ನವದೆಹಲಿ: ಜಾರಿ ನಿರ್ದೇಶನಾಲಯ (ಇ.ಡಿ)ವು, ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ರಾಜಕೀಯ ಸಲಹಾ ಸಂಸ್ಥೆ ಐ–ಪ್ಯಾಕ್‌ನ ಕಚೇರಿಯಲ್ಲಿ ನಡೆಸುತ್ತಿದ್ದ ಶೋಧ ಕಾರ್ಯಾಚರಣೆಗೆ ಪಶ್ಚಿಮ ಬಂಗಾಳ ಸರ್ಕಾರ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಡ್ಡಿಪಡಿಸಿದ್ದಾರೆಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಾರ್ಚ್ 18ಕ್ಕೆ ಮುಂದೂಡಿದೆ.
ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 18ರಂದು ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠ ಮುಂದೂಡಿತು.
ಇದನ್ನೂ ಓದಿ: “ಜನರ ವಿರುದ್ಧದ ಒಂದು ಯುದ್ಧವಾಗಿ ಪರಿಣಮಿಸುತ್ತಿರುವ ಎಸ್‍ಐಆರ್ ನ್ನು ಕೈಬಿಡಬೇಕು”
ಜನವರಿ 8ರಂದು ಐ–ಪ್ಯಾಕ್‌ನ ಕಚೇರಿ ಹಾಗೂ ಸಂಸ್ಥೆಯ ನಿರ್ದೇಶಕ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಇ.ಡಿ ದಾಳಿ ನಡೆಸಿತ್ತು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಮಮತಾ ಬ್ಯಾನರ್ಜಿ ಅವರು ಶೋಧ ಕಾರ್ಯಾಚರಣೆಗೆ ಅಡ್ಡಿಪಡಿಸಿ, ಅಲ್ಲಿದ್ದ ಪ್ರಮುಖ ಕಡತಗಳನ್ನು ಕೊಂಡೊಯ್ದಿದ್ದಾರೆ ಎಂದು ಇ.ಡಿ ಆರೋಪಿಸಿದೆ.
ಜಾರಿ ನಿರ್ದೇಶನಾಲಯದ ತನಿಖೆಗೆ ಅಡ್ಡಿಪಡಿಸಿರುವುದು ತುಂಬಾ ಗಂಭೀರವಾದ ವಿಚಾರ ಎಂದು ಜನವರಿ 15ರಂದು ಸುಪ್ರೀಂ ಕೋರ್ಟ್ ಹೇಳಿತ್ತು. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಸರ್ಕಾರ ಮತ್ತು ಡಿಜಿಪಿ ರಾಜೀವ್ ಕುಮಾರ್ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿತ್ತು.
ಇದಲ್ಲದೆ ಪಶ್ಚಿಮ ಬಂಗಾಳದಲ್ಲಿ ಇ.ಡಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ಗಳಿಗೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಇ.ಡಿ ದಾಳಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಸಂರಕ್ಷಿಸುವಂತೆಯೂ ರಾಜ್ಯ ಪೊಲೀಸರಿಗೆ ನಿರ್ದೇಶನ ನೀಡಿತ್ತು.
ಇದನ್ನೂ ನೋಡಿ: “ವಿಕಸಿತ ಭಾರತ ಯಾರಿಗೆ? ಬ್ಯಾಂಕಿಂಗ್–ವಿಮಾ ವಲಯದಲ್ಲಿ ಜನಸಾಮಾನ್ಯರ ಹಿತ ಕಣ್ಮರೆಯೇ?” Janashakthi Media
