ಹಿಮಾಚಲ ಪ್ರದೇಶ | ಮತ್ತೆ 9 ಶಾಸಕರು ನಮ್ಮೊಂದಿಗಿದ್ದಾರೆ ಎಂದ ಅನರ್ಹಗೊಂಡ ಕಾಂಗ್ರೆಸ್ ಶಾಸಕ!

ಶಿಮ್ಲಾ: ಕಾಂಗ್ರೆಸ್‌ನ ಕನಿಷ್ಠ ಒಂಬತ್ತು ಶಾಸಕರು ತಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದು ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ನಂತರ ವಿಧಾನಸಭೆಯಿಂದ ಅನರ್ಹಗೊಂಡ ಹಿಮಾಚಲ ಪ್ರದೇಶದ ಆರು ಕಾಂಗ್ರೆಸ್ ಶಾಸಕರಲ್ಲಿ ಒಬ್ಬರಾದ ರಾಜಿಂದರ್ ರಾಣಾ ಶನಿವಾರ ಹೇಳಿದ್ದಾರೆ. ಜೊತೆಗೆ ಬಂಡಾಯವೆದ್ದ ಆರು ಶಾಸಕರಲ್ಲಿ ಕೆಲವರು ಕಾಂಗ್ರೆಸ್‌ಗೆ ಹಿಂತಿರುಗಲು ಬಯಸುದ್ದಾರೆ ಎಂಬ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರ ಹೇಳಿಕೆಯನ್ನು ಅವರು ತಳ್ಳಿಹಾಕಿದ್ದಾರೆ.

ಮುಖ್ಯಮಂತ್ರಿ ಸುಖು ಅವರು ತಮ್ಮ ಹೇಳಿಕೆಗಳಿಂದ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ರಾಣಾ ಆರೋಪಿಸಿದ್ದು, “ಯಾರೂ ಕಾಂಗ್ರೆಸ್‌ಗೆ ಹಿಂತಿರುಗಲು ಬಯಸುವುದಿಲ್ಲ. ಮತ್ತೊಂದೆಡೆ, ಕನಿಷ್ಠ ಒಂಬತ್ತು ಶಾಸಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ” ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿನ ಏಕೈಕ ಸ್ಥಾನಕ್ಕೆ ರಾಜ್ಯಸಭಾ ಚುನಾವಣೆಯ ಅಡ್ಡ ಮತದಾನದ ಕುರಿತು ಮಾತನಾಡಿದ ರಾಣಾ ಅವರು, “ಹಿಮಾಚಲ ಪ್ರದೇಶ ಮತ್ತು ಅದರ ಜನರ ಗೌರವವನ್ನು ಎತ್ತಿಹಿಡಿಯಲು ನಾವು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸ್ಫೋಟ ಪ್ರಕರಣ : ಬ್ರ್ಯಾಂಡ್‌ ಬೆಂಗಳೂರಲ್ಲಿ ಹೆಚ್ಚಿದ ಬಿಗಿಭದ್ರತೆ

ಮತ್ತೊಂದೆಡೆ ಮುಖ್ಯಮಂತ್ರಿ ಸುಖು ಅವರು,”ಕಾಂಗ್ರೆಸ್‌ನ ಶೇಕಡಾ 80 ರಷ್ಟು ಶಾಸಕರು ಒಗ್ಗಟ್ಟಿನಲ್ಲಿ ಇದ್ದಾರೆ. ಉಳಿದವರು ಕ್ಷುಲ್ಲಕ ವಿಷಯಗಳ ಬಗ್ಗೆ ಅತೃಪ್ತರಾಗಿದ್ದಾರೆ. ಅನರ್ಹಗೊಂಡಿರುವ ಆರು ಶಾಸಕರ ಜತೆ ಮಾತುಕತೆ ನಡೆಸಿದ್ದು, ಸಮನ್ವಯ ಸಮಿತಿ ರಚನೆಯಾದ ಬಳಿಕ ಪರಿಸ್ಥಿತಿ ಸುಧಾರಿಸಲಿದೆ” ಎಂದು ಹೇಳಿದ್ದಾರೆ.

ರಾಜ್ಯಸಭೆ ಚುನಾವಣೆಯಲ್ಲಿ ಅಭಿಷೇಕ್ ಮನು ಸಿಂಘ್ವಿ ಅವರ ಸ್ಪರ್ಧೆಯ ಬಗ್ಗೆ ಮಾತನಾಡಿದ ಅನರ್ಹ ಶಾಸಕ ರಾಣಾ ಅವರು, “ರಾಜ್ಯಸಭೆಯಲ್ಲಿ ಹಿಮಾಚಲ ಪ್ರದೇಶವನ್ನು ಪ್ರತಿನಿಧಿಸುವ ರಾಜ್ಯದ ಪಕ್ಷದ ಕಾರ್ಯಕರ್ತರಿಂದ ಕಾಂಗ್ರೆಸ್‌ಗೆ ಯಾವುದೇ ಅಭ್ಯರ್ಥಿ ಇರಲಿಲ್ಲವೇ?” ಎಂದು ಅವರು ಕೇಳಿದ್ದಾರೆ. ಸೋನಿಯಾ ಗಾಂಧಿ ಅವರು ಅಭಿಷೇಕ್ ಮನು ಸಿಂಘ್ವಿ ಅವರ ಬದಲಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ ಅಡ್ಡ ಮತದಾನದ ಸಾಧ್ಯತೆಯ ಬಗ್ಗೆ ಅವರು ನಿರಾಕರಿಸಿದ್ದಾರೆ. “ಸೋನಿಯಾ ಗಾಂಧಿ ಅವರು ದೇಶಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ ಮತ್ತು ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಅವರು ಇಲ್ಲಿಂದ ಸ್ಪರ್ಧಿಸಿದ್ದರೆ ಬೇರೆ ವಿಷಯವಾಗಿರುತ್ತಿತ್ತು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜಾತಿ ಸಮೀಕ್ಷೆ ವರದಿ ಸ್ವೀಕಾರ ಸಮಾಜದಲ್ಲಿ ಅಶಾಂತಿಗೆ ಕಾರಣವಾಗಿದೆ : ಬಸವರಾಜ ಬೊಮ್ಮಾಯಿ

ಹಿಮಾಚಲ ಪ್ರದೇಶದಲ್ಲಿ ಆಡಳಿತಾರೂಢ ಕಾಂಗ್ರೆಸ್‌ಗೆ ದಿಗ್ಭ್ರಮೆಯುಂಟುಮಾಡಿರುವ ಬಿಜೆಪಿ ಮಂಗಳವಾರ ರಾಜ್ಯದ ಏಕೈಕ ರಾಜ್ಯಸಭಾ ಸ್ಥಾನವನ್ನು ತನ್ನ ಅಭ್ಯರ್ಥಿ ಹರ್ಷ್ ಮಹಾಜನ್ ಅವರು ಕಾಂಗ್ರೆಸ್ ವರಿಷ್ಠ ಸಿಂಘ್ವಿ ಅವರನ್ನು ಸೋಲಿಸುವುದರೊಂದಿಗೆ ವಿಧಾನಸಭೆಯಲ್ಲಿ ಅವಿಶ್ವಾಸ ನಿರ್ಣಯಕ್ಕೆ ವೇದಿಕೆ ಸಿದ್ಧಪಡಿಸಿತ್ತು.

ಮುಂಬರುವ ಲೋಕಸಭೆ ಚುನಾವಣೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಂತ್ರಿ ಸುಖು ಅವರು, ಸಮನ್ವಯ ಸಮಿತಿ ರಚನೆಯ ನಂತರ ಪರಿಸ್ಥಿತಿ ಉತ್ತಮಗೊಳ್ಳಲಿದೆ. ಲೋಕಸಭೆ ಚುನಾವಣೆಯನ್ನು ಪೂರ್ಣ ಶಕ್ತಿಯಿಂದ ಎದುರಿಸುತ್ತೇವೆ. ಕಳೆದ 14 ತಿಂಗಳುಗಳಲ್ಲಿ ರಾಜ್ಯ ಕಾಂಗ್ರೆಸ್ ಪ್ರಾಮಾಣಿಕ ಮತ್ತು ಪಾರದರ್ಶಕ ಆಡಳಿತ ನೀಡಿದೆ” ಎಂದು ಹೇಳಿದ್ದಾರೆ.

ವಿಡಿಯೊ ನೋಡಿ: ಚುನಾವಣೆ ಬರ್ತಿದ್ದಂತೆಬಾಂಬ್‌ ಸ್ಪೋಟಗೊಳ್ಳೋದು ಯಾಕೆ? ಸಾರ್ವಜನಿಕರು ವಹಿಸಬೇಕಾದ ಎಚ್ಚರಿಕೆ ಏನು? ಸಂಧ್ಯಾ ಸೊರಬ

Donate Janashakthi Media

Leave a Reply

Your email address will not be published. Required fields are marked *