ಬೆಂಗಳೂರು: ಶಕ್ತಿ ಯೋಜನೆಯಡಿ ರಾಜ್ಯ ಸರ್ಕಾರ ಮಹಿಳೆಯರಿಗೆ ನೀಡಿದ್ದ ಉಚಿತ ಬಸ್ ಪ್ರಯಾಣವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಹಿಂಪಡೆಯಲು ಕರ್ನಾಟಕ ಹೈಕೋರ್ಟ್ ಗುರುವಾರ ಅನುಮತಿ ನೀಡಿದೆ. ಮೂವರು ಕಾನೂನು ವಿದ್ಯಾರ್ಥಿಗಳು ಸಲ್ಲಿಸಿರುವಅರ್ಜಿಯು ಅಸ್ಪಷ್ಟವಾಗಿದ್ದು, ಅರ್ಜಿ ಸಲ್ಲಿಸುವಾಗ ಯಾವುದೇ ಅಧ್ಯಯನ ನಡೆಸದೆ ಸಲ್ಲಿಸಲಾಗಿದೆ ಎಂದು ಹೈಕೋರ್ಟ್ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿದೆ.
ಅಶ್ವಿನ್ ಶಂಕರ್ ಭಟ್, ನೇಹಾ ವೆಂಕಟೇಶ್ ಮತ್ತು ಯಶಿಕಾ ಸರವಣನ್ ಎಂಬವರು ಈ ಅರ್ಜಿಯನ್ನು ಸಲ್ಲಿಸಿದ್ದರು. ”ಶಕ್ತಿ ಯೋಜನೆಯಿಂದಾಗಿ ಬಸ್‌ಗಳಲ್ಲಿ ಪ್ರಯಾಣಿಕೆ ದಟ್ಟಣೆ ಹೆಚ್ಚಾಗುತ್ತಿದ್ದು, ಗಲಾಟೆಗಳು ನಡೆಯುತ್ತಿದೆ. ಬಸ್‌ಗಳಲ್ಲಿ ನಡೆಯುವ ಅಶಿಸ್ತಿನ ವರ್ತನೆಯು ಮಕ್ಕಳು ಮತ್ತು ಹಿರಿಯ ನಾಗರಿಕರ ಮೇಲೆ ಪರಿಣಾಮ ಬೀರುತ್ತದೆ ಮತ್ತು ಜೊತೆಗೆ ಆರ್ಥಿಕತೆಗೆ ತೀವ್ರ ನಷ್ಟವನ್ನು ಉಂಟುಮಾಡುತ್ತದೆ” ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿತ್ತು.
ಇದನ್ನೂ ಓದಿ: 1,000 ಕೋಟಿ ದಾಟಿದ ಶಕ್ತಿ ಯೋಜನೆಯ ಟಿಕೆಟ್ ಮೌಲ್ಯ
ಅರ್ಜಿ ವಿಚಾರಣೆ ವೇಳೆ ಮುಂಬೈ ಲೋಕಲ್ ರೈಲುಗಳತ್ತ ಬೊಟ್ಟುಮಾಡಿದ ನ್ಯಾಯಾಲಯ, “ದುರ್ಬಲ ವರ್ಗಗಳಿಗೆ ನೀಡಿರುವ ಉಚಿತ ಪ್ರಯಾಣದ ಸೌಲಭ್ಯವನ್ನು ಪ್ರಶ್ನಿಸಿರುವ ನಿಮಗೆ, ಮುಂಬೈ ಲೋಕಲ್ ರೈಲುಗಳ ಜನದಟ್ಟಣೆಯ ಅರಿವಿದೆಯೆ” ಎಂದು ನ್ಯಾಯಾಲಯವು ಅರ್ಜಿದಾರರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
“ಉಚಿತ ಪ್ರಯಾಣವು ಮಹಿಳೆಯರಿಗೆ ಪ್ರಯೋಜನಕ್ಕಿಂತ ಹೆಚ್ಚು ಹಾನಿಯನ್ನುಂಟುಮಾಡುತ್ತಿದೆ” ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು. ವಿಚಾರಣೆ ವೇಳೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಮತ್ತು ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ಅವರನ್ನೊಳಗೊಂಡ ಪೀಠವು,” ಶಕ್ತಿ ಯೋಜನೆಗೆ ಚಾಲನೆ ನೀಡುವ ಮೊದಲು ಸರ್ಕಾರಿ ಬಸ್‌ಗಳ ಪ್ರಯಾಣ ಆರಾಮದಾಯಕವಾಗಿತ್ತೆ” ಎಂದು ಅರ್ಜಿದಾರನ್ನು ಕೇಳಿದೆ.
“ಎಲ್ಲೆಲ್ಲಿ ಜನದಟ್ಟಣೆ ಉಂಟಾಗುತ್ತಿದೆ, ಈ ಯೋಜನೆ ಯಾವುದಾದರು ನಿರ್ದಿಷ್ಟ ಗುಂಪಿನ ಜನರಿಗೆ ಸೀಮಿತವಾಗಿದೆಯೇ ಮತ್ತು ಈ ನಿಟ್ಟಿನಲ್ಲಿ ಅಧ್ಯಯನ ನಡೆಸಲಾಗಿದೆಯೇ” ಎಂಬ ಪ್ರಶ್ನೆಗಳನ್ನು ನ್ಯಾಯಪೀಠವು ಕೇಳಿದೆ. ಅರ್ಜಿಯು ಜನರ ದಟ್ಟಣೆ ಹೆಚ್ಚಾಗಿರುವುದಕ್ಕೆ ಹಾಕಲಾಗಿದೆಯೆ ಅಥವಾ ಯೋಜನೆಯನ್ನು ಪ್ರಶ್ನಿಸಿ ಹಾಕಲಾಗಿದೆಯೆ ಎಂದು ಪ್ರಶ್ನಿಸಿದೆ. ಸೂಕ್ತ ಸಿದ್ಧತೆಗಳ ನಂತರವಷ್ಟೆ ಪಿಐಎಲ್‌ಗಳನ್ನು ಸಲ್ಲಿಸಬೇಕು ಎಂದು ಅರ್ಜಿದಾರರಿಗೆ ಸಲಹೆ ನೀಡಿದೆ.
ವಿಡಿಯೊ ನೋಡಿ: ಕಾನ ಬಾಳ ಚತುಷ್ಪಥ ರಸ್ತೆ ಕಾಮಗಾರಿ ಭ್ರಷ್ಟಾಚಾರ – ತನಿಖೆಗೆ ಡಿವೈಎಫ್ಐ ಆಗ್ರಹ Janashakthi Media