ನವದೆಹಲಿ: ಉನ್ನಾವೊ ಅತ್ಯಾಚಾರ ಪ್ರಕರಣದ ಅಪರಾಧಿ ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗರ್‌ಗೆ ನೀಡಿದ್ದ ವೈದ್ಯಕೀಯ ಜಾಮೀನಿನ ಅವಧಿ ವಿಸ್ತರಿಸಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ. ನ್ಯಾಯಾಲಯದ ಆದೇಶದ ಪ್ರಕಾರ ಸೆಂಗರ್ ಇಂದು ಶರಣಾಗಬೇಕಿತ್ತು. ಆದರೆ, ವೈದ್ಯಕೀಯ ಜಾಮೀನು ಅವಧಿ ವಿಸ್ತರಿಸುವಂತೆ ಕೋರಿ ಸೆಂಗರ್ ಅರ್ಜಿ ಸಲ್ಲಿಸಿದ್ದರು. ಅತ್ಯಾಚಾರ
ದೂರುದಾರರನ್ನು ಪ್ರತಿನಿಧಿಸುವ ವಕೀಲರು ತಮಗೆ ಅರ್ಜಿಯ ಪ್ರತಿ ನೀಡಿಲ್ಲ ಎಂದು ಹೇಳಿದ ಹಿನ್ನೆಲೆಯಲ್ಲಿ ಸೆಂಗರ್‌ಗೆ ನೀಡಿದ್ದ ವೈದ್ಯಕೀಯ ಜಾಮೀನಿನ ಅವಧಿಯನ್ನು ನ್ಯಾಯಮೂರ್ತಿ ನವೀನ್ ಚಾವ್ಲಾ ಮತ್ತು ನ್ಯಾಯಮೂರ್ತಿ ಶಾಲಿಂದರ್ ಕೌರ್ ರಿದ್ದ ಪೀಠ ವಿಸ್ತರಿಸಲು ನಿರಾಕರಿಸಿತು.
ಅತ್ಯಾಚಾರ ಪ್ರಕರಣದಲ್ಲಿ ತನಗೆ ಶಿಕ್ಷೆ ವಿಧಿಸಿರುವುನ್ನು ಪ್ರಶ್ನಿಸಿ ಸೆಂಗರ್ ಸಲ್ಲಿಸಿರುವ ಬಾಕಿ ಇರುವ ಮನವಿಗೆ ಸಂಬಂಧಿಸಿದಂತೆಯೇ ವೈದ್ಯಕೀಯ ಜಾಮೀನು ವಿಸ್ತರಣಾ ಅರ್ಜಿಯನ್ನೂ ಸಲ್ಲಿಸಲಾಗಿತ್ತು.
ಇದನ್ನೂ ಓದಿ: ಬೆಳಗಾವಿ| ಕಾಂಗ್ರೆಸ್ ಸಮಾವೇಶದಲ್ಲಿ ಬಿಜೆಪಿ ಶಾಸಕ!
ಜನವರಿ 24ರಂದು ಸೆಂಗರ್ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ನಡೆಸುವುದಾಗಿ ಏಮ್ಸ್ ತಿಳಿಸಿದೆ. ಅಂದು ಶಸ್ತ್ರಚಿಕಿತ್ಸೆ ನಡೆಯದೆ ಹೋದರೆ ಮತ್ತೆ ಅಪಾಯಿಂಟ್‌ಮೆಂಟ್ ಪಡೆಯುವುದು ಕಷ್ಟವಾಗುತ್ತದೆ ಎಂದು ಹಿರಿಯ ವಕೀಲ ಎನ್ ಹರಿಹರನ್ ವಾದಿಸಿದರು.
ಆದರೆ ಸಂತ್ರಸ್ತೆ ಪರ ಹಾಜರಾದ ವಕೀಲ ಮೆಹಮೂದ್ ಪ್ರಾಚಾ ಅವರು ಜಾಮೀನು ವಿಸ್ತರಣೆ ಕೋರಿ ಸಲ್ಲಿಸಿದ ಅರ್ಜಿಯನ್ನು ತನಗೆ ನೀಡಿಲ್ಲ ಎಂದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಪ್ರಕರಣವನ್ನು ನಾಳೆಗೆ (ಜನವರಿ 22) ಮಂದೂಡಿತು.
ವೈದ್ಯಕೀಯ ಕಾರಣಕ್ಕೆ ಸೆಂಗರ್‌ಗೆ ಡಿಸೆಂಬರ್ 20ರವರೆಗೆ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿತ್ತು. ನಂತರ ಅದನ್ನು ಜನವರಿ 20ರವರೆಗೆ ವಿಸ್ತರಿಸಿತ್ತು.
ಈ ಮಧ್ಯೆ ಸಂತ್ರಸ್ತೆಯ ತಂದೆ ಕಸ್ಟಡಿಯಲ್ಲಿದ್ದ ವೇಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಂಗರ್ ಸಲ್ಲಿಸಿದ್ದ ಮನವಿಯನ್ನು ಇಂದು ನ್ಯಾಯಮೂರ್ತಿ ವಿಕಾಸ್ ಮಹಾಜನ್ ಅವರ ಮುಂದೆ ಪಟ್ಟಿ ಮಾಡಲಾಗಿದೆ.
ಶಿಕ್ಷೆ ಅಮಾನತುಗೊಳಿಸುವಂತೆ ಕೋರಿ ಸೆಂಗಾರ್ ಸಲ್ಲಿಸಿದ್ದ ಅರ್ಜಿಯ ಕುರಿತು ನೋಟಿಸ್ ನೀಡಿದ ನ್ಯಾಯಾಲಯ ಈ ಪ್ರಕರಣವನ್ನೂ ನಾಳೆಗೆ ಪಟ್ಟಿ ಮಾಡಿತು.
ಸೆಂಗರ್ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಮನೀಶ್ ವಶಿಷ್ಟ, ಸೋಮವಾರ ಸಂಜೆಯೇ ಸೆಂಗರ್ ಶರಣಾಗುವುದಾಗಿ ಹಾಗೂ ಮಧ್ಯಂತರ ಜಾಮೀನು ಕೋರಿ ಹೊಸ ಅರ್ಜಿ ಸಲ್ಲಿಸುವುದಾಗಿ ತಿಳಿಸಿದರು.
ಇದನ್ನೂ ನೋಡಿ: ಬಹುತ್ವ ಸಂಸ್ಕೃತಿ ಭಾರತೋತ್ಸವ – 2025 | ಸೌಹಾರ್ದ ಜಾಥಾ – ಬಹಿರಂಗ ಸಭೆ