ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ವೈ ವಿಜಯೇಂದ್ರ ದೆಹಲಿ ಭೇಟಿ ಸಾಕಷ್ಟು ಕುತೂಹಲ ಕೆರಳಿಸಿದೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದು, ಮುಖ್ಯಮಂತ್ರಿ ದೆಹಲಿಗೆ ಹೋಗುವುದರೊಂದಿಗೆ ವಿಮಾನದಲ್ಲಿ ಆರು ಬ್ಯಾಗ್ ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ರಾಜ್ಯದಲ್ಲಿ ಕನ್ನಡಿಗರಿಂದ ಆಡಳಿತ ನಡೆಯಬೇಕೇ ಹೊರತು, ದೆಹಲಿಯ ಬಿಜೆಪಿ ಹೈಕಮಾಂಡ್ನಿಂದ ಅಲ್ಲ. ಅತ್ಯಂತ ತುರ್ತಾಗಿ ವಿಶೇಷ ವಿಮಾನದಲ್ಲಿ ಮುಖ್ಯಮಂತ್ರಿ ಹೋಗಿದ್ದಾರೆ. ಅವುಗಳು ಉಡುಗೊರೆಯೋ ಅಥವಾ ಬೇರೆ ಏನಾದರೂ ಇದೆಯೋ ಎನ್ನುವುದನ್ನು ಯಡಿಯೂರಪ್ಪ ಅವರೇ ಹೇಳಬೇಕು. ಆದರೆ, ಅವರು ಬ್ಯಾಗ್ ತೆಗೆದುಕೊಂಡು ಹೋಗಿರುವ ಮಾಹಿತಿ ನನಗೆ ಬಂದಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಯಡಿಯೂರಪ್ಪ ದೆಹಲಿ ಭೇಟಿ : ಹುಳಿಯೋ!! ಸಿಹಿಯೋ!!!
ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ದೆಹಲಿ ಪ್ರವಾಸದ ಸಂದರ್ಭದಲ್ಲಿ ಬ್ಯಾಗ್ ತೆಗೆದುಕೊಂಡು ಹೋದ ವಿಷಯ ಕೆಲ ಮಾಧ್ಯಮಗಳಲ್ಲೂ ಬಂದಿದೆ. ನಾಯಕರಿಗೆ ಕೊಡಲು ದೊಡ್ಡ ದೊಡ್ಡ ಉಡುಗೊರೆಗಳನ್ನು ತೆಗೆದುಕೊಂಡು ಹೋಗಿದ್ದಾರೆ ಅಂತಾ ಕೆಲ ಮಾಧ್ಯಮಗಳಲ್ಲಿ ಬರುತ್ತಿದೆ. ಆ ಬ್ಯಾಗ್ಗಳಲ್ಲಿ ನಿಜವಾಗಿಯೂ ಏನಿದೆ ಎನ್ನುವುದನ್ನು ಸ್ವತಃ ಮುಖ್ಯಮಂತ್ರಿಗಳೇ ಹೇಳಬೇಕು ಎಂದು ತಿಳಿಸಿದ್ದಾರೆ.
ಆ ಆರು ಬ್ಯಾಗ್ಗಳಲ್ಲಿ ರಾಜ್ಯದ ಸಮಸ್ಯೆಗಳನ್ನು ತೆಗೆದುಕೊಂಡು ಹೋಗಿರುವರೋ ಅಥವಾ ಬೇರೆ ಏನಾದರೂ ತೆಗೆದುಕೊಂಡು ಬಿಜೆಪಿ ಹೈಕಮಾಂಡ್ಗೆ ಕೊಡಲು ಹೋಗಿರುವರೋ ಎನ್ನುವುದನ್ನು ಹೇಳಬೇಕು. ಪ್ರಧಾನಿ ಮೋದಿಯನ್ನು ಯಡಿಯೂರಪ್ಪ ಒಬ್ಬರೇ ಹೋಗಿ ಭೇಟಿ ಮಾಡಿದರೋ ಅಥವಾ ಆರು ಬ್ಯಾಗ್ಗಳೊಂದಿಗೆ ಭೇಟಿ ಮಾಡಿದರೋ ಎಂಬ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.