ಬೆಂಗಳೂರು :ಕನ್ನಡ, ತಮಿಳು, ತೆಲಗು ಭಾಷೆಗಳ ನೂರಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದ ಹಿರಿಯ ಸಂಗೀತ ನಿರ್ದೇಶಕ ರಾಜನ್ ನಿನ್ನೆ ರಾತ್ರಿ 11 ಕ್ಕೆ ನಿಧನರಾಗಿದ್ದಾರೆ. ರಾಜನ್ ರವರಿಗೆ 87 ವರ್ಷ ವಯಸ್ಸಾಗಿತ್ತು. ಹೆಬ್ಬಾಳದ ಬಳಿ ಇರುವ ಆರ್.ಟಿ. ನಗರದ ಸ್ವ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೊವೀಡ್ ಹಿನ್ನಲೆಯಲ್ಲಿ ಗಣ್ಯರಿಗೆ ಮಾತ್ರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ರಾಜನ್ ರವರು ಒಬ್ಬ ಮಗ ಹಾಗೂ ಒಬ್ಬ ಮಗಳನ್ನು ಅಗಲಿದ್ದಾರೆ. ಇಂದು ಮದ್ಯಾಹ್ನ ಹೆಬ್ಬಾಳದ ಬಳಿ ಅಂತ್ಯಕ್ರೀಯೆ ನೆರವೆರಿಸಲಾಗುವುದು ಎಂದು ರಾಜನ್ ರವರ ಮಗ ಅನಂತ್ ರವರು ತಿಳಿಸಿದ್ದಾರೆ.
ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಅನಂತ್ ನಾಗ್, ದ್ವಾರಕೀಶ್, ಶ್ರೀನಾಥ್, ಸೇರಿ ಅನೇಕ ನಟರ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿ ಚಿತ್ರರಂಗದಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದರು. ಚಿ. ಉದಯ ಶಂಕರ್ ರವರ ಸಿನಿಮಾಗಳಿಗೆ ಅತೀ ಹೆಚ್ಚು ಸಂಗಿತ ನಿರ್ದೇಶನ ಮಾಡಿದ್ದರು. ಎರಡು ಕನಸು, ಶ್ರೀನಿವಾಸ ಕಲ್ಯಾಣ, ಬಯಲು ದಾರಿ, ನಾನಿನ್ನ ಮರೆಯಲಾರೆ, ಹೊಂಬಿಸಿಲು, ಗಾಳಿಮಾತು, ಚಲಿಸುವ ಮೋಡಗಳು ಸೇರಿ 200ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿ 375 ಕ್ಕೂ ಅಧಿಕ ಸಿನಿಮಾಗಳಿಗೆ ರಾಜನ್ ರವರು ಅವರ ಸಹೋದರ ನಾಗೇಂದ್ರ ಜೊತೆಯಾಗಿ ಸಂಗೀತ ನೀಡಿದ್ದರು. ರಾಜನ್- ನಾಗೇಂದ್ರ ಸಹೋದರರು ಜೋಡಿ ಸಾಕಷ್ಟು ಪ್ರಸಿದ್ಧಿ ಪಡೆದಿತ್ತು.
ಬಯಸದೆ ಬಳಿ ಬಂದೆ, ನೀರು ಬಿಟ್ಟು ನೆಲದ ಮೇಲೆ ದೋಣಿ ಸಾಗದು, ಆಕಾಶವೇ ಬೀಳಲಿ ಮೇಲೆ ನಾನೆಂದು ನಿಮ್ಮವನು, ಎಂದೆಂದೂ ನಿನ್ನನು ಮರೆತು, ಹೀಗೆ ನೂರಾರು ಹಾಡುಗಳು ಜನರ ಬಾಯಲ್ಲಿ ಸದಾ ಗುನುಗುವ ಹಾಡುಗಳಾಗಿವೆ. ರಾಜನ್ ನಿಧನಕ್ಕೆ ಚಲನಚಿತ್ರ ಹಾಗೂ ಕಿರುಚಿತ್ರ ನಿರ್ದೇಶಕ ಟಿ. ಎನ್. ಸೀತಾರಾಂ, ಹಿರಿಯ ನಟ ಮಂಡ್ಯ ರಮೇಶ್ ಸೇರಿದಂತೆ ಅನೇಕರು ಕಂಭನಿ ಮಿಡಿದಿದ್ದಾರೆ.