ಟಕ್‌ ಮಕಾಕ್‌ ಪ್ರಭೇದದ ಒಂದು ಲಕ್ಷ ಕೋತಿಗಳು ಶ್ರೀಲಂಕಾದಿಂದ ಚೀನಾಗೆ ರವಾನೆಗೆ ಸಜ್ಜು

ಕೊಲೊಂಬೊ: ಆರ್ಥಿಕ ಬಿಕ್ಕಟ್ಟಿನಲ್ಲಿರುವ ಶ್ರೀಲಂಕಾ, ಅಳಿವಿನಂಚಿನಲ್ಲಿರುವ ಟಕ್‌ ಮಕಾಕ್‌ ಪ್ರಭೇದದ ಸುಮಾರು ಒಂದು ಲಕ್ಷ ಕೋತಿಗಳನ್ನು ಚೀನಾಕ್ಕೆ ಮಾರಾಟ ಮಾಡಲು ಸಜ್ಜಾಗಿದೆ.

ಚೀನಾಕ್ಕೆ ಕೋತಿಗಳನ್ನು ರವಾನಿಸುವ ಮೊದಲ ಹಂತದ ಯೋಜನೆ ಮತ್ತು ಕೈಗೆತ್ತಿಕೊಳ್ಳಬೇಕಿರುವ ಅಧ್ಯಯನದ ಬಗ್ಗೆ ಮಂಗಳವಾರ ಉನ್ನತಮಟ್ಟದ ವಿಶೇಷ ಸಭೆ ಕೂಡ ನಡೆದಿದೆ. ಅಲ್ಲದೆ, ದೇಶವು ಈ ವರ್ಷ ತನ್ನ ಸಂರಕ್ಷಿತ ವನ್ಯಜೀವಿಗಳ ಪಟ್ಟಿಯಿಂದ ಹಲವು ಪ್ರಭೇದಗಳ ಪ್ರಾಣಿಗಳನ್ನು ಕೈಬಿಟ್ಟಿದೆ. ಕೃಷಿಗೆ ಕಂಟಕವಾಗಿ ಪರಿಣಮಿಸಿರುವ ಕಾರಣಕ್ಕೆ ಮೂರು ಪ್ರಭೇದಗಳ ಕೋತಿಗಳು, ನವಿಲು ಮತ್ತು ಕಾಡು ಹಂದಿಗಳನ್ನು ಕೊಲ್ಲಲು ರೈತರಿಗೆ ಅನುಮತಿಯನ್ನೂ ಕಲ್ಪಿಸಿದೆ.

ಟಕ್‌ ಮಕಾಕ್‌ ಕೋತಿಗಳ ಖರೀದಿಗೆ ಚೀನಾ ಸಲ್ಲಿಸಿರುವ ಬೇಡಿಕೆ ಪರಿಶೀಲನೆಗಾಗಿ ಅಧ್ಯಯನ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಕೋತಿಗಳನ್ನು ಚೀನಾ ತನ್ನ ಒಂದು ಸಾವಿರ ಪ್ರಾಣಿ ಸಂಗ್ರಹಾಲಯಗಳಲ್ಲಿ ಇರಿಸಲು ಬಯಸಿದೆ ಎಂದು ಶ್ರೀಲಂಕಾದ ಕೃಷಿ ಸಚಿವ ಮಹಿಂದ್ರ ಅಮರವೀರ ಹೇಳಿದ್ದಾರೆ. ಇಂಟರ್‌ನ್ಯಾಷನಲ್‌ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್(ಐಯುಸಿಎನ್) ಸಂಸ್ಥೆಯು ಶ್ರೀಲಂಕಾದ ನಿರ್ದಿಷ್ಟ ಪ್ರದೇಶದಲ್ಲಿ ಕಂಡು ಬರುವ ಈ ಕೋತಿಗಳನ್ನು ಅಳಿವಿನಂಚಿನಲ್ಲಿರುವ ಪ್ರಾಣಿಗಳೆಂದು ಕೆಂಪು ಪಟ್ಟಿಯಲ್ಲಿ ವರ್ಗೀಕರಿಸಿದೆ. ಶ್ರೀಲಂಕಾದಲ್ಲಿ ಈ ಕೋತಿಗಳ ಸಂಖ್ಯೆ ಅಂದಾಜು 30 ಲಕ್ಷಗಳಷ್ಟಿದೆ.

ಇದನ್ನೂ ಓದಿ : ಚೀನಾ ವಿಜ್ಞಾನ-ತಂತ್ರಜ್ಞಾನದ ಸೂಪರ್ ಪವರ್ ಆಗಿ ಬಿಟ್ಟಿದೆಯೇ?

ದೇಶದಲ್ಲಿ ಈ ಕೋತಿಗಳು ಭಾರಿ ಸಂಖ್ಯೆಯಲ್ಲಿ ಇರುವುದರಿಂದ ಚೀನಾದ ಬೇಡಿಕೆಯನ್ನು ಪರಿಗಣಿಸಬಹುದು‌ ಎಂದೂ ಕೃಷಿ ಸಚಿವರು ಹೇಳಿರುವುದನ್ನು ಉಲ್ಲೇಖಿಸಿ ‘ಎಕಾನಮಿ ನೆಕ್ಸ್ಟ್‌’ ಸುದ್ದಿ ಪೋರ್ಟಲ್‌ ವರದಿ ಮಾಡಿದೆ. ಟಕ್‌ ಮಕಾಕ್‌ ಕೋತಿಗಳ ಮಾರಾಟ-ಖರೀದಿ ವ್ಯವಹಾರದ ಹಣಕಾಸಿನ ಯಾವುದೇ ವಿವರಗಳು ಈವರೆಗೆ ಲಭಿಸಿಲ್ಲವೆಂದೂ ಅದು ಹೇಳಿದೆ.

Donate Janashakthi Media

Leave a Reply

Your email address will not be published. Required fields are marked *