ಬೆಂಗಳೂರು: ಹಿರಿಯ ಪತ್ರಕರ್ತರೂ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮಾಧ್ಯಮ ಸಲಹೆಗಾರರಾದ ಕೆ.ಸಿ. ಸದಾನಂದ (49 ವರ್ಷ) ನಿಧನರಾಗಿದ್ದಾರೆ. ಸೋಮವಾರ ರಾತ್ರಿ ಸದಾನಂದ ಅವರಿಗೆ ಹೃದಯಾಘಾತವಾಗಿದ್ದು, ತಕ್ಷಣ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ರಾತ್ರಿ ಹನ್ನೆರಡು ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.
ಚನ್ನಪಟ್ಟಣದ ಸದಾನಂದ ಅವರು ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯವರ ಮಾಧ್ಯಮ ಸಮನ್ವಯಕಾರರಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ ನಂತರದಲ್ಲಿಯೂ ಎಚ್.ಡಿ.ಕುಮಾರಸ್ವಾಮಿ ಅವರ ಮಾಧ್ಯಮ ಕಾರ್ಯದರ್ಶಿಯಾಗಿ ತಮ್ಮ ಕೊನೆಯ ದಿನಗಳವರೆಗೂ ಕೆಲಸ ಮಾಡುತ್ತಿದ್ದರು.
ಸದಾನಂದ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಂಬನಿ ಮಿಡಿದಿದ್ದು ʻʻದೀರ್ಘ ಕಾಲದ ನನ್ನ ಒಡನಾಡಿ, ಹಿರಿಯ ಪತ್ರಕರ್ತ, ಮಾಧ್ಯಮ ಕಾರ್ಯದರ್ಶಿಯೂ ಆಗಿದ್ದ ಕೆ.ಸಿ. ಸದಾನಂದ ನಿಧನರಾಗಿದ್ದಾರೆ. ಅವರ ಅಗಲಿಕೆ ನನ್ನನ್ನು ನೋವಿಗೆ ತಳ್ಳಿದೆ. ಎಂಥ ಆಮಿಷಗಳಿಗೂ ಜಗ್ಗದ ಸದಾನಂದ ಕರ್ತವ್ಯ ನಿಷ್ಠೆ, ಸ್ವಾಮಿನಿಷ್ಠೆಯನ್ನೂ ಪ್ರದರ್ಶಿಸಿದ್ದರು. ಅವರ ಕುಟುಂಬದ ನೋವು ನನ್ನದೂ ಕೂಡ. ನೀವು ನಿರ್ಗಮಿಸಿದರೂ ‘ಸದಾ’ ನೆನಪಲ್ಲಿರುತ್ತೀರಿ ಎಂದು ಟ್ವೀಟ್ ಮಾಡಿದ್ದಾರೆ.
ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಸದಾ ಕ್ರಿಯಾಶೀಲವಾಗಿದ್ದ ಅವರು ಸಂಜೆವಾಣಿ, ಈ ಸಂಜೆ, ಕನ್ನಡಪ್ರಭ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದರು. ಬೆಂಗಳೂರು ವರದಿಗಾರರ ಕೂಟದ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಕೆ.ಸಿ.ಸದಾನಂದ ಅವರ ನಿಧನಕ್ಕೆ ಬೆಂಗಳೂರು ವರದಿಗಾರರ ಕೂಟದ ಕಾರ್ಯಕಾರಿಣಿ ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಸದಾನಂದ ಅವರಿಗೆ ತಂದೆ, ಪತ್ನಿ ಹಾಗೂ ಮಗ ಇದ್ದಾರೆ. ಪಾರ್ಥಿವ ಶರೀರವನ್ನು ಸಂಜಯನಗರದಲ್ಲಿರುವ ಮೃತರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಕೆಲವು ಸಮಯ ಇರಿಸಲಾಗಿತ್ತು.