ಹೆಸ್ಕಾಂ ಗುತ್ತಿಗೆ ನೌಕರ ಆತ್ಮಹತ್ಯೆ – ಮೇಲಾಧಿಕಾರಿಗಳ ಕಿರುಕುಳ ಆರೋಪ

ಅಥಣಿ: ಹೆಸ್ಕಾಂ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಗುತ್ತಿಗೆ ನೌಕರ ಸೋಮವಾರ(ಸೆಪ್ಟಂಬರ್‌ 11) ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ನಡೆದಿತ್ತು. ಇದೀಗ ಮಂಜುನಾಥ ಗಂಗಪ್ಪ ಮುತ್ತಗಿ ಆತ್ಮಹತ್ಯೆ ಹಿಂದಿರುವ ಕಾರಣ ಬಯಲಾಗಿದ್ದು, ಕಚೇರಿಯಲ್ಲಿನ ಮೇಲಾಧಿಕಾರಿಗಳ ಕಿರುಕುಳ ಹಾಗೂ ಭೇದಭಾವಕ್ಕೆ ಕಾರಣ ಎಂದು ತಿಳಿದು ಬಂದಿದೆ.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿನ ಹೆಸ್ಕಾಂ ಕಚೇರಿ ಶಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ ಗಂಗಪ್ಪ ಮುತ್ತಗಿ ಕಛೇರಿ ಆವರಣದಲ್ಲಿ ವಿದ್ಯುತ್‌ ಕಂಬಗಳಿಗೆ ನಿಲ್ಲಿಸುವ ಹೈದರ್‌ ಗೆ ಹಗ್ಗ ಹಾಕಿ ನೇಣು ಬಿಗಿದುಕೊಂಡಿರುವ ಘಟನೆ ನಡೆದಿತ್ತು. ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಜುನಾಥ ಗಂಗಪ್ಪ ಮುತ್ತಗಿ ಆತ್ಮಹತ್ಯೆಗೂ ಮುನ್ನ ಬರೆದಿರುವ ಪತ್ರ ಪತ್ತೆಯಾಗಿದ್ದು, ಅವರು ಕಾರಣವನ್ನು ವಿವರಿಸಿದ್ದಾರೆ. ಅದರಲ್ಲಿ ಅವರು, ʻ‘ಮೇಲಧಿಕಾರಿ ಹಾಗೂ ಲೈನ್​ಮ್ಯಾನ್​ನಿಂದ ಆಗುತ್ತಿರುವ ಕಿರುಕುಳ ಹಾಗೂ ಭೇದಭಾವ ನನಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಬರೆದಿದ್ದಾರೆ.

‘ನನಗೆ ಈ ಕೆಲಸ ಅಂದ್ರೆ ತುಂಬಾ ತುಂಬಾ ಇಷ್ಟ. ಆದರೆ ಇವರು ಮಾಡುವ ಭೇದಭಾವ, ನಮಗೊಂದು ಅವರಿಗೊಂದು ಅಂತ ನಡೆದುಕೊಳ್ತಿರೋ ರೀತಿ ನೋಡಲು ಆಗುತ್ತಿಲ್ಲ. ನಮ್ಮನ್ನೆಲ್ಲ ವಾರದ ಏಳು ದಿನ, 24 ಗಂಟೆಯೂ ಕೇವಲವಾಗಿ ನೋಡುತ್ತಾರೆ. ಆದರೆ ನಾವು ಮಾಡೋದು ಸಹ ಹೆಸ್ಕಾಂ ಕೆಲಸ. ಆದ್ರೆ ಇವರು ನಮ್ಮನ್ನು ನೋಡುವ ರೀತಿ ಸರಿ ಇಲ್ಲ. ಇದು ಬದಲಾಗಬೇಕು’ ಎಂದು ಬರೆಯಲಾಗಿದೆ.

‘ನನ್ನ ಸಾವಿಗೆ ಬಸು ಕುಂಬಾರ್, ನಜೀರ್ ಡಲಾಯತ್ ಅವರೇ ಕಾರಣ, ಯಾಕೆಂದ್ರೆ ಇವರು ಮಾಡುವ ಮೋಸ, ಅನ್ಯಾಯ, ಮಾನಸಿಕ ಹಿಂಸೆ ದಬ್ಬಾಳಿಕೆ, ಕಿರುಕುಳ ಇದನ್ನೆಲ್ಲ ಸಹಿಸಿಕೊಳ್ಳೋಕೆ ಆಗದೇ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. ಎಂದು ಬರೆದು ಐ ಲವ್‌ ಹೆಸ್ಕಾಂ ಎಂದು ಉಲ್ಲೇಖಿಸಿದ್ದಾರೆ.

ಈ ಸಂಬಂಧ ಮೃತ ಮಂಜುನಾಥ ಪತ್ನಿ ಲಕ್ಷ್ಮೀ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೋರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಅಥಣಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *