ಚಿಕ್ಕಮಗಳೂರು: ಹಿಜಾಬ್ – ಕೇಸರಿ ಶಾಲು ಬಳಿಕ ಇದೀಗ ನೀಲಿ ಶಾಲಿನ ಸರದಿ ಆರಂಭವಾಗಿದೆ. ಚಿಕ್ಕಮಗಳೂರು ಐಡಿಎಸ್ ಜಿ ಕಾಲೇಜಿನಲ್ಲಿ ನೀಲಿ ಶಾಲು ಧರಸಿ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದಾರೆ.
ಹಿಜಾಬ್ ಮುಂದುವರಿಸಬೇಕು ಎಂದು ಆಗ್ರಹಿಸಿ ನೀಲಿ ಶಾಲು ಧರಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ‘ಜೈ ಭೀಮ್’ ಘೋಷಣೆ ಕೂಗಿದರು.
ಪ್ರತಿಯಾಗಿ ಕೇಸರಿ ಶಾಲು ಧರಿಸಿರುವ ವಿದ್ಯಾರ್ಥಿಗಳು ‘ಜೈ ಶ್ರೀರಾಮ್’ ಘೋಷಣೆ ಕೂಗಿದರು. ಇದರಿಂದ ಕಾಲೇಜಿನಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಕರ್ನಾಟಕದ ಕಾಲೇಜುಗಳಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಹೆಚ್ಚಾಗುತ್ತಿರುವ ಬೆನ್ನಲ್ಲೇ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಸಮವಸ್ತ್ರವನ್ನೇ ಕಡ್ಡಾಯವಾಗಿ ಧರಿಸಬೇಕು ಎಂದು ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರದ ವಸ್ತ್ರ ಸಂಹಿತೆ ಆದೇಶದ ಹೊರತಾಗಿಯೂ ಕುಂದಾಪುರ, ಚಿಕ್ಕಮಗಳೂರು, ಶಿವಮೊಗ್ಗ, ವಿಜಯಪುರ ಜಿಲ್ಲೆಗಳಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ಧರಿಸಿ ಬಂದಿದ್ದಾರೆ.
ಕುಂದಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಹಿಜಾಬ್, ಕೇಸರಿ ಶಾಲು ಹಾಕಿಕೊಂಡು ಬಂದಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ ವಾಪಸ್ ಕಳಿಸಿದೆ. ಜೊತೆಗೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದಲ್ಲೂ ಸಮವಸ್ತ್ರ ಗಲಾಟೆ ಶುರುವಾಗಿದೆ. ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಪ್ರವೇಶಕ್ಕೆ ಅಡ್ಡಿ ಪಡಿಸಲಾಗಿದೆ. ಹಾಗೂ ಮತ್ತೊಂದೆಡೆ ಇದಕ್ಕೆ ಪ್ರತಿಯಾಗಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದಿದ್ದಾರೆ. ಹೀಗಾಗಿ ಧ್ವನಿವರ್ಧಕದ ಮೂಲಕ ಪ್ರಾಂಶುಪಾಲರು ಮಕ್ಕಳಿಗೆ ಸರ್ಕಾರದ ಆದೇಶ ತಿಳಿಸಿದ್ದಾರೆ.