ಬಂಟ್ವಾಳ: ಹಿಂದೂ ಯುವತಿ-ಮುಸ್ಲಿಂ ಯುವಕ ಪ್ರಯಾಣಿಸುತ್ತಿದ್ದ ಬಸ್ಸು ತಡೆದು ಭಜರಂಗದಳ ಕಾರ್ಯಕರ್ತರಿಂದ ಗಲಾಟೆ

ಮಂಗಳೂರು: ಭಜರಂಗದಳದವರ ಒಂದಲ್ಲ ಒಂದು ಹಲ್ಲೆ ಪ್ರಕರಣಗಳು ವರದಿಯಾಗುತ್ತಿದ್ದು, ಹಿಂದೂ ಯುವತಿಯೊಂದಿಗೆ ಮುಸ್ಲಿಂ ಯುವಕ ಪ್ರಯಾಣಿಸುತ್ತಿದ್ದ ಎಂಬ ಕಾರಣದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಜರಂಗದ ಕಾರ್ಯಕರ್ತರು ಹಲ್ಲೆ ನಡೆಸಿದ ಪ್ರಕರಣ ನಡೆದಿದೆ.

ದ‌‌ಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕದ ದಾಸಕೋಡಿ ಬಳಿ ಮುಸ್ಲಿಂ ಯುವಕ ಮಹಮ್ಮದ್ ರಾಯಿಫ್​ಮತ್ತು ಹಿಂದೂ ಯುವತಿ ನಿಧಿ ಶೆಟ್ಟಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಇದಕ್ಕೆ ಭಜರಂಗದಳ ಆಕ್ಷೇಪ ವ್ಯಕ್ತಪಡಿಸಿ ಬಸ್ಸನ್ನು ತಡೆದು ಅವರ ಮೇಲೆ ಹಲ್ಲೆ ನಡೆಸಿದೆ.

ಮೊದಲಿಗೆ ಭಜರಂಗದಳ ಕಾರ್ಯಕರ್ತರು ಪಂಪ್ ವೆಲ್ ಬಳಿ ಮುಸ್ಲಿಂ ಯುವಕ ಹಾಗೂ ಹಿಂದೂ ಯುವತಿಯನ್ನು ತಡೆಯಲು ಯತ್ನಿಸಿದ್ದಾರೆ. ಆದರೆ, ಇದು ವಿಫಲವಾಗಿದ್ದರಿಂದ ತಕ್ಷಣ ಕಲ್ಲಡ್ಕದ ಭಜರಂಗದಳ ಕಾರ್ಯಕರ್ತರಿಗೆ ಮಾಹಿತಿ ನೀಡಿ ಬೆಂಗಳೂರಿನ ಕಡೆಗೆ ಹೊರಟಿದ್ದ ದುರ್ಗಾಂಬ ಬಸ್ಸು ತಡೆದು ಇಬ್ಬರನ್ನೂ ಇಳಿಸಿದ್ದಾರೆ. ಯುವಕ-ಯುವತಿ ಹಾಗೂ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ.

ಭಜರಂಗದಳ ಕಾರ್ಯಕರ್ತರು ಯುವತಿ ಮೇಲೆ ದರ್ಪ ತೋರಿದ್ದು, ಗಲಾಟೆಗೆ ಮುಂದಾಗಿದ್ದಾರೆ. ಬಳಿಕ ಬಂಟ್ವಾಳ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಮಧ್ಯ ಪ್ರವೇಶಿಸಿ ಪ್ರಕರಣ ಠಾಣೆಯ ಮೆಟ್ಟಿಲೇರಿದೆ.

ಭಜರಂಗದಳದವರ ದಾಂಧಲೆಗಳು ಹೆಚ್ಚಾಗುತ್ತಿದ್ದು, ಕಳೆದ ಎರಡು ವಾರಗಳಲ್ಲಿ ಆರು ಪ್ರಕರಣಗಳು ವರದಿಯಾಗಿದೆ. ಇದೀಗ ಬಸ್ಸಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಹಿಂದೂ-ಮುಸ್ಲಿಂ ಜೋಡಿ ತಡೆದು ಹಲ್ಲೆಗೆ ಮುಂದಾಗಿರುವುದು ನಡೆದಿದೆ.

ಬಸ್ಸಿನಲ್ಲಿ ಸಂಚರಿಸುತ್ತಿದ್ದ ಕೂಲಿಕಾರ್ಮಿಕನನ್ನು ಕೆಳಗಿಳಿಸಿ ಹಲ್ಲೆ

ಬಸ್ಸಿನಲ್ಲಿ ಪ್ರಯಾಣಿಸುವ ಹುಡುಗಿಯರಿಗೆ ತೊಂದರೆ ಕೊಡುತ್ತಿದ್ದಾನೆ ಎಂದು ಆರೋಪಿಸಿ ಕೂಲಿ ಕಾರ್ಮಿಕನನ್ನು ಮೂವರು ಆರೋಪಿಗಳು ಸಿದ್ದಕಟ್ಟೆ ಸಮೀಪದ ಕುದ್ಕೋಳಿ ಎಂಬಲ್ಲಿ ಆತನನ್ನು ಬಸ್ಸಿನಿಂದ ಕೆಳಗಿಳಿಸಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

ಡಿಸೆಂಬರ್‌ 14ರಂದು ಈ ಘಟನೆ ನಡೆದಿದ್ದು, ಬಿ.ಸಿ.ರಸ್ತೆ ಸಮೀಪದ ತಲಪಾಡಿ ನಿವಾಸಿ ಇಸಾಕ್‌ (43) ಗಾಯಗೊಂಡ ಕೂಲಿ ಕಾರ್ಮಿಕನಾಗಿದ್ದಾನೆ. ಆತನ ಬೆನ್ನು, ಎಡಗೈ, ಭುಜ, ಎರಡು ಕಾಲು ಹಾಗೂ ಹೊಟ್ಟೆಗೆ ಹೊಡೆದು ಗಾಯಗೊಳಿಸಲಾಗಿದೆ. ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆ ಸಂಬಂಧ ಇಸಾಕ್‌ ಪೊಲೀಸರಿಗೆ ದೂರು ನೀಡಿದ್ದಾನೆ,

ಮೇಸ್ತ್ರಿ ಕೆಲಸ ಮಾಡುವ ಇಸಾಕ್‌ ಕಳೆದ 2 ದಿನಗಳ ಹಿಂದೆ ಖಾಸಗಿ ಬಸ್ಸಿನಲ್ಲಿ ಬಿ.ಸಿ. ರೋಡಿನಿಂದ ಮೂಡಬಿದಿರೆಯ ಗಂಟಲ್‌ ಕಟ್ಟೆಗೆ ಕೆಲಸಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳ ಬ್ಯಾಗನ್ನು ಹಿಡಿದುಕೊಂಡಿದ್ದರು.

ಬಸ್ಸು ಕುದ್ಕೋಳಿ ತಲುಪಿದ ವೇಳೆ ವ್ಯಕ್ತಿಯೊಬ್ಬ ಇವರ ಬಳಿಗೆ ಬಂದು ಹುಡುಗಿಯರಿಗೆ ತೊಂದರೆ ಕೊಡುತ್ತೀಯಾ ಎಂದು ಹಲ್ಲೆಗೆ ಮುಂದಾಗಿದ್ದಾನೆ. ಮತ್ತಿಬ್ಬರೂ ಕೂಡಲೇ ಧಾವಿಸಿ ಇಸಾಕ್‌ ನನ್ನು ಬಸ್ಸಿನಿಂದ ಇಳಿಸಿ ಆಟೋದಲ್ಲಿ ರಾಯಿಗೆ ಕರೆದುಕೊಂಡು ಹೋಗಿ ದೊಣ್ಣೆಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವ ಪ್ರಕರಣ ನಡೆದಿದೆ. ಈ ಸಂಬಂಧ ದೂರು ದಾಖಲಾಗಿದ್ದು, ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *