ಆಪರೇಶನ್ ಕಮಲ ಅಡ್ಡದಾರಿ ರಾಜಕೀಯಕ್ಕೆ ಬುದ್ದಿ ಕಲಿಸಿದ ತೆಲಂಗಾಣ ಜನತೆ

ವಾಸುದೇವ ರೆಡ್ಡಿ

ತೆಲಂಗಾಣದಲ್ಲಿ ಬಿಜೆಪಿ ಆಪರೇಷನ್ ಕಮಲಕ್ಕೆ ಒಳಗಾಗಿ ಉಪಚುನಾವಣೆ ನಡೆದ ನಲ್ಗೊಂಡ ಜಿಲ್ಲೆಯ ಮುನುಗೋಡು ವಿಧಾನಸಭಾ ಕ್ಷೇತ್ರದಲ್ಲಿ ಕಮ್ಯುನಿಸ್ಟ್ ಪಕ್ಷಗಳ ಬೆಂಬಲಿತ ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್‌ಎಸ್‌) ಅಭ್ಯರ್ಥಿ ಕುಸುಮಕುಂಟ್ಲ ಪ್ರಭಾಕಾರರೆಡ್ಡಿ 10,040 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಯನ್ನು ಸೋಲುಣ್ಣಿಸಿದ್ದಾರೆ. ಕಾಂಗ್ರೆಸ್ ಬಿಟ್ಟು ಬಿಜೆಪಿ ಪಕ್ಷಕ್ಕೆ ಸೇರಿ ಚುನಾವಣೆಗೆ ಸ್ಪರ್ಧಿಸಿದ್ದ ಕೋಮಟಿರೆಡ್ಡಿ ರಾಜಗೋಪಾಲರೆಡ್ಡಿ ಸೋಲು ಕಂಡಿದ್ದಾರೆ.

ತೆಲಂಗಾಣ ರಾಜಕೀಯದಲ್ಲಿ ಭಾರೀ ಸಂಚಲನವನ್ನು ಸೃಷ್ಟಿಸಿದ್ದ ಮುನುಗೋಡು ಉಪಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಮುಖಭಂಗವಾಗಿದೆ. ಬಿಜೆಪಿಯ ಅಮಿತ್ ಶಾ, ಗೋವಾ, ಕರ್ನಾಟಕ, ಮಹಾರಾಷ್ಟ್ರ ಮುಂತಾದ ಒಂಬತ್ತು ರಾಜ್ಯಗಳಲ್ಲಿ ಆಪರೇಶನ್ ಕಮಲದ ಮೂಲಕ ಜನತೆ ಆಯ್ಕೆ ಮಾಡಿದ್ದ ಸರಕಾರಗಳನ್ನು ಬೀಳಿಸಿ ಉಪ ಚುನಾವಣೆಗಳನ್ನು ನಡೆಸಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಪ್ರಜಾಪ್ರಭುತ್ವ ಕಗ್ಗೊಲೆಯ ರಾಜಕೀಯ ಮಾಡಿದ್ದು ಗೊತ್ತೇ ಇದೆ… ಇದೇ ಮಾದರಿಯಲ್ಲಿ ತೆಲಂಗಾಣದಲ್ಲಿ ಕೆ ಚಂದ್ರಶೇಖರ್‌ ರಾವ್‌ ಸರ್ಕಾರವನ್ನು ಕೆಡವಲು ಹೋಗಿ ಬಾರಿ ಆಘಾತಕ್ಕೆ ಬಿಜೆಪಿ ಒಳಗಾಗಿದೆ.

ಕಾಂಗ್ರೆಸ್ ಪಕ್ಷದ ಪ್ರಭಾವಿ ಶಾಸಕರಾಗಿದ್ದ ಕೋಮರೆಡ್ಡಿ ರಾಜಗೋಪಾಲರೆಡ್ಡಿಗೆ ಸಾವಿರದ ಎಂಟು ನೂರು ಕೋಟಿ ರೂಪಾಯಿಯ ಪ್ರಾಜೆಕ್ಟ್ ಒಂದನ್ನು ಗುತ್ತಿಗೆ ನೀಡಿ 100 ಕೋಟಿ ಹಣ ನೀಡಿದೆ. ಒಕ್ಕೂಟ ಸರ್ಕಾರದ ಹತ್ತಾರು ಸಂಪುಟದರ್ಜೆ ಸಚಿವರುಗಳು, ಬಿಜೆಪಿ ಐಟಿ ಸೆಲ್, ಯುದ್ದೋಪಾದಿಯಲ್ಲಿ ಚುನಾವಣೆಯನ್ನು ಗೆಲ್ಲಲ್ಲು ದೊಡ್ಡ ಪ್ರಯೋಗಕ್ಕೆ ಇಳಿದಿತ್ತು. ರಾತ್ರಿ ಹಗಲು ಎನ್ನದೆ ಶ್ರಮಿಸಿದರೂ ಸಹ ಬಿಜೆಪಿಗೆ ಬಾರಿ ಗರ್ವಭಂಗ ಆಗಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕಾಂಗ್ರೆಸ್ ಪ್ರಭಾವಿ ಶಾಸಕನನ್ನು ಆಪರೇಶನ್ ಕಮಲ ಮಾಡಿದ ಪ್ರಭಾವದಿಂದಲೇ ಈ ಉಪ ಚುನಾವಣೆಗೆ ಕಾರಣವಾಗಿದೆ. ಇದೇ ಸಂದರ್ಭದಲ್ಲಿ ತೆಲಂಗಾಣದ ಟಿಆರ್‌ಎಸ್‌, ಕಾಂಗ್ರೆಸ್ ಶಾಸಕರುಗಳನ್ನು ಖರೀದಿಸಲು ಫಾರಂ ಹೌಸ್ ನಲ್ಲಿ ಸಭೆ ನಡೆಸುತ್ತಿದ್ದ ಅಮಿತ್ ಶಾ ಟೀಂನ ಬಿಜೆಪಿ ರಾಜಕೀಯ ಏಜೆಂಟರು ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಇವರಿಂದ ತೆಲಂಗಾಣ ಪೋಲಿಸರು ನೂರಾರು ಕೋಟಿ ಹಣ, ನಕಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ಅಕ್ರಮ ಬ್ಯಾಂಕ್ ಖಾತೆಯ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಶಾಸಕರ ಖರೀದಿ ಅವ್ಯವಹಾರದಲ್ಲಿ ಕರ್ನಾಟಕದ ಬಿ.ಎಲ್. ಸಂತೋಷ್, ರಾಘವೇಂದ್ರ ಭಾರತಿ ಸ್ವಾಮಿಜಿಯ ಪಾತ್ರಗಳಿದ್ದವು.

ಈ ಮುನುಗೋಡು ಉಪ ಚುನಾವಣೆಯಲ್ಲಿ ಸಿಪಿಐ, ಸಿಪಿಐ(ಎಂ) ಕಮ್ಯುನಿಸ್ಟ್ ಪಕ್ಷಗಳು ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಬೇಷರತ್ತಾಗಿ ಟಿಆರ್‌ಎಸ್‌ ಗೆ ಬೆಂಬಲಿಸಿದ್ದು ಬಿಜೆಪಿ ಸೋಲಿಗೆ ಪ್ರಧಾನ ಕಾರಣವಾಗಿದೆ. ಚುನಾವಣೆಯ ಗೆಲುವಿನ ಫಲಿತಾಂಶದ ನಂತರ ಸಚಿವ ಕೆ.ಟಿ.ರಾಮ ರಾವ್ ಕಮ್ಯುನಿಸ್ಟ್ ಪಕ್ಷಗಳ ಬದ್ಧತೆಗೆ ವಿಶೇಷವಾಗಿ ಧನ್ಯವಾದಗಳು ತಿಳಿಸಿದರು.

ನಲ್ಗೊಂಡ ಜಿಲ್ಲೆಯ ಈ ಮುನುಗೊಡು ವಿಧಾನಸಭಾ ಕ್ಷೇತ್ರ ಸಂಪ್ರಾದಾಯಿಕವಾಗಿ ಕಮ್ಯುನಿಸ್ಟ್ ಪಕ್ಷಗಳ ಶಕ್ತಿಕೇಂದ್ರ ಮತ್ತು ಇಲ್ಲಿ ಆರು ಬಾರಿ ಕಮ್ಯುನಿಸ್ಟ್ ಪಕ್ಷದ ಶಾಸಕರು ಗೆದಿದ್ದರು. ಈ ಮೂಲಕ ಬಿಜೆಪಿ ಸೃಷ್ಟಿಸಿದ ಈ ಉಪ ಚುನಾವಣೆ ತೆಲಂಗಾಣ ರಾಜಕೀಯದಲ್ಲಿ ಹೊಸ ಮೈತ್ರಿಗೆ ಕಾರಣವಾಗಿದೆ. ತೆಲಂಗಾಣ ಪ್ರತ್ಯೇಕ ರಾಜ್ಯದ ನಂತರ ರೈತರು, ಕಾರ್ಮಿಕರು, ಬಡವರ ಸಮಸ್ಯೆಗಳ ಪರಿಹಾರಕ್ಕಾಗಿ ಕೆ ಚಂದ್ರಶೇಖರ್‌ ರಾವ್ ಸರ್ಕಾರದ ವಿರುದ್ದ ಹೋರಾಡುತ್ತಿದ್ದ ಕಮ್ಯುನಿಸ್ಟರನ್ನು ಕೆ ಚಂದ್ರಶೇಖರ್‌ ರಾವ್‌ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವ ರಾಜಕೀಯ ಅನಿವಾರ್ಯತೆಯನ್ನು ಈ ಚುನಾವಣೆ ಅರ್ಥೈಯಿಸಿದೆ. ತೆಲಂಗಾಣದಲ್ಲಿ ಹೊಸ ರಾಜಕೀಯ ಮೈತ್ರಿಗೆ ಕೂಟಗಳಿಗೆ ಈ ಉಪಚುನಾವಣೆ ಆಯ್ಕೆಯನ್ನು ಸೃಷ್ಟಿಮಾಡಿದೆ. ಇದೇ ವೇಳೆ ತೆಲಂಗಾಣ ರಾಜಕೀಯದಲ್ಲಿ ಬಿಜೆಪಿಗೆ ಬಲವಾದ ಪೆಟ್ಟು ಬಿದ್ದಿದೆ.

Donate Janashakthi Media

Leave a Reply

Your email address will not be published. Required fields are marked *