ಬೆಂಗಳೂರು: ದೇಶದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಅಮೃತ ಮಹೋತ್ಸವ ಪ್ರಯುಕ್ತ `ಒಂದು ಭಾರತ ಶ್ರೇಷ್ಟ ಭಾರತ’ ಕಾರ್ಯಕ್ರಮದ ಅಡಿಯಲ್ಲಿ ಪ್ರೌಢ ಶಾಲೆ ಮತ್ತು ಪಿಯು ವಿದ್ಯಾರ್ಥಿಗಳಿಗೆ ಹೊರ ರಾಜ್ಯಕ್ಕೆ ಪ್ರವಾಸಕ್ಕೆ ಕರೆದೊಯ್ಯುವ ಶಿಕ್ಷಣ ಇಲಾಖೆಯು ಮುಂದಾಗಿದೆ.
ಆದರೆ, ಶಿಕ್ಷಣ ಇಲಾಖೆಯು ಯಡವಟ್ಟು ಮಾಡಿಕೊಂಡಿದ್ದು, ಹಿಂದಿ ಬರುವ ವಿದ್ಯಾರ್ಥಿಗಳಿಗೆ ಮಾತ್ರ ಆದ್ಯತೆ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿರುವುದು ಮತ್ತೆ ವಿವಾದಕ್ಕೆ ಕಾರಣವಾಗಿದೆ, ಕನ್ನಡ ಪರ ಸಂಘಟನೆಗಳೂ ಇದಕ್ಕೆ ಆಕ್ರೋಶ ವ್ಯಕ್ತಪಡಿಸಿವೆ.
ಕೇಂದ್ರ ಸರ್ಕಾರ ಈ ಸೂಚನೆ ವಿಧಿಸದೇ ಇದ್ದರೂ ಶಿಕ್ಷಣ ಇಲಾಖೆ ಈ ನಿರ್ಧಾರಕ್ಕೆ ಮುಂದಾಗಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಟಿ.ಎಸ್.ನಾಗಾಭರಣ, ಶಿಕ್ಷಣ ಇಲಾಖೆಯ ಹಿಂದಿ ಹೇರಿಕೆ ವಿರೋಧಿಸಿ ನೀತಿಗೆ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದಾರೆ.
ಹಿಂದಿ ಭಾಷೆ ಬಂದವರಿಗಷ್ಟೇ ಅವಕಾಶ ಕೊಟ್ಟರೆ, ಕನ್ನಡ ವಿದ್ಯಾರ್ಥಿಗಳಿಗೆ ವಂಚಿಸಿದಂತಾಗುತ್ತದೆ. ಕರ್ನಾಟಕದಲ್ಲಿ ಕನ್ನಡ ಭಾಷೆ ಸಾರ್ವಭೌಮ ಭಾಷೆ. ಹಿಂದಿ ಭಾಷೆ ತಿಳಿಯದ ಕನ್ನಡದ ವಿದ್ಯಾರ್ಥಿಗಳಿಗೂ ಪ್ರವಾಸದ ಅವಕಾಶ ಕೊಡಬೇಕು. ಭಾಷೆಯಿಂದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಭೇದ ಭಾವ ಬಿತ್ತುವ ಶಿಕ್ಷಣ ಇಲಾಖೆ ಕ್ರಮ ಸರಿಯಲ್ಲ. ಕೂಡಲೇ ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.
ಇದೀಗ ಶಿಕ್ಷಣ ಇಲಾಖೆಯ ಸುತ್ತೋಲೆ ಬಗ್ಗೆ ಕರ್ನಾಟಕದಲ್ಲಿ ಕನ್ನಡ ಬಲ್ಲ ವಿದ್ಯಾರ್ಥಿಗಳು ಎಲ್ಲಿ ಹೋಗಬೇಕೆಂಬ ಪ್ರಶ್ನೆ ಉದ್ಭವಿಸಿದೆ. ಕರ್ನಾಟಕದಿಂದ 50 ವಿದ್ಯಾರ್ಥಿಗಳನ್ನು ಉತ್ತರಾಖಂಡ ರಾಜ್ಯ ಪ್ರವಾಸ ಕೈಗೊಳ್ಳಲು ಆಯ್ಕೆ ಮಾಡುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದೆ.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಹೊರಡಿಸಿರುವ ಸುತ್ತೋಲೆಯಲ್ಲಿ’ಕಾಲೇಜಿನಲ್ಲಿ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪೈಕಿ ಹಿಂದಿ ಭಾಷೆಯಲ್ಲಿ ಮಾತನಾಡುವ ಮತ್ತು ತಂತ್ರಜ್ಞಾನದ ತಿಳಿವಳಿಕೆ, ಸಾಂಸ್ಕೃತಿಕ, ಕ್ರೀಡಾ ಸ್ಫೂರ್ತಿ ಹೊಂದಿರುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಕಳುಹಿಸಲು ಸೂಚಿಸಿದೆ’ ಎಂದು ತಿಳಿಸಲಾಗಿದೆ.
ಕರ್ನಾಟಕದಲ್ಲಿಆಡಳಿತ ಭಾಷೆ ಕನ್ನಡ ಇರುವಾಗ ಹಿಂದಿ ಭಾಷೆ ಬಲ್ಲವರನ್ನು ಆಯ್ಕೆ ಮಾಡುವಂತೆ ತಿಳಿಸುವುದು ಎಷ್ಟು ಸರಿ?’ ಎಂಬ ಪ್ರಶ್ನೆಯನ್ನು ಪಾಲಕರು ಎತ್ತಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಇದು ಸರ್ಕಾರದ ಆದೇಶವಲ್ಲ. ರಾಜ್ಯ ಸರ್ಕಾರ ಇಂತಹ ಯಾವುದೇ ಆದೇಶ ಹೊರಡಿಸಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದನ್ನ ಯಾರಿಗೂ ಸೂಚನೆ ನೀಡಿಲ್ಲ. ಇದು ಡಿಡಿಪಿಯು ಮಾಡಿರೋ ಲೋಪ. ಸರ್ಕಾರ ಯಾವುದೇ ಇಂತಹ ಆದೇಶ ಹೊರಡಿಸಲು ಸೂಚಿಸಿಲ್ಲ. ಇಂತಹ ಹೇಳಿಕೆ ಬಿಡುಗಡೆ ಮಾಡಿರೋ ಡಿಡಿಪಿಐ ವಿರುದ್ದ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.