ಆಸ್ತಿಯಲ್ಲೂ, ಸಾಲದಲ್ಲೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪತ್ನಿಯೇ ಮುಂದು

ಚಿಕ್ಕಬಳ್ಳಾಪುರ : ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರಿಗಿಂತ ಅವರ ಪತ್ನಿ ಡಾ.ಜಿ.ಎ.ಪ್ರೀತಿ ಅವರೇ ಹೆಚ್ಚು ಶ್ರೀಮಂತೆ. ಮತ್ತೊಂದು ಕಡೆ ಸುಧಾಕರ್‌ಗಿಂತ ಪ್ರೀತಿ ಅವರೇ ಹೆಚ್ಚು ಸಾಲ ಸಹ ಮಾಡಿದ್ದಾರೆ. ಗುರುವಾರ ನಾಮಪತ್ರ ಸಲ್ಲಿಸುವ ವೇಳೆ ಡಾ.ಕೆ.ಸುಧಾಕರ್ ನೀಡಿರುವ ಆಸ್ತಿ ವಿವರಗಳಲ್ಲಿ ಈ ಮಾಹಿತಿ ಇದೆ.

ಅಲ್ಲದೆ 2019ರ ಉಪಚುನಾವಣೆ ಸಮಯದಲ್ಲಿ ದಂಪತಿ ಸಲ್ಲಿಸಿದ ವಿವರಕ್ಕೂ ಈಗಿನ ವಿವರಕ್ಕೂ ತಾಳೆ ಮಾಡಿದರೆ ಸುಧಾಕರ್ ಅವರ ಚರಾಸ್ತಿ ಮೌಲ್ಯ ಹೆಚ್ಚಿದೆ. ಅವರ ಪತ್ನಿಯ ಚರಾಸ್ತಿ ಮೌಲ್ಯ ಕುಸಿದಿದೆ. 2019ರ ಉಪಚುನಾವಣೆ ವೇಳೆ ಡಾ.ಕೆ.ಸುಧಾಕರ್ ತಮ್ಮ ಚರಾಸ್ತಿಯ ಒಟ್ಟು ಮೌಲ್ಯ ₹1.18 ಕೋಟಿ ಹಾಗೂ ಪತ್ನಿಯ ಚರಾಸ್ತಿಯ ಮೌಲ್ಯ ₹13.70 ಕೋಟಿ ಎಂದು ಘೋಷಿಸಿದ್ದರು. ಆದರೆ ಈ ಬಾರಿ ತಮ್ಮ ಚರಾಸ್ತಿಗಳ ಒಟ್ಟು ಮೌಲ್ಯ ₹2.79 ಕೋಟಿ ಹಾಗೂ ಪತ್ನಿಯ ಚರಾಸ್ತಿಗಳ ಮೌಲ್ಯ ₹ 6.59 ಕೋಟಿ ಎಂದು ಘೋಷಿಸಿದ್ದಾರೆ.

ಉಪಚುನಾವಣೆಯ ಸಮಯದಲ್ಲಿ ಸುಧಾಕರ್ ಬಳಿ ₹4.20 ಲಕ್ಷ ನಗದು ಇತ್ತು. ಆದರೆ ಈ ಬಾರಿ ಆ ನಗದು ಪ್ರಮಾಣ ಕಡಿಮೆಯಾಗಿದ್ದು ₹10,680 ಇದೆ ಎಂದು ಘೋಷಿಸಿಕೊಂಡಿದ್ದಾರೆ. ಉಪಚುನಾವಣೆಯ ವೇಳೆ ಅವರ ಪತ್ನಿ ತಮ್ಮ ಬಳಿ ₹3.10 ಲಕ್ಷ ನಗದು ಇದೆ ಎಂದು ಘೋಷಿಸಿದ್ದರು. ಈ ಬಾರಿ ₹ 5.10 ಲಕ್ಷ ನಗದು ಇದೆ ಎಂದಿದ್ದಾರೆ. ಲ್ಯಾನ್ಸರ್ ಕಾರು ಹಾಗೂ ಮೂರು ಟ್ರ್ಯಾಕ್ಟರ್‌ಗಳು ಸುಧಾಕರ್ ಅವರ ಹೆಸರಿನಲ್ಲಿ ಇದ್ದರೆ, ಹೋಂಡಾ ಆಕ್ಟಿವ ವಾಹನ ಪತ್ನಿಯ ಹೆಸರಿನಲ್ಲಿ ಇದೆ. ಪತ್ನಿಯ ಬಳಿಯಿಂದಲೇ 2016 ಮತ್ತು 2019ರಲ್ಲಿ ₹ 40.33 ಲಕ್ಷ ಹಣವನ್ನು ಡಾ.ಕೆ.ಸುಧಾಕರ್ ಸಾಲ ಪಡೆದಿದ್ದಾರೆ. ಸುಧಾಕರ್ ತಂದೆ ಪಿ.ಎನ್.ಕೇಶವರೆಡ್ಡಿ ಅವರಿಗೂ ಡಾ.ಪ್ರೀತಿ ₹ 55.57 ಲಕ್ಷ ಸಾಲ ನೀಡಿದ್ದಾರೆ.

ಪೆರೇಸಂದ್ರ, ಚಿಕ್ಕನಾಗವಲ್ಲಿ ಗ್ರಾಮದಲ್ಲಿ ₹97 ಲಕ್ಷ ಮೌಲ್ಯದ ಕೃಷಿ ಭೂಮಿಯನ್ನು ಸುಧಾಕರ್ ಹೊಂದಿದ್ದಾರೆ. ₹52 ಲಕ್ಷ ಮೌಲ್ಯದ ಕೃಷಿಯೇತರ ಜಮೀನನ್ನು ಸಹ ಹೊಂದಿದ್ದಾರೆ. ಸುಧಾಕರ್ ಪತ್ನಿಯ ಹೆಸರಿನಲ್ಲಿ ₹ 16.10 ಕೋಟಿ ಸ್ಥಿರಾಸ್ತಿಗಳು ಇವೆ. 2019ರ ಉಪಚುನಾವಣೆ ಸಮಯದಲ್ಲಿ ವಿವಿಧ ಬ್ಯಾಂಕುಗಳು, ಸಂಘ ಸಂಸ್ಥೆಗಳು, ವ್ಯಕ್ತಿಗಳಿಂದ ತಾವು ₹29.84 ಲಕ್ಷ ಸಾಲ ಪಡೆದಿರುವುದಾಗಿ ಡಾ.ಕೆ.ಸುಧಾಕರ್ ಘೋಷಿಸಿದ್ದರು. ಪತ್ನಿಯ ಹೆಸರಿನಲ್ಲಿ ₹10.68 ಕೋಟಿ ಸಾಲ ತೋರಿಸಿದ್ದರು. ಈಗ ಸುಧಾಕರ್ ಅವರ ಸಾಲದ ಪ್ರಮಾಣ ₹1.60 ಕೋಟಿಗೆ ಹೆಚ್ಚಿದ್ದರೆ, ಅವರ ಪತ್ನಿಯ ಸಾಲದ ಪ್ರಮಾಣ ₹19.06 ಕೋಟಿ ತಲುಪಿದೆ.

ಇದನ್ನೂ ಓದಿ : ಕೆ.ಸಿ.ಜನರಲ್‍ ನಲ್ಲಿಯೂ ತಾಯಿ-ಶಿಶು ಆಸ್ಪತ್ರೆ ನಿರ್ಮಾಣ: ಆರೋಗ್ಯ ಸಚಿವ ಸುಧಾಕರ್‌

2017-18ನೇ ಸಾಲಿನಲ್ಲಿ ಸುಧಾಕರ್ ವಾರ್ಷಿಕ ಆದಾಯ ₹14.37 ಲಕ್ಷ ಇತ್ತು. 2021-22ನೇ ಸಾಲಿನಲ್ಲಿ ಅವರ ಆದಾಯ ₹33.47 ಲಕ್ಷಕ್ಕೆ ಹೆಚ್ಚಳವಾಗಿದೆ. 2017-18ರಲ್ಲಿ ಅವರ ಪತ್ನಿಯ ಆದಾಯ ₹ 32.79 ಲಕ್ಷ ಇತ್ತು. 2021-22ನೇ ಸಾಲಿನಲ್ಲಿ ₹61.91 ಲಕ್ಷಕ್ಕೆ ಏರಿಕೆ ಆಗಿದೆ. ತಮ್ಮ ವಿರುದ್ಧ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಮಾನನಷ್ಟ ಪ್ರಕರಣ ದಾಖಲಾಗಿರುವುದರ ಬಗ್ಗೆಯೂ ಪ್ರಮಾಣ ಪತ್ರದಲ್ಲಿ ಸುಧಾಕರ್ ಉಲ್ಲೇಖಿಸಿದ್ದಾರೆ.

ದಂಪತಿ ಬಳಿ 30 ಕೆ.ಜಿ ಬೆಳ್ಳಿ : ಸುಧಾಕರ್ ಬಳಿ 160 ಗ್ರಾಂ ಚಿನ್ನ ಹಾಗೂ 9 ಕೆ.ಜಿ ಬೆಳ್ಳಿ ‌ಇದ್ದರೆ, ಅವರ ಪತ್ನಿ ಪ್ರೀತಿ ಅವರ ಬಳಿ ಒಂದು ಕೆ.ಜಿ ಚಿನ್ನ, ನಾಲ್ಕು ಜೊತೆ ವಜ್ರ ಹಾಗೂ 21 ಕೆ.ಜಿ ಬೆಳ್ಳಿ ಇದೆ. 2019ರ ಉಪಚುನಾವಣೆಯಲ್ಲಿ ಸುಧಾಕರ್ ಅವರ ಬಳಿ ಕೇವಲ 160 ಗ್ರಾಂ ಚಿನ್ನ ಮಾತ್ರವಿತ್ತು.

Donate Janashakthi Media

Leave a Reply

Your email address will not be published. Required fields are marked *