ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ದೀಪಾವಳಿ ಸಂದರ್ಭದಲ್ಲಿ ತಮ್ಮ ನಿವಾಸಕ್ಕೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದ ಹಿನ್ನೆಲೆಯಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಮಂಗಳವಾರ ಅವರ ವಿರುದ್ಧ ಪ್ರಕರಣ ದಾಖಲಿಸಿದೆ.
ಕುಮಾರಸ್ವಾಮಿ ವಿರುದ್ಧ ಬೆಸ್ಕಾಂನ ಜಾಗೃತ ದಳ ವಿಭಾಗವು ಅದರ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಭಾರತೀಯ ವಿದ್ಯುತ್ ಕಾಯಿದೆಯ (ವಿದ್ಯುತ್ ಕಳ್ಳತನ) ಸೆಕ್ಷನ್ 135 ರ ಅಡಿಯಲ್ಲಿ ಹಚ್.ಡಿ. ಕುಮಾರಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಅಪರಾಧ ಸಾಬೀತಾದ್ರೆ ಕುಮಾರಸ್ವಾಮಿಗೆ ಸಂಕಷ್ಟ ಎದುರಾಗಲಿದೆ. 2003 ರ ವಿದ್ಯುತ್ ಕಾಯಿದೆ 135 ಪ್ರಕಾರ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆಯುವುದು, ಎಲೆಕ್ಟ್ರಿಕ್ ಲೈನ್‌ಗಳು ಮತ್ತು ಸಾಮಗ್ರಿಗಳ ಕಳ್ಳತನ ಮಾಡುವುದು ಗಂಭೀರವಾದ ಅಪರಾಧವಾಗಿದ್ದು, ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಯ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು ಎಂದು ಕಾಯ್ದೆ ಹೇಳುತ್ತದೆ.
ಕುಮಾರಸ್ವಾಮಿ ಅವರ ಸ್ಪಷ್ಟನೆ: ”ದೀಪಾವಳಿ ಹಬ್ಬಕ್ಕೆ ನನ್ನ ಮನೆಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಲು ಖಾಸಗಿ ಡೆಕೋರೇಟರ್ ಒಬ್ಬರಿಗೆ ಹೇಳಲಾಗಿತ್ತು. ಅವರು ಮನೆಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಿದ ಮೇಲೆ ಪಕ್ಕದಲ್ಲಿಯೇ ಇದ್ದ ಕಂಬದಿಂದ ವಿದ್ಯುತ್ ಸಂಪರ್ಕ ಪಡೆದು ಪರೀಕ್ಷೆ ಮಾಡಿದ್ದಾರೆ. ಆಗ ನಾನು ಬಿಡದಿಯ ತೋಟದಲ್ಲಿದ್ದೆ. ನಿನ್ನೆ ರಾತ್ರಿ ಮನೆಗೆ ವಾಪಸ್ ಬಂದಾಗ ಈ ವಿಷಯ ನನ್ನ ಗಮನಕ್ಕೆ ಬಂತು. ತಕ್ಷಣ ಅದನ್ನು ತೆಗೆಸಿ ಮನೆಯ ಮೀಟರ್ ಬೋರ್ಡ್ ನಿಂದಲೇ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮಾಡಿದ್ದೇನೆ. ಇದು ವಾಸ್ತವ ಸ್ಥಿತಿ. ಇದರಲ್ಲಿ ಮುಚ್ಚುಮರೆ ಏನೂ ಇಲ್ಲ” ಎಂದು ಕುಮಾರಸ್ವಾಮಿ ಅವರು ಸ್ಪಷ್ಟನೆ ನೀಡಿದ್ದಾರೆ.
ಪವರ್ ಪೊಲಿಟಿಕ್ಸ್ : ಮಾಜಿ ಸಿಎಂಗೆ ವಿದ್ಯುತ್ ಕದಿಯಲು ಇಂತಹ ಬಡತನ ಬಡಿದಿರುವುದು ದುರಂತ!” ಎಂದು ಕಾಂಗ್ರೆಸ್ ಹೆಚ್‌ಡಿಕೆ ವಿರುದ್ಧ ಕಿಡಿ ಕಾರಿತ್ತು. ಸಾಮಾಜಿಕ ಜಾಲತಾಣದಲ್ಲಿ ಕುಮಾರಸ್ವಾಮಿ ಕರೆಂಟ್ ಕಳ್ಳ ಎಂಬ ಪೋಸ್ಟರ್ ಗಳು ಹರಿದಾಡಿದ್ದವು.
ಜೆಡಿಎಸ್ ಕಛೇರಿಯ ಗೋಡೆಗಳ ಮೇಲೆ ‘ವಿದ್ಯುತ್ ಕಳ್ಳ ಕುಮಾರಸ್ವಾಮಿ’ ಎಂಬ ಪೋಸ್ಟರ್ ಅಂಟಿಸಿಲಾಗಿದೆ. “ಕರೆಂಟ್ ಕದ್ದರೂ ಹೆಚ್‌ಡಿಕೆ ಪ್ರಮಾಣಿಕತೆಯನ್ನು ಮೆಚ್ಚಲೇಬೇಕು. ಕುಮಾರಸ್ವಾಮಿಯವರೇ 200 ಯುನಿಟ್ ಉಚಿತವಾಗಿದೆ ನೆನಪಿಟ್ಟುಕೊಳ್ಳಿ ಹೆಚ್ಚು ಕದಿಯಬೇಡಿ. ಕರೆಂಟ್ ಕಳ್ಳ ಕುಮಾರಸ್ವಾಮಿ” ಎಂದು ಪೋಸ್ಟರ್ನಲ್ಲಿ ಉಲ್ಲೇಖಿಸಲಾಗಿದೆ.