ಹಿಜಾಬ್-ಕೇಸರಿ ಶಾಲು ಅನಗತ್ಯ ವಿವಾದವನ್ನು ನಿಲ್ಲಿಸಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷದ ಕರೆಯ ಭಾಗವಾಗಿ ಇಂದು ರಾಜ್ಯದ ಹಲವು ಕಡೆಗಳಲ್ಲಿ ಪ್ರತಿಭಟನಾ ಪ್ರದರ್ಶನಗಳು ನಡೆದಿವೆ.
ಉಡುಪಿಯ ಕಾಲೇಜೊಂದರಲ್ಲಿ ಆರಂಭವಾಗಿ ಇಡೀ ರಾಜ್ಯಾದ್ಯಂತ ಶೈಕ್ಷಣಿಕ ಸಂಸ್ಥೆಗಳು ಹಾಗೂ ವಿದ್ಯಾರ್ಥಿ ಸಮುದಾಯಗಳಲ್ಲಿ ಕೋಮುವಿಭಜನೆ ಉಂಟು ಮಾಡಿರುವ ಹಿಜಾಬ್-ಕೇಸರಿ ಶಾಲು ಅನಗತ್ಯ ವಿವಾದವನ್ನು ಕೂಡಲೇ ನಿಲ್ಲಿಸಲು ರಾಜ್ಯ ಸರ್ಕಾರವು ಪ್ರಾಮಾಣಿಕವಾಗಿ ಮಧ್ಯಪ್ರವೇಶಿಸಬೇಕೆಂದು ಸಿಪಿಐ(ಎಂ) ಪಕ್ಷವು ಪ್ರತಿಭಟನೆಯ ಮೂಲಕ ಆಗ್ರಹಿಸಿದೆ.
ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದು ಇದೇ ಮೊದಲೇನಲ್ಲ, ಹಲವಾರು ವರ್ಷಗಳಿಂದ ಸಮವಸ್ತ್ರದ ಭಾಗವಾಗಿಯೇ ಧರಿಸುತ್ತಿದ್ದಾರೆ. ಈ ಪರಂಪರೆ ಹಲವು ಶಿಕ್ಷಣ ಸಂಸ್ಥೆಗಳಲ್ಲಿದೆ. ಕೆಲವು ಶಿಕ್ಷಣ ಸಂಸ್ಥೆಗಳು ಸಮವಸ್ತ್ರದ ಬಣ್ಣಕ್ಕೆ ಒಪ್ಪುವ ತಲೆವಸ್ತ್ರವನ್ನು ನಿಗದಿಪಡಿಸಿರುವುದೂ ಇದೆ. ಹೀಗಾಗಿ ಸಾಮಾನ್ಯ ಸಮವಸ್ತ್ರ ಸಂಹಿತೆಯನ್ನು ಇದು ಉಲ್ಲಂಘಿಸಿದಂತಾಗುವುದಿಲ್ಲ.
ಅಲ್ಪಸಂಖ್ಯಾತ ವಿದ್ಯಾರ್ಥಿನಿಯರಿಗೆ ಶಿಕ್ಷಣದಿಂದ ವಂಚಿತರನ್ನಾಗಿಸುವುದು. ವಿದ್ಯಾರ್ಥಿ ಸಮುದಾಯವನ್ನು ಕೋಮುವಾದಿ ನೆಲೆಯಲ್ಲಿ ವಿಭಜನೆ ಮಾಡುವ ದುರುದ್ದೇಶದಿಂದಲೇ ಮುಸ್ಲಿಂ ವಿದ್ಯಾರ್ಥಿನಿಯರು ಧರಿಸುವ ತಲೆವಸ್ತ್ರಕ್ಕೆ ವಿರುದ್ಧವಾಗಿ ಕೇಸರಿ ಶಾಲನ್ನು ಧರಿಸುವಂತೆ ಹಿಂದೂ ವಿದ್ಯಾರ್ಥಿಗಳನ್ನು ಎತ್ತಿಕಟ್ಟುವ ಕೆಲಸವನ್ನು ಕೆಲವು ಹಿಂದುತ್ವ ಕೋಮುವಾದಿ ಸಂಘಟನೆಗಳು ಮಾಡುತ್ತಿರುವ ಕ್ರಮವನ್ನು ಸಿಪಿಐ(ಎಂ) ಪಕ್ಷವು ಖಂಡಿಸಿದೆ.
ಮುಸ್ಲಿಂ ಅಲ್ಪಸಂಖ್ಯಾತರಲ್ಲಿ, ಹಿಂದುತ್ವ ಕೋಮುವಾದಿಗಳು ಮತ್ತು ರಾಜ್ಯದ ಬಿಜೆಪಿ ಸರ್ಕಾರ ಸೃಷ್ಟಿಸಿರುವ ಆತಂಕದ ಪರಿಸ್ಥಿತಿಯನ್ನು ಬಳಸಿಕೊಂಡು ಮುಸ್ಲಿಂ ವಿದ್ಯಾರ್ಥಿಗಳನ್ನು ಮತ್ತು ಮುಸ್ಲಿಂ ಜನತೆಯನ್ನು ಕೋಮುವಾದಿ ನೆಲೆಯಲ್ಲಿ ಕ್ರೋಢೀಕರಿಸಲು ಕೆಲವು ಮುಸ್ಲಿಂ ಮತಾಂಧ ಸಂಘಟನೆಗಳು ಪ್ರಯತ್ನಿಸುತ್ತಿವೆ.
ರಾಜ್ಯದ ಬಿಜೆಪಿ ಸರ್ಕಾರ ಸಂವಿಧಾನ ವಿರೋಧಿ ಮತಾಂಧತೆಗೆ ಕುಮ್ಮಕ್ಕು ನೀಡುವ ಕಾಯ್ದೆಗಳನ್ನು ಜಾರಿಗೆ ತರುತ್ತಿವುದು ಸಹ ಮತಾಂಧ ಶಕ್ತಿಗಳಿಗೆ ಕುಮ್ಮಕ್ಕು ನೀಡುತ್ತಿವೆ. ವಿದ್ಯಾರ್ಥಿಗಳ ನಡುವೆ ಕೋಮು ವಿಭಜನೆಯನ್ನು ತೀವ್ರಗೊಳಿಸುವ ಉದ್ದೇಶದಿಂದ ಕೆಲವು ಸಚಿವರು ಮತ್ತು ಶಾಸಕರು ಸೌಹಾರ್ಧತೆಗೆ ಭಂಗ ತರುವಂತಹ ಕ್ರಮವು ಶೋಭೆತರುವುದಿಲ್ಲವೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಹಿಜಾಬ್ – ಕೇಸರಿ ಶಾಲುಗಳ ಅನಗತ್ಯ ವಿವಾದದ ಮೂಲಕ ಸೌಹಾರ್ಧತೆಯನ್ನು ಕದಡುವುದನ್ನು ತಡೆಯುವಲ್ಲಿ ವಿಫಲವಾಗಿರುವ ರಾಜ್ಯ ಸರಕಾರದ ಹೊಣೆಗೇಡಿತನ ಮತ್ತು ವಿಭಜನಕಾರಿ ಕೋಮುವಾದಿ ನೀತಿಗಳನ್ನು ತೀವ್ರವಾಗಿ ಖಂಡಿಸಿದ ಪ್ರತಿಭಟನಾಕಾರರು ಗೃಹ ಸಚಿವರು ರಾಜೀನಾಮೆ ನೀಡಬೇಕು. ರಾಜ್ಯದ ಶೈಕ್ಷಣಿಕ ಸಂಸ್ಥೆಗಳು, ವಿದ್ಯಾರ್ಥಿ ಮತ್ತು ಜನ ಸಮುದಾಯಗಳಲ್ಲಿ ಸೌಹಾರ್ಧತೆ ಸಂರಕ್ಷಣೆಯನ್ನು ಕಾಪಾಡಬೇಕೆಂದು ಒತ್ತಾಯಿಸಿದರು.