ಪ್ರಾಣಿಗಳು ವಾಸಿಸಲು ಯೋಗ್ಯವಲ್ಲದ ಕೊಠಡಿಗಳು, ಹಸಿ ಕಟ್ಟಿಗೆ ಬಳಸಿ ಅಡುಗೆ ಮಾಡುತ್ತಿರುವ ದೃಶ್ಯ, ಶೌಚಾಲಯವೂ ಇಲ್ಲ, ಗ್ರಂಥಾಲಯವೂ ಇಲ್ಲ ಇದು ಸರಕಾರಿ ಹಾಸ್ಟೇಲ್‌ನ ಅವ್ಯವಸ್ಥೆ.
ಹೌದು , ಇಂತಹ ದೃಶ್ಯ ಕಂಡು ಬಂದಿದ್ದು ಬಂಗಾರದ ಹಟ್ಟಿಯಲ್ಲಿ, ರಾಯಚೂರು ಜಿಲ್ಲೆಯ ಲಿಂಗಸ್ಗೂರು, ತಾಲ್ಲೂಕಿನ ಹಟ್ಟಿ ಗ್ರಾಮದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಅಂಬೇಡ್ಕರ್ ಹಾಸ್ಟೇಲ್‌ನಲ್ಲಿ ಸಮಸ್ಯೆಗಳದ್ದೆ ಕಾರ್ಬಾರಾಗಿದೆ. ಸಮಸ್ಯೆಗಳಿಂದಲೇ ಸ್ವಾಗತಿಸುವ ಹಾಸ್ಟೇಲ್‌ನಲ್ಲಿ ಮೊದಲಿಗೆ ಕಂಡು ಬರುವ ಭಯಾನಕ ದೃಶ್ಯ ಎಂದರೆ ಅಡುಗೆ ಮಾಡುವ ದೃಶ್ಯ. ಹಸಿ ಕಟ್ಟಿಗೆಯನ್ನು ಬಳಸಿ ಅಡುಗೆ ಮಾಡಲಾಗುತ್ತಿದೆ. ಹಸಿ ಕಟ್ಟಿಗೆಯ ದಟ್ಟವಾದ ಹೊಗೆ ವಿದ್ಯಾರ್ಥಿಗಳು ಹಾಗೂ ಅಡುಗೆ ಸಿಬ್ಬಂದಿಯ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ.
” ಬಾಳ ವರ್ಷದಿಂದ ಕಟ್ಟಗಿ ಬಳಸಿ ಅಡಗಿ ಮಾಡಕತ್ತಿವ್ರಿ, ಗ್ಯಾಸ ಕೊಡ್ರಿ ಅಂತ ಕೇಳಿದ್ರಿ ಯಾರೂ ಕಿವಿಗೆ ಹಾಕೋಂತಿಲ್ರಿ, ಹಸಿ ಕಟಗಿ ಹೊಗೆ ತೆಗೊಂಡು ನಮ್ಮ ಕಣ್ಣು ಆರೋಗ್ಯ ಎಲ್ಲಾ ಹಾಳಗಕತ್ತೈತ್ರಿ, ಅಡಿಗಿ ಮಾಡಕ ಬೇಕಾದ ಪಾತ್ರೆ ಸಾಮಾನುಗಳು ಸರಿಯಾಗಿ ಇಲ್ರಿ, ನಮಗ ಪಗಾರಾನೂ ಸರಿಯಾಗಿ ಕೊಡ್ತಿಲ್ರಿ ಎಂದು ಅಡಿಗೆ ಸಿಬ್ಬಂದಿ ಕೆಂಚಮ್ಮ ಆರೋಪಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಬೆಳಗಾಗುವುದೆ ಒಂದು ಸಮಸ್ಯೆಯಾಗಿದೆ. ಶೌಚಾಲಯ ಇಲ್ಲದ ಕಾರಣ ಬಯಲು ಶೌಚಾಲಯನ್ನೆ ಇಲ್ಲಿಯ ವಿದ್ಯಾರ್ಥಿಗಳು ಅವಲಂಬಿಸಿದ್ದಾರೆ. ಬೆಳಗಿನ ಜಾವ ಜನರಿರುತ್ತಾರೆ, ಹಾಗಾಗಿ ದೂರ ಹೋಗಬೇಕು ಎಂಬ ಕಾರಣಕ್ಕೆ ನಿತ್ಯ ಬೆಳಗ್ಗೆ 04 ಕ್ಕೆ ಎದ್ದು ಬಯಲಲ್ಲೆ ನಿತ್ಯ ಕೆಲಸಗಳನ್ನು ಮುಗಿಸುವ ಸ್ಥಿತಿ ವಿದ್ಯಾರ್ಥಿಗಳದ್ದು. ಸ್ವಚ್ಚ ಭಾರತ್ ಅಭಿಯಾನ ಎಂದು ಬೊಬ್ಬೆ ಹೊಡೆಯುವ ರಾಜಕಾರಣಿಗಳು ಒಂದು ದಿನ ಇಲ್ಲಿ ವಾಸ್ತವ್ಯ ಹೂಡಿದರೆ ಈ ಹಾಸ್ಟೇಲ್‌ನ ಭಯಾನಕ ಸ್ಥಿತಿ ಎಂತದ್ದು ಎಂದು ಅರಿವಿಗೆ ಬರಲಿದೆ.
ಇಲ್ಲಿರುವ ವಿದ್ಯಾರ್ಥಿಗಳನ್ನು ಮೂಲ ಸೌಲಭ್ಯಗಳ ಬಗ್ಗೆ ವಿಚಾರಿಸಿದರೆ ಹಾಂಗೆಂದರೇನು? ಎಂದು ಮರು ಪ್ರಶ್ನೆ ಹಾಕುತ್ತಾರೆ!, ನೀವು ಹೇಳುವ ಸೌಲಭ್ಯಗಳು ನಮಗೆ ಗೊತ್ತೇ ಇಲ್ಲ. ಎಲ್ಲವನ್ನೂ ಇಲ್ಲಿ ಮುಚ್ಚಿಡಲಾಗುತ್ತದೆ, ಗೊತ್ತಿದ್ದವರು ಪ್ರಶ್ನಿಸಿದರೆ ಅವರ ಬಾಯಿಯನ್ನು ಮುಚ್ಚಿಸಲಾಗುತ್ತಿದೆ. ಕುಡಿಯಲು ನೀರಿಲ್ಲ, ಶೌಚಾಲಯ ಇಲ್ಲ, ಗುಣಮಟ್ಟದ ಊಟ ಇಲ್ಲ, ಗ್ರಂಥಾಲಯ ಇಲ್ಲ. ಒಟ್ಟಿನಲ್ಲಿ ಈ ಹಾಸ್ಟೇಲ್ ಓದಿಗೆ ಪೂರಕವಾಗಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.
ಮೂಲ ಸೌಲಭ್ಯ ನೀಡಿ ಎಂದು ಪ್ರಶ್ನಿಸಿದ ವಿದ್ಯಾರ್ಥಿಗಳಿಗೆ ವಾರ್ಡನ್ ಬೆದರಿಕೆ ಹಾಕುತ್ತಾರೆ. ಅನೇಕ ಬಾರಿ ಹೋರಾಟ ಮಾಡಿದ್ದೇವೆ. ಕುಂಟು ನೆಪ ಹೇಳಿ ವಾರ್ಡನ್ ದಿನಗಳನ್ನು ಮುಂದೂಡುತ್ತಿದ್ದಾರೆ. ಮೂರು ತಿಂಗಳಿಗೊಮ್ಮೆ ವಾರ್ಡನ್ ಹಾಸ್ಟೇಲ್ ಕಡೆ ಮುಖ ಮಾಡುತ್ತಾರೆ. ಇವರ ಮೇಲೆ ಕ್ರಮ ಜರುಗಿಸಲು ಅಧಿಕಾರಿಗಳು ಹಿಂದೇಟಾಕುತ್ತಿದ್ದಾರೆ. ಹಾಸ್ಟೇಲ್ ಬಗ್ಗೆ ಗಮನ ನೀಡಬೇಕಾಗಿದ್ದ ವಾರ್ಡನ್‌ರ ದುರ್ನಡತೆಯಿಂದ ಹಾಸ್ಟೇಲ್‌ಗೆ ಇಂತಹ ಸ್ಥಿತಿ ಬಂದಿದೆ ಎಂದು ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರ ಆರೋಪಿಸಿದ್ದಾರೆ.
ಇತ್ತೀಚೆಗೆ ಊಟದ ಹಾಲ್ ಮತ್ತು ಗ್ರಂಥಾಲಯ ಕೊಠಡಿಗೆಂದು ಕೆಕೆಆರ್ಡಿಬಿ ಇಂದ ಸುಮಾರು 18 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಕೊಠಡಿ ಸಂಪೂರ್ಣವಾಗಿ ಸೋರುತ್ತಿದೆ. ಬೇಕಾಬಿಟ್ಟಿಯಾಗಿ ಕೊಠಡಿ ನಿರ್ಮಾಣ ಮಾಡಿ ಹಣವನ್ನ ಲೂಟಿಮಾಡಿದಂತೆ ಕಾಣುತ್ತಿದೆ. ಹಟ್ಟಿ ಚಿನ್ನದ ಗಣಿ ಕಂಪನಿ ಹಾಸ್ಟೆಲ್ ಅನ್ನು ಅಭಿವೃದ್ಧಿಪಡಿಸಲು ಎಂದು ಏಳು ಲಕ್ಷ ರೂ ಅನುದಾನ ನೀಡಿದೆ. ಈ ಅನುದಾನ ಬಳಸಿ ಹಾಸ್ಟೆಲ್ ಅಭಿವೃದ್ಧಿ ಪಡಿಸಲು ಮುಂದಾಗಿಲ್ಲ. ಬಂದು ಅನುದಾನ ಏನಾಯಿತು ಎಂಬ ಪ್ರಶ್ನೆಗೆ ಉತ್ತರಿಸುವವರು ಯಾರು? ಇನ್ನಾದರೂ ಜಿಲ್ಲಾಡಳಿತ, ತಾಲ್ಲೂಕ ಆಡಳಿತ, ರಾಜ್ಯ ಸರಕಾರ ಸರಕಾರಿ ಹಾಸ್ಟೇಲ್‌ಗಳನ್ನು ಬಲಪಡಿಸುವ ಕಾರ್ಯಕ್ಕೆ ಮುಂದಾಗಬೇಕಿದೆ.
ಇದನ್ನೂ ಓದಿ : ಹಾಸ್ಟೇಲ್ ನರಕ : ವಿದ್ಯಾರ್ಥಿಗಳ ಗೋಳು ಕೇಳುವವರು ಯಾರು?!
“ಹಾಸ್ಟೇಲ್ ನರಕ: ವಿದ್ಯಾರ್ಥಿಗಳ ಗೋಳು ಕೇಳುವವರು” ಯಾರು ಎಂದು ಜನಶಕ್ತಿ ಮೀಡಿಯಾದಲ್ಲಿ ಪ್ರಸಾರವಾದ ಸುದ್ದಿಗೆ ಅಧಿಕಾರಿಗಳು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಹಾಸ್ಟೇಲ್ ನಲ್ಲಿರುವ ಸಮಸ್ಯೆಗಳ ಮಾಹಿತಿಯನ್ನು ನೀಡುವಂತೆ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ಜಿಲ್ಲೆಗಳಿಗೆ ಪತ್ರ ಬರೆದಿದ್ದಾರೆ.
ಹಾಸ್ಟೇಲ್ ಗಳ ಇನ್ನಷ್ಟು ಕರಾಳ ಚಿತ್ರಣವನ್ನು ನಾವು ಬಿತ್ತರಿಸಲಿದ್ದೇವೆ. ಪೋಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು 6361984022 ಈ ದೂರವಾಣಿ ಸಂಖ್ಯೆಗೆ ಮಾಹಿತಿಯನ್ನು ನೀಡಬಹುದಾಗಿದೆ. ಯಾವುದೇ ಸಮಸ್ಯೆ ಇದ್ದರೂ ಅದನ್ನು ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಲು ಜನಶಕ್ತಿ ಮೀಡಿಯಾ ಶ್ರಮಿಸಲಿದೆ.