ಬೆಳಗಾವಿ : ಹಿಂದೂ ಶಬ್ದದ ಬಗ್ಗೆ ವಿಷಯವನ್ನು ಪ್ರಸ್ತಾಪಿಸಿದ ಶಾಸಕ ಸತೀಶ್ ಜಾರಕಿಹೊಳಿ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸ್ಪಷ್ಟನೆ ನೀಡಿರುವ ನನ್ನ ಹೇಳಿಕೆಯು ತಪ್ಪು ಎಂದಾದರೆ ಕ್ಷಮೆ ಯಾಚಿಸುವುದಷ್ಟೇ ಅಲ್ಲ, ರಾಜೀನಾಮೆಯನ್ನೂ ಕೊಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬೆಳಗಾವಿಯ ಜಾಧವ್ ನಗರದಲ್ಲಿರುವ ಕಚೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಸತೀಶ್ ಜಾರಕಿಹೊಳಿ ಮಾಧ್ಯಮಗೋಷ್ಠಿ ಕರೆದಿದ್ದರು. ನಾವು ಯಾರ ಬಗ್ಗೆಯೂ ಮಾತನಾಡಲ್ಲ. ಯಾರೂ ಸಹ ನಮ್ಮ ನಿಲುವು ನೋಡೇ ಇಲ್ಲ. ನನ್ನ ಹೇಳಿಕೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯೆ ಗುರಿಯಾಗುತ್ತಿದ್ದಂತೆಯೇ ಕ್ಷಮೆ ಕೇಳುವಂತೆ ಆಗ್ರಹಿಸಲಾಗುತ್ತಿದೆ. ನಾನು ಹೇಳಿದ್ದು ಸಾಬೀತುಪಡಿಸಿದ್ದಲ್ಲಿ, ಕ್ಷಮೆ ಅಷ್ಟೇ ಅಲ್ಲ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದ ತಿಳಿಸಿದರು.
ಎಷ್ಟು ಜನ ನಾವು ಹೇಳಿದ್ದನ್ನು ಅರ್ಥ ಮಾಡಿಕೊಂಡಿದ್ದಾರೆ. ಅಶ್ಲೀಲ ಎಂಬ ಪದದಿಂದ ತಮಗೆ ಬೇಕಾದ ಹಾಗೇ ಓದಿದ್ದಾರೆ. ಹಿಂದೂ ಶಬ್ದ ಪರ್ಷಿಯನ್ ಶಬ್ದ. ದಾಖಲೆ ಇದೆ. ವಿಕಿಪೀಡಿಯಾದಲ್ಲಿ ನೋಡಬಹುದು ಅಂತಾ ಹೇಳಿದ್ದೇನೆ. ಕೆಟ್ಟ ಶಬ್ದ ಬಳಸಿದ್ದು ಶಬ್ದಕೋಶಯಲ್ಲಿ ಇದೆ. ಅದು 1963ರಲ್ಲಿ ಮುದ್ರಣಗೊಂಡಿದೆ. ನಾನು ಏನು ಹೇಳಿದ್ದೇನೋ, ಇದರ ಬಗ್ಗೆ ಚರ್ಚೆ ಆಗಬೇಕು ಎಂದಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಗೆ ತಿರುಗೇಟು ನೀಡಿರುವ ಸತೀಶ್ ಜಾರಕಿಹೊಳಿ ನಾನು ಅರೆಬರೆ ಓದಿದವನಲ್ಲ, 30 ವರ್ಷಗಳಿಂದ ಓದುತ್ತಲೇ ಇದ್ದೇನೆ. ಆಳವಾದ ಅಧ್ಯಯನದ ಅನುಭವದಿಂದಲೇ ನಾನು ಈ ಹೇಳಿಕೆ ನೀಡಿರುವುದು ಎಂದಿದ್ದಾರೆ.
ನನ್ನ ಹೇಳಿಕೆಯನ್ನು ಸಾರಾಸಗಟಾಗಿ ವಿರೋಧಿಸುವ ಬದಲು, ಸಮರ್ಪಕವಾಗಿ ಪರಿಶೀಲಿಸಲಿ. ಯಾವುದೇ ಧರ್ಮ, ಜಾತಿ, ಸಮಾಜದ ವಿರುದ್ಧ ನಾನು ಹೇಳಿಕೆ ನೀಡಿಲ್ಲ. ಈಗ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ, ಅವರಿಗೆ ಸೂಕ್ತ ಎನಿಸುವ ಸಂಸ್ಥೆಗಳಿಂದ ತನಿಖೆ ಮಾಡಿಸಲಿ. ನನ್ನ ಜತೆ ಚರ್ಚೆಗೆ ಬಂದರೆ ನಾನೇ ಅವರಿಗೆ ಮನವರಿಕೆ ಮಾಡಿಕೊಡುವೆ. ಚರ್ಚೆಗೆ ಬಂದವರಿಗೆ ದಾಖಲೆ ಸಮೇತ ವಿವರಣೆ ನೀಡಲು ಸಿದ್ಧನಿರುವೆ ಎಂದು ಹೇಳಿದರು.
ನೀವು ಹಿಂದೂನಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಭಾರತೀಯ ಎಂದ ಸತೀಶ್ ಜಾರಕಿಹೊಳಿ ಅವರು, ಪಕ್ಷ ಬೇರೆ ಇದು ವೈಯಕ್ತಿಕ, ನಾನು ಪಕ್ಷದ ವೇದಿಕೆಯಲ್ಲಿ ಮಾತನಾಡಿಲ್ಲ. ಪಕ್ಷಕ್ಕೂ ನನ್ನ ಹೇಳಿಕೆಗೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.
ಭಾನುವಾರ (ನವೆಂಬರ್ 6) ನಿಪ್ಪಾಣಿ ಪಟ್ಟಣದಲ್ಲಿ ಮಾನವ ಬಂಧುತ್ವ ವೇದಿಕೆ ಆಯೋಜಿಸಿದ್ದ ‘ಮನೆಮನೆಗೆ ಬುದ್ಧ, ಬಸವ, ಅಂಬೇಡ್ಕರ್ ಕಾರ್ಯಕ್ರಮ’ದಲ್ಲಿ ಹಿಂದೂ ಶಬ್ದದ ಅರ್ಥದ ಬಗ್ಗೆ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದರು.
ಕಾರ್ಯಕ್ರಮದಲ್ಲಿ ಹಿಂದು ಶಬ್ಧದ ಮೇಲೆ ಮಾತನಾಡಿದ್ದೇನೆ. ಈ ಬಗ್ಗೆ ರಾಜ್ಯ, ರಾಷ್ಟ್ರೀಯ ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿದೆ. ನಾನು ಭಾಷಣದಲ್ಲಿ ಹೇಳಿದ್ದು ಹಿಂದು ಶಬ್ಧ ಪರ್ಷಿಯನ್ ನಿಂದ ಬಂದಿದೆ ಎಂದು, ಇದು ನಿಜ. ಈ ಬಗ್ಗೆ ಚರ್ಚೆ ಆಗಬೇಕು ಎಂದು ನಾನು ಹೇಳಿದ್ದೇನೆ. ಇದು ಸತೀಶ್ ಜಾರಕಿಹೊಳಿ ವೈಯಕ್ತಿಕ ಹೇಳಿಕೆ ಅಲ್ಲ ಎಂದು ಸ್ಪಷ್ಟಪಡಿಸಿದರು.