ಹಿಂದೂ ಪದ ಪರ್ಷಿಯನ್‌ ಭಾಷೆದ್ದು-ಈ ಶಬ್ದದ ಅರ್ಥ ಬಹಳ ಅಶ್ಲೀಲವಾಗಿದೆ; ಸತೀಶ್‌ ಜಾರಕಿಹೊಳಿ

ಚಿಕ್ಕೋಡಿ: ಭಾರತಕ್ಕೂ, ಪರ್ಷಿಯನ್‍ಗೂ ಏನ್ ಸಂಬಂಧ? ಹಿಂದೂ ಭಾರತೀಯ ಪದವೇ ಅಲ್ಲ, ಅದು ಪರ್ಷಿಯನ್ ಪದ. ಹಿಂದೂ ನಮ್ಮದು ಹೇಗೆ ಆಯಿತು ಅನ್ನೋದು ಚರ್ಚೆ ಆಗಬೇಕಿದೆ. ಪರ್ಷಿಯನ್ ಶಬ್ದವನ್ನ ಇಷ್ಟೊಂದು ಮೇಲಕ್ಕೆ ಯಾಕೆ ತೆಗೆದುಕೊಂಡು ಹೋಗುತ್ತಿದ್ದೀರಿ‌. ಹಿಂದು ಶಬ್ದದ ಅರ್ಥ ಗೊತ್ತಾದ್ರೇ ನಿಮಗೆ ನಾಚಿಕೆ ಬರುತ್ತೆ. ಹಿಂದು ಶಬ್ದದ ಅರ್ಥ ಬಹಳ ಅಶ್ಲೀಲವಾಗಿದೆ. ಇದು ಈಗಾಗಲೇ ವೆಬ್ ಸೈಟ್ ನಲ್ಲಿದೆ ಮಾಜಿ ಸಚಿವ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಹಮ್ಮಿಕೊಂಡಿದ್ದ ಮನೆ ಮನೆಗೆ ಬುದ್ಧ ಬಸವ ಅಂಬೇಡ್ಕರ್‌ ಎನ್ನುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸತೀಶ್‌ ಜಾರಕಿಹೊಳಿ, ಬುದ್ದ, ಬಸವ, ಅಂಬೇಡ್ಕರ್ ನಮ್ಮ ನೇತಾರರು. ಎರಡು ಸಾವಿರ ವರ್ಷದ ಹಿಂದೆ ಯಾವುದೇ ಜಾತಿ, ಧರ್ಮ ಇರಲಿಲ್ಲ ಎಲ್ಲರೂ ಒಂದೇ ಆಗಿದ್ದರು. ನಾವು ಮಾಡುತ್ತಿದ್ದ ಕೆಲಸಗಳು ಬೇರೆ ಬೇರೆಯಾಗಿತ್ತು ಅಷ್ಟೇ. ಅದರಿಂದ ನಮ್ಮನ್ನ ಬೇರೆ ಮಾಡಿದ್ರೂ ಈಗ ಮತ್ತೆ ಒಂದಾಗುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ. ಇದಕ್ಕೆ ರಾಜಕೀಯವಾಗಿ ಅಧಿಕಾರವೂ ಬಹಳ ಮುಖ್ಯ. ಅಧಿಕಾರ ಇಲ್ಲದೇ ನಾವು ಏನೂ ಮಾಡಲು ಆಗುವುದಿಲ್ಲ ಎಂದರು.

ಸಮಾನತೆ ಬಗ್ಗೆ ಮಾತನಾಡುವವರಿಗೆ ಅಧಿಕಾರ ನೀಡಬೇಕು. ಒಡೆದು ಆಳುವವರು ನಮಗೆ ಬೇಡ. ಹೀಗಾಗಿ ಒಂದು ಸಮಾನತೆ, ಅಧಿಕಾರಕ್ಕಾಗಿ ನಮ್ಮ ಹೋರಾಟ. ಈಗ ನಾವು ನೋಡುತ್ತಿರುವ ಇತಿಹಾಸ ನೀವು ಓದುತ್ತಿರುವ ಇತಿಹಾಸ ತಪ್ಪಾಗಿದೆ. ಮಹಾತ್ಮಾ ಜ್ಯೋತಿಬಾ ಫುಲೆ ಇಲ್ಲದಿದ್ದರೇ ಛತ್ರಪತಿ ಶಿವಾಜಿ ಅವರ ಇತಿಹಾಸ ಹೊರಗೆ ಬರುತ್ತಿರಲಿಲ್ಲ. ಅವರ ಇತಿಹಾಸವನ್ನು ಮುಚ್ಚಿಡಲಾಗಿತ್ತು. ಸತ್ಯ ಶೋಧಕ ಸಂಸ್ಥೆಯಿಂದ ಅವರ ಇತಿಹಾಸ ಹೊರಗೆ ಬಂದಿದೆ. ಶಿವಾಜಿ ಎಲ್ಲರನ್ನು ಸಮಾನತೆಯಿಂದ ನೋಡುತ್ತಿದ್ದರು. ವಿಶ್ವದಲ್ಲಿ ಶಿವಾಜಿ ಅವರ ಒಂದೇ ವರ್ಣಚಿತ್ರವಿರುವುದು ಅದನ್ನು ಯಾರೋ ಕುಲಕರ್ಣಿ, ದೇಶಪಾಂಡೆ ಅವರು ತಯಾರಿಸಿಲ್ಲ. ಮೊಹಮ್ಮದ್‌ ಮದಾರಿ ಎನ್ನುವ ಚಿತ್ರಕಾರ ತಯಾರಿಸಿದ್ದರು ಎಂದು ತಿಳಿಸಿದ್ದಾರೆ.

ಶಿವಾಜಿ ಮಹಾರಾಜರಿಗೆ ಯುದ್ದದ ವೇಳೆ ಹಿಂದೂ, ಮರಾಠ ಸಲಹೆ ನೀಡಿಲ್ಲ ಮುಸ್ಲಿಮರು ಸಲಹೆ ನೀಡಿದರು. ಆಗ್ರಾದಲ್ಲಿ ಬಂಧಿತರಾಗಿದ್ದ ಶಿವಾಜಿ ಅವರನ್ನ ಮುಸ್ಲಿಮರೇ ಬಿಡಿಸಿಕೊಂಡು ಬಂದಿದ್ದರು. ಆದರೆ, ಈಗ ಮರಾಠ ಮುಸ್ಲಿಂ, ದಲಿತರ ನಡುವೆ ದಿನನಿತ್ಯ ಜಗಳವಾಗುತ್ತಿವೆ. ಶಿವಾಜಿ ಮಹಾರಾಜರ ಕಾಲದಲ್ಲಿ ಹೀಗಿರಲಿಲ್ಲ. ಎಲ್ಲ ಜಾತಿಯವರಿಗೂ ಸಮಾನವಾಗಿ ನೋಡಿಕೊಳ್ಳುತ್ತಿದ್ದರು.  ಶಿವಾಜಿ ಮಹಾರಾಜರ ಅಂಗರಕ್ಷಕರು ಮುಸಲ್ಮಾನರಿದ್ದರು ಇದನ್ನ ಮರಾಠರು ತಿಳಿದುಕೊಳ್ಳುವುದು ಬಹಳ ಅವಶ್ಯಕತೆ ಇದೆ. ಪ್ರತಾಪ್‌ಘಡ್ ಕೋಟೆಯಲ್ಲಿ ಶಿವಾಜಿ ಮಹಾರಾಜರು ಮಸೀದಿಯನ್ನ ನಿರ್ಮಾಣ ಮಾಡಿದ್ದರು. ಈಗ ನಮಗೆ ಇತಿಹಾಸವನ್ನ ಬೇರೆ ರೀತಿ ತೋರಿಸಲಾಗುತ್ತಿದೆ” ಎಂದು ಅವರು ಇತಿಹಾಸವನ್ನು ವಿವರಿಸಿದರು.

ಬಸವಣ್ಣವರ ಕಾಲದಲ್ಲಿ ಸಾಕಷ್ಟು ಹತ್ಯೆಗಳು ನಡೆದವು ಅದನ್ನು ಮುಸ್ಲಿಮರು ಮಾಡಿದ್ರಾ? ಒಂದು ಲಕ್ಷ ಜೈನರ ಹತ್ಯೆಗಳಾಗಿವೆ ಎಂದು ಜೈನ್ ಸ್ವಾಮೀಜಿ ಹೇಳಿದ್ದಾರೆ. ಜೈನರ ಹತ್ಯೆಯನ್ನು ಆದೀಲ್ ಶಾ ಮಾಡಿದ್ರಾ? ಈ ಎಲ್ಲದರ ಕುರಿತು ಚರ್ಚೆ ಆಗಬೇಕಿದೆ ಎಂದು ಸತೀಶ್‌ ಜಾರಕಿಹೊಳಿ ಹೇಳಿದರು.

ಎಲ್ಲಿಂದಲೋ ತೆಗೆದುಕೊಂಡು ಬಂದು ನಮ್ಮ ಮೇಲೆ ಒತ್ತಾಯಪೂರ್ವಕವಾಗಿ ಹೇರಲಾಗುತ್ತಿದೆ. ಇದರ ಬಗ್ಗೆ ಚರ್ಚೆಯಾಗಬೇಕು ಇದು ಯಾರದ್ದು ಎಲ್ಲಿಂದ ಬಂತೂ ಅನ್ನೋದು. ಹೀಗಾಗಿ ಮೊದಲು ನೀವು ಇತಿಹಾಸ ತಿಳಿದುಕೊಳ್ಳುವುದು ಅವಶ್ಯವಿದೆ. ಬಹಳ ಜನರ ಹತ್ಯೆಯಾಗಿದೆ. ಹೇಳಿದ್ದೂ ಮುಗಿತು.  ಬಹಳ ವಿಚಿತ್ರ ಇತಿಹಾಸ ಇದೆ. ಅದನ್ನ ತಿಳಿದುಕೊಳ್ಳಲು ಸುದೀರ್ಘ ಸಮಯವೇ ಹಿಡಿಯಲಿದೆ. ಇಂಗ್ಲೆಂಡ್‌ಗೆಲ್ಲಾ ನೀವು ಹೋಗಬೇಕಾಗಿಲ್ಲ ನಿಮ್ಮ ಅಂಗೈಯಲ್ಲೇ ಇತಿಹಾಸ ಇದೆ ಓದಿ. ಸುಳ್ಳು ಯಾರು ಹೇಳ್ತಿದ್ದಾರೆ ಅವರಿಗೆ ನಾವು ಮಹಾನ್ ವ್ಯಕ್ತಿ ಅಂತಾ ಹೇಳ್ತಿದ್ದೇವೆ. ಸುಳ್ಳು ಹೇಳ್ತಿರುವವರಿಗೆ ನಾವು ದೇಶದ ಆದರ್ಶ ಮಾಡುತ್ತಿದ್ದೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.

ಇಬ್ಬರು ದೇಶವನ್ನು ಮಾರುತ್ತಿದ್ದಾರೆ-ಇಬ್ಬರು ದೇಶವನ್ನು ಕೊಳ್ಳುತ್ತಿದ್ದಾರೆ

ಕಾರ್ಯಕ್ರಮ ಉದ್ದೇಶಿ ಮೈಸೂರು ಉರಿಲಿಂಗ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ, ಬಂಧುತ್ವ ಇಲ್ಲದ ಹಿಂದುತ್ವ ದೇಶ ಅತ್ಯಂತ ಅಪಾಯಕಾರಿಯಾದದ್ದು, ಇಬ್ಬರು ದೇಶವನ್ನು ಮಾರುತ್ತಿದ್ದಾರೆ, ಇಬ್ಬರು ದೇಶವನ್ನು ಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇಶದಲ್ಲಿ ಆರು ನಿಮಿಷಕ್ಕೆ ಒಂದು ಅತ್ಯಾಚಾರವಾಗುತ್ತಿದೆ. ಮಂತ್ರದಿಂದ ಏನೂ ಆಗೊಲ್ಲ, ನಿಮ್ಮನ್ನು ಮೂರ್ಖರನ್ನಾಗಿಸಲು ಯತ್ನ ನಡೆದಿದೆ. ಮಂತ್ರದಿಂದ ಭಾರತ ಆಗಬಾರದು ಬಂಧುತ್ವದಿಂದ ಭಾರತ ಆಗಬೇಕು. ಹಿಂದುತ್ವ ಹಾಗೂ ದೇವರು ಎಂಬುದು ಸುಳ್ಳು, ಕೋವಿಡ್‌ ಬಂದಾಗ ದೇವರು ಎಲ್ಲಿ ಹೊಗಿದ್ದ ಎಂದು ಪ್ರಶ್ನಿಸಿದರು.

ದೇಶದಲ್ಲಿ ಬೆಂಕಿ ಬಿದ್ದಿದೆ, ಜಾತಿ, ಧರ್ಮಗಳ ನಡುವೆ ಬೆಂಕಿ ಬಿದ್ದಿದೆ. ಹೆಣಗಳ ರಾಜಕಾರಣ, ಹಣದ ರಾಜಕಾರಣ ನಡಿಯುತ್ತಿದೆ. ಹೆಣ ಬಿದ್ದರೆ, ಯಾವ ಪಕ್ಷದ ಹೆಣ ಅನ್ನುವ ರೀತಿಯಾಗಿದೆ. ಇನ್ನು ಮುಂದೆ ಹಿಂದುತ್ವ ಜೊತೆ ಅಲ್ಲ ಬಂಧುತ್ವ ಜೊತೆ ಚುನಾವಣೆ ನಡಿಯಬೇಕು. ದೇಶದಲ್ಲಿ ವ್ಯಕ್ತಿ ಪೂಜೆ, ಅಪಾಯಕಾರಿ ಎಂದು ಜ್ಞಾನ ಪ್ರಕಾಶ ಸ್ವಾಮೀಜಿ ಎಚ್ಚರಿಸಿದರು.

Donate Janashakthi Media

Leave a Reply

Your email address will not be published. Required fields are marked *