ಮಡಿಕೇರಿ: ಕೊಡಗು ಜಿಲ್ಲೆಯ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡುವ ವೇಳೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿಗೆ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಕಪ್ಪುಬಾವುಟ ಪ್ರದರ್ಶಿಸಿದ ಬಿಜೆಪಿ ಕಾರ್ಯಕರ್ತರು ಕೋಳಿಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು.
ಅತಿವೃಷ್ಟಿಯಿಂದಾಗಿ ಹಾನಿಗೊಳಗಾದ ಕೊಡಗಿನ ಮದೆನಾಡು ಕೊಯನಾಡು ಪ್ರದೇಶಗಳಿಗೆ ಸಿದ್ದರಾಮಯ್ಯ ಭೇಟಿ ನೀಡಿದರು. ಅಲ್ಲದೆ, ಸಂತ್ರಸ್ತರ ಅಹವಾಲು ಆಲಿಸಿದರು. ಕೆಲವು ಸಂತ್ರಸ್ತರು ತಮಗೆ ಸರ್ಕಾರ ನೀಡಿದ ಪರಿಹಾರ ಏನೇನೂ ಸಾಲದು ಎಂದು ಅಳಲು ತೋಡಿಕೊಂಡರು.
ಮಳೆ ಹಾನಿ ಪ್ರದೇಶಗಳ ಭೇಟಿಯ ನಂತರ ಮಡಿಕೇರಿಗೆ ಆಗಮಿಸುವ ವೇಳೆ ಸಿದ್ದರಾಮಯ್ಯ ಅವರ ಕಾರಿಗೆ ಬಿಜೆಪಿ ಕಾರ್ಯಕರ್ತರು ದಾಳಿ ಮಾಡಿದರು. ಇದರೊಂದಿಗೆ ಕಪ್ಪುಬಾವುಟ ಪ್ರದರ್ಶಿಸಿ ಕೋಳಿಮೊಟ್ಟೆ ಎಸೆದಿದ್ದಾರೆ. ಗೋ ಬ್ಯಾಕ್ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು ಸಾರ್ವಕರ್ ಪರ ಘೋಷಣೆ ಕೂಗಿದರು.
ಈ ಘಟನೆಯನ್ನು ಖಂಡಿಸಿರುವ ಸಿದ್ದರಾಮಯ್ಯ ಅವರು, ನನ್ನ ವಿರುದ್ಧ ಪ್ರತಿಭಟನೆ ಮಾಡಿದವರು ಹೇಡಿಗಳು ಮಾಡುವ ಕೆಲಸ. ಕೊಡಗಿನಲ್ಲಿ ಸಮರ್ಪಕವಾಗಿ ಪರಿಹಾರ ನೀಡಿಲ್ಲ. ಜಿಲ್ಲಾಧಿಕಾರಿ ಕಚೇರಿ ತಡೆಗೋಡೆ ಕಳಪೆಯಾಗಿದೆ. ಇದು ನನಗೆ ಗೊತ್ತಾಗಬಾರದು ಎಂದೇ ಪ್ರತಿಭಟನೆ ಮಾಡಿದ್ದಾರೆ. ಸರ್ಕಾರ ಸತ್ತಿದೆ. ಹಾಗಾಗಿ ಹಣ ಕೊಟ್ಟು ಜನರನ್ನು ಕರೆದುಕೊಂಡು ಬಂದು ಘೋಷಣೆ ಕೂಗಿಸಿದ್ದಾರೆ ಎಂದರು.
ಘಟನೆ ನಡೆದ ಕೂಡಲೇ, ಕಾಂಗ್ರೆಸ್ ಕಾರ್ಯಕರ್ತರು ವೃತ್ತದ ಮತ್ತೊಂದು ಭಾಗದಲ್ಲಿ ಪ್ರತಿಭಟನೆಗೆ ಮುಂದಾದರು. ಮತ್ತೊಂದು ಕಡೆ ಬಿಜೆಪಿಯ ಕೆಲವು ಮಂದಿ ಜಮಾಯಿಸಿದ್ದರು. ಸುಮಾರು ಅರ್ಧ ಗಂಟೆಗಳ ಕಾಲ ಉಭಯ ಕಾರ್ಯಕರ್ತರು ಒಂದೇ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಬಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಯ್ಯಪ್ಪ ಉಭಯ ಪಕ್ಷದ ಕಾರ್ಯಕರ್ತರ ಮನವೊಲಿಸಿ ವಾಪಸ್ ಕಳುಹಿಸಿದರು.