ಬೆಂಗಳೂರು : ರಾಜ್ಯದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಮುಂದಿನ 2 ದಿನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದ ಕೊಡಗು,ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಜಿಲ್ಲೆಗಳಾದಂತ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಮುಂದಿನ 48 ಗಂಟೆ ಭಾರೀ ಮಳೆಯಾಗಲಿದೆ ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚಿನೆ ನೀಡಿದೆ. ಜೊತೆಗೆ ಕರಾವಳಿ ಜಿಲ್ಲೆಗಳಲ್ಲಿ 2 ದಿನ ಆರೆಂಜ್ ಅಲರ್ಟ್ ಘೋಷಿಸಿದೆ. ಇದಲ್ಲದೇ ಜುಲೈ.6 ಮತ್ತು 7ರಂದು ವ್ಯಾಪಕ ಮಳೆಯಾಗೋ ಕಾರಣ, ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಕೂಡ ಘೋಷಿಸಿದೆ.
ಇನ್ನೂ ಹಾಸನ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಜುಲೈ.7ರವರೆಗೆ ಭಾರೀ ಮಳೆಯಾಗಲಿದೆ. ಬೀದರ್, ರಾಯಚೂರು, ಧಾರವಾಡ, ವಿಜಯಪುರ, ಬಾಗಲಕೋಟೆ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳಲ್ಲಿ ಇನ್ನೂ ಎರಡು ದಿನ ಭಾರೀ ಮಳೆಯಾಗೋ ಕಾರಣ ಯೆಲ್ಲೋ ಅಲರ್ಟ್ ಘೋಷಿಸಿದೆ.
ಇನ್ನು ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ನಾಳೆ ಎರಡು ದಿನ ರಜೆ ಘೋಷಿಸಲಾಗಿದೆ. ಶೃಂಗೇರಿ, ಕಳಸ,ಹಾಗೂ ಮೂಡಿಗೆರೆ ತಾಲೂಕು, ಬಾಳೂರು ಹೋಬಳಿ ವ್ಯಾಪ್ತಿಯ ಶಾಲೆಗಳಿಗೆ ಇಂದು ಮತ್ತು ನಾಳೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಆದೇಶ ಹೊರಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಮಳೆ ಅಬ್ಬರ ಮುಂದುವರೆದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಾಲಾ-ಕಾಲೇಜುಗಳಿಗೆ ಇಂದು ಘೋಷಣೆ ಮಾಡಲಾಗಿದೆ. ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಎಲ್ಲಾ ಶಾಲಾ-ಕಾಲೇಜುಗಳಿಗೂ ಇಂದು ರಜೆ ಘೋಷಿಸಲಾಗಿದೆ.
ಮುಂಬೈನಲ್ಲಿ ಭಾರೀ ಮಳೆ : ಕಳೆದ ರಾತ್ರಿ ಮತ್ತು ಇಂದು ಮುಂಜಾನೆ ಮುಂಬೈನಲ್ಲಿ ಭಾರೀ ಮಳೆಯಾಗಿದ ಪರಿಣಾಮ ನಗರದ ಕೆಲವು ಭಾಗಗಳು ಜಲಾವೃತಗೊಂಡಿದ್ದು, ಕೆಲವೆಡೆ ಸಂಚಾರ ದಟ್ಟಣೆ ಸಂಭವಿಸಿದೆ. ಇದರಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಸಿಯಾನ್‌ನ ರಸ್ತೆಗಳು ನೀರಿನಿಂದ ತುಂಬಿ ಹೋಗಿದ್ದ, ಅಂಧೇರಿಯಲ್ಲಿ ಮೊಣಕಾಲಿನವರೆಗೆ ಆಳದ ನೀರಿನಲ್ಲಿ ಜನರು ನಡೆದಾಡುತ್ತಿರುವ ದೃಶ್ಯಗಳು ಕಂಡು ಬಂದಿವೆ. ಇನ್ನುತಗ್ಗು ಪ್ರದೇಶಗಳು ಜಲಾವೃತಗೊಂಡಿರುವುದರಿಂದ ಕೆಲವು ಮಾರ್ಗಗಳಲ್ಲಿ ರೈಲು ಮತ್ತು ಬಸ್ ಸೇವೆಗಳಿಗೆ ತೊಂದರೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ಮುಂಬೈ ಮತ್ತು ಅದರ ಉಪನಗರಗಳಲ್ಲಿ ಮಧ್ಯಮದಿಂದ ಭಾರೀ ಮಳೆ ಮತ್ತು ಮುಂದಿನ ಕೆಲವು ದಿನಗಳವರೆಗೆ ಪ್ರತ್ಯೇಕ ಸ್ಥಳಗಳಲ್ಲಿ ಅತಿಯಾದ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.
ಹವಾಮಾನ ಇಲಾಖೆ ಭಾರೀ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಮಹಾರಾಷ್ಟ್ರ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆಯವರು ಮುಂಬೈ ಮತ್ತು ನೆರೆಯ ಜಿಲ್ಲೆಗಳ ಅಧಿಕಾರಿಗಳಿಗೆ ಜಾಗರೂಕರಾಗಿರಲು ಸೂಚಿಸಿದ್ದಾರೆ ಎನ್ನಲಾಗುತ್ತಿದೆ.