ಕಾಡುವ ವಲಸಿಗ ಫಿಲಂಗಳು -1: ‘ಕಾಣದ ನಾಡಿನತ್ತ’ ಮತ್ತು ‘ಸುಲೈಮಾನ್ ಕತೆ’

  • ವಸಂತರಾಜ ಎನ್.ಕೆ.
ಈ ಬಾರಿಯ ಬೆಂಗಳೂರು ಚಿತ್ರೋತ್ಸವದಲ್ಲಿ ಹಲವು ಫಿಲಂಗಳಲ್ಲಿ ಒಂದೇ ಥೀಮ್ ಮತ್ತೆ ಮತ್ತೆ ಒತ್ತರಿಸಿ ಬರುವಂತೆ ಕಾಣುತ್ತಿತ್ತು.  ನಿರಾಶ್ರಿತ ವಲಸಿಗರು ವಲಸೆ ಹೋಗುವಾಗ ಮತ್ತು ಹೋದ ನಂತರವೂ ಎದುರಿಸುತ್ತಿರುವ ದಾರುಣ ಸ್ಥಿತಿಯನ್ನು ಬೇರೆ ಬೇರೆ ಆಯಾಮಗಳಲ್ಲಿ ಕಾಣುವ ಥೀಮ್ ಅದು.  ಕಳೆದ ಹಲವು ವರ್ಷಗಳಿಂದ ನಿರಾಶ್ರಿತ ವಲಸಿಗರ ಕುರಿತು ಫಿಲಂಗಳು ಬರುತ್ತಿದ್ದು ಅದು ಬರಿಯ ಥೀಮ್ ಮಾತ್ರವಲ್ಲ, ಒಂದು ಸಿನಿಮಾ ಜೋನರ್ (ಸಿನಿಮಾ ಪ್ರಕಾರ) ಆದಂತಿದೆ.  ಜಗತ್ತಿನಾದ್ಯಂತ ವಲಸಿಗರ ಸಮಸ್ಯೆ ಬೃಹದಾಕಾರ ಪಡೆದುಕೊಂಡಿರುವ ಸನ್ನಿವೇಶದಲ್ಲಿ ಬಹುಶಃ ಇದು ಸಹಜವಾಗಿದೆ.  ಈ 4 ಚಿತ್ರಗಳು ತೆರೆದಿಡುವ ವಲಸಿಗರ ದಾರುಣ ಸ್ಥಿತಿ ಬೆಚ್ಚಿ ಬೀಳಿಸುವಂಥದ್ದು, ಯಾರನ್ನಾದರೂ ಆಳವಾಗಿ ಕಲುಕುವಂಥದ್ದು. ಮರೆಯಲಾಗದ್ದು.  ಕಾಡುವ ವಲಸಿಗ ಫಿಲಂಗಳ ಚಿತ್ರಣ ಕೊಡುವ ಈ ಬರಹದ ಭಾಗ-1 ರಲ್ಲಿ  ‘ಕಾಣದ ನಾಡಿನತ್ತಎಂಬ ಅಥೇನ್ಸಿನಲ್ಲಿ ಪ್ಯಾಲೆಸ್ಟೀನ್  ವಲಸಿಗರ ಮತ್ತು ‘ಸುಲೈಮಾನ್ ಕತೆ’ ಎಂಬ ಫ್ರಾನ್ಸಿನಲ್ಲಿರುವ ಗಿನಿ ವಲಸಿಗನ ದಾರುಣ ಕತೆ.

ಈ ಬಾರಿಯ ಅಂದರೆ 16ನೇ ಬೆಂಗಳೂರು ಚಿತ್ರೋತ್ಸವದಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ನನಗೆ ಅತ್ಯಂತ ಹೆಚ್ಚು 22 ಫಿಲಂ ನೋಡಲು ಸಾಧ್ಯವಾಯಿತು.  ಅವುಗಳಲ್ಲಿ ಹಲವು ಫಿಲಂಗಳಲ್ಲಿ ಒಂದೇ ಥೀಮ್ ಮತ್ತೆ ಮತ್ತೆ ಒತ್ತರಿಸಿ ಬರುವಂತೆ ಕಾಣುತ್ತಿತ್ತು.  ಅದು ನಿರಾಶ್ರಿತ ವಲಸಿಗರು ವಲಸೆ ಹೋಗುವಾಗ ಮತ್ತು ಹೋದ ನಂತರವೂ ಎದುರಿಸುತ್ತಿರುವ ದಾರುಣ ಸ್ಥಿತಿಯನ್ನು ಬೇರೆ ಬೇರೆ ಆಯಾಮಗಳಲ್ಲಿ ಕಾಣುವ ಥೀಮ್,  ನಾನು ನೋಡಿದ 22 ಫಿಲಂಗಳಲ್ಲೇ  ಇಂತಹ 4 ಫಿಲಂಗಳಿದ್ದವು.  ಫಿಲ್ಮೋತ್ಸವದಲ್ಲಿ ಇನ್ನೂ ಕೆಲವು ಫಿಲಂಗಳಿದ್ದವು. ಈ 4 ಚಿತ್ರಗಳು ತೆರೆದಿಡುವ ವಲಸಿಗರ ದಾರುಣ ಸ್ಥಿತಿ ಬೆಚ್ಚಿ ಬೀಳಿಸುವಂಥದ್ದು, ಯಾರನ್ನಾದರೂ ಆಳವಾಗಿ ಕಲುಕುವಂಥದ್ದು. ಮರೆಯಲಾಗದ್ದು. ಕಳೆದ ಹಲವು ವರ್ಷಗಳಿಂದ ನಿರಾಶ್ರಿತ ವಲಸಿಗರ ಕುರಿತು ಫಿಲಂಗಳು ಬರುತ್ತಿದ್ದು ಅದು ಬರಿಯ ಥೀಮ್ ಮಾತ್ರವಲ್ಲ, ಒಂದು ಸಿನಿಮಾ ಜೋನರ್ (ಸಿನಿಮಾ ಪ್ರಕಾರ) ಆದಂತಿದೆ. ಈ ನಾಲ್ಕು ಫಿಲಂಗಳೂ ಅನಾವರಣ ಗೊಳಿಸುವ ದಾರುಣ ಮಾನವೀಯ ಸ್ಥಿತಿಯ ಚಿತ್ರಣ ಇಲ್ಲಿದೆ.

ಜಗತ್ತಿನಾದ್ಯಂತ ವಲಸಿಗರ ಸಮಸ್ಯೆ ಬೃಹದಾಕಾರ ಪಡೆದುಕೊಂಡಿರುವ ಸನ್ನಿವೇಶದಲ್ಲಿ ಬಹುಶಃ ಇದು ಸಹಜವಾಗಿದೆ.  ಉತ್ತರ ಅಮೆರಿಕ ಮತ್ತು ಯುರೋಪಿನ ವಿಕಸಿತ ದೇಶಗಳಲ್ಲಿ ಇದು ರಾಜಕೀಯ ಅಲ್ಲೋಲ ಕಲ್ಲೋಲ ತಂದಿದೆ. ಆಫ್ರಿಕಾದಿಂದ ಯುರೋಪಿನತ್ತ ಮತ್ತು ಲ್ಯಾಟಿನ್ ಅಮೆರಿಕದಿಂದ ಹಾಗೂ ಇಡೀ ಜಗತ್ತಿನಿಂದ ಯು.ಎಸ್ ನತ್ತ ಹೋಗಲು ಯತ್ನಿಸುತ್ತಿರುವ ವಲಸಿಗರು ಪಡುತ್ತಿರುವ ಪಾಡು ಮತ್ತು ದಾರುಣ ಅಮಾನವೀಯ  ಸ್ಥಿತಿ ಜಗತಿನ ಗಮನ ಸೆಳೆದಿದೆ. ಭಾರತದ ಸಾವಿರಾರು ‘ಕಾನೂನು ಬಾಹಿರ’ ವಲಸಿಗರನ್ನು ಟ್ರಂಪ್ ಆಡಳಿತ ಅಪರಾಧಿಗಳಂತೆ ಕೈ ಕಾಲುಗಳನ್ನು ಸರಪಣಿಗಳಲ್ಲಿ ಕಟ್ಟಿ ಮಿಲಿಟರಿ ಸಾಗಾಣಿಕೆ ವಿಮಾನದಲ್ಲಿ ಹಾಕಿ ಕಳಿಸಿರುವ ದೃಶ್ಯಗಳ ಹಿನ್ನೆಲೆಯಲ್ಲಿ ನಮಗೂ ಇವು ದೂರದ ಸಮಸ್ಯೆ ಅನಿಸುತ್ತಿಲ್ಲ.

ಇದನ್ನೂ ಓದಿ: ಖೋಟಾನೋಟು ದಂಧೆಯ ಅಡ್ಡೆ ಮೇಲೆ ಪೊಲೀಸರು ದಾಳಿ; ನಾಲ್ವರ ಬಂಧನ

ನಿರಾಶ್ರಿತ ವಲಸಿಗರ ಕುರಿತು 16ನೇ ಬೆಂಗಳೂರು ಚಿತ್ರೋತ್ಸವದದಲ್ಲಿ ನಾನು ನೋಡಿದ ಫಿಲಂಗಳೆಂದರೆ ಅರೆಬಿಕ್ /ಗ್ರೀಕ್  ಫಿಲಂ ‘ಟು ಎ ಲ್ಯಾಂಡ್ ಅನ್ ನೋನ್’ (ಕಾಣದ ನಾಡಿನತ್ತ), ಫುಲಾ/ಮಲಿಂಕೆ/ಫ್ರೆಂಚ್ ಫಿಲಂ “ದಿ ಸ್ಟೋರಿ ಆಫ್ ಸುಲೈಮಾನ್” (ಸುಲೈಮಾನ್ ನ ಕತೆ), ಸ್ಪಾನಿಶ್/ಫ್ರೆಂಚ್ ಫಿಲಂ  “ದಿ ಪಾರ್ಟಿ ಈಸ್ ಓವರ್” (ಪಾರ್ಟಿ ಮುಗಿಯಿತು), ಮತ್ತು ಅರೆಬಿಕ್/ಸೊಮಾಲಿ/ಇಂಗ್ಲಿಷ್ ಫಿಲಂ “ಸಾಮಿಯ”.  ಈ ನಾಲ್ಕು ಯೂರೋಪ್ ಗೆ ವಲಸೆ ಹೋಗುತ್ತಿರುವ ಅಥವಾ ಹೋಗಿರುವ ಉತ್ತರ ಆಫ್ರಿಕಾ ಅಥವಾ ಪಶ್ಚಿಮ ಏಶ್ಯಾದ ವಲಸಿಗರ ದಾರುಣ ಕತೆಗಳ ಚಿತ್ರಣ.

  1. ‘ಟು ಎ ಲ್ಯಾಂಡ್ ಅನ್ ನೋನ್’ (ಕಾಣದ ನಾಡಿನತ್ತ)

ಪ್ರಸಿದ್ಧ ಚಿಂತಕ ಎಡ್ವರ್ಡ್ ಸೈದ್  ಅವರ ಈ ಅರ್ಥಗರ್ಭಿತ ಮಾತಿನಿಂದ ಈ ಫಿಲಂ ಶುರುವಾಗುತ್ತದೆ.  “ಇದು ಪ್ಯಾಲೆಸ್ಟೀನ್ನರ ಹಣೆಬರಹವಿದ್ದಂತೆ ಕಾಣುತ್ತದೆ. ಅವರು ಎಂದೂ ಎಲ್ಲಿಗೆ ಹೊರಡುತ್ತಾರೋ ಅಲ್ಲಿಗೆ ತಲುಪುವುದೇ ಇಲ್ಲ, ಬದಲಿಗೆ ದೂರದ ಅನಿರೀಕ್ಷಿತ ಕಾಣದ ಎಲ್ಲಿಗೋ ತಲುಪುತ್ತಾರೆ” (In a way, it’s sort of the fate of Palestinians, not to end up where they started, but somewhere unexpected and far away.”)  ಇದು ಈ ಫಿಲಂ ನ ಸಾರ ಕೂಡಾ.

ಲೆಬನಾನ್ ನಿರಾಶ್ರಿತ ಶಿಬಿರದಲ್ಲಿ ಬೆಳೆದ ಜರ್ಮನಿ ಗೆ ಹೊರಟ ಸೋದರ ಸಂಬಂಧಿಗಳಾದ ಇಬ್ಬರು ಪ್ಯಾಲೆಸ್ಟೀನ್ ಯುವಕರು ಗ್ರೀಸ್ ನ ಅಥೆನ್ಸ್ ನಲ್ಲಿ ಸಿಲುಕಿಕೊಂಡಿದ್ದಾರೆ.  ಹೇಗಾದರೂ ಜರ್ಮನಿ ತಲುಪಬೇಕೆಂದು ಗಂಭೀರ ಆದರೆ ಹತಾಶ ಪ್ರಯತ್ನ ನಡೆಸಿದ್ದಾರೆ. ಅವರಲ್ಲಿ ಹಿರಿಯ ಚಟಿಲಾ ಜರ್ಮನಿಯಲ್ಲಿ ಅರೇಬಿಕ್ ರೆಸ್ಟೋರೆಂಟ್ ಒಂದನ್ನು ತೆರೆದು ಹೆಂಡತಿ ಮತ್ತು ಮಗನನ್ನು ಕರೆದುಕೊಂಡು ಬಂದು ಒಳ್ಳೆಯ ಜೀವನವೊಂದರ  ಕನಸು ಕಾಣುತ್ತಿರುವವನು.  ಚಟಿಲಾ 1982ರಲ್ಲಿ ಇಸ್ರೇಲಿ ಪಡೆಗಳಿಂದ ಭೀಕರ ನರಮೇಧ ನಡೆದ  ಪ್ಯಾಲೇಸ್ಟೈನ್ನರ ನಿರಾಶ್ರಿತ ಕ್ಯಾಂಪಿನ ಹೆಸರೂ ಕೂಡಾ. ಚಟಿಲಾ ದೃಢ ಮನಸ್ಸಿನ ಆಶಾವಾದಿ, ಚಾಲಾಕಿ ಮತ್ತು ಚಾಣಾಕ್ಷ.  ಅಥೇನ್ಸ್ ನಿಂದ ಜರ್ಮನಿಗೆ ಹೋಗಲು ಹೊಸ ಹೊಸ ಯೋಜನೆಗಳನ್ನು ಹೆಣೆಯುತ್ತಿರುತ್ತಾನೆ. ಅದಕ್ಕಾಗಿ ಕಠೋರ ನಿರ್ಣಯಗಳನ್ನು ತೆಗೆದುಕೊಳ್ಳಬಲ್ಲ.  ಚಟಿಲಾ ನನ್ನು ಅನುಸರಿಸುವ ಆದರೆ ಅಳ್ಳಕ ಸ್ವಭಾವದ ಸ್ವಲ್ಪ ಕಿರಿಯನಾದ ರೇಡಾ ಬೇರೆಯವರ ಪ್ರಭಾವಕ್ಕೊಳಗಾಗಬಲ್ಲ. ಮಾದಕ ದ್ರವ್ಯ ವ್ಯಸನಿ, ಚಟಿಲಾನ ಯೋಜನೆಯ ಜಾರಿಯಲ್ಲಿ ಹೆಚ್ಚಾಗಿ ದುರ್ಬಲ ಕೊಂಡಿ.

ಕಾನೂನು ಬಾಹಿರವಾಗಿ ವಾಸಿಸುತ್ತಾ ಕೆಲಸವಿಲ್ಲದೆ ಉದ್ಯೋಗವಿಲ್ಲದೆ ಸ್ಥಳೀಯರ ಪಿಕ್ ಪಾಕೆಟ್, ಅಂಗಡಿಗಳಲ್ಲಿ ಕಳ್ಳತನ, ದೇಹ ಮಾರಿ ಸಹ ಹೇಗೋ ಜೀವನ ಮಾಡುವ ಈ ಸೋದರರು ವಾಸಿಸುವ ಪಾಳು ಬಿದ್ದ  ಮನೆ ಅಥೇನ್ಸ್ ನ ಕೊಂಪೆಯೊಂದರಲ್ಲಿದೆ. ಅವರು ಒಂಟಿಯಲ್ಲ. ಅವರಂತೆ ಬದುಕುತ್ತಿರುವ ಪ್ಯಾಲೆಸ್ಟೀನರ ಗುಂಪು, ಅವರೊಳಗೆ ಪರಸ್ಪರ ಸೋದರತ್ವವೂ ಜಗಳಗಳು ಅವರ ಜೀವನದ ಭಾಗ. ಹೊಸದಾಗಿ ಬಂದ ಪ್ಯಾಲೆಸ್ಟೀನ್ ಹದಿಹರೆಯದ ಹುಡುಗ ಮಲಿಕ್ ಮತ್ತು ಒಂಟಿ ಗ್ರೀಕ್ ಮಹಿಳೆ, ಉದ್ಯೋಗ ಪಡೆಯಲು ಅಥವಾ ಉದ್ಯೋಗಗಳಿರುವ ಯುರೋಪಿನ ಬೇರೆಡೆಗೆ ಹೋಗಲು ಬೇಕಾದ ನಕಲಿ ಪಾಸ್ ಪೋರ್ಟ್ ಮಾಡಿಸುವ ಏಜೆಂಟ್ ಸಹ ಅವರ ‘ಪುಟ್ಟ ಲೋಕ’ದ ಭಾಗವಾಗುತ್ತಾರೆ. ನಕಲಿ ಪಾಸ್ ಪೋರ್ಟಿಗೆ ಏಜೆಂಟ್ ಕೇಳುತ್ತಿರುವ ದೊಡ್ಡ ಮೊತ್ತ ಹೊಂದಿಸುವುದು ಚಟಿಲಾನ ನಿತ್ಯ ಯೋಜನೆಯ ಗುರಿ.

ಒಂದು ಬಾರಿ ಕೂಡಿಟ್ಟದ್ದನ್ನು ರೇಡಾ ಮಾದಕ ದ್ರವ್ಯದ ಮೇಲೆ ಖರ್ಚು ಮಾಡಿಬಿಟ್ಟಾಗ ಬೇಗ ಹಣ ಮಾಡಲು ಒಂದು ಅಪಾಯಕಾರಿ ಯೋಜನೆಯನ್ನು ಚಟಿಲಾ ಹೂಡುತ್ತಾನೆ. ಇದಕ್ಕಾಗಿ ಹುಡುಗ ಮಲಿಕ್, ಇಟಲಿಯಲ್ಲಿರುವ ಅವನ ಅತ್ತೆ, ಮತ್ತು ಗ್ರೀಕ್ ಮಹಿಳೆ – ಇವರನ್ನು ಒಳಗೊಳ್ಳುವ  ಯೋಜನೆ ವಿಫಲವಾದಾಗ ಇನ್ನಷ್ಟು ಅಪಾಯಕಾರಿ ಅಪರಾಧಿ ಯೋಜನೆ ಹೂಡುತ್ತಾನೆ. ಇದರಲ್ಲಿ ಚಟಿಲಾ, ರೇಡಾ ಮಾತ್ರವಲ್ಲದೆ ಪಾಸ್ ಪೋರ್ಟ್ ಏಜೆಂಟ್, ಇತರ ಪ್ಯಾಲೆಸ್ಟೀನ್ ರನ್ನೂ ಸೇರಿಸಿಕೊಳ್ಳುತ್ತಾನೆ. ಈ ಯೋಜನೆಯ ಭಾಗವಾಗಿ ಸಿರಿಯಾದ ಅರಬ್ ಸೋದರ ವಲಸಿಗರನ್ನು ಹಿಂಸಿಸಲೂ ಹೇಸುವುದಿಲ್ಲ. ಈ  ಯೋಜನೆಯ ಜಾರಿಯ ಎರಡನೆಯ ಭಾಗ ಕ್ರೈಮ್ ಥ್ರಿಲ್ಲರ್ ನಂತೆ ಓಡುತ್ತದೆ.

ಚಟಿಲಾ ಮತ್ತು ರೇಡಾ ಅವರ ಎರಡನೇಯ ಭಾಗದ ಅಪರಾಧಿ ಕೃತ್ಯಗಳ ನಂತರವೂ ಅವರನ್ನು ಇಂತಹ ಹತಾಶ ಕೃತ್ಯಗಳಿಗೆ ತಳ್ಳುವ ಅವರ ಬದುಕಿನ ದಾರುಣ ಸ್ಥಿತಿಯ ಬಗ್ಗೆ ಉಕ್ಕುವ ವಿಷಾದವೇ ಫಿಲಂ ನ ಸ್ಥಾಯೀ ಭಾವ. ಇತ್ತೀಚಿನ ಗಾಜಾ ನರಮೇಧ  ಮತ್ತು ಎಲ್ಲ ದೇಶಗಳಲ್ಲೂ ‘ಕಾನೂನುಬಾಹಿರ ನಿರಾಶ್ರಿತ ವಲಸಿಗರ’ ಪಾಡು ಜನಜನಿತವಾಗಿರುವ ಹಿನ್ನೆಲೆಯಲ್ಲಿ ಈ ಫಿಲಂ ಅತ್ಯಂತ ಗಾಢವಾಗಿ ತಟ್ಟುತ್ತದೆ. ಹದಿಹರೆಯದ ಹುಡುಗ ಮಲಿಕ್ ನಿಗೆ ಸಹಾಯ ಮಾಡಬೇಕೋ ಬೇಡವೋ ಎಂಬ ಸಂದಿಗ್ಧತೆಯ ನಂತರ ಅವನನ್ನು ಕುಟುಂಬದ ಸದಸ್ಯನಂತೆ ಕಾಣುವ, ರೇಡಾ ನಿಗೆ ಎಷ್ಟು ಬಯ್ದರೂ ಅವನನ್ನು ಚಟಿಲಾ ಸಮಾಧಾನಿಸಿ ರಕ್ಷಿಸುವ ಕೆಲವೇ ದೃಶ್ಯಗಳನ್ನು ಬಿಟ್ಟರೆ, ತಾಯ್ನಾಡಿಗೆ ಮರಳಲಾಗದ, ಹೊಸ ನಾಡಿನಲ್ಲಿ ಬಾಳು ಕಟ್ಟಿಕೊಳ್ಳುವ ಪ್ರಯತ್ನ ಮತ್ತೆ ಮತ್ತೆ ವಿಫಲವಾಗುವ ದುಗುಡ ಫಿಲಂ ನುದ್ದಕ್ಕೂ ಕಾಡುತ್ತದೆ. ಎಲ್ಲರೂ, ಎಲ್ಲವೂ ಹೆಜ್ಜೆ ಹೆಜ್ಜೆಗೂ ಈ ನಿರಾಶ್ರಿತ ವಲಸಿಗ ಪ್ಯಾಲೆಸ್ಟೀನ್ ರ ಪ್ರಯತ್ನವನ್ನು ವಿಫಲಗೊಳಿಸಲು ಕಾದಿವೆ ಎನ್ನುವಂತಿದೆ.

ಸ್ವತಃ ಪ್ಯಾಲೆಸ್ಟೀನ್ ರಾದ ನಿರ್ದೇಶಕ, ಮಹದಿ ಫ್ಲೆಫೆಲ್ ತಾಯ್ನಾಡನ್ನು ಕಳೆದುಕೊಂಡು ಕಾಣದ ನಾಡಿನಲ್ಲಿ ಬದುಕು ಕಟ್ಟಿಕೊಳ್ಳುವ ಪ್ರಯತ್ನಿಸುತ್ತಿರುವ ಆದರೆ ಎಲ್ಲೂ ನೆಲೆ ಊರಲು ವಿಫಲವಾಗುತ್ತಿರುವ ಪ್ಯಾಲೆಸ್ಟೀನ್ ರ ಹತಾಶ ದಾರುಣ ಸ್ಥಿತಿಯನ್ನು ಮನ ಮುಟ್ಟುವ ಕಲಾತ್ಮಕ ರೀತಿಯಲ್ಲಿ ಸಶಕ್ತವಾಗಿ ಕಟ್ಟಿಕೊಟ್ಟಿದ್ದಾರೆ. ಚಟಿಲಾ ಆಗಿ ಮಹಮೂದ್ ಬಕ್ರಿ, ರೇಡಾ ಆಗಿ ಆರಂ ಸಬಾ, ಪಾಸ್ ಪೋರ್ಟ್ ಏಜೆಂಟ್ ಮತ್ತು ಖ್ಯಾತ ಪ್ಯಾಲೆಸ್ಟೀನ್ ಕವಿ ದರ್ವೇಶ್ ಕವನ ವಾಚಿಸಿ ತನ್ನದೇ ಕವನ ಎನ್ನುವ ನಕಲಿ ಕವಿ ತಮ್ಮ ಪಾತ್ರಗಳಿಗ ಜೀವ ತುಬಿದ್ದಾರೆ.

 

  1. “ದಿ ಸ್ಟೋರಿ ಆಫ್ ಸುಲೈಮಾನ್” (ಸುಲೈಮಾನ್ ನ ಕತೆ)

ಇದು ಪಶ್ಚಿಮ ಆಫ್ರಿಕಾದ ಮಾಜಿ ಫ್ರೆಂಚ್ ವಸಾಹತು ಗಿನಿ ಯಿಂದ ಫ್ರಾನ್ಸಿಗೆ ಬಂದು ಈಗ ಸೈಕಲ್ ಮೇಲೆ ಆಹಾರ ಡೆಲಿವರಿ ಮಾಡುವ ಆಪ್ ಕಾರ್ಮಿಕ ಸುಲೈಮಾನ್ ನ ಕತೆ. ಫಿಲಂ ನ ಬಹುಭಾಗ ನಾವು ಸುಲೈಮಾನ್ ಜತೆಗೆ ಪ್ಯಾರೀಸ್ ನ ಸೈಕಲಿನ ಮೇಲೆ ಮನೆಗಳಿಗೂ ರೆಸ್ಟೋರೆಂಟುಗಳ ನಡುವೆ ಉಸಿರುಗಟ್ಟಿಸುವ ವೇಗದಲ್ಲಿ ಸುತ್ತುತ್ತೇವೆ. ಸುಲೈಮಾನಿನ ಕಣ್ಣಿಂದ ಇಡೀ ಪ್ಯಾರೀಸ್ ಕಾಣುತ್ತೇವೆ. ಅವನಿಗೆ (ಹಾಗಾಗಿ ನಮಗೂ) ಪ್ಯಾರೀಸ್ ನ ಥಳಕು-ಬಳಕು, ಚಾರಿತ್ರಿಕ ಕಟ್ಟಡಗಳು ಕಾಣುವುದಿಲ್ಲ. ದಟ್ಟ ಟ್ರಾಫಿಕ್ ನಡುವೆ ಅಫಘಾತ ಆಗದಂತೆ ನುಗ್ಗಿಕೊಂಡು ವೇಗವಾಗಿ ಹೋಗಿ ದಿನಕ್ಕೆ ಗರಿಷ್ಠ ಆರ್ಡರುಗಳನ್ನು ಪೂರೈಸುವುದು ಒಂದೇ ಅವನ ಗುರಿ. ಅಷ್ಟು ಮಾತ್ರ ಅವನಿಗೂ ಹಾಗಾಗಿ ನಮಗೂ ಕಾಣುವುದು.

ನಸುಕಿನಲ್ಲಿ ಎದ್ದು, ಪ್ಯಾರೀಸ್ ನಗರದಾಚಿನ ಅಂಚಿನಲ್ಲಿರುವ “ಮನೆ ಇಲ್ಲದವರ ತುರ್ತು ಆಶ್ರಯ ತಾಣ”ಕ್ಕೆ ವಾಪಸು ಸೇರಿಕೊಳ್ಳಲು ಸೆಕೆಂಡುಗಳ ಮೊದಲು ರಾತ್ರಿ ಕೊನೆಯ ಬಸ್ಸು ಹಿಡಿಯುವವರೆಗೆ ಕೆಲಸ ಮಾಡುವ ಸುಲೈಮಾನ್ ‘ಕಾನೂನು ಬಾಹಿರ ವಲಸಿಗ’. ಪಶ್ಚಿಮ ಆಫ್ರಿಕಾದ ಗಿನಿಯಿಂದ ನಡಿಗೆ, ಸಾಗಾಣಿಕೆ ಲಾರಿ, ಬೋಟ್ ಇತ್ಯಾದಿಗಳಲ್ಲಿ ಪಡಬಾರದ ಪಾಡು ಪಟ್ಟು ಬಂದಿರುವ ಆತನಿಗೆ ಕೊವಿದ್ ಕಾಲದಲ್ಲಿ ವಿಶೇಷವಾಗಿ ಅನುಮತಿಸಲಾದ ಆಹಾರ ಡೆಲಿವರಿ ಆಪ್ ಕಾರ್ಮಿಕನ ಕೆಲಸ ಸಿಕ್ಕಿದೆ. ಕಾನೂನುಬದ್ಧ ವಲಸಿಗ’ ನಿಂದ ಪಡೆದ ಸೈಕಲ್ ಮತ್ತು ಆಪ್ ಗೆ ರಿಜಿಸ್ಟರ್ ಮಾಡಿರುವ ಕಾರ್ಮಿಕನ ಬ್ಯಾಜ್ ‘ಎರಡಕ್ಕೂ ಅವನು ತನ್ನ ಕೂಲಿಯ ದೊಡ್ಡ ಭಾಗದ ಹಣ ತೆರಬೇಕು. ಕೂಲಿ ಹಣ ಪಡೆಯಲು ಅವನಿಗೆ ಗೋಗರೆಯಬೇಕು. ತನ್ನ ದೈನಂದಿನ ಆವಶ್ಯಕತೆ ಪೂರೈಕೆಯಲ್ಲದೆ, ಮನೆಗೆ ತಾಯಿಯ ಆರೈಕೆಗೆ ಕಳಿಸಿಕೊಡುವುದಲ್ಲದೆ, ಕಾನೂನು ಬದ್ಧವಾಗಿ ಫ್ರಾನ್ಸಿನಲ್ಲಿ ಆಶ್ರಯ ಪಡೆಯುವುದಕ್ಕೆ ಕಾಗದ ಪತ್ರ ತಯಾರಿಗೆ ದೊಡ್ಡ ಮೊತ್ತದ ಹಣ ಕೂಡಿಸಬೇಕು.

ಅವನಿಗೆ ಎರಡು ದಿನಗಳಲ್ಲಿ ಫ್ರಾನ್ಸ್ ಸರಕಾರದ ವಲಸೆ ವಿಭಾಗದ ಜತೆ ಸಂದರ್ಶನವಿದೆ. ಅದರಲ್ಲಿ ಮಂಜೂರಾದರೆ ಸರಿ, ಇಲ್ಲವಾದರೆ ಒಂದು ತಿಂಗಳಲ್ಲಿ ಊರಿಗೆ ಮರಳಬೇಕು. ಅವನ ಭವಿಷ್ಯತ್ತೇ ಸಂದರ್ಶನದ ಮೇಲೆ ಅವಲಂಬಿಸಿದೆ. ಆ ಎರಡು ದಿನಗಳಲ್ಲಿ ಸುಲೈಮಾನ್ ಉದ್ವೇಗಭರಿತ ಜೀವನ ಸ್ಥಿತಿಯನ್ನು ಮತ್ತು ಸಂದರ್ಶನವನ್ನು ಫಿಲಂ ತೋರಿಸುತ್ತದೆ. ಅವನಿಗೆ ಸಂದರ್ಶನಕ್ಕೆ ಬೇಕಾದ ಮಾಹಿತಿ ಸಿಕ್ಕಿದೆ,  ಆದರೆ ದುಡ್ಡು ಕೊಟ್ಟಿಲ್ಲ ಅಂತ ದೇಶಬಾಂಧವ ಏಜೆಂಟನಿಂದ ಅದಕ್ಕೆ ಬೇಕಾದ ಕಾಗದ ಪತ್ರ ಸಿಕ್ಕಿಲ್ಲ. ಈ ವಾರದ ಕೂಲಿ ಸಿಕ್ಕಿ, ಅದನ್ನು ಕೊಟ್ಟರೆ ಮಾತ್ರ ಸಂದರ್ಶನದ ಮೊದಲು ಕಾಗದ ಪತ್ರ ಸಿಗುತ್ತದೆ. ಕೂಲಿಯನ್ನು ಮೊದಲೇ ಕೊಡಲು ಒಪ್ಪಿಸಲು ಕಂಪನಿ ಮತ್ತು ಬ್ಯಾಜ್ ಒಡೆಯನೊಂದಿಗೆ ಸುಲೈಮಾನ್ ಸತತ ಪ್ರಯತ್ನ ಮಾಡುತ್ತಾನೆ. ಆದರೆ ಈ ಅವಧಿಯಲ್ಲಿ ನಡೆಯುವ ಸರಣಿ ಘಟನೆಗಳು ಅವನ ಉದ್ವೇಗ ಆತಂಕಗಳನ್ನು ಇನ್ನಷ್ಟು ಹೆಚ್ಚಿಸುತ್ತವೆ.

ದ್ವೇಗದ ಭರದಲ್ಲಿ ಕಾರಿನೊಂದಿಗೆ ಅಫಘಾತವಾಗಿ ಸೈಕಲ್ ಗೂ, ಡೆಲಿವರಿ ಮಾಡಬೇಕಿದ್ದ  ಒಂದು ಆಹಾರ ಸಾಮಗ್ರಿಗೂ ಸ್ವಲ್ಪ ಡ್ಯಾಮೇಜ್ ಆಗಿ ಒಬ್ಬ ಗ್ರಾಹಕಿ ಅದನ್ನು ಸ್ವೀಕರಿಸುವುದಿಲ್ಲ. ಡೆಲಿವರಿ ಅಕೌಂಟ್ ಸ್ಥಗಿತವಾಗುತ್ತದೆ. ಅದನ್ನೇ ನೆಪ ಮಾಡಿಕೊಂಡು ‘ಕಾನೂನುಬದ್ಧ ವಲಸಿಗ’ ಅವನ ಬಾಕಿ ಕೂಲಿಯನ್ನೇ ಕೊಡಲು ನಿರಾಕರಿಸುತ್ತಾನೆ. ಇದು ದೈಹಿಕ ಘರ್ಷಣೆಗೆ ಕಾರಣವಾಗಿ ಸುಲೈಮಾನ್ ಗಾಯಗೊಳ್ಳುತ್ತಾನೆ. ಪೂರ್ಣ ದುಡ್ಡು ಕೊಡಲು ಸಾಧ್ಯವಾಗದಿದ್ದರೂ  ಗೋಗರೆದು ದೇಶಬಾಂಧವ ಏಜೆಂಟನಿಂದ ಕಾಗದ ಪತ್ರ ಪಡೆದುಕೊಳ್ಳುತ್ತಾನೆ. ಈ ನಡುವೆ ಅವನ ಪ್ರೇಯಸಿಯ ಕರೆ ಬಂದು ‘ನನಗೆ ಒಬ್ಬ ಇಂಜಿನೀಯರ್ ನಿಂದ ಮದುವೆ ಆಫರ್ ಬಂದಿದೆ. ಏನು ಮಾಡಲಿ’ ಅಂತ ಹೇಳುವುದು ಅವನನ್ನು ಇನ್ನಷ್ಟು ಜರ್ಝರಿತನಾಗಿಸುತ್ತದೆ.

ತನ್ನ ದೇಶದ ಸರಕಾರದ ವಿರುದ್ಧ ರಾಜಕೀಯ ಪ್ರತಿಭಟನೆ ಮತ್ತು ಅದರ ಪರಿಣಾಮದ ರಾಜಕೀಯ ದಮನದ ಕಾರಣದಿಂದ ದೇಶ ಬಿಡಬೇಕಾಯಿತು. ಹಾಗಾಗಿ ರಾಜಕೀಯ ಸಂತ್ರಸ್ತನಾಗಿ ಫ್ರಾನ್ಸ್ ನಲ್ಲಿ ಆಶ್ರಯ ಕೊಡಬೇಕು ಎಂಬ ಕತೆ ಹೇಳಲು ದೇಶಬಾಂಧವ ಏಜೆಂಟನ ಸಲಹೆ. ವಲಸೆ ಇಲಾಖೆಯ ಅಧಿಕಾರಿಗೆ ಹೇಳುವ “ಸುಲೈಮಾನ್ ನ ಕಥೆ” ಎಂಬುದೇ ಫಿಲಂ ನ ಶೀರ್ಷಿಕೆಯ ಅರ್ಥ. ಅದಕ್ಕೆ ಬೇಕಾದ ಕಾಗದ ಪತ್ರ ಮತ್ತು ಮಾಹಿತಿ ಕೊನೆಗೂ ಸಿಕ್ಕಿದೆ. ಸುಲೈಮಾನ್ ಸರಕಾರ-ವಿರೋಧಿ ರಾಜಕೀಯ ಸಂಘಟನೆಯೊಂದರ ಸ್ಥಳೀಯ ಘಟಕವೊಂದರ ಪದಾಧಿಕಾರಿಯಾಗಿದ್ದರ (ಫೇಕ್) ಪತ್ರ ಕೊಡುತ್ತಾನೆ.  ಯಾವ ಪ್ರತಿಭಟನಾ ಪ್ರದರ್ಶನದಲ್ಲಿ ಬಂಧಿಸಲಾಯಿತು, ಯಾವ ಜೈಲಿನಲ್ಲಿಡಲಾಯಿತು, ಇತರ ಪದಾಧಿಕಾರಿಗಳು, ಮೇಲಿನ ಹಂತದ ಅಧಿಕಾರಿಗಳ ಹೆಸರುಗಳು ಇತ್ಯಾದಿ (ವಾಸ್ತವವೆನಿಸುವ ಆದರೆ ಅವನ ಸಂದರ್ಭದಲ್ಲಿ ಫೇಕ್) ಮಾಹಿತಿಗಳನ್ನು ಅವನಿಗೆ ಕೊಡಲಾಗಿದೆ.

ಆದರೆ ಸುಲೈಮಾನ್ ನಿಜವಾಗಿಯೂ ರಾಜಕೀಯ ಕಾರ್ಯಕರ್ತನಾಗಿರುವುದಿಲ್ಲ. ಸುಳ್ಳು ಯಾಕೆ ಹೇಳಲಿ? ನಿಜ ಹೇಳಿದರೇನು ಎಂಬ ಸುಲೈಮಾನ್ ಪ್ರಶ್ನೆಗೆ ಏಜೆಂಟ ಗದರುತ್ತಾನೆ. ಸುಮ್ಮನೆ ಹೇಳಿಕೊಟ್ಟಷ್ಟು ಹೇಳು. ಈ ಕತೆ ಆಶ್ರಯ ಪಡಲು ಒಂದೇ ಮಾರ್ಗವೆನ್ನುತ್ತಾನೆ. ಏಜೆಂಟ್ ಇದೇ ಕತೆ ಎಲ್ಲರಿಗೂ ಕೊಡುತ್ತಿದ್ದಾನೆ. ಹಾಗಾಗಿ ಹಲವರ ಅರ್ಜಿ ತಿರಸ್ಕರಿಸಲಾಗಿದೆ ಎಂದು ಸುಲೈಮಾನ್  ಕೇಳಿರುತ್ತಾನೆ. ಅವನ ಸ್ನೇಹಿತನೊಬ್ಬ ನಿನ್ನ ನಿಜವಾದ ಕತೆ ಹೇಳಿಬಿಡು ಎನ್ನುತ್ತಾನೆ. ಸುಲೈಮಾನ್ ಹೇಳಿಕೊಟ್ಟ ಕತೆ ಹೇಳಬೇಕೋ  ಅಥವಾ ತನ್ನ ನಿಜ ಕತೆ ಹೇಳಬೇಕೋ, ಎರಡರಲ್ಲೂ ತಿರಸ್ಕೃತವಾಗುವ ಅಪಾಯವಿದೆ ಎಂಬ ಸಂದಿಗ್ಧದಲ್ಲಿರುತ್ತಾನೆ. ಸುಲೈಮಾನ್ ಯಾವ ಕತೆ ಹೇಳ್ತಾನೆ? ಅವನ ನಿಜವಾದ ಕತೆಯೇನು? ಯಾವ ಕತೆ ಆಶ್ರಯ ಪಡೆಯಲು ಸಹಾಯಕವೆಂಬ ಸಂದಿಗ್ಧವನ್ನು ಸುಲೈಮಾನ್ ಹೇಗೆ ಪರಿಹರಿಸುತ್ತಾನೆ ಎಂಬುದನ್ನು ಒಂದು ಅನಿರೀಕ್ಷಿತ ಮತ್ತು ಸಶಕ್ತ ಕ್ಲೈಮಾಕ್ಸ್ ನಲ್ಲಿ ತಿಳಿಸುವಲ್ಲಿ ಫಿಲಂ ಪರಿಣಾಮಕಾರಿಯಾಗಿದೆ.

ರಾತ್ರಿ ಆಶ್ರಯ ತಾಣದಲ್ಲಿ ಆಫ್ರಿಕನ್ ವಲಸಿಗರು  ಮತ್ತು ಒಬ್ಬ ರೆಸ್ಟೋರೆಂಟರ್ ಹಾಗೂ ಗ್ರಾಹಕ ಮಾತನಾಡಿಸುವ ಮಾನವೀಯತೆ ಸೋದರತ್ವ ಮೆರೆಯುವ  ದೃಶ್ಯಗಳನ್ನು ಬಿಟ್ಟರೆ, ಇಡೀ ಫಿಲಂನಲ್ಲಿ ಸಂದರ್ಶನದಲ್ಲಿ ಸಫಲನಾಗುತ್ತೇನೋ ಎಂಬುದರ ಬಗ್ಗೆ ಸುಲೈಮಾನ್ ನ ಆತಂಕ, ಉದ್ವೇಗದ ಭಾವ ದಟ್ಟವಾಗಿದೆ. ಸುಲೈಮಾನ್ ನ ಜೀವನದ ಪ್ರತಿ ಕ್ಷಣವನ್ನೂ ಆಹಾರ ಡೆಲಿವರಿ ಆಪ್ ಆವರಿಸಿಕೊಂಡಿದ್ದು ಅದೂ ಒಂದು ಕಾಣದ ಪಾತ್ರವಾಗಿರುತ್ತದೆ. ಅದೇ ರೀತಿ ಅವನ ಸೈಕಲ್ ಸಹ ಸುಲೈಮಾನ್ ನ ಜೀವನೋಪಾಯದ, ಅಸ್ತಿತ್ವದ ಭಾಗವಾಗಿ ಒಂದು ಪಾತ್ರವಾಗಿ ಬಿಡುತ್ತದೆ.

ಸೈಕಲ್ ಗೆ ಇನ್ನೊಂದು ರೀತಿಯ ಮಹತ್ವವಿದೆ. 1940ರ  ದಶಕದ “ಬೈಸಿಕಲ್ ಥೀವ್ಸ್” (ಬೈಸಿಕಲ್ ಕಳ್ಳರು) ಎಂಬ ವಿಟ್ಟೊರಿಯಾ ಡಿ ಸಿಕಾ ಅವರ ಪ್ರಸಿದ್ಧ ಇಟಾಲಿಯನ್ ನವ-ವಾಸ್ತವವಾದಿ ಫಿಲಂ ನ  ನಮ್ಮ ಕಾಲದ ಆವೃತ್ತಿಯಂತೆ ಸುಲೈಮಾನ್, ಆಹಾರ ಡೆಲಿವರಿ ಆಪ್ ಮತ್ತು ಅವನ ಸೈಕಲ್ ಕತೆ ಕಾಣುತ್ತದೆ. ಭೀಕರ ಅಸಮಾನತೆ ಸೃಷ್ಟಿಸಿರುವ  ಇಂದಿನ ಬಂಡವಾಳಶಾಹಿ ಜಗತ್ತಿನ ಹೃದಯಹೀನ ಶೋಷಣೆಯ ಅಸ್ತ್ರವಾದ ಆಪ್ ಆರ್ಥಿಕತೆ , ವಲಸಿಗ ಕಾರ್ಮಿಕರನ್ನು ಜಗತ್ತಿನ ನಗರ ಪ್ರದೇಶಗಳ  ಅತ್ಯಂತ ಕಠಿಣ ಉದ್ಯೋಗಗಳ ಬೇಗುದಿಗೆ ತಳ್ಳಿದ್ದರ ದಾರುಣ ಸ್ಥಿತಿಗೆ ಕನ್ನಡಿಯಾಗುತ್ತದೆ.

ಈ ಫಿಲಂ ನ ನಿರ್ದೇಶಕ ಮತ್ತು ಚಿತ್ರಕತೆ ಬರೆದ ಬೋರಿಸ್ ಲೊಕಿನೆ ಮತ್ತು ಸುಲೈಮಾನ್ ಪಾತ್ರ ವಹಿಸಿರುವ ಅಬೌ ಸಂಗಾರೆ ಈ ಕಾಲದ ಒಂದು ಮಹತ್ವದ ಫಿಲಂ ಕೊಟ್ಟಿದ್ದಾರೆ. ಅಬೌ ಸಂಗಾರೆ ನಿಜಜೀವನದಲ್ಲಿ ಪಡಲಾರದ ಪಾಡು ಪಟ್ಟು ಫ್ರಾನ್ಸಿಗೆ ಬಂದ ‘ಕಾನೂನು ಬಾಹಿರ ವಲಸಿಗ’ನಂತೆ. ಹಾಗಾಗಿಯೇ ಏನೋ ಅವನದ್ದು ನಟನೆ ಎಂದೇ ಅನಿಸುವುದಿಲ್ಲ.

ಇದನ್ನೂ ನೋಡಿ: Karnataka Legislative Assembly Live Day 10 | ವಿಧಾನಸಭೆ ಬಜೆಟ್ ಅಧಿವೇಶನದ ನೇರ ಪ್ರಸಾರ ದಿನ 10

Donate Janashakthi Media

Leave a Reply

Your email address will not be published. Required fields are marked *