ಬೆಂಗಳೂರು: ಶಾಲಾ ಪಠ್ಯಪುಸ್ತಕಗಳಲ್ಲಿ ಇರಬಹುದಾದ ಸೂಕ್ಷ್ಮ ಸಂಕೀರ್ಣ ವಿಷಯಗಳ ಕುರಿತು ಪರಿಶೀಲಿಸಿ ವರದಿ ನೀಡುವಂತೆ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಗೆ ವಹಿಸಿದ ಜವಾಬ್ದಾರಿಯನ್ನು ಮೀರಿ, ಪಠ್ಯಪುಸ್ತಕ ಪರಿಷ್ಕರಣೆಗೆ ಮುಂದಾದ ದುಷ್ಕೃತ್ಯವನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷವು ಬಲವಾಗಿ ಖಂಡಿಸಿದೆ.
ಈ ಕುರಿತು ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಅವರು. ರಾಜ್ಯದ ಬಿಜೆಪಿ ಸರಕಾರದಲ್ಲಿ ಯಾರು ಹೇಗೆ ಬೇಕಾದರೂ ವರ್ತಿಸಬಹುದೆಂಬುದನ್ನು ಮತ್ತು ಆಡಳಿತದ ಮೇಲೆ ಸರಕಾರದ ಯಾವುದೇ ನಿಯಂತ್ರಣವಿಲ್ಲವೆಂಬುದು ಮತ್ತೊಮ್ಮೆ ಸ್ಪಷ್ಟಪಡಿಸುತ್ತದೆ. ಯಾವುದೇ ಸೂಕ್ತ ವೇದಿಕೆಗಳಲ್ಲಿ ಚರ್ಚಿಸದೇ, ಸೂಕ್ತ ಆದೇಶ ಹೊರಡಿಸದೇ ತಮಗೆ ತಿಳಿದಂತೆ ಕಾರ್ಯನಿರ್ವಹಿಸುವುದು, ಇಲ್ಲವೇ ಮತ್ಯಾವುದೋ ಅವಿತಿಟ್ಟುಕೊಂಡ ದುಷ್ಠ ಶಕ್ತಿಯ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನು ಇದು ಮತ್ತೊಮ್ಮೆ ಎತ್ತಿ ತೋರಿಸುತ್ತದೆ ಎಂದು ಆರೋಪಿಸಿದ್ದಾರೆ.
ಅಧಿಕಾರದ ದುರುಪಯೋಗದಿಂದ ಮತ್ತು ತಜ್ಞರಲ್ಲದವರ ದುರ್ನಡೆಯಿಂದ ನಾಡಿನ ಗಣ್ಯ ವ್ಯಕ್ತಿಗಳು ಅಪಮಾನಿತರಾಗುವಂತಾಯಿತು. ರಾಜ್ಯದ ದಶಲಕ್ಷಾಂತರ ಶಾಲಾ ಮಕ್ಕಳು ಪಠ್ಯಪುಸ್ತಕವಿಲ್ಲದೆ ಶೈಕ್ಷಣಿಕವಾಗಿ ಈ ವರ್ಷವೂ ತೊಂದರೆಗೀಡಾಗುವ ಪರಿಸ್ಥಿತಿ ಉದ್ಭವಿಸಿದೆ. ಮಾತ್ರವಲ್ಲಾ, ರಾಜ್ಯದ ಬೊಕ್ಕಸದ ನೂರಾರು ಕೋಟಿ ರೂಪಾಯಿಗಳು ದುರ್ವಿನಿಯೋಗವಾಗುವಂತಾಯಿತು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ರವರ ಇಂತಹ ಬೇಜವಾಬ್ದಾರಿತನ ಮತ್ತು ದೂರದೃಷ್ಠಿ ರಹಿತ ದುರ್ವರ್ತನೆಯಿಂದಾಗಿ ಕರ್ನಾಟಕದ ಭವಿಷ್ಯತ್ತಿನ ಅಭಿವೃದ್ಧಿಯ ಮೇಲೆ ದುಷ್ಪರಿಣಾಮ ಬೀರಲಿದೆ. ಇದೊಂದು, ನಾಗರೀಕ ಜಗತ್ತಿನ ಮುಂದೆ ರಾಜ್ಯದ ಜನತೆ ಮತ್ತೊಮ್ಮೆ ನಾಚಿಕೆಯಿಂದ ತಲೆ ತಗ್ಗಿಸುವಂತಹ ಪ್ರಸಂಗವಾಗಿದೆ ಎಂದು ಸಿಪಿಐ(ಎಂ) ಪಕ್ಷವು ಹೇಳಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸ್ವಲ್ಪವಾದರು ನಾಚಿಕೆ ಎಂಬುದೇನಾದರು ಇದ್ದರೇ ಶಿಕ್ಷಣ ಸಚಿವರು ಹಾಗೂ ಪಠ್ಯ ಪುಸ್ತಕ ಪರಿಶೀಲನಾ ಸಮಿತಿಯನ್ನು ಈ ಕೂಡಲೇ ವಜಾ ಮಾಡಬೇಕೆಂದು ಸಿಪಿಐ(ಎಂ) ಪಕ್ಷವು ಆಗ್ರಹಿಸಿದೆ.
ಕೋವಿಡ್ ಕಾರಣದಿಂದ ಈಗಾಗಲೇ ಕಳೆದೆರಡು ವರ್ಷಗಳಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಮುಖ್ಯಮಂತ್ರಿಗಳು ಹಾಗೂ ಸರಕಾರಕ್ಕೆ ಆಡಳಿತದ ಮೇಲೆ ಯಾವುದೇ ಹಿಡಿತವಿಲ್ಲದೇ ಇರುವುದರಿಂದ ಉಂಟಾದ ಈ ಅನಗತ್ಯ ಪ್ರಹಸನದಿಂದ ಈ ವರ್ಷವು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವುದನ್ನು ತಪ್ಪಿಸಲು ಹಳೆಯ ಪಠ್ಯಕ್ರಮವನ್ನೇ ಮುಂದುವರೆಸುವಂತೆ ಮತ್ತು ರಾಜ್ಯದ ಬೊಕ್ಕಸಕ್ಕಾದ ನಷ್ಟವನ್ನು ಅಧಿಕಾರ ದುರುಪಯೋಗ ಮಾಡಿಕೊಂಡ ಸಚಿವ ಬಿ.ಸಿ. ನಾಗೇಶ್ ಮತ್ತು ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯಿಂದ ವಸೂಲಿ ಮಾಡುವಂತೆ ಸಿಪಿಐ(ಎಂ) ಪಕ್ಷವು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದೆ.