ಬೆಂಗಳೂರು: ವಿದ್ಯಾರ್ಥಿಗಳನ್ನು ವೃತ್ತಿ ಬದುಕಿನೊಂದಿಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಮತ್ತು ರಾಜ್ಯ ಸರ್ಕಾರದ ಎಲ್ಲ ವಿಶ್ವವಿದ್ಯಾಲಯಗಳು, ಐಟಿ ದಿಗ್ಗಜ ಸಂಸ್ಥೆ ಇನ್ಫೋಸಿಸ್ ನೊಂದಿಗೆ ಒಡಂಬಡಿಕೆಗೆ ಮಾಡಿಕೊಂಡಿವೆ.
2025ರ ವೇಳೆಗೆ ಒಂದು ಕೋಟಿ ಯುವಜನರಿಗೆ ಡಿಜಿಟಲ್ ಮತ್ತು ಜೀವನ ಕೌಶಲ್ಯಗಳನ್ನು ಕಲಿಸುವುದು ಇನ್ಫೋಸಿಸ್ ಸ್ಪ್ರಿಂಗ್ಬೋರ್ಡ್ನ ಗುರಿಯಾಗಿದೆ. ಇದರಲ್ಲಿ 10ರಿಂದ 22 ವರ್ಷದೊಳಗಿನ ಯುವಜನರತ್ತ ಗಮನವನ್ನು ಕೇಂದ್ರೀಕರಿಸಿವೆ. ಇದು ಭಾರತೀಯ ಭಾಷೆಗಳಲ್ಲೂ ಲಭ್ಯವಿದ್ದು, ಈಗಾಗಲೇ 23 ಲಕ್ಷ ವಿದ್ಯಾರ್ಥಿಗಳು ದೇಶಾದ್ಯಂತ ಸ್ಪ್ರಿಂಗ್ಬೋರ್ಡ್ ವೇದಿಕೆಯಲ್ಲಿ ಕಲಿಯುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ, ಇನ್ಫೋಸಿಸ್ ಸಂಸ್ಥೆಯು ಸಮಾಜದ ಒಳಿತಿಗಾಗಿ ತನ್ನ ಜ್ಞಾನ ಪರಿಣತಿಯನ್ನು ಹಂಚಿಕೊಳ್ಳಲು ಮುಂದೆ ಬಂದಿದೆ. ಆಧುನಿಕ ತಂತ್ರಜ್ಞಾನದ ನೆರವಿನಿಂದ ಅದು ರೂಪಿಸಿರುವ ಇನ್ಫೋಸಿಸ್ ಸ್ಟ್ರಿಂಗ್ಬೋರ್ಡ್ ಅಡಿಯಲ್ಲಿ 12,300 ಕೋರ್ಸುಗಳು ಉಚಿತವಾಗಿ ಕಲಿಯಬಹುದಾಗಿದೆ ಎಂದರು.
ಈ ಒಡಂಬಡಿಕೆಯಿಂದಾಗಿ ವಿಶ್ವವಿದ್ಯಾಲಯಗಳು ಸ್ಪ್ರಿಂಗ್ಬೋರ್ಡ್ ವೇದಿಕೆಯಲ್ಲಿರುವ ಕೋರ್ಸುಗಳನ್ನು ಪರಿಣಮಕಾರಿಯಾಗಿ ಬಳಸಿಕೊಳ್ಳಲು ಅವಕಾಶ ಸಿಗಲಿದೆ. ಈ ಮೂಲಕ ವಿವಿಗಳು ತಮ್ಮ ಪಠ್ಯಕ್ರಮಗಳನ್ನು ಪ್ರಸ್ತುತಗೊಳಿಸಿಕೊಳ್ಳಬೇಕು. ಬಳಿಕ, ಇವುಗಳ ಮೂಲಕ ಬೋಧಕರಿಗೆ ಹಲವು ಉಪಯುಕ್ತ ಬೋಧನಾ ತಂತ್ರಗಳನ್ನು ಕಲಿಸಬೇಕು. ಜತೆಗೆ ಇಲ್ಲಿರುವ ಪರಿಣತರನ್ನು ಕಾಲೇಜುಗಳು ಮತ್ತು ವಿವಿಗಳು ತಮ್ಮ ಅಧ್ಯಯನ ಮಂಡಲಿಯಲ್ಲಿ ಸೇರಿಸಿಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು.
ಜಾಗತಿಕ ಗುಣಮಟ್ಟದ ಶಿಕ್ಷಣ ಇಂದಿನ ತುರ್ತುಗಳಲ್ಲಿ ಒಂದಾಗಿದೆ. ಇದು ಸಾಧ್ಯವಾಗಬೇಕೆಂದರೆ ದಕ್ಷ ಬೋಧಕ ವೃಂದ ಮತ್ತು ಸಮಕಾಲೀನ ಅಗತ್ಯಗಳಿಗೆ ಸ್ಪಂದಿಸುವ ಪಠ್ಯಕ್ರಮ ಅತ್ಯಗತ್ಯವಾಗಿವೆ. ಹೀಗಾಗಿ ಸರಕಾರವು ಉನ್ನತ ಶಿಕ್ಷಣ ವಲಯವನ್ನು ಅಂತಾರಾಷ್ಟ್ರೀಕರಣ ಪ್ರಕ್ರಿಯೆಗೆ ತೆರೆದಿದ್ದು, ಜಗತ್ತಿನ ಅತ್ಯುತ್ತಮ ಸಂಸ್ಥೆಗಳು ಮತ್ತು ಉದ್ಯಮಗಳೊಂದಿಗೆ ಒಡಂಬಡಿಕೆಗಳನ್ನು ಮಾಡಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ನಾಸ್ಕಾಂ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಸಂಸ್ಥೆಗಳೊಂದಿಗೆ ಇಂತಹ ಉಪಕ್ರಮ ಆರಂಭಿಸಲಾಗಿದ್ದು, ಆಧುನಿಕ ಕೋರ್ಸುಗಳನ್ನು ಕಲಿಕೆಯಲ್ಲಿ ಕಡ್ಡಾಯಗೊಳಿಸಲಾಗಿದೆ. ಇನ್ಫೋಸಿಸ್ ಜತೆಗಿನ ಈ ಒಡಂಬಡಿಕೆ ಮೈಲಿಗಲ್ಲಾಗಿದೆ ಎಂದರು.
ಇನ್ಫೋಸಿಸ್ ಸಂಸ್ಥೆಯ ಶಿಕ್ಷಣ ಮತ್ತು ತರಬೇತಿ ವಿಭಾಗದ ಮುಖ್ಯಸ್ಥರಾದ ತಿರುಮಲ ಆರೋಹಿ ಮಾತನಾಡಿ, ಸ್ಪ್ರಿಂಗ್ಬೋರ್ಡ್ ಮೂಲಕ ಬೋಧಕರ ಅಗತ್ಯಗಳನ್ನು ಮನಗಂಡು, ಸೂಕ್ತ ತರಬೇತಿ ಕೊಡಲಾಗುವುದು ಇದಕ್ಕಾಗಿ ವಾರ್ಷಿಕ ಯೋಜನೆಯನ್ನು ರೂಪಿಸಲಾಗುವುದು. ಈ ಮೂಲಕ ವಿ.ವಿ.ಗಳು ಮತ್ತು ಅಧೀನ ಕಾಲೇಜುಗಳ ಬೋಧಕರನ್ನು ಜಾಗತಿಕ ಅಗತ್ಯಕ್ಕೆ ತಕ್ಕಂತೆ ಸಜ್ಜುಗೊಳಿಸಲಾಗುವುದು. ನಿಗದಿತವಾಗಿ ಇದರ ಪ್ರಗತಿಯ ಪರಾಮರ್ಶೆಯೂ ನಡೆಯಲಿದೆ ಎಂದರು.
ಉನ್ನತ ಶಿಕ್ಷಣ ಸಚಿವರ ಸಮ್ಮುಖದಲ್ಲಿ ವಿಧಾನಸೌಧದಲ್ಲಿ ಈ ಕಾರ್ಯಕ್ರಮ ನಡೆಯಿತು. ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲಕೃಷ್ಣ ಜೋಶಿ ಮತ್ತು ಇನ್ಫೋಸಿಸ್ನ ತಿರುಮಲ ಆರೋಹಿ ಒಡಂಬಡಿಕೆ ವಿನಿಮಯ ಮಾಡಿಕೊಂಡರು.
ಬೆಂಗಳೂರು, ಮಂಗಳೂರು, ಮೈಸೂರು, ಕರ್ನಾಟಕ, ತುಮಕೂರು, ಗುಲ್ಬರ್ಗ, ಕುವೆಂಪು, ಸಂಗೀತ, ಜಾನಪದ ಸೇರಿದಂತೆ ಎಲ್ಲಾ 24 ವಿ.ವಿ.ಗಳ ಕುಲಪತಿಗಳು ಹಾಜರಿದ್ದು, ಒಡಂಬಡಿಕೆ ಹಸ್ತಾಂತರಿಸಿಕೊಂಡರು.
ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಬಿ. ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲಕೃಷ್ಣ ಜೋಶಿ ಮತ್ತು ರಾಜ್ಯದ ಎಲ್ಲ ವಿವಿಗಳ ಕುಲಪತಿಗಳು ಉಪಸ್ಥಿತರಿದ್ದರು.
ಮೂಲಭೂತ ಕೌಶಲ್ಯ ಕಲಿಯಲು ಅವಕಾಶ
ಇನ್ಫೋಸಿಸ್ ಸ್ಪ್ರಿಂಗ್ಬೋರ್ಡ್ ವೇದಿಕೆಯಡಿಯಲ್ಲಿ ಜಾವಾ, ಪೈಥಾನ್, ಸಿ+ ಮುಂತಾದ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ಗಳು, ಬ್ಯಾಂಕಿಂಗ್, ಸ್ಪೇಸ್ ನೆಟ್ವರ್ಕ್, ರೀಟೇಲ್ ಟೆಲಿಕಾಂ, ಉದ್ಯಮಗಳಿಗೆ ಬೇಕಾದ ಮೂಲಭೂತ ಕೌಶಲ್ಯಗಳು ಮುಂತಾದವನ್ನು ಕಲಿಯಲು ಅವಕಾಶವಿದೆ. ಅಲ್ಲದೆ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಬಿಗ್ ಡೇಟಾ, ಅನಲಿಟಿಕ್ಸ್, ಬ್ಲಾಕ್ ಚೈನ್, ಎಪಿಐ ಎಕಾನಮಿ, ಕೋಡಿಂಗ್, ಕ್ಲೌಡ್ ತಂತ್ರಜ್ಞಾನ, ಸೈಬರ್ ಸೆಕ್ಯುರಿಟಿ, ಡಿಸೈನ್ ಥಿಂಕಿಂಗ್, ಡೇಟಾ ವಿಶುಯಲೈಸೇಷನ್, ಎಡ್ಜ್ ಕಂಪ್ಯೂಟಿಂಗ್, ಡೇಟಾ ಪ್ರೈವೆಸಿ ಮತ್ತು ಸೆಕ್ಯುರಿಟಿ (ಇ-ಸುರಕ್ಷತೆ) ಇವುಗಳನ್ನು ಕೂಡ ಕಲಿಯಬಹುದು. ಇದಕ್ಕೆ ಸಂಬಂಧಿಸಿದಂತೆ ಇನ್ಫೋಸಿಸ್ ಕೂಡ ಕೋರ್ಸೆರಾ, ಸ್ಕಿಲ್ಸಾಫ್ಟ್, ಐಐಎಚ್ಟಿ, ಲರ್ನ್ಶಿಪ್ ಮುಂತಾದ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಹೊಂದಿದೆ.