ಭಾರೀ ಮಳೆ-ಭೂಕುಸಿತ: ಮಹಾರಾಷ್ಟ್ರದಲ್ಲಿ ಮೃತರ ಸಂಖ್ಯೆ 60ಕ್ಕೆ ಏರಿಕೆ

ರಾಯಗಢ: ಮುಂಗಾರು ಮಳೆಯ ಅಬ್ಬರದಿಂದಾಗಿ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಿಂದಾಗಿ ಉಂಟಾದ ಪ್ರವಾಹದ ಪರಿಸ್ಥಿತಿಯಿಂದಾಗಿ ಅಲ್ಲಲ್ಲಿ ಭೂಕುಸಿತ ಉಂಟಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಮೃತರ ಸಂಖ್ಯೆ 60ಕ್ಕೆ ಏರಿಕೆಯಾಗಿದೆ. ರಾಯಗಢ ಜಿಲ್ಲೆಯೊಂದರಲ್ಲೇ ಕನಿಷ್ಠ 36 ಮಂದಿ ಮೃತರಾಗಿದ್ದಾರೆ.

ರಾಯಗಢ ಜಿಲ್ಲೆಯ ತಾಲಾಯ್‌ನಲ್ಲಿ 32, ಸಖರ್‌ ಸುತರ್‌ವಾಡಿಯಲ್ಲಿ 4 ಮಂದಿ ನಿಧನರಾಗಿದ್ದಾರೆ. ಕನಿಷ್ಠ 30 ಮಂದಿ ಭೂಕುಸಿತ, ಪ್ರವಾಹದ ವಿಕೋಪಕ್ಕೆ ಸಿಲುಕಿಕೊಂಡಿದ್ದಾರೆ. ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಹೆಲಿಕಾಪ್ಟರ್ ಬಳಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಸತತ ಮಳೆಯಾಗುತ್ತಿದೆ.

ಇಂದು ಬೆಳಗ್ಗೆಯಿಂದ ರತ್ನಗಿರಿ ಜಿಲ್ಲೆಯ ಚಿಪ್ಲುನ್‌ ಎಂಬ ಪ್ರದೇಶದಲ್ಲಿ ಸುಮಾರು 5-6 ಸಾವಿರ ಮಂದಿ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ. ಪಶ್ಚಿಮ ಮಹಾರಾಷ್ಟ್ರದ ಕೊಂಕಣ ಬೆಲ್ಟ್‌ ನಲ್ಲಿ ಸಂಭವಿಸಿದ ಸರಣಿ ಭೂಕುಸಿತ ಅವಘಡಗಳಲ್ಲಿ 12ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ.

ಇದನ್ನು ಓದಿ: ರಾಜ್ಯದ ಹಲವೆಡೆ ಭಾರೀ ಮಳೆ: ಜುಲೈ 26ರವರೆಗೂ ಮಳೆ ಮುಂದುವರಿಕೆ ಹವಾಮಾನ ಇಲಾಖೆ ಸೂಚನೆ

ನಿರಂತರವಾಗಿ ಭಾರೀ ಮಳೆಯಿಂದಾಗಿ ರಾಜ್ಯ ರಾಜಧಾನಿ ಹಾಗೂ ವಾಣಿಜ್ಯ ನಗರಿ ಮುಂಬೈನ ಗೊವಂಡಿ ಪ್ರದೇಶದಲ್ಲಿ ಎರಡಂತಸ್ತಿನ ಕಟ್ಟಡ ಕುಸಿದಿದೆ. ಇದರಿಂದ ಮೂವರು ಮೃತಪಟ್ಟಿದ್ದು, 12 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗ್ರೌಂಡ್ ಪ್ಲಸ್ ಒನ್ ಕಟ್ಟಡ ಬಿರಿಬಿರಿನೆ ಕುಸಿದು ನೆಲಕಚ್ಚಿದೆ. ಕಟ್ಟಡದ ಅವಶೇಷಗಳ ಅಡಿ ಸಿಲುಕಿಕೊಂಡಿದ್ದ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.

ಕೊಂಕಣ್ ವಿಭಾಗದಲ್ಲಿ ಸಿಲುಕಿಕೊಂಡ 6000 ಪ್ರಯಾಣಿಕರು

ಭಾರೀ ಮಳೆಯಿಂದಾಗಿ ಕೊಂಕಣ ರೈಲ್ವೆ ಮಾರ್ಗದಲ್ಲಿನ ರೈಲು ಸೇವೆ ಅಡಚಣೆ ಉಂಟಾಗಿದ್ದು, ಸುಮಾರು 6,000 ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ ಎಂಬ ವರದಿ ಇದೆ. ಮಳೆ ಪೀಡಿತ ಕೊಂಕಣ ರೈಲ್ವೆ ಮಾರ್ಗದಿಂದಾಗಿ ಇದುವರೆಗೆ ಒಂಬತ್ತು ರೈಲುಗಳ ಯಾತ್ರೆಯನ್ನು ರದ್ದುಗೊಳಿಸಲಾಗಿದೆ. ಕೊಂಕಣ-ಗೋವಾ ಮತ್ತು ಮಹಾರಾಷ್ಟ್ರದ ರಾಯಗಡ್, ರತ್ನಗಿರಿ, ಸಿಂಧುದುರ್ಗ್, ಪುಣೆ ಘಾಟ್ ಪ್ರದೇಶಗಳು, ಸಾತಾರಾ ಮತ್ತು ಕೊಲ್ಹಾಪುರ ಜಿಲ್ಲೆಗಳಲ್ಲಿ ಭಾರಿ ಮಳೆ ಮುಂದುವರೆದಿದೆ. ಅನೇಕ ಭಾಗಗಳಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ.

ರಾಜ್ಯದಲ್ಲಿ ಮುಂದಿನ 3 ದಿನಗಳು ಭಾರೀ ಮಳೆ ಮುಂದುವರೆಯಲಿದ್ದು, ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮುಂಬೈ ಸೇರಿದಂತೆ ಕೊಂಕಣದ ಸಂಪೂರ್ಣ ಪ್ರದೇಶದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಹವಾಮಾನ ಇಲಾಖೆ ತಿಳಿಸಿದಂತೆ ವಿವಿಧ ಕಡೆಗಳಲ್ಲಿ ಭಾರೀ ಮತ್ತು ಅತಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇದಲ್ಲದೆ, ಮುಂದಿನ ಎರಡು ದಿನಗಳವರೆಗೆ ಅಂದರೆ ಜುಲೈ 24 ಮತ್ತು 25 ರವರೆಗೆ ಎಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ರಾಜಧಾನಿ ಮುಂಬೈನಲ್ಲಿದ್ದುಕೊಂಡು ಪರಿಸ್ಥಿತಿಯ ಗಂಭೀರತೆ ಬಗ್ಗೆ ನಿಗಾವಹಿಸಿದ್ದಾರೆ. ‘ಪ್ರಾಥಮಿಕ ವರದಿ ಅನುಸಾರ ರಾಯಗಢದಲ್ಲಿ 30-35 ಮಂದಿ ಮೃತ ಪಟ್ಟಿದ್ದಾರೆ. ರಕ್ಷಣಾ ಕಾರ್ಯ ಬರದಿಂದ ಸಾಗಿದೆ. ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಠಾಕ್ರೆ ತಿಳಿದ್ದಾರೆ.

ರಾಜ್ಯದಲ್ಲಿ ಮಳೆಯಿಂದಾಗಿ ಹಲವು ಮಂದಿ ಮೃತಪಟ್ಟಿದ್ದಾರೆ. ಕರ್ನಾಟಕದ ಆಲಮಟ್ಟಿ ಜಲಾಶಯದಿಂದ ನೀರು ಬಿಡಲಾಗುತ್ತಿದ್ದು, ಇದರಿಂದ ಕೊಲ್ಹಾಪುರ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ತಂದೊಡ್ಡಿದೆ ಎಂದು ಪರಿಹಾರ ಹಾಗೂ ಪುನರ್ವಸತಿ ಸಚಿವ ವಿಜಯ್‌ ವಾಡೆತ್ತಿವರ್‌ ಹೇಳಿದ್ದಾರೆ.

ಇದನ್ನು ಓದಿ: ರಾಜ್ಯದಲ್ಲಿ ಭಾರೀ ಮಳೆ: ಉಸ್ತುವಾರಿ ಸಚಿವರು, ಶಾಸಕರು ಸ್ವಕ್ಷೇತ್ರದಲ್ಲೇ ಇರಲು ಸಿಎಂ ಸೂಚನೆ

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್)ಯ ತಂಡದವರು ಮುಂಬೈಯಿಂದ 160 ಕಿಲೋ ಮೀಟರ್ ದೂರದಲ್ಲಿರುವ ಮಹಡ್ ಗೆ ತಲುಪಿದ್ದು ಮತ್ತೊಂದು ತಂಡವು ಪರಿಹಾರ ಕಾರ್ಯಕ್ಕೆ ನಿಯೋಜಿಸಲು ಮುಂದಾಗಲಿದ್ದೇವೆ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2005 ಮತ್ತು 1967ರಲ್ಲಿ ಉಂಟಾದ ಪ್ರವಾಹ ಮತ್ತು ಭೂಕುಸಿತಕ್ಕಿಂತ ಈ ಬಾರಿ ಮಹಾರಾಷ್ಟ್ರದ ಹಲವು ಪ್ರದೇಶಗಳಲ್ಲಿ ಧಾರಾಕಾರ ಮಳೆಯಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ ಎನ್ನಲಾಗುತ್ತಿದೆ.

ಕೊಲ್ಹಾಪುರದ ಪಂಚ್‌ಗಂಗಾ, ಸಾಂಗ್ಲಿಯ ಕೃಷ್ಣಾ ಹಾಗೂ ಸತಾರಾದ ಕೊಯ್ನಾ ನದಿ ಸೇರಿದಂತೆ ಹಲವು ನದಿಗಳಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

Donate Janashakthi Media

Leave a Reply

Your email address will not be published. Required fields are marked *