ತುಮಕೂರು: ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಹಿಂದಿನ ಬಜೆಟ್‌ನಲ್ಲಿ ₹1 ಸಾವಿರ ಗೌರವ ಧನ ಹೆಚ್ಚಿಸಲಾಗಿದೆ. ಮುಂದಿನ ಬಜೆಟ್‌ನಲ್ಲಿ ಮತ್ತೆ ₹1 ಸಾವಿರ ಹೆಚ್ಚಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ನವೆಂಬರ್ 18ರಂದು ಭರವಸೆ ನೀಡಿದರು.
ನಗರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ (ಐಸಿಡಿಎಸ್) ಸುವರ್ಣ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ: ಹುಬ್ಬಳ್ಳಿ | ಜ್ಞಾನ ಹೆಚ್ಚಿಸುವ ಪುಸ್ತಕಗಳ ಸಾಂಗತ್ಯ ಬೆಳೆಸಿಕೊಂಡರೆ ಮಕ್ಕಳು ಸಹ ಅದನ್ನೇ ಅನುಸರಿಸುತ್ತಾರೆ – ಜ್ಯೋತಿ ಸೇಟ್
ಗೌರವ ಧನ ಹೆಚ್ಚಳದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಗೆ ಚರ್ಚಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಲ್ಲಿ ಶೇ 70ರಷ್ಟು ಮಂದಿ ಗೃಹಲಕ್ಷ್ಮಿ ನೆರವು ಪಡೆಯುತ್ತಿದ್ದಾರೆ. ಗೃಹಲಕ್ಷ್ಮಿ ಸಹಕಾರ ಬ್ಯಾಂಕ್‌ನಲ್ಲಿ ₹30 ಸಾವಿರದಿಂದ ₹5 ಲಕ್ಷದ ವರೆಗೆ ಸಾಲ ವಿತರಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರ ಜತೆ ಮಾತನಾಡಿ, ‘ಹಿಂದಿನ ಎರಡು ತಿಂಗಳ ಗೃಹಲಕ್ಷ್ಮಿ ಹಣ ಬಾಕಿ ಇದೆ. ಆದಷ್ಟು ಶೀಘ್ರ ಬಿಡುಗಡೆ ಮಾಡಲಾಗುವುದು. ಇದಕ್ಕಾಗಿ ತಿಂಗಳಿಗೆ ₹2,500 ಕೋಟಿ ಬೇಕಾಗುತ್ತದೆ. ಕಾಲ ಕಾಲಕ್ಕೆ ಫಲಾನುಭವಿಗಳಿಗೆ ಯೋಜನೆಯ ನೆರವು ಕಲ್ಪಿಸಲಾಗುತ್ತಿದೆ’ ಎಂದು ತಿಳಿಸಿದರು.
ನ. 28ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಸುವರ್ಣ ಮಹೋತ್ಸವ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಅಕ್ಕ ಪಡೆ, ಸಹಕಾರ ಬ್ಯಾಂಕ್‌ಗೆ ಅಧಿಕೃತವಾಗಿ ಚಾಲನೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಇದನ್ನೂ ನೋಡಿ: ಧರ್ಮಸ್ಥಳದ ನಿಗೂಢಗಳು | ಚಂಡು ರಾಜ್ಯಪಾಲರ ಅಂಗಳಕ್ಕೆ! Janashakthi Media
