ಹತ್ತು ಕೋಟಿ ಜನ ತೀವ್ರ ಬಡತನದತ್ತ : ವಿಶ್ವಬ್ಯಾಂಕ್

ವಿಶ್ವ ಬ್ಯಾಂಕ್ ತನ್ನ ಜನವರಿ 2021 ರ ವರದಿಯಲ್ಲಿ, ಜಾಗತಿಕ ಆರ್ಥಿಕತೆಯ ಮೇಲೆ ಮಹಾಸೋಂಕಿನ ಪರಿಣಾಮವನ್ನು ಅಂದಾಜಿಸಿ, ಬಡತನದ ಪ್ರಮಾಣವನ್ನು 2017ರ ಕೊನೆಯಲ್ಲಿ ಕಂಡ ಮಟ್ಟಕ್ಕೆ ತಳ್ಳಬಹುದು,  ಹತ್ತು ಕೋಟಿಗೂ ಹೆಚ್ಚು ಜನರು ತೀವ್ರ ಬಡತನದತ್ತ ಸಾಗಬಹುದು ಎಂದು ಹೇಳಿದೆ.  ಕಳೆದ ಮೂರು ತಿಂಗಳುಗಳಲ್ಲಿ (ನವೆಂಬರ್- ಜನವರಿ) ಜಾಗತಿಕ ಆರ್ಥಿಕ ವಿದ್ಯಮಾನಗಳ ಸ್ಥೂಲ ಸಮೀಕ್ಷೆ ಇಲ್ಲಿದೆ. ಜಾಗತಿಕ ಆರ್ಥಿಕದ ಈಗಿನ ಸ್ಥಿತಿ, 2021ರ ಬೆಳವಣಿಗೆಯ ಮುನ್ನೋಟ, ಆರ್ಥಿಕ ಕುಸಿತದಿಂದಾದ ಪ್ರತಿಭಟನೆಗಳ ಅಲೆ, ಈ ಅವಧಿಯ ಪ್ರಮುಖ ಆರ್ಥಿಕ ಒಪ್ಪಂದಗಳನ್ನು ಈ ಸಮೀಕ್ಷೆ ಒಳಗೊಂಡಿದೆ. ಇವು ಸಿಪಿಐ(ಎಂ) ಕೇಂದ್ರ ಸಮಿತಿ ಜನವರಿ 30-31ರ ಸಭೆಯಲ್ಲಿ ಅಂಗೀಕರಿಸಲಾದ ರಾಜಕೀಯ ವರದಿಯ ಆಯ್ದ ಭಾಗಗಳು.

(ಅನು : ನಾಗರಾಜ್ ನಂಜುಂಡಯ್ಯ)

ಜಾಗತಿಕ ಆರ್ಥಿಕತೆ

ಕೋವಿಡ್-19 ಮಹಾಸೋಂಕು ಏಕಾಏಕಿಯಾಗಿ, ಹರಡುವ ಮುಂಚೆಯೇ, ಜಾಗತಿಕ ಆರ್ಥಿಕತೆಯು ತೀವ್ರವಾಗಿ ನಿಧಾನಗತಿಯಲ್ಲಿತ್ತು.  ಮಹಾಸೋಂಕು ಇನ್ನೂ ಜಗತ್ತನ್ನು ಕಾಡುತ್ತಿರುವಾಗಲೇ, ವಿಶ್ವಬ್ಯಾಂಕ್ ತನ್ನ ಜನವರಿ 2021 ರ ವರದಿಯಲ್ಲಿ, ಜಾಗತಿಕ ಆರ್ಥಿಕತೆಯ ಮೇಲೆ ಅದರ ಪರಿಣಾಮವನ್ನು ಅಂದಾಜಿಸಿ, ಅದು 2020 ರಲ್ಲಿ ಶೇಕಡಾ 4.3 ರಷ್ಟು ಸಂಕುಚಿತಗೊಂಡಿದೆ ಎಂದಿದೆ. ಇದು “ಜಾಗತಿಕ ಆರ್ಥಿಕ ಹಿಂಜರಿತ”ಕ್ಕೆ ಕಾರಣವಾಗಿದೆ. ಇದರ ಆಳವು ಕಳೆದ ಒಂದುವರೆ ಶತಮಾನದ ಅವಧಿಯಲ್ಲಿ ಸಂಭವಿಸಿದ್ದ ಎರಡು ವಿಶ್ವ ಯುದ್ಧಗಳು ಮತ್ತು ಮಹಾ ಕುಸಿತವನ್ನು ಕೂಡಾ ಮೀರಿಸಿದೆ ಎಂದು ವರದಿ ಗುರುತಿಸಿದೆ.

                   ಗ್ರೀಸ್ ನಲ್ಲಿ ನಡೆದ ಪ್ರತಿಭಟನೆ

ಜಾಗತಿಕ ಆರ್ಥಿಕ ಉತ್ಪಾದನೆಯು 2021 ರಲ್ಲಿ ಶೇಕಡಾ 4 ರಷ್ಟು ವಿಸ್ತರಿಸುವ ನಿರೀಕ್ಷೆಯಿದೆ.  ಆದರೆ, ಇದು ಕೂಡಾ, ಮಹಾಸೋಂಕು- ಪೂರ್ವ ಅಂದಾಜುಗಳಿಗಿಂತ ಶೇಕಡಾ 5 ಕ್ಕಿಂತ ಹೆಚ್ಚು ಕಡಿತ ಕಂಡಿದೆ.  ಈ ಅಂದಾಜು ಸಹ ಗಂಭೀರ ಎಚ್ಚರಿಕೆಗಳೊಂದಿಗೆ ಬಂದಿದೆ. ಇದು ಸಹ ಪ್ರಪಂಚದ ಎಲ್ಲಾ ದೇಶಗಳಲ್ಲಿ ಪರಿಣಾಮಕಾರಿ ಮಹಾಸೋಂಕು ನಿರ್ವಹಣೆ ಮತ್ತು ವ್ಯಾಕ್ಸಿನೇಷನ್ ಮತ್ತು ಇನ್ನಿತರೆ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ.  ವಿಶ್ವಬ್ಯಾಂಕ್ ನ ಅತ್ಯಂತ ನಿರಾಶಾದಾಯಕ ಅಂದಾಜಿನಂತೆ,  ಜಾಗತಿಕ ಆರ್ಥಿಕತೆಯ ಕೇವಲ ಶೇ. 1.6 ರಷ್ಟು ಚೇತರಿಸಿಕೊಳ್ಳಬಹುದು. ಹೆಚ್ಚು ತೀವ್ರ ನಕಾರಾತ್ಮಕ ಅಂಶಗಳು ತಲೆದೋರಿದರೆ ಜಾಗತಿಕ ಆರ್ಥಿಕದ ಬೆಳವಣಿಗೆ 2021 ರಲ್ಲಿ ಸಹ ಋಣಾತ್ಮಕವಾಗಬಹುದು. ಮಹಾಸೋಂಕು ರೋಗ ಕಡಿಮೆಯಾದ ನಂತರವೂ ಜಾಗತಿಕ ಆರ್ಥಿಕ ಚಟುವಟಿಕೆಯು ಅದರ ಹಿಂದಿನ ಹಂತಗಳಿಗೆ ಮರಳುವುದು ಅಸಂಭವ ಎನ್ನಲಾಗಿದೆ.

ಪ್ರಮುಖ ಬಂಡವಾಳಶಾಹಿ ಆರ್ಥಿಕತೆಗಳು 

2020 ರ ಮೊದಲಾರ್ಧದಲ್ಲಿ ಯು.ಎಸ್ ಆರ್ಥಿಕ ಚಟುವಟಿಕೆ 2008 ರ ಜಾಗತಿಕ ಹಣಕಾಸು ಬಿಕ್ಕಟ್ಟು ಅವಧಿಯ ಗರಿಷ್ಠ ಕುಸಿತದ ಮೂರು ಪಟ್ಟು ಕುಸಿದಿದೆ. ಅಧಿಕೃತ ಅಂಕಿ ಅಂಶಗಳ ಪ್ರಕಾರ, 2020ರಲ್ಲಿ ಉತ್ಪಾದನೆಯು ಶೇಕಡಾ 3.6 ರಷ್ಟು ಕುಸಿದಿದೆ.

ಯುರೋಪಿಯನ್ ಒಕ್ಕೂಟ (ಇ.ಯು) ರಾಷ್ಟಗಳು 2020 ರಲ್ಲಿ ಶೇಕಡಾ 7.4 ರಷ್ಟು ಕುಸಿತವನ್ನು ಕಂಡಿದೆ. 2021ರ ಮುನ್ಸೂಚನೆಯು ಶೇಕಡಾ 3.6 ರಷ್ಟು ಬೆಳವಣಿಗೆಯಾಗಿದ್ದು, ಇದು ಮಹಾಸೋಂಕು-ಪೂರ್ವದ ಪ್ರವೃತ್ತಿಗಿಂತ ಇನ್ನೂ  ಶೇಕಡಾ 3.8 ರಷ್ಟು ಕಡಿಮೆಯಾಗಿದೆ.

ಜಪಾನ್ ಆರ್ಥಿಕ 2020 ರಲ್ಲಿ ಶೇ 5.3 ರಷ್ಟು ಸಂಕುಚಿತ ಗೊಂಡಿದೆ. 2021 ರಲ್ಲಿ ಇದು ಶೇಕಡಾ 2.5 ರಷ್ಟು ವಿಸ್ತರಿಸುವ ನಿರೀಕ್ಷೆಯಿದೆ, ಇದು ಇನ್ನೂ ಮಹಾಸೋಂಕು-ಪೂರ್ವದ ಪ್ರವೃತ್ತಿಗಿಂತ ಶೇಕಡಾ 2.4 ರಷ್ಟು ಕಡಿಮೆ ಇದೆ.

ಅಭಿವೃದ್ಧಿ ಹೊಂದುತ್ತಿರುವ ದೇಶಗಳು

ವಿಶೇಷವಾಗಿ ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳಲ್ಲಿ ಪ್ರಪಂಚದಾದ್ಯಂತ ಹೂಡಿಕೆ ಪ್ರಮಾಣದಲ್ಲಿ ತೀವ್ರ ಕುಸಿತ ಕಂಡಿದೆ.  ಕಡಿಮೆ ಆದಾಯದ ದೇಶಗಳು 2020 ರಲ್ಲಿ ಶೇಕಡಾ 0.6 ರಷ್ಟು ಕುಗ್ಗುವಿಕೆಗೆ ಸಾಕ್ಷಿಯಾಗಿವೆ. ಇದು ಒಂದು ಪೀಳಿಗೆಯ ಮೊದಲ ಆರ್ಥಿಕ ಕುಗ್ಗುವಿಕೆ. ಈ ದೇಶಗಳ 2021ರ ಅಂದಾಜು ಬೆಳವಣಿಗೆ ಶೇಕಡಾ 5 ಕ್ಕೆ ತಲುಪಿರುವುದು, ಇದರ ಬಹುಭಾಗ ಚೀನಾದ ಆರ್ಥಿಕತೆಯ ದೃಢವಾದ ಚೇತರಿಕೆಯಿಂದಾಗಿ ಆಗಿದೆ.

ಹೆಚ್ಚುತ್ತಿರುವ ಜನರ ದುಃಖಗಳು

ವಿಶ್ವಬ್ಯಾಂಕ್ ವರದಿ ಹೀಗೆ ಹೇಳುತ್ತದೆ: “ಮಹಾಸೋಂಕು ತೀವ್ರವಾದ ಜೀವ ನಷ್ಟವನ್ನು ಉಂಟುಮಾಡಿದೆ, ಇದು ಲಕ್ಷಾಂತರ ಜನರನ್ನು ತೀವ್ರ ಬಡತನಕ್ಕೆ ದೂಡುತ್ತಿದೆ, ಹಾಗೂ ಶಾಶ್ವತ ಗಾಯಗಳನ್ನು ಮಾಡಿ ಚಟುವಟಿಕೆ ಮತ್ತು ಆದಾಯಗಳನ್ನು ದೀರ್ಘಕಾಲದ ಅವಧಿಗೆ ಮಹಾಸೋಂಕು-ಪೂರ್ವ ಮುಂಚಿನ 2017ರ ಪರಿಸ್ಥಿತಿಗಿಂತ ಕೆಳಗೆ ತಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ.

ಶೇಕಡಾ 90 ಕ್ಕಿಂತ ಹೆಚ್ಚು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ 2020 ರಲ್ಲಿ ತಲಾ ಆದಾಯವು ಕುಸಿಯಿತು, ಲಕ್ಷಾಂತರ ಜನರನ್ನು ಮತ್ತೆ ಬಡತನಕ್ಕೆ ತಳ್ಳಿದೆ. ಇದು ಕನಿಷ್ಠ ಹಿಂದಿನ ಹತ್ತು ವರ್ಷಗಳಲ್ಲಿ ಆದ ತಲಾ ಆದಾಯದ ಏರಿಕೆಯನ್ನು ಅಳಿಸಿ ಹಾಕುತ್ತದೆ.  ಬಡತನದ ಪ್ರಮಾಣವನ್ನು 2017ರ ಕೊನೆಯಲ್ಲಿ ಕಂಡ ಅಥವಾ ಇನ್ನೂ ಹೆಚ್ಚಿನ ಮಟ್ಟಕ್ಕೆ ತಳ್ಳುವ ನಿರೀಕ್ಷೆಯಿದೆ.  ಉದ್ಯೋಗದಲ್ಲಿ ಆದ ನಷ್ಟದಿಂದ ಚೇತರಿಕೆ ಸಹ ಬಹಳ ಕಾಲ ತೆಗೆದುಕೊಳ್ಳುತ್ತದೆ ಎಂದು ಅಂದಾಜಿಸಲಾಗಿದೆ.

ಸರಕಾರೀ ಸ್ವಾಮ್ಯದ ನಾಲ್ಕು ಬ್ಯಾಂಕುಗಳು ಖಾಸಗಿ ತೆಕ್ಕೆಗೆ?!

ಹತ್ತು ಕೋಟಿಗೂ ಹೆಚ್ಚು ಜನರು ತೀವ್ರ ಬಡತನದತ್ತ ಸಾಗುವ ನಿರೀಕ್ಷೆಯಿದೆ.  ಅದೇ ಸಮಯದಲ್ಲಿ, ಶ್ರೀಮಂತರು ಶ್ರೀಮಂತರಾಗುತ್ತಾರೆ ಮತ್ತು ಬಡವರು ಬಡವರಾಗುವುದರೊಂದಿಗೆ ಅಸಮಾನತೆಯು ಇನ್ನಷ್ಟು ಹದಗೆಡುವ ಸಾಧ್ಯತೆಯಿದೆ. ಮಹಿಳೆಯರು, ವಲಸೆ ಕಾರ್ಮಿಕರು, ಕಡಿಮೆ ನುರಿತ ಉದ್ಯೋಗಗಳು ಮತ್ತು ಅನೌಪಚಾರಿಕ ವಲಯಗಳು ಹೆಚ್ಚು ಬಳಲಿರುವ ದುರ್ಬಲ ಗುಂಪುಗಳಲ್ಲಿ ಸೇರಿವೆ.  ಶಿಕ್ಷಣದಲ್ಲಿನ ಅಡೆತಡೆಗಳ ದೀರ್ಘಕಾಲೀನ ಪರಿಣಾಮವು ಕೆಲವು ಶಾಶ್ವತ ಪರಿಣಾಮವನ್ನು ಬೀರುತ್ತದೆ, ವಿಶೇಷವಾಗಿ ಅದು ಕಳಪೆ ಮೂಲಸೌಕರ್ಯ ಮತ್ತು ತಾಂತ್ರಿಕ ಸಂವಹನ ಹೊಂದಿರುವ ದೇಶಗಳಲ್ಲಿ ಹೆಚ್ಚಾಗಿರುತ್ತದೆ.

ಸಮಾಜವಾದಿ ದೇಶಗಳು 

ಸಮಾಜವಾದಿ ಆರ್ಥಿಕತೆಗಳ ಪೈಕಿ, ಚೀನಾದ ಆರ್ಥಿಕತೆಯು ಮೊದಲ ಅಂದಾಜುಗಳೀಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದೆ.  ಮಹಾಸೋಂಕಿನ ಪರಿಣಾಮಕಾರಿ ನಿಯಂತ್ರಣ ಮತ್ತು ದೊಡ್ಡ ಪ್ರಮಾಣದ ಸಾರ್ವಜನಿಕ ಹೂಡಿಕೆಯ ಪ್ಯಾಕೇಜ್ ಗಳಿಂದ ಇದು ಸಾಧ್ಯವಾಯಿತು.  2020 ರಲ್ಲಿ ಚೀನಾದ ಜಿಡಿಪಿ ಶೇಕಡಾ 2.3 ರಷ್ಟು ಹೆಚ್ಚಿದೆ. ಬೆಳವಣಿಗೆಯು 2021 ರಲ್ಲಿ ಶೇಕಡಾ 7.9 ರಷ್ಟಾಗುತ್ತದೆ ಎಂದು ಅಂದಾಜಿಸಲಾಗಿದೆ. ನಿರುದ್ಯೋಗ ದರವು ಸರ್ಕಾರದ ಗುರಿ ಶೇಕಡಾ 6 ಕ್ಕಿಂತ ಕಡಿಮೆಯಾಗಿದೆ.  ೨೦೨೦ ರಲ್ಲಿ ಸುಮಾರು 1.2 ಕೋಟಿ ಹೊಸ ನಗರ ಉದ್ಯೋಗಗಳನ್ನು ಸೃಷ್ಟಿಸಲಾಯಿತು ಮತ್ತು 2020 ರ ಡಿಸೆಂಬರ್ ನಲ್ಲಿ ನಿರುದ್ಯೋಗವು ಶೇಕಡಾ 4.7 ಕ್ಕೆ ಇಳಿದಿದೆ.

ವಿಶ್ವ ಬ್ಯಾಂಕಿನ ಪ್ರಕಾರ, ವಿಯೆಟ್ನಾಂ 2020 ರಲ್ಲಿ ಶೇ 2.91 ರಷ್ಟು ಜಿಡಿಪಿ ಬೆಳವಣಿಗೆಯನ್ನು ದಾಖಲಿಸಿದೆ. ಸರ್ಕಾರವು ತೆರಿಗೆ ಮತ್ತು ಭೂಮಿ ಬಾಡಿಗೆಯನ್ನು ಮುಂದೂಡಿದೆ, ಬಡ್ಡಿದರಗಳನ್ನು ಕಡಿಮೆ ಮಾಡಿ ಸಾಲ ಮತ್ತು ಹೂಡಿಕೆಯನ್ನು ಹೆಚ್ಚಿಸಿದೆ ಮತ್ತು ಜನರ ಖರೀದಿ ಶಕ್ತಿಯನ್ನು ಹೆಚ್ಚಿಸುವ ಮೂಲಕ ದೇಶೀಯ ಬೇಡಿಕೆಯನ್ನು ಸೃಷ್ಟಿಸುತ್ತಿದೆ. ಕೋವಿಡ್ ಪಾಸಿಟಿವ್ ಪ್ರಕರಣಗಳು ಕೇವಲ 1,547 ಮತ್ತು ಸಾವಿನ ಸಂಖ್ಯೆ ಕೇವಲ 35 ಆಗಿದೆ.

ಲಾವೋಸ್ :  ನಿರಂತರ ಬೆಳವಣಿಗೆಯನ್ನು ದಾಖಲಿಸಿದೆ ಮತ್ತು ಕೇವಲ 41 ಕೋವಿಡ್ ಸೋಂಕುಗಳು ಮತ್ತು ಮುಖ್ಯವಾಗಿ ಸಾವುಗಳ ಸಂಖ್ಯೆ ಶೂನ್ಯ.

ಕ್ಯೂಬಾ : ಒಂದು ಕಡೆ ಮಹಾಸೋಂಕು ಮತ್ತೊಂದೆಡೆ ಯುಎಸ್ ಸಾಮ್ರಾಜ್ಯಶಾಹಿ ಹೇರಿದ ಕಟುವಾದ ಆರ್ಥಿಕ ದಿಗ್ಬಂಧನಗಳ ಡಬ್ಬಲ್ ದಾಳಿಯನ್ನು ಕ್ಯೂಬಾ ಯಶಸ್ವಿಯಾಗಿ ಎದುರಿಸಿ ಬದುಕುಳಿಯಿತು.  ಹೆಚ್ಚಿನ ಸಾರ್ವಜನಿಕ ಆರೋಗ್ಯ ವೆಚ್ಚಗಳು ಮತ್ತು ಪ್ರವಾಸೋದ್ಯಮದಲ್ಲಿ ಆರ್ಥಿಕ ಚಟುವಟಿಕೆಯ ಕುಸಿತದೊಂದಿಗೆ, ಕ್ಯೂಬನ್ ಆರ್ಥಿಕತೆಯು ಶೇಕಡಾ 11 ರಷ್ಟು ಕುಗ್ಗಿತು.  ಆದಾಗ್ಯೂ, ಸಾಂಕ್ರಾಮಿಕ ರೋಗವನ್ನು ಎದುರಿಸುವಲ್ಲಿ, ತನ್ನ ನಿಸ್ವಾರ್ಥ ವೈದ್ಯಕೀಯ ನೆರವನ್ನು ವಿಶ್ವದ 39 ದೇಶಗಳಿಗೆ ಕ್ಯೂಬಾ ನೀಡಲು ಸಾಧ್ಯವಾಗಿದೆ.

ಜಾಗತಿಕ ಪ್ರತಿಭಟನೆಗಳು

ಪ್ರಸ್ತುತ ಪರಿಸ್ಥಿತಿಗಳಲ್ಲಿ, ಆರ್ಥಿಕ ಹಿಂಜರಿತವನ್ನು ನಿವಾರಿಸಲು ಯಾವುದೇ ಪರಿಹಾರವನ್ನು ನೀಡುವಲ್ಲಿ ವಿಫಲವಾಗಿದ್ದು, ತಮ್ಮ ಲಾಭವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಜಾಗತಿಕ ಬಂಡವಾಳಶಾಹಿ ನವ-ಉದಾರವಾದಿ ಸುಧಾರಣೆಗಳನ್ನು ಆಕ್ರಮಣಕಾರಿಯಾಗಿ ಜಾರಿಗೊಳಿಸುತ್ತಿದೆ ಎಂದು ಕಳೆದ ವರದಿಯಲ್ಲಿ ಗುರುತಿಸಲಾಗಿದೆ. ಇದು ಆರ್ಥಿಕ ಅಸಮಾನತೆಗಳನ್ನು ಮತ್ತಷ್ಟು ವಿಸ್ತರಿಸುತ್ತದೆ ಮತ್ತು ದುಡಿಯುವ ಜನರ ವಿರುದ್ಧ ವರ್ಗ ಆಕ್ರಮಣವನ್ನು ತೀಕ್ಷ್ಣಗೊಳಿಸುತ್ತದೆ. ಇದರ ವಿರುದ್ಧ ಅನೇಕ ದೇಶಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ.

ಗ್ರೀಸ್ ನಲ್ಲಿ ಕೆಲಸದ ಸಮಯ ಹೆಚ್ಚಳ, ರಜಾದಿನಗಳನ್ನು ರದ್ದುಪಡಿಸುವುದು, ಸಾಮಾಜಿಕ ಭದ್ರತೆಯ ಖಾಸಗೀಕರಣ ಮತ್ತು ವಿಮೆ ಮಾಡದ ಮತ್ತು ಪಾವತಿಸದ ಕೆಲಸದ ವಿರುದ್ಧ ಕಾರ್ಮಿಕ ಸಂಘಗಳು ಮುಷ್ಕರ ನಡೆಸಿದವು.  ಕಮ್ಯುನಿಸ್ಟ್ ಪಕ್ಷ (ಕೆಕೆಇ) ನೇತೃತ್ವದಲ್ಲಿ ನಡೆಯುತ್ತಿದ್ದ, ಪಾಲಿಟೆಕ್ನಿಕ್ ದಂಗೆಯ ಸ್ಮರಿಸುವ ವಾರ್ಷಿಕೋತ್ಸವವನ್ನು ಪ್ರದರ್ಶನದಲ್ಲಿ, ಪೊಲೀಸರು ಹಲ್ಲೆ ನಡೆಸಿದರು. ಪಕ್ಷದ ಪ್ರಧಾನ ಕಾರ್ಯದರ್ಶಿ, ಅದರ ಮುಖಂಡರು ಮತ್ತು ಸಂಸದರು ಸೇರಿದಂತೆ ಅನೇಕರು ಗಾಯಗೊಂಡಿದ್ದಾರೆ.

ಪ್ಯಾರಿಸ್ ಮತ್ತು ಇತರೆ ಫ್ರೆಂಚ್ ನಗರಗಳಲ್ಲಿ ನವೆಂಬರ್ ಮತ್ತು ಡಿಸೆಂಬರ್ ಉದ್ದಕ್ಕೂ ಉದ್ದೇಶಿತ ಹೊಸ ಭದ್ರತಾ ಕಾನೂನುಗಳ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆದವು. ಈ ಕಾನೂನುಗಳು ಜನರ ಮೇಲೆ ಹೆಚ್ಚಿನ ಕಣ್ಗಾವಲು ಮತ್ತು ಪೊಲೀಸ್ ಅಧಿಕಾರಿಗಳ ದೌರ್ಜನ್ಯಗಳನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡುವ ಹಕ್ಕುಗಳ ಮೇಲೆ ನಿರ್ಬಂಧ ಹೇರುತ್ತವೆ.  ಆದರೆ, ಇವುಗಳನ್ನು ಹಿಂಪಡೆಯುವಂತೆ ಪ್ರತಿಭಟನಾಕಾರರಿಂದ  ಸರ್ಕಾರವನ್ನು ಒತ್ತಾಯಿಸಲಾಯಿತು. ಅದರಂತೆ,  ಈ ಕಾನೂನನ್ನು ಸಂಪೂರ್ಣವಾಗಿ ಪುನಃ ಬರೆಯಲಾಗುವುದು ಎಂದು ಸರ್ಕಾರ ಹೇಳಿದೆ. ಅದಾಗ್ಯೂ ಪ್ರತಿಭಟನಾಕಾರರ ಮೇಲೆ ಅನೇಕ ಪ್ರದೇಶಗಳಲ್ಲಿ ವ್ಯಾಪಕವಾದ ಪೊಲೀಸ್ ದೌರ್ಜನ್ಯ ನಡೆಸಲಾಯಿತು.

ಜಾರ್ಜಿಯಾದ ರಾಜಧಾನಿ ಟಿಬಿಲಿಸಿಯಲ್ಲಿ ಸಾವಿರಾರು ಸರ್ಕಾರಿ ವಿರೋಧಿ ಪ್ರದರ್ಶನಗಳು ಸಜ್ಜುಗೊಂಡಿದ್ದವು ಮತ್ತು ದೇಶದ ಶ್ರೀಮಂತ ವ್ಯಕ್ತಿ ಮತ್ತು ಮಾಜಿ ಪ್ರಧಾನ ಮಂತ್ರಿಯು ಅಕ್ಟೋಬರ್ ಸಂಸತ್ ಚುನಾವಣೆಯನ್ನು ಅಪಹರಣ ಮಾಡುವ ವಿರುದ್ದ ಪ್ರತಿಭಟನೆಗಳು ನಡೆದು, ಹೊಸ ಚುನಾವಣೆಗೆ ಆಗ್ರಹಿಸಲಾಗಿದೆ.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

ಪ್ರಧಾನಿ ಪ್ರಯುತ್ ಚಾನ್-ಚಾ ಅವರ ರಾಜೀನಾಮೆ, ಹೆಚ್ಚಿನ ಪ್ರಜಾಪ್ರಭುತ್ವ ಭಾಗವಹಿಸುವಿಕೆಗೆ ಅವಕಾಶ ನೀಡುವಂತೆ ಸಂವಿಧಾನದ ಪರಿಷ್ಕರಣೆ ಮತ್ತು ರಾಜಪ್ರಭುತ್ವವನ್ನು ಕಾನೂನು, ರಾಜಕೀಯ ಮತ್ತು ಹಣಕಾಸಿನ ಮೇಲ್ವಿಚಾರಣೆಗೆ ಒಳಪಡಿಸುವಂತೆ ಒತ್ತಾಯಿಸಿ ಥೈಲ್ಯಾಂಡ್ ನಲ್ಲಿ ವ್ಯಾಪಕ ಪ್ರದರ್ಶನಗಳು ನಡೆದಿವೆ.

ಕೃಷಿ ಸುಧಾರಣೆಗಳು ಮತ್ತು ಹೊಸ ಕಾನೂನುಗಳ ವಿರುದ್ಧ ಡಿಸೆಂಬರ್ ನಲ್ಲಿ ಪೆರು ಭಾರೀ ಪ್ರತಿಭಟನೆಗಳನ್ನು ಕಂಡಿದೆ. ತೀವ್ರ ಪ್ರತಿಭಟನೆಗಳಿಗೆ ಮಣಿದು ಪೆರುವಿನ ಕೃಷಿಯನ್ನು ಬಹುರಾಷ್ಟ್ರೀಯ ಕೃಷಿ ಕಾರ್ಪೊರೆಟ್ ಕಂಪನಿಗಳಿಗೆ ಹಸ್ತಾಂತರಿಸುವ ಈ ರೈತ ವಿರೋಧಿ ಕಾನೂನುಗ ¼ನ್ನು ಸರ್ಕಾರವು ರದ್ದುಗೊಳಿಸಬೇಕಾಗಿ ಬಂದಿದೆ.

ಬ್ರೆಕ್ಸಿಟ್

ಹಲವು ವರ್ಷಗಳ ವಿಳಂಬ ಮತ್ತು ಮಾತುಕತೆಗಳ ನಂತರ, ಇಯು-ಬ್ರಿಟನ್ ಬ್ರೆಕ್ಸಿಟ್ ವ್ಯಾಪಾರ ಒಪ್ಪಂದಕ್ಕೆ ಬಂದಿವೆ.  ಈ ಒಪ್ಪಂದವು ಬ್ರಿಟನ್ನನ್ನು ಇಯು ಸಾರ್ವಭೌಮತ್ವದಿಂದ ಮುಕ್ತಗೊಳಿಸುತ್ತದೆ. ಆದರೆ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳ ಸಾರ್ವಭೌಮತ್ವದಿಂದ ಅಲ್ಲ. ಬಂಡವಾಳಶಾಹಿ ಮುಕ್ತ ಮಾರುಕಟ್ಟೆ ನಿಯಮಗಳು ಮತ್ತು ನೀತಿಗಳು, ಡಬ್ಲ್ಯುಟಿಒ ನಿಯಮಗಳು ಮತ್ತು ಹೊಸ ಯುಕೆ-ಇಯು ಮಧ್ಯಸ್ಥಿಕೆಗಳ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಬ್ರಿಟನ್ ಕಾನೂನುಗಳನ್ನು ಜಾರಿಗೊಳಿಸುತ್ತದೆ.

ಈ ಒಪ್ಪಂದದ ಪ್ರಕಾರ, ಉದ್ಯೋಗ ನಷ್ಟದಂತಹ ಪರಿಣಾಮಗಳನ್ನು ಲೆಕ್ಕಿಸದೆ ಕಾರ್ಪೊರೇಟ್ ಗಳು ಕಾರ್ಯಾಚರಣೆಯನ್ನು ಸ್ಥಳಾಂತರಿಸಲು ಮತ್ತು ಬ್ರಿಟನ್ ಮತ್ತು ಇಯುನಲ್ಲಿ ಎಲ್ಲಿಯಾದರೂ ಹೂಡಿಕೆ ಮಾಡಲು ಮುಕ್ತರಾಗಿರುತ್ತಾರೆ. ಅಪಾಯಕಾರಿ ಅಂಶವೆಂದರೆ, ಇದು ರಾಷ್ಟ್ರೀಯ ಆರೋಗ್ಯ ಸೇವೆ (ಎನ್.ಎಚ್.ಎಸ್), ರೈಲ್ವೆ ಮತ್ತು ಇಂಧನ ವಿತರಣೆಯಂತಹ ಸಾರ್ವಜನಿಕ ಸೇವೆಗಳನ್ನು ಖಾಸಗೀಕರಣಕ್ಕೆ ಮತ್ತು ಬ್ರಿಟನ್ ಮತ್ತು ಯುರೋಪಿನಾದ್ಯಂತ ಸ್ಪರ್ಧೆಗೆ ಸಂಪೂರ್ಣವಾಗಿ ತೆರೆಯುತ್ತದೆ. ಹಣಕಾಸು ಬಂಡವಾಳದ ಚಲನೆ ಕುರಿತ ಒಪ್ಪಂದಗಳ ವಿವರಗಳನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ.

ಮುಖ್ಯವಾಗಿ, ಈ ಒಪ್ಪಂದವು ಕಾರ್ಮಿಕರ, ವಿಶೇಷವಾಗಿ ಬ್ರಿಟನಿನಲ್ಲಿ ಕೆಲಸ ಮಾಡುವ ಇಯು ವಲಸಿಗರ. ಹಕ್ಕುಗಳನ್ನು ದುರ್ಬಲಗೊಳಿಸುತ್ತದೆ, ಬ್ರಿಟನಿನ ಸಾರ್ವಭೌಮತ್ವವನ್ನು ಭದ್ರಪಡಿಸಲಾಗಿದ್ದರೂ, ದೊಡ್ಡ ಬಂಡವಾಳಶಾಹಿ ಕಾರ್ಪೊರೇಟುಗಳ ಆರ್ಥಿಕ ಅಭಿವೃದ್ಧಿ ಮತ್ತು ನಿಯಂತ್ರಣ ನೀತಿಗಳನ್ನು ಯೋಜಿಸಲು ಯಾವುದೇ ಭವಿಷ್ಯದ ಸರ್ಕಾರಕ್ಕೂ ಈ ಒಪ್ಪಂದವು ಅನುಮತಿಸುವುದಿಲ್ಲ.

ಇಯು-ಚೀನಾ ಒಪ್ಪಂದ

ಹೂಡಿಕೆಯ ಮೇಲಿನ ಇಯು-ಚೀನಾ ಸಮಗ್ರ ಒಪ್ಪಂದ (ಸಿಎಐ) ಮಾರುಕಟ್ಟೆ ಪ್ರವೇಶ ಮತ್ತು ಹೂಡಿಕೆ ರಕ್ಷಣೆಯನ್ನು ಒಳಗೊಳ್ಳುವ ಉದ್ದೇಶವನ್ನು ಹೊಂದಿತ್ತು.  ಒಪ್ಪಂದದ ಒಪ್ಪಿದ ಪಠ್ಯವು ಮಾರುಕಟ್ಟೆ ಪ್ರವೇಶಕ್ಕೆ ಮಾತ್ರ ಸಂಬಂಧಿಸಿದೆ, ಹೂಡಿಕೆ ಸಂರಕ್ಷಣೆ ಕುರಿತ ಅಂಶಗಳು ಇನ್ನೂ ಮಾತುಕತೆಯಲ್ಲಿಯೇ ಉಳಿದಿದೆ.  ಸಿಎಐಗಾಗಿ ಮಾತುಕತೆ 2013 ರಲ್ಲಿ ಪ್ರಾರಂಭವಾಯಿತು ಮತ್ತು 35 ಸುತ್ತಿನ ಮಾತುಕತೆ ನಡೆದಿದೆ.  ಒಪ್ಪಂದವು ಈಗ “ಕಾನೂನು ಪರಾಮರ್ಶೆ”ಗೆ ಒಳಗಾಗಬೇಕಿದೆ ಮತ್ತು ಅದನ್ನು ಅಂಗೀಕರಿಸುವ, ಜಾರಿಗೆ ತರುವ  ಮೊದಲು ಎರಡು ಕಡೆಯಿಂದ ಸಹಿ ಆಗಬೇಕಾಗುತ್ತದೆ.  ಇದಕ್ಕೆ ಒಂದು ವರ್ಷದ ಸಮಯ ತೆಗೆದುಕೊಳ್ಳಬಹುದು. ಹೆಚ್ಚುವರಿ ಹೂಡಿಕೆ ಸಂರಕ್ಷಣಾ ಒಪ್ಪಂದದ ಕುರಿತು ಮಾತುಕತೆಗಳು ಮತ್ತು ಅಂತಿಮ ತೀರ್ಮಾನಕ್ಕೆ ಎರಡು ವರ್ಷಗಳ ಗಡುವನ್ನು ನಿಗದಿಪಡಿಸಲಾಗಿದೆ.

ಇದು ಯುರೋಪಿಯನ್ ಪಾರ್ಲಿಮೆಂಟ್ ನಲ್ಲಿ ಮತ್ತು ಸದಸ್ಯ ರಾಷ್ಟ್ರಗಳ ನಡುವೆ, ಒಪ್ಪಂದದ ಬೆಂಬಲಿಗರು ಮತ್ತು ವಿರೋಧಿಗಳ ನಡುವೆ ವಿವಾದವನ್ನು ಹುಟ್ಟುಹಾಕಿದೆ.  ಇತರ ಸದಸ್ಯ ರಾಷ್ಟ್ರಗಳ ಅಭಿಪ್ರಾಯ ತೆಗೆದುಕೊಳ್ಳದೆ ಜರ್ಮನಿ ಮತ್ತು ಫ್ರಾನ್ಸ್ ಗಳು ಈ ಒಪ್ಪಂದವನ್ನು ವರ್ಷಾಂತ್ಯಕ್ಕೆ ಮೊದಲೇ ಮುಗಿಸಲು ಅವಸರ ಮಾಡಿವೆ ಎಂದು ಪೋಲೆಂಡ್ ಮತ್ತು ಇಟಲಿ ಗಳು ಸಾರ್ವಜನಿಕವಾಗಿ ದೂರಿವೆ.

Donate Janashakthi Media

Leave a Reply

Your email address will not be published. Required fields are marked *