ಬೆಂಗಳೂರು: ಭಾನುವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ನಗರದ ಜನತೆ ಹೈರಾಣಾಗಿ ಹೋಗಿದ್ದಾರೆ. ರಾತ್ರಿ 10 ಗಂಟೆಯಿಂದ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಬೆಂಗಳೂರಿನ ಹಲವು ಬಡಾವಣೆಗಳು ಮಳೆ ನೀರಿನಿಂದ ಜಲಾವೃತಗೊಂಡಿದ್ದರೆ, ರಸ್ತೆಗಳು ಹೊಳೆಯಂತಾಗಿದ್ದವು.
ನೆನ್ನೆ ರಾತ್ರಿ ಬೆಂಗಳೂರಿನಲ್ಲಿ 131.6 ಮಿಲಿ ಮೀಟರ್ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದ್ದು, ಇನ್ನೂ ನಾಲ್ಕು ದಿನಗಳ ಕಾಲ ಮತ್ತೆ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದೆ. ರಾಜ್ಯದ 18 ಜಿಲ್ಲೆಗಳಿಗೆ ಇಂದು ಮಳೆಯ ಮುನ್ಸೂಚನೆ ನೀಡಲಾಗಿದೆ. ಇಂದು (ಸೆಪ್ಟಂಬರ್ 5) ಕೊಡಗು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಹಾಗೂ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ತುಮಕೂರು, ಮೈಸೂರು, ಚಿಕ್ಕಬಳ್ಳಾಪುರ, ಮಂಡ್ಯ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ ಜಿಲ್ಲೆಗಳಲ್ಲಿ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ.
ಧಾರಾಕಾರ ಮಳೆಯಿಂದಾಗಿ ಬೆಂಗಳೂರಿನ ಶಾಂತಿನಗರದ ಬಿಎಂಟಿಸಿ ಬಸ್ ಡಿಪೊ ಮುಳುಗಡೆಯಾಗಿದೆ. ಹಲವು ಬಸ್ಗಳು ನೀರಿನಲ್ಲೇ ನಿಂತಿವೆ. ನೀರಿನ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ರಾಜಕಾಲುವೆ ತುಂಬಿ ನೀರು ಡಿಪೊ ಒಳಗೆ ನುಗ್ಗಿದೆ. ಸತತವಾಗಿ ನೀರು ಹರಿದು ಬರುತ್ತಿದೆ. ನೀರಿನ ಮಟ್ಟ ಇನ್ನೂ ಕಡಿಮೆಯಾಗಿಲ್ಲ. ಮಳೆಯಿಂದ ಡಿಪೊದಲ್ಲಿ ಆಗಿರುವ ನಷ್ಟದ ಸಂಪೂರ್ಣ ಚಿತ್ರಣ ಇನ್ನೂ ಸಿಕ್ಕಿಲ್ಲ.
ನಿರಂತರ ಮಳೆಗೆ ಬೆಂಗಳೂರಿನ ರಸ್ತೆಗಳು ಕೆರೆಯಂತೆ ಆಗಿದೆ. ಬೆಂಗಳೂರು ನಗರದಲ್ಲಿನ ರಸ್ತೆಗಳಲ್ಲಿ ಗುಂಡಿಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದ ವಾಹನ ಸವಾರರು ಪರದಾಟ ನಡೆಸುವಂತಾಗಿದೆ. ಜನರು ಬಿಬಿಎಂಪಿ, ಸರ್ಕಾರದ ಮೇಲೆ ಹಿಡಿಶಾಪ ಹಾಕುತ್ತಿದ್ದಾರೆ. ಬೆಂಗಳೂರಿನ ಮಾರತಹಳ್ಳಿ-ಸಿಲ್ಕ್ ಬೋರ್ಡ್ ಜಂಕ್ಷನ್ ರಸ್ತೆಯ ಬಳಿ ಜಲಾವೃತಗೊಂಡ ರಸ್ತೆಯಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಸ್ಥಳೀಯ ಭದ್ರತಾ ಸಿಬ್ಬಂದಿ ನಿನ್ನೆ ರಕ್ಷಿಸಿದ್ದಾರೆ. ಮಾರತ್ತಹಳ್ಳಿ ಬಳಿಯ ಮನ್ನೇಕೊಳಲು ಮಳೆಯಿಂದಾಗಿ ರಸ್ತೆಗಳಲ್ಲಿ ಕುತ್ತಿಗೆ ಮಟ್ಟಕ್ಕೆ ನೀರು ಹರಿಯುತ್ತಿದೆ. ಮನೆಗಳೂ ಜಲಾವೃತಗೊಂಡಿವೆ. ಕೆರೆಯಂತಾಗಿರುವ ರಸ್ತೆಗಳಲ್ಲಿ ಈಜಾಡಿ ಜನರು ಮನೆಗಳಿಗೆ ಸೇರುತ್ತಿದ್ದಾರೆ.
ಸರ್ಜಾಪುರ ರಸ್ತೆಯ ವಿಪ್ರೋ ಗೇಟ್ ಬಳಿ ರಸ್ತೆ ಮಳೆಯಿಂದಾಗಿ ಜಲಾವೃತಗೊಂಡಿದೆ. ಇದರಿಂದ ವಾಹನ ಸವಾರರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಿಲೋಮೀಟರ್ಗಟ್ಟಲೆ ಟ್ರಾಫಿಕ್ ಜಾಮ್ ಆಗಿದೆ. ಬೆಳ್ಳಂದೂರು ಕ್ರಾಸ್, ಸರ್ಜಾಪುರ ರಸ್ತೆಯ ರೈನ್ಬೋ ಲೇಔಟ್ಗೆ ನೀರು ನುಗ್ಗಿದ್ದು, ಕಾರುಗಳು ಮುಳುಗಿವೆ. ಲೇಔಟ್ ನಿವಾಸಿಗಳಿಗೆ ಓಡಾಡಲು ಅಗ್ನಿಶಾಮಕ ಸಿಬ್ಬಂದಿ ದೋಣಿಗಳ ವ್ಯವಸ್ಥೆ ಮಾಡಿದ್ದಾರೆ. ಅಪಾರ್ಟ್‌ಮೆಂಟ್ ಗಳ ಕೆಳಮಹಡಿಗಳಲ್ಲಿ ಪೂರ್ತಿ ನೀರು ಆವರಿಸಿಕೊಂಡಿದೆ.
ಹಲಸೂರು, ಜೀವನ್ ಭೀಮಾ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಬೆಳ್ಳಂದೂರ ಕ್ರಾಸ್ ಜಲಾವೃತಗೊಂಡಿದೆ. ಮೆಜೆಸ್ಟಿಕ್ ಸುತ್ತಮುತ್ತ ಕೆರೆಯಂತಾಗಿದ್ದವು. ಹೆಚ್‍ಬಿಆರ್ ಲೇಔಟ್‍ನ ಮೊದಲ ಹಂತದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ನೀರು ರಾಜಕಾಲುವೆಗೆ ಹರಿದು ಹೋಗುವ ಕ್ರಮಕ್ಕೆ ಮುಂದಾದರು.
ಸನ್ನಿ ಬ್ರೂಕ್ಸ್ ಲೇಔಟ್ನಲ್ಲಿ 10ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದು, ಹೆಚ್ಚಿನ ಐಷಾರಾಮಿ ಮನೆಗಳು ಮುಳುಗಿದ್ದು, ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಮಹಾಲಕ್ಷ್ಮೀ ಲೇಔಟ್‍ನ ತರಕಾರಿ ಮಾರ್ಕೆಟ್ ಬಳಿ ಎರಡು ಬೃಹತ್ ಮರಗಳು ಕಾರುಗಳ ಮೇಲೆ ಬಿದ್ದಿವೆ. ಎರಡು ಕಾರುಗಳು ಸಂಪೂರ್ಣ ಜಖಂ ಆಗಿದ್ದು, ಬಿಬಿಎಂಪಿ ಅರಣ್ಯ ಸಿಬ್ಬಂದಿ ರಾತ್ರಿಯೇ ತೆರವು ಮಾಡಿದ್ದಾರೆ.
ಭಾರೀ ಮಳೆಯಿಂದಾಗಿ ನೆಲಮಂಗಲದ ಮುಕ್ತನಾತೇಶ್ವರ ದೇವಾಲಯದ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಅಮಾನಿಕೆರೆ, ಹಾಗೂ ಬಿನ್ನಮಂಗಲದ ಕೆರೆಗಳು ಕೋಡಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಎಂ ಜಿ ರಸ್ತೆ ಸಂಪರ್ಕ ಕಡಿತಗೊಳಿಸಲಾಗಿದೆ ಹಾಗೂ ಜನಪ್ರಿಯ ಅಪಾರ್ಟ್‍ಮೆಂಟ್ ರಸ್ತೆ ಕೂಡ ಜಲಾವೃತಗೊಂಡಿದೆ. ಅಮಾನಿಕೆರೆ ಹಾಗೂ ಬಿನ್ನಮಂಗಲದ ಕೆರೆಗಳು ಕೋಡಿ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿಗೆ ಕೆರೆಯ ನೀರು ನುಗ್ಗಿದ್ದು, ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಅವಾಂತರ ಸೃಷ್ಟಿಯಾಗಿದೆ.
ನೆಲಮಂಗಲ ಬೆಂಗಳೂರು ಸರ್ವಿಸ್ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಮತ್ತೊಂದೆಡೆ ಅಡಕಮಾರನಹಳ್ಳಿಯ ಜೈನ್ ಟೆಂಪಲ್ ಕೂಡ ನಾಲ್ಕೈದು ಅಡಿ ನೀರಿನಿಂದ ಜಲಾವೃತವಾಗಿದೆ.
ಬೆಂಗಳೂರಿನಲ್ಲಿ ರಾಜಕಾಲುವೆ ಮತ್ತು ಇತರ ಮಳೆ ನೀರು ಹರಿಯುವ ಚರಂಡಿಗಳ ಒತ್ತುವರಿಯಾಗಿರುವುದೇ ಮಳೆ ಅನಾಹುತಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಬೆಂಗಳೂರಿನ ಹೈಟೆಕ್ ಐಟಿ-ಬಿಟಿ ಕಂಪನಿಗಳ ಪ್ರಭಾವಿಗಳೇ ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ. ಪ್ರಭಾವಿಗಳ ಪ್ರಭಾವಕ್ಕೆ ಮಣಿದಿರುವ ಬಿಬಿಎಂಪಿ ಅಧಿಕಾರಿಗಳು ರಾಜಕಾಲುವೆ ಒತ್ತುವರಿ ಮಾಡಲು ಹಿಂದೇ ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.