ಮಂಡ್ಯ: ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದಾಗಿ ಮಳವಳ್ಳಿ ತಾಲ್ಲೂಕು ಟಿ.ಕೆ.ಹಳ್ಳಿಯಲ್ಲಿರುವ ಕಾವೇರಿ ನೀರಿನ ಜಲರೇಚಕ ಯಂತ್ರಾಗಾರ (ಪಂಪ್ಸ್ಟೇಷನ್) ಜಲಾವೃತಗೊಂಡಿದ್ದು, ಬೆಂಗಳೂರಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎನ್ನಲಾಗಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮಾಹಿತಿ ನೀಡಿದ್ದು, ಮಂಡ್ಯ ಜಿಲ್ಲೆಯ ಹಲಗೂರಿನಲ್ಲಿ ಭಾರೀ ಮಳೆಯಿಂದಾಗಿ ಕಾವೇರಿ ನೀರಿನ ಜಲರೇಚಕ ಯಂತ್ರಾಗಾರ (ಪಂಪ್ಸ್ಟೇಷನ್) ಜಲಾವೃತಗೊಂಡಿದ್ದು, ಬೆಂಗಳೂರಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ಏರುಪೇರಾಗಲಿದೆ. ಇಂದು ಮತ್ತು ನಾಳೆ ಅಂದರೆ ಸೆಪ್ಟೆಂಬರ್ 5 ಮತ್ತು 6ರಂದು ಸಿಲಿಕಾನ್ ಸಿಟಿಗೆ ಸರಬರಾಜಾಗುತ್ತಿದ್ದ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
— BWSSB (@chairmanbwssb) September 5, 2022
ಬೆಂಗಳೂರಿಗೆ ಕಾವೇರಿಯಿಂದ ಪ್ರಸ್ತುತ ಪ್ರತಿದಿನ 1,450 ದಶಲಕ್ಷ ಲೀಟರ್ ನೀರು ಸರಬರಾಜಾಗುತ್ತಿದೆ. 57 ನೆಲಮಟ್ಟದ ಜಲಾಶಯಗಳು ಹಾಗೂ 39 ಓವರ್ಹೆಡ್ ಟ್ಯಾಂಕ್ಗಳು ಇವೆ. ಒಂದು ದಿನಕ್ಕೆ ಸರಾಸರಿ 10.15 ಲಕ್ಷ ಮನೆಗಳಿಗೆ ನೀರು ಸರಬರಾಜಾಗುತ್ತಿದೆ.
ಇದೇ ಟಿ.ಕೆ.ಹಳ್ಳಿ ಜಲರೇಚಕ ಯಂತ್ರಾಗಾರದಿಂದಲೇ ಬೆಂಗಳೂರಿಗೆ ಕುಡಿಯುವ ನೀರು ಸರಬರಾಜು ಆಗುತ್ತಿತ್ತು. ಇದೀಗ ಯಂತ್ರಾಗಾರಕ್ಕೆ ಹಾನಿಯಾಗಿದ್ದು, ಸ್ಥಳಕ್ಕೆ ದೌಡಾಯಿಸಿರುವ ಅಧಿಕಾರಿಗಳು ದುರಸ್ತಿ ಕಾರ್ಯ ನಡೆಸಿದ್ದಾರೆ.
ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತುರ್ತು ಪ್ರವಾಸ ಕೈಗೊಂಡಿದ್ದು, ಇಂದು (ಸೆಪ್ಟಂಬರ್ 5) ಟಿಕೆ ಹಳ್ಳಿಯಲ್ಲಿರುವ ಬೆಂಗಳೂರು ನೀರು ಸರಬರಾಜು ಮಂಡಳಿಯ ಘಟಕಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಕೆಲ ಅಧಿಕೃತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿರುವ ಮುಖ್ಯಮಂತ್ರಿ ಅಲ್ಲಿಂದ ನೇರವಾಗಿ ಮಂಡ್ಯಕ್ಕೆ ತೆರಳಲಿದ್ದಾರೆ.
ಟಿ.ಕೆ.ಹಳ್ಳಿ ಘಟಕದಲ್ಲಿ ತೊಂದರೆ ಆಗಿದೆ. ನಾನು ಭೇಟಿ ನೀಡುತ್ತೇನೆ. ಈಗಾಗಲೇ ಬಿಡಬ್ಲ್ಯೂಎಸ್‌ಎಸ್‌ಬಿ ಸಿಬ್ಬಂದಿ ಮತ್ತು ಎಂಜಿನಿಯರ್ಗಳು ಅಲ್ಲಿಗೆ ಹೋಗಿದ್ದಾರೆ. ಇಂದು ಸಂಜೆಯೊಳಗೆ ಎಲ್ಲಾ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದರು.