“ಹಿಂದಿಯೇತರ ರೈತಾಪಿ ಕುಟುಂಬಗಳ ಯುವಜನರ ಸಾಮಾಜಿಕ ಚಲನಶೀಲತೆಗೆ ಹಾನಿಕಾರಕ”
ಹೊಸದಿಲ್ಲಿ: ಮೋದಿ ಆಡಳಿತ ಭಾರತದ ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಧ್ವಂಸ ಮಾಡಿ, ಆರ್‌ಎಸ್‌ಎಸ್‌ನ ಮುದ್ದಿನ ಅಜೆಂಡಾವಾದ “ಹಿಂದಿ, ಹಿಂದೂ, ಹಿಂದೂಸ್ತಾನ್” ಮತ್ತು “ಸಾಂಸ್ಕೃತಿಕ ರಾಷ್ಟ್ರೀಯತೆ”ಯನ್ನು ಜಾರಿಗೆ ತರಹೊರಟಿದೆ. ಇದು ದೇಶವಿರೋಧಿ ಮತ್ತು ಸಂವಿಧಾನ ವಿರೋಧಿ ನಡೆ ಎಂದು ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಖಂಡಿಸಿದೆ. ಭಾರತದ ರಾಷ್ಟ್ರಪತಿಗಳಿಗೆ ಸಲ್ಲಿಸಿದ ತನ್ನ 11 ನೇ ವರದಿಯಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ನೇತೃತ್ವದ ಅಧಿಕೃತ ಭಾಷೆಯ ಸಂಸದೀಯ ಸಮಿತಿಯು ಎಲ್ಲಾ ಉನ್ನತ ತಾಂತ್ರಿಕ ಮತ್ತು ತಾಂತ್ರಿಕೇತರ ಸಂಸ್ಥೆಗಳಲ್ಲಿ ಬೋಧನಾ ಮಾಧ್ಯಮವು ಕಡ್ಡಾಯವಾಗಿ ಹಿಂದಿ ಆಗಿರಬೇಕು ಎಂದು ಶಿಫಾರಸು ಮಾಡಿದೆ ಎಂಬ ಸುದ್ದಿಗೆ ಪ್ರತಿಕ್ರಿಯಿಸುತ್ತ ಅದು ಹೇಳಿಕೆ ನೀಡಿದೆ.
ಮೋದಿ ಆಡಳಿತದ ಕಾರ್ಪೊರೇಟ್ ಪರ ನೀತಿಗಳು ಈಗಾಗಲೇ ಕತ್ತು ಹಿಸುಕಿರುವ ರೈತ ಕುಟುಂಬಗಳ ಮೇಲೆ ಈ ನಡೆ ಗಂಭೀರ ಪರಿಣಾಮ ಬೀರಲಿದೆ. ದೀರ್ಘಕಾಲದ ಕೃಷಿ ಬಿಕ್ಕಟ್ಟಿನ ಕಾರಣ, ಕೃಷಿ ಕುಟುಂಬಗಳ ಯುವಕರು ಸರ್ಕಾರದ ಅನುದಾನಿತ ಶಿಕ್ಷಣ ಮತ್ತು ಕೇಂದ್ರ ಸರ್ಕಾರಿ ಉದ್ಯೋಗಗಳನ್ನು ಸಾಮಾಜಿಕ ಚಲನಶೀಲತೆಗೆ ಪ್ರಮುಖ ಸಾಧನಗಳಾಗಿ ಪರಿಗಣಿಸುತ್ತಾರೆ. ಈ ಶಿಫಾರಸುಗಳನ್ನು ಅಂಗೀಕರಿಸಿದರೆ, ಯುವ ಪೀಳಿಗೆಯ, ಮುಖ್ಯವಾಗಿ ಹಿಂದಿಯೇತರ ಯುವಜನರ ಸಾಮಾಜಿಕ ಚಲನಶೀಲತೆಯ ಸಾಧ್ಯತೆಗಳು ತೀವ್ರವಾಗಿ ಹಾನಿಗೊಳಗಾಗುತ್ತವೆ ಎಂದು ಎಐಕೆಎಸ್ ಆತಂಖ ವ್ಯಕ್ತಪಡಿಸಿದೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂಗಳು), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿಗಳು) ಮತ್ತು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ತಾಂತ್ರಿಕ ಸಂಸ್ಥೆಗಳ ವರ್ಗಕ್ಕೆ ಸೇರುತ್ತವೆ ಮತ್ತು ತಾಂತ್ರಿಕೇತರ ಸಂಸ್ಥೆಗಳಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯಗಳು, ಕೇಂದ್ರೀಯ ವಿದ್ಯಾಲಯಗಳು (ಕೆವಿಗಳು) ಮತ್ತು ನವೋದಯ ವಿದ್ಯಾಲಯಗಳು. ಎಲ್ಲಾ ಪ್ರಮುಖ ಕೇಂದ್ರೀಯ ಸಂಸ್ಥೆಗಳನ್ನು ಹಿಂದಿಯೇತರ ಭಾಷಾ ರಾಷ್ಟ್ರೀಯತೆಗಳಿಗೆ ಪ್ರವೇಶಿಸದಂತೆ ಮಾಡುವುದರ ಜೊತೆಗೆ, ನೇಮಕಾತಿ ಪರೀಕ್ಷೆಗಳಲ್ಲಿ ಕಡ್ಡಾಯ ಇಂಗ್ಲಿಷ್ ಭಾಷೆಯ ಪ್ರಶ್ನೆ ಪತ್ರಿಕೆಗಳನ್ನು ತೆಗೆದುಹಾಕಲು ಸಮಿತಿಯು ಶಿಫಾರಸು ಮಾಡಿದೆ.
ಈ ಶಿಫಾರಸುಗಳು ಸ್ವಾತಂತ್ರ್ಯ ಹೋರಾಟದ ಪರಂಪರೆಯನ್ನು ಮತ್ತು ವಿವಿಧತೆಯಲ್ಲಿ ಏಕತೆಯನ್ನು ಪೋಷಿಸುವ ಸಾಂವಿಧಾನಿಕ ಭರವಸೆಗಳನ್ನು ನಿರಾಕರಿಸುತ್ತಿವೆ ಎಂಬುದು ತನ್ನ ದೃಢವಾದ ಅಭಿಪ್ರಾಯ ಎಂದಿರುವ ಎಐಕೆಎಸ್ ಇತರ ಭಾಷೆಗಳನ್ನು ಹಿತಗಳನ್ನು ಬಲಿಗೊಟ್ಟು ಹಿಂದಿಗೆ ಒಲವು ತೋರುವುದು ರಾಷ್ಟ್ರೀಯ ಸಮಗ್ರತೆಯ ಮೇಲಿನ ನೇರ ಆಕ್ರಮಣವಾಗಿದೆ ಎನ್ನುತ್ತ, ಫ್ಯಾಸಿಸ್ಟ್ ತೆರನ ಆರ್‌ಎಸ್‌ಎಸ್‌ನಿಂದ ಪೋಷಿಸಲ್ಪಟ್ಟ ಅಮಿತ್ ಷಾ ಭಾರತೀಯರನ್ನು ಭಾಷಾವಾರು ರೀತಿಯಲ್ಲಿ ವಿಭಜಿಸುವ ಮತ್ತು ಭಾರತದ ವಿಘಟನೆಗೆ ಕಾರಣವಾಗುವ ಈ ಭಯಾನಕ ನಡೆಯನ್ನು ಮುನ್ನಡೆಸುತ್ತಿರುವುದು ಆಶ್ಚರ್ಯದ ಸಂಗತಿಯೇನಲ್ಲ ಎಂದು ಹೇಳಿದೆ.
ಸಂಸತ್ತಿನಲ್ಲಿ ಆರೆಸ್ಸೆಸ್ ಮತ್ತು ಅದರ ಕೈವಾಡದ ಫ್ಯಾಸಿಸ್ಟ್ ತೆರನ ಹುನ್ನಾರವನ್ನು ಸೋಲಿಸಲು ದೇಶದ ಎಲ್ಲಾ ಪ್ರಜಾಸತ್ತಾತ್ಮಕ ಶಕ್ತಿಗಳು ಕೈ ಜೋಡಿಸಬೇಕು ಮತ್ತು ಒಗ್ಗಟ್ಟಿನಿಂದ ಮುಂದೆ ಬರಬೇಕು ಎಂದು ಎಐಕೆಎಸ್ ಕರೆ ನೀಡಿದೆ. ಬ್ರಿಟಿಷ್ ಸಾಮ್ರಾಜ್ಯಶಾಹಿಯ ಪ್ರಾಬಲ್ಯವನ್ನು ಕಿತ್ತೆಸೆಯುವ ಸ್ವಾತಂತ್ರ್ಯ ಹೋರಾಟದ ಮೂಲಕ ಹೊಮ್ಮಿದ ನಮ್ಮ ಬಹುರಾಷ್ಟ್ರೀಯ ದೇಶದ ಐಕ್ಯತೆ ಮತ್ತು ವೈವಿಧ್ಯತೆಯನ್ನು ರಕ್ಷಿಸಲು ಇದು ಮುಖ್ಯವಾಗಿದೆ ಎಂದು ಎಐಕೆಎಸ್ ಹೇಳಿದೆ.