ನಟ ಉದಯ್, ಅನಿಲ್ ಸಾವಿಗೆ ಅವರೇ ಕಾರಣ : ಕೋರ್ಟ್ ಮುಂದೆ ವಕೀಲರ ವಾದ

ಬೆಂಗಳೂರು: ಮಾಸ್ತಿಗುಡಿ ಸಿನಿಮಾ ಚಿತ್ರೀಕರಣ ವೇಳೆ ಸಂಭವಿಸಿದ ದುರಂತದಲ್ಲಿ ಸಾವನ್ನಪ್ಪಿದ್ದ ಖಳ ನಟರಾದ ಉದಯ್ ಹಾಗೂ ಅನಿಲ್, ತಮ್ಮ ಸಿಕ್ಸ್ ಪ್ಯಾಕ್ ಅನ್ನು ಪ್ರೇಕ್ಷಕರು ನೋಡಬೇಕೆಂದು ಬಯಸಿದ್ದರು. ಅದಕ್ಕಾಗಿ ಸೇಫ್ಟಿ ಜಾಕೆಟ್ ಧರಿಸಲು ನಿರಾಕರಿಸಿದ್ದರು ಎಂದು ಸಾಹಸ ನಿರ್ದೇಶಕ ರವಿವರ್ಮ ಪರ ವಕೀಲರು ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯಕ್ಕೆ ಗುರುವಾರ ತಿಳಿಸಿದ್ದಾರೆ. ಖಳ ನಟರಿಬ್ಬರ ಉದ್ದೇಶಪೂರ್ವಕವಲ್ಲದ ಕೊಲೆ ಆರೋಪ ಕೈಬಿಡುವಂತೆ ಕೋರಿ ಸಾಹಸ ನಿರ್ದೇಶಕ ರವಿವರ್ಮ ಸಲ್ಲಿಸಿದ್ದ ಅರ್ಜಿ ನಗರದ 9ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್ ಶ್ರೀಧರ ಅವರ ಮುಂದೆ ವಿಚಾರಣೆಗೆ ಬಂದಿತ್ತು. ವಿಚಾರಣೆ ವೇಳೆ ರವಿವರ್ಮ ಪರ ಹಿರಿಯ ವಕೀಲ ಸಿ ಎಚ್ ಹನುಮಂತರಾಯ ಅವರು ವಾದ ಮಂಡಿಸಿದ್ದರು.

ನಟರಿಬ್ಬರ ಸಾವು ಆಕಸ್ಮಿಕವಾಗಿ ನಡೆದಿದೆ. ಹೆಲಿಕಾಫ್ಟರ್ನಿಂದ ಜಲಾಶಯದ ಹಿನ್ನೀರಿಗೆ ಧುಮುಕುವ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ತಮ್ಮ ದೇಹದ ಸಿಕ್ಸ್ ಪ್ಯಾಕ್ ಅನ್ನು ಪ್ರೇಕ್ಷಕರು ನೋಡಲು ಅನುವು ಮಾಡಿಕೊಳ್ಳುವಂತೆ ಕೇಳಿಕೊಂಡು ಸೇಫ್ಟಿ ಜಾಕೆಟ್ (ರಕ್ಷಾ ಕವಚ) ಧರಿಸಲು ನಿರಾಕರಿಸಿದ್ದರು. ಹಾಗೆಯೇ, ತಮಗೆ ಈಜು ಬರುವುದಾಗಿಯೂ ತಿಳಿಸಿದ್ದರು. ಅವರ ಒಪ್ಪಿಗೆ ಮೇರೆಗೆ ಚಿತ್ರೀಕರಣ ನಡೆಸಲಾಗಿತ್ತು.

ಈ ಅಂಶ ಪೋಲಿಸರೇ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ ಎಂದು ವಿವರಿಸಿದರು. ಅಲ್ಲದೇ, ಈಜು ಬರುವುದಾಗಿ ಹೇಳಿದ್ದರೂ ಮೃತರ ಹಿತ ದೃಷ್ಟಿ ಗಮನದಲ್ಲಿರಿಸಿಕೊಂಡು ಚಿತ್ರೀಕರಣದ ವೇಳೆ ಅರ್ಜಿದಾರರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರು. ಈಜುಗಾರರು ಮತ್ತು ಮೋಟಾರ್ ಬೋಟ್ ಅನ್ನು ಸ್ಥಳದಲ್ಲಿ ಸಿದ್ಧವಾಗಿರಿಸಿಕೊಳ್ಳಲಾಗಿತ್ತು. ಆದರೆ, ಮೋಟಾರ್ ಬೋಟ್ನಲ್ಲಿ ತಾಂತ್ರಿಕ ದೋಷ ಉಂಟಾಗಿ, ಅದು ನೀರಿನಲ್ಲಿ ಖಳನಾಯಕರು ಬಿದ್ದ ಜಾಗಕ್ಕೆ ಕ್ರಮಿಸಲು ಸಾಧ್ಯವಾಗಲಿಲ್ಲ.

ಇದನ್ನು ಅರ್ಜಿದಾರರು ಸೇರಿದಂತೆ ಪ್ರಕರಣದ ಯಾವೊಬ್ಬ ಆರೋಪಿಯೂ ನಿರೀಕ್ಷಿಸಿರಲಿಲ್ಲ. ಹೀಗಾಗಿ, ಅರ್ಜಿದಾರರು ಉದ್ದೇಶಪೂರ್ವಕವಾಗಿ ಯಾವುದೇ ಶಿಕ್ಷಾರ್ಹ ಅಪರಾಧ ಎಸಗಿಲ್ಲ. ಅವರ ವಿರುದ್ಧದ ಆರೋಪ ಕೈಬಿಡಬೇಕು ಎಂದು ಮನವಿ ಮಾಡಿದರು. ವಾದ ಆಲಿಸಿದ ನ್ಯಾಯಾಲಯವು ಹೆಚ್ಚಿನ ವಾದ ಮಂಡನೆಗೆ ಮೇ 30ಕ್ಕೆ ವಿಚಾರಣೆ ಮುಂದೂಡಿತು.

ಇದನ್ನೂ ಓದಿ :   ತಾಯಿ ಕಸ್ತೂರ್ ಗಾಂಧಿ ಚಿತ್ರಕ್ಕೆ ʼಅತ್ಯುತ್ತಮ ಸಂಕಲನಕಾರʼ ಅಂತರಾಷ್ಟ್ರೀಯ ಪ್ರಶಸ್ತಿ

ಮಾಸ್ತಿಗುಡಿ ಚಲನಚಿತ್ರದ ಸಾಹಸದೃಶ್ಯ ಚಿತ್ರೀಕರಣದ ಭಾಗವಾಗಿ 2016ರ ನವೆಂಬರ್ 7ರಂದು ಖಳ ನಟರಾದ ಉದಯ್ ಹಾಗೂ ಅನಿಲ್, ನಾಯಕ ನಟ ದುನಿಯಾ ವಿಜಯ್ ಜೊತೆಯಲ್ಲಿ ಹೆಲಿಕಾಪ್ಟರ್ನಿಂದ ತಿಪ್ಪಗೊಂಡನಹಳ್ಳಿ ಜಲಾಶಯದ ಹಿನ್ನೀರಿನಲ್ಲಿ ಧುಮುಕಿದ್ದರು. ಆದರೆ, ಈಜಿ ದಡ ಸೇರಲು ಸಾಧ್ಯವಾಗದೆ ನಟರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಪ್ರಕರಣ ರಾಜ್ಯಾದ್ಯಂತರ ತೀವ್ರ ಸಂಚಲನ ಮೂಡಿಸಿತ್ತು. ತನಿಖೆ ನಡೆಸಿದ್ದ ತಾವರೆಕೆರೆ ಪೊಲೀಸರು, ಚಿತ್ರದ ಸಾಹಸ ನಿರ್ದೇಶಕ ರವಿವರ್ಮ ಹಾಗೂ ಇತರೆ ಐವರ ವಿರುದ್ಧ ಐಪಿಸಿ ಸೆಕ್ಷನ್ 304 ಅಡಿಯಲ್ಲಿ ದುಡುಕು ಮತ್ತು ನಿರ್ಲಕ್ಷ್ಯದಿಂದ ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾದ ಪ್ರಕರಣದಡಿ (ಉದ್ದೇಶಪೂರ್ವಕವಲ್ಲದ ಕೊಲೆ) ಆರೋಪ ಪಟ್ಟಿ ಸಲ್ಲಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *