ಗದಗ , ಫೆ 8 : ಗದಗ ತಾಲೂಕಿನ ಹೊಂಬಳ ಗ್ರಾಮದಲ್ಲಿ ಹರಣಿಶಿಕಾರಿ ಜನಾಂಗದ ಸಮುದಾಯ ಭವನ ಕಟ್ಟಡ ಸೇರಿದಂತೆ ಸಿ.ಸಿ.ರಸ್ತೆ ಕಾಮಗಾರಿ, ಐ.ಟಿ.ಐ ಕಾಲೇಜು ಕಟ್ಟಡದ ಭೂಮಿಪೂಜೆ ಹಾಗೂ ನೂತನ ಬಸ್ ಶೆಲ್ಟರ್ ಉದ್ಘಾಟನೆಯನ್ನು ರಾಜ್ಯದ ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ನೆರವೇರಿಸಿದರು. ಬಳಿಕ ಸಚಿವ ಸಿ.ಸಿ.ಪಾಟೀಲ ಮಾತನಾಡಿ ಶಾಸಕರ ಅನುದಾನದಡಿ ಹರಣಿಶಿಕಾರಿ ಸಮುದಾಯ ಭವನಕ್ಕೆ 5 ಲಕ್ಷ ಹಾಗೂ ಬಸ್ ಶೆಲ್ಟರ್ ನಿರ್ಮಾಣಕ್ಕೆ 5 ಲಕ್ಷ ಅನುದಾನವನ್ನು ನೀಡಲಾಗಿದೆ. ಕಾಮಗಾರಿ ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.
ಐ.ಟಿ.ಐ ಕಾಲೇಜು ಕಟ್ಟಡಕ್ಕಾಗಿ 2.19 ಕೋಟಿ ರೂ ಅನುದಾನ ನೀಡಲಾಗಿದ್ದು ಅಗತ್ಯವಿದ್ದಲ್ಲಿ ಹೆಚ್ಚಿನ ಅನುದಾನ ನೀಡಲಾಗುವುದು. ಕಾಲೇಜು ಕಟ್ಡಡವನ್ನು ಶೀಘ್ರವೇ ನಿರ್ಮಿಸಿ ಈ ಭಾಗದ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಅವಕಾಶ ನೀಡಬೇಕು ಎಂದರು. ಕಾಲೇಜು ಕಟ್ಟಡಕ್ಕಾಗಿ 2 ಎಕರೆ ಜಮೀನನ್ನು ದಾನ ಮಾಡಿರುವ ಶೇಖರಪ್ಪ ಶಿವಪ್ಪ ಕುಷ್ಟಗಿ( ಮೈಲಾರ) ಹಾಗೂ ರೇಣುಕಾ ಕುಷ್ಟಗಿ ದಂಪತಿಗಳಿಗೆ ಮತ್ತು ಪ್ರಜ್ವಲ ಕುಷ್ಟಗಿ ಇವರಿಗೆ ಭಗವಂತ ಇನ್ನೂ ಹೆಚ್ಚಿನ ದಾನ ನೀಡುವ ಸೌಭಾಗ್ಯ ಕರುಣಿಸಲಿ. ಅವರು ನೀಡಿದ ಭೂದಾನದಲ್ಲಿ ನಿರ್ಮಿಸಲಾಗುತ್ತಿರುವ ಕಟ್ಟಡದಲ್ಲಿ ಈ ಭಾಗದ ಅಸಂಖ್ಯಾತರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿ ದೇಶದ ಉನ್ನತ ಹುದ್ದೆಗಳನ್ನು ಅಲಂಕರಿಸಲಿ ಹಾಗೂ ಅನೇಕ ನಿರುದ್ಯೋಗಿಗಳಿಗೆ ಉದ್ಯೋಗದಾತರಾಗಲಿ ಎಂದು ಹೇಳಿ ಭೂದಾನಿಗಳಿಗೆ ಹೃದಯ ಪೂರ್ವಕ ಅಭಿನಂದನೆ ಸಲ್ಲಿಸಿದರು.
ಕಲಿತವರೆಲ್ಲರಿಗೂ ಸರ್ಕಾರಿ ನೌಕರಿ ಸಿಗಲಾರದು. ಕಲಿತ ವಿದ್ಯೆಯಿಂದ ಸಣ್ಣ ಕೈಗಾರಿಕೆಗಳನ್ನು ಆರಂಭಿಸಿ ಆರ್ಥಿಕ ಸಬಲತೆ ಸಾಧಿಸಿ ಇನ್ನೊಬ್ಬರಿಗೆ ಉದ್ಯೋಗ ನೀಡುವಂತಾಗಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಟ್ಟಡ ಕಾಮಗಾರಿಯು ಗುಣಮಟ್ಟದಿಂದ ಕೂಡಿರಬೇಕು. ಈ ದಿಸೆಯಲ್ಲಿ ಈ ಭಾಗದ ಸಾರ್ವಜನಿಕರು ನಿಗಾ ವಹಿಸಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಭೂದಾನಿಗಳಾದ ಶೇಖರಪ್ಪ ಶಿವಪ್ಪ ಕುಷ್ಟಗಿ , ರೇಣುಕಾ ಕುಷ್ಟಗಿ ಹಾಗೂ ಪ್ರಜ್ವಲ ಕುಷ್ಟಗಿ ಅವರನ್ನು ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಹೊಂಬಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಸರಸ್ವತಿ ಬಳ್ಳಾರಿ, ಉಪಾಧ್ಯಕ್ಷ ಈರಣ್ಣ ಸಂಗಟಿ, ತಾಲೂಕು ಪಂಚಾಯತ್ ಸದಸ್ಯ ಪ್ರಭಣ್ಣ ಹುಣಸೀಕಟ್ಟಿ, ಅಂದಾನಪ್ಪ ಎಕ್ಲಾಸಪುರ, ಕಾಲೇಜು ಪ್ರಾಚಾರ್ಯ ಮಲ್ಲೂರ ಬಸವರಾಜ, ಗುತ್ತಿಗೆದಾರರಾದ ಬೂದಿಹಾಳ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
ವರದಿ: ದಾವಲಸಾಬ ತಾಳಿಕೋಟಿ