಾಧೀನ ಎಂಬ ಬ್ರಹ್ಮಾಂಡ ಭ್ರಷ್ಟಾಚಾರ ವಿರುದ್ಧ ಕೆಪಿಆರ್ಎಸ್ ಪಾದಯಾತ್ರೆ
ಈ ಷರತ್ತುಗಳನ್ನು ಒಪ್ಪಿದ ಅರಣ್ಯ ಇಲಾಖೆ ರೈತ ಹೋರಾಟಕ್ಕೆ ಮಣಿದು ಈ ಭೂಮಿಯಲ್ಲಿ ಇನ್ನು ಮುಂದೆ ಯಾವುದೇ ಚಟುವಟಿಕೆಗಳನ್ನು ನಡೆಸುವುದಿಲ್ಲ ಎಂದು ಈ ವ್ಯಾಪ್ತಿಯ ಪೊಲೀಸ್ ಡಿವೈಎಸ್ಪಿ ನವೀನ್ ಕುಮಾರ್, ಗುಬ್ಬಿ ತಾಲೂಕಿನ ರಾಜಕೀಯ ಮುಖಂಡ ನಾಗರಾಜ್, ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್ಎಸ್) ಜಿಲ್ಲಾ ಕಾರ್ಯದರ್ಶಿ ಸಿ. ಅಜ್ಜಪ್ಪ, ಗುಬ್ಬಿ ತಾಲ್ಲೂಕು ಅದ್ಯಕ್ಷ ದೊಡ್ಡ ನಂಜಯ್ಯ, ತಾಲ್ಲೂಕು ಕಾರ್ಯದರ್ಶಿ ಬಸವರಾಜು ಸಮ್ಮುಖದಲ್ಲಿ ಒಪ್ಪಿಕೊಂಡಿದ್ದಾರೆ.
ಹೋರಾಟ ನಿರತ ರೈತರ ಸಭೆ ನಡೆಸಿದ ಮುಖಂಡರು ಕಂದಾಯ ಇಲಾಖೆಯಿಂದ ಅಕ್ರಮವಾಗಿ ಅರಣ್ಯ ಇಲಾಖೆಗೆ ವರ್ಗಾಯಿಸಿರುವ ಈ ಎಲ್ಲಾ ಭೂಮಿಗಳನ್ನು ಕಂದಾಯ ಇಲಾಖೆಗೆ ವಾಪಸ್ಸು ಪಡೆಯಲು ಸರ್ಕಾರದ ಮೇಲೆ ಒತ್ತಡ ಹೇರುವ ಹೋರಾಟವನ್ನು ಮುಂದುವರೆಸಲು ನಿರ್ಧರಿಸಿದೆ. ಇಂತಹ ಮಹತ್ವದ ವಿಜಯವನ್ನು ದಾಖಲಿಸಿದ ರೈತರಿಗೆ ಹಾಗೂ ಈ ಹೋರಾಟ ರೂಪಿಸಲು ಸಮರ್ಥ ನೇತೃತ್ವ ನೀಡಿದ ಕರ್ನಾಟಕ ಪ್ರಾಂತ ರೈತ ಸಂಘ ತುಮಕೂರು ಜಿಲ್ಲಾಧ್ಯಕ್ಷ ರ್.ಎಸ್. ಚನ್ನಬಸವಣ್ಣ, ಸಹಕಾರ ನೀಡಿದ ಸಿಐಟಿಯು ಮುಖಂಡ ಎನ್.ಕೆ. ಸುಬ್ರಹ್ಮಣ್ಯ, ಬಿ.ಉಮೇಶ್ ಹಾಗೂ ಜೊತೆ ನಿಂತ ಸಿಐಟಿಯು ಸೇರಿದಂತೆ ಎಲ್ಲಾ ಪ್ರಜಾಪ್ರಭುತ್ವ ಸಂಘಟನೆಗಳಿಗೆ ಕೆಪಿಆರ್ಎಸ್ ಅಭಿನಂದನೆ ಸಲ್ಲಿಸಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ