ಉಡುಪಿ: ದೇಶದ ವಿವಿಧ ರಾಜ್ಯಗಳಲ್ಲಿ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ದಾಳಿಗೆ ಸಂಬಂಧಿಸಿದಂತೆ ಹೇಳಿಕೆ ನೀಡುವ ಭರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇಂಧನ ಸಚಿವ ವಿ. ಸುನಿಲ್ ಕುಮಾರ್ ತಾವು ನಿರ್ವಹಿಸುವ ಸ್ಥಾನ ಹಾಗೂ ಸಂವಿಧಾನ ಬದ್ಧತೆಯಿಂದ ಕಾರ್ಯನಿರ್ವಹಿಸುವುದಾಗಿ ಪ್ರಮಾಣ ಮಾಡಿದ್ದರೂ ಸಹ, ವಿವಾದಿತ ಹೇಳಿಕೆಗಳನ್ನು ನೀಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆಯ ರಾಷ್ಟ್ರೀಯ ನಾಯಕರು ಹಾಗೂ ಕಾರ್ಯಕರ್ತರ ಮೇಲೆ ಒಂದೇ ದಿನ ಎನ್‌ಐಎ ಅಧಿಕಾರಿಗಳು ದೇಶಾದ್ಯಂತ ದಾಳಿ ನಡೆಸಿದರು. ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುನಿಲ್ ಕುಮಾರ್, ಭಾರತವನ್ನು ಮುಸ್ಲಿಂ ರಾಷ್ಟ್ರವಾಗಿಸಲು ಸಾಧ್ಯವಿಲ್ಲ. ಭಾರತ ಎಂದಿಗೂ ಹಿಂದೂರಾಷ್ಟ್ರ, ಹಿಂದೂ ಸಂಸ್ಕೃತಿಯ ಆಧಾರದಲ್ಲೇ ರಾಷ್ಟ್ರವನ್ನು ಮತ್ತಷ್ಟು ಬಲಗೊಳಿಸುತ್ತೇವೆ. ಜನರು ಕೂಡ ಇದಕ್ಕೆ ಬೆಂಬಲಿಸಬೇಕೆಂದಿದ್ದು, ದೇಶದ ಬಹು ಸಂಸ್ಕೃತಿ, ಒಕ್ಕೂಟ ಪರಂಪರೆ, ಜಾತ್ಯತೀತ, ಸೌಹಾರ್ದತಾ ತತ್ವದ ಆಶಯಗಳ ವಿರುದ್ಧವಾಗಿ ಹೇಳಿಕೆ ನೀಡಿದ್ದಾರೆ.
ಪಿಎಫ್‌ಐ ಅನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಗ್ಗು ಬಡಿಯುತ್ತವೆ. ಭಾರತವನ್ನು ದುರ್ಬಲಗೊಳಿಸುವ ಕೆಲಸ ಯಾರೂ ಮಾಡಬಾರದು. ಬಂಧಿತ ವ್ಯಕ್ತಿಗಳು ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡುವ ಕನಸು ಕಂಡಿದ್ದರು. ಜಗತ್ತಿನ ಯಾವುದೇ ರಾಷ್ಟ್ರಗಳು ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆಯಾದಾಗ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದಾಗಿ ಹೇಳಿದ್ದೆವು. ಕಾರ್ಯಕರ್ತರಿಗೆ ನ್ಯಾಯ ಕೊಡುವ ಭರವಸೆಯನ್ನೂ ನೀಡಿದ್ದೆವು. ಪ್ರಕರಣವನ್ನು ಎನ್‌ಐಎಗೆ ಕೊಟ್ಟು ಸರ್ಕಾರ ಕೈಕಟ್ಟಿ ಕುಳಿತಿಲ್ಲ, ತನ್ನ ಜವಾಬ್ದಾರಿಯನ್ನ ನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ.