ಬೆಂಗಳೂರು: ಕರಾವಳಿಯ ಕಾಲೇಜಿನ ವಿದ್ಯಾರ್ಥಿನಿಯರ ವೈಯಕ್ತಿಕ ಮಾಹಿತಿಗಳ ಸೋರಿಕೆ ಮತ್ತು ಅದಕ್ಕೆ ಸಂಬಂಧಿಸಿದ ವಿದ್ಯಮಾನಗಳನ್ನು ಗಂಭೀರವಾಗಿ ಪರಿಗಣಿಸಿ ಕಟ್ಟುನಿಟ್ಟಿನ ಕ್ರಮಕ್ಕೆ ಮಹಿಳಾ ಧ್ವನಿಗಳು ಒತ್ತಾಯಿಸಿದ್ದು, ಈ ಬಗ್ಗೆ ಮಹಿಳಾ ಆಯೋಗ ಹಾಗೂ ಪಿಯು ಮಂಡಳಿಗೆ ಮನವಿಯನ್ನು ಸಲ್ಲಿಸಿದ್ದಾರೆ.
ಚಿಂತಕಿ ಕೆ.ಎಸ್ ವಿಮಲಾ, ಜನವಾದಿ ಮಹಿಳಾ ಸಂಘಟನೆ ರಾಜ್ಯಾಧ್ಯಕ್ಷೆ ದೇವಿ, ಸಾಮಾಜಿಕ ಕಾರ್ಯಕರ್ತೆ ಕೆ.ಎಸ್.ಲಕ್ಷ್ಮಿ, ಗಮನ ಮಹಿಳಾ ಸಂಘಟನೆಯ ಮಧು ಭೂಷಣ್ ನೇತ್ರತ್ವದ ನಿಯೋಗ ಮಹಿಳಾ ಆಯೋಗ ಮತ್ತು ಪಿಯು ಮಂಡಳಿಗೆ ಮನವಿ ಪತ್ರ ಸಲ್ಲಿಸಿದೆ.
ಉಡುಪಿ ಕಾಲೇಜಿನ ವಸ್ತ್ರ ಸಂಹಿತೆಯ ವಿವಾದ ಹದ್ದು ಮೀರಿದೆ. ವಿವಾದವನ್ನು ಪ್ರಾರಂಭದಲ್ಲಿಯೇ ಶಾಂತಿಯುತವಾಗಿ ಬಗೆಹರಿಸುವ ಬದಲು, ಬಗೆಹರಿಸ ಬೇಕಾದವರೇ ಉರಿಯುವ ಬೆಂಕಿಗೆ ತುಪ್ಪ ಸುರಿದ ಕಾರಣದಿಂದ ಅದೀಗ ರಾಜ್ಯಾದ್ಯಂತ ವ್ಯಾಪಿಸಿದೆ. ಪರೀಕ್ಷೆಗಳೂ ಘೋಷಣೆಯಾದ ಹೊತ್ತಿನಲ್ಲಿ ಅಭ್ಯಾಸದ ಬಗ್ಗೆ ಗಮನ ಕೊಡಬೇಕಾದ ವಿದ್ಯಾರ್ಥಿಗಳು ಬೀದಿಯ ಮೇಲೆ ಸಲ್ಲದ ಕಾರಣಕ್ಕೆ ಜಗಳಕ್ಕೆ ಸಜ್ಜಾಗಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈಗ ಮತ್ತೊಮ್ಮೆ ಕಾಲೇಜು ಆಡಳಿತ ಮಂಡಳಿಯೇ ಪ್ರಮಾದವೆಸಗಿದ್ದು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದೆ. ಹಿಜಾಬ್ ಧರಿಸಿ ಕಾಲೇಜಿಗೆ ಹಾಜರಾಗಲು ಅನುಮತಿ ಕೋರಿ ನ್ಯಾಯಾಲಯದ ಮೆಟ್ಟಿಲೇರಿರುವ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರ ವೈಯಕ್ತಿಕ ವಿವರಗಳನ್ನೊಳಗೊಂಡ (ದೂರವಾಣಿ ಸಂಖ್ಯೆ, ವಿಳಾಸ, ಪೋಷಕರ ಹೆಸರು ಇತ್ಯಾದಿ) ಮಾಹಿತಿಗಳು ಎಂದರೆ ಅವರ ದಾಖಲಾತಿ ವಿವರಗಳನ್ನು ಕಾಲೇಜಿನ ಕಡತದಿಂದ ಚಿತ್ರೀಕರಿಸಿ ಹೊರಬಿಡಲಾಗಿದೆ ಎನ್ನುತ್ತವೆ ವರದಿಗಳು ಮತ್ತು ಆ ಬಾಲಕಿಯರಿಗೆ ಬೆದರಿಕೆ ಕರೆಗಳು ಬರುತ್ತಿವೆ ಎಂಬುದು ವರದಿಯಾಗಿದೆ. ಇದು ಅತ್ಯಂತ ಕಳವಳಕಾರೀ ಸಂಗತಿ ಎಂದು ಮಹಿಳಾ ಧ್ವನಿಗಳು ತಿಳಿಸಿವೆ.
ಇದು ಕಾಲೇಜು ಆಡಳಿತ ಎಸಗಿದ ಬಹು ದೊಡ್ಡ ಪ್ರಮಾದವೆಂದೂ ಹೇಳುತ್ತೇವೆ. ನ್ಯಾಯಾಲಯದಲ್ಲಿ ಪ್ರಕರಣವೊಂದರ ವಿಚಾರಣೆ ನಡೆಯುತ್ತಿರುವಾಗ ಬೆದರಿಕೆ ಒಡ್ಡಲು ಬೇಕಾದ ಮಾಹಿತಿಗಳನ್ನು ಸೋರಿಕೆ ಮಾಡಿರುವುದು ಉದ್ದೇಶವೇನೆಂದು ಸ್ಪಷ್ಟವಾಗುತ್ತಿದೆ. ಇದು ವ್ಯಕ್ತಿಗಳ ವೈಯಕ್ತಿಕ ಗೋಪ್ಯತೆಯ ಹಕ್ಕಿನ ಉಲ್ಲಂಘನೆಯಲ್ಲವೇ? ಕರ್ನಾಟಕದ ಮಹಿಳೆಯರ ಘನತೆಯ ಬದುಕುವ ಹಕ್ಕನ್ನು ಉಳಿಸುವ ಮತ್ತು ಅಪಾಯದಲ್ಲಿರುವವರ ಪರವಾಗಿ ನಿಲ್ಲಬೇಕಾದುದು ರಾಜ್ಯ ಮಹಿಳಾ ಆಯೋಗದ ಪ್ರಮುಖ ಆದ್ಯತೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗವು ತಕ್ಷಣ ಮಧ್ಯ ಪ್ರವೇಶಿಸಬೇಕು. ರಾಜ್ಯದ ಮಹಿಳಾ ಪರ ಸಂಘಟನೆಗಳು ಮತ್ತು ವ್ಯಕ್ತಿಗಳ ಜೊತೆ ಆಯೋಗದ ನಿಯೋಗವೊಂದು ಸ್ಥಳಕ್ಕೆ ಭೇಟಿ ನೀಡಿ ತೊಂದರೆಗೆ ಒಳಗಾದ ಬಾಲಕಿಯರಿಗೆ ಧೈರ್ಯ ನೀಡಬೇಕು ಮತ್ತು ಸರಿಯಾದ ಮಾಹಿತಿಗಳನ್ನು ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಕಾಲೇಜಿನಿಂದ ವಿದ್ಯಾರ್ಥಿನಿಯರ ವೈಯಕ್ತಿಕ ಮಾಹಿತಿಗಳ ಸೋರಿಕೆ ಮಾಡಿದವರನ್ನು ಪತ್ತೆ ಮಾಡಿ ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಲು ಅಗತ್ಯವಾದ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿನಿಯರು ಮತ್ತು ಅವರ ಕುಟುಂಬದವರಿಗೆ ಯಾವುದೇ ಅಪಾಯವಾಗದಂತೆ ರಕ್ಷಣೆ ನೀಡಲು ಅಗತ್ಯವಾದ ಕ್ರಮಕೈಗೊಳ್ಳಲು ರಾಜ್ಯ ಸರಕಾರವನ್ನು ಒತ್ತಾಯಿಸಬೇಕೆಂದು ಮಹಿಳಾ ಆಯೋಗಕ್ಕೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಲಾಗಿದೆ.
ಎಲ್ಲ ಧರ್ಮದ ವಿದ್ಯಾರ್ಥಿನಿಯರ ಶಿಕ್ಷಣದ ಹಕ್ಕನ್ನು ಯಾವುದೇ ತೊಂದರೆಯಿಲ್ಲದೇ ಪಡೆಯಲು ಅಗತ್ಯವಾದ ಕ್ರಮಕ್ಕಾಗಿ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.