ಬೆಂಗಳೂರು : ಅಧಿಕಾರ, ಅಂತಸ್ತು, ಹಣ ಎಲ್ಲಕ್ಕಿಂತ ಮಿಗಿಲಾಗಿ ಜನರ ವಿಶ್ವಾಸವೇ ಆಯಾ ಕ್ಷೇತ್ರದ ಶಕ್ತಿಯಾಗಿದ್ದು, ನ್ಯಾಯಾಂಗ ಕ್ಷೇತ್ರದ ನಿಜವಾದ ಶಕ್ತಿಯೂ ಜನರ ವಿಶ್ವಾಸವೇ ಆಗಿದೆ ಎಂದು ಸರ್ವೋಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಡಾ.ಶಿವರಾಜ ವಿ. ಪಾಟೀಲ್ ಹೇಳಿದ್ದಾರೆ . ನಯನ ಸಭಾಂಗಣದಲ್ಲಿ ‘ಕನ್ನಡ ಜನಶಕ್ತಿ ಕೇಂದ್ರ’ ಹಮ್ಮಿಕೊಂಡಿದ್ದ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು .
ಯಾವುದೇ ಕ್ಷೇತ್ರದಲ್ಲಾದರೂ ಜನರ ವಿಶ್ವಾಸ ಇದ್ದರೆ ಯಶಸ್ವಿಯಾಗಿ ಜವಾಬ್ದಾರಿ ನಿಭಾಯಿಸಲು ಸಾಧ್ಯ. ಸಂವಿಧಾನದ ಆಶಯಗಳು ಕೂಡಾ ದೇಶದ ಜನರಿಗೆ ವಿಶ್ವಾಸ ತುಂಬುವಲ್ಲಿ ಸಹಕಾರಿಯಾಗಿವೆ. ಈ ನಿಟ್ಟಿನಲ್ಲಿ ಪ್ರಜಾಪ್ರಭುತ್ವ ಬರುವುದಕ್ಕೂ ಮೊದಲೇ ರಾಜಪ್ರಭುತ್ವದ ಅವಧಿಯಲ್ಲೇ ಪ್ರಜಾಪ್ರಭುತ್ವದ ಆಶಯವನ್ನು ಶಾಸನಬದ್ಧವಾಗಿ ಅನುಷ್ಟಾನಕ್ಕೆ ತಂದಿದ್ದ ದೇಶದ ಅಪರೂಪದ ಮಹಾರಾಜರು ನಾಲ್ವಡಿ ಕೃಷ್ಣರಾಜ ಒಡೆಯರಾಗಿದ್ದರು. ಇದಕ್ಕೆ ಅವರು ಜಾರಿಗೆ ತಂದಿದ್ದ ಅನೇಕ ಕಾರ್ಯಕ್ರಮಗಳೇ ಸಾಕ್ಷಿಯಾಗಿವೆ.
ಹಿಂದುಳಿದವರ ಕಲ್ಯಾಣ, ಸೀಯರಿಗೆ ಕಡ್ಡಾಯ ಶಿಕ್ಷಣ, ಸಾಹಿತ್ಯ, ಸಂಗೀತ, ನೀರಾವರಿ, ಉದ್ಯಮ, ಜಲವಿದ್ಯುತ್ ಹೀಗೆ ಎಲ್ಲ ಕ್ಷೇತ್ರದಲ್ಲಿ ನಾಲ್ವಡಿಯವರ ಕೊಡುಗೆ ಇದೆ. ದೇಶ ಕಂಡ ಅಪರೂಪದ ಮಹಾರಾಜರಾ ಹೆಸರಲ್ಲಿ ಕನ್ನಡ ಜನಶಕ್ತಿ ಕೇಂದ್ರ ಪ್ರಶಸ್ತಿ ನೀಡುತ್ತಿರುವುದು ಅರ್ಥಪೂರ್ಣವಾಗಿದ್ದು, ಸರ್ಕಾರ ಕೂಡಾ ಇವರ ಹೆಸರಲ್ಲಿ ಪ್ರಶಸ್ತಿಯನ್ನು ಆರಂಭಿಸಬೇಕು ಎಂದು ಅವರು ಸಲಹೆ ನೀಡಿದರು.
ನ್ಯಾ.ನಾಗಮೋಹನ ದಾಸ್ ಅವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ನೀಡಿ ಗೌರವಿಸಿದ ಅವರು, ನಾಲ್ವಡಿ ಅವರ ವ್ಯಕ್ತಿತ್ವವನ್ನು ಆದರ್ಶವಾಗಿರಿಸಿಕೊಂಡಿರುವ ನಾಗಮೋಹನ ದಾಸ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವುದರಿಂದ ಪ್ರಶಸ್ತಿಯ ಮೌಲ್ಯ, ನೀಡುತ್ತಿರುವ ಸಂಸ್ಥೆಯ ಘನತೆ ಎರಡೂ ಹೆಚ್ಚಾಗಿದೆ ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಬೆಂಗಳೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ರಾಜಪ್ಪ ದಳವಾಯಿ, ಕಸಾಪ ಮಾಜಿ ಕೋಶಾಧ್ಯಕ್ಷ ಪಿ. ಮಲ್ಲಿಕಾರ್ಜುನಪ್ಪ, ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ, ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
‘ಆಡಳಿತ ನಡೆಸುವವರಿಗೆ ಸಂವಿಧಾನ ಶಿಕ್ಷಣದ ಅಗತ್ಯವಿದೆ’
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನ್ಯಾ. ನಾಗಮೋಹನ ದಾಸ್, ಸಂವಿಧಾನದ ಶಕ್ತಿ, ಶಿಕ್ಷಣವನ್ನು ಎಲ್ಲರೂ ತಿಳಿದುಕೊಳ್ಳಬೇಕಾದ ಅಗತ್ಯವಿದೆ. ಮುಂದಿನ ಜನಾಂಗದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಆಡಳಿತ ನಡೆಸಬೇಕಾದ ರಾಜಕಾರಣಿಗಳು ಕೇವಲ ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಆಡಳಿತ ನಡೆಸುತ್ತಿದ್ದಾರೆ. ಆಡಳಿತ ನಡೆಸುವವರಿಗೆ ಸಂವಿಧಾನದ ಶಿಕ್ಷಣದ ಅಗತ್ಯವಿದೆ ಎಂದು ಹೇಳಿದರು.