ದ್ವೇಷಾಪರಾಧ: 3 ಮುಸ್ಲಿಮರಿಗೆ ಗುಂಡಿಕ್ಕಿ ‘ಭಾರತದಲ್ಲಿರಬೇಕಾದರೆ ಮೋದಿ ಯೋಗಿಗೆ ಮತಹಾಕಿ’ ಎಂದ ರೈಲ್ವೆ ಪೊಲೀಸ್ ಅಧಿಕಾರಿ!

ಮಹಾರಾಷ್ಟ್ರ: ಜೈಪುರ-ಮುಂಬೈ ಸೆಂಟ್ರಲ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಚಲಿಸುತ್ತಿರುವ ವೇಳೆ “ರೈಲ್ವೇ ಪ್ರೊಟೆಕ್ಷನ್ ಫೋರ್ಸ್” (ಆರ್‌ಪಿಎಫ್)ನಲ್ಲಿ ಕಾನ್‌ಸ್ಟೆಬಲ್ ಸೇವೆಯಲ್ಲಿದ್ದ ವ್ಯಕ್ತಿ ಪ್ರಯಾಣಿಕರು ಮತ್ತು ಹಿರಿಯ ಅಧಿಕಾರಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಹಿರಿಯ ಅಧಿಕಾರಿ ಮತ್ತು ಮೂವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಆರೋಪಿಯು ಮೂವರು ಪ್ರಯಾಣಿಕರು ಮುಸ್ಲಿಮರು ಎಂದು ತಿಳಿದ ನಂತರ ಗುಂಡಿಕ್ಕಿದ್ದಾಗಿ ಆರೋಪಿಸಲಾಗಿದ್ದು, ಅವರ ಶವದ ಮುಂದೆ ಭಾರತದಲ್ಲಿ ಬದುಕಬೇಕಾದರೆ ಮೋದಿ-ಯೋಗಿಗೆ ಮತ ಹಾಕಿ ಎಂದು ಹೇಳುತ್ತಿರುವ ವಿಡಿಯೊ ವೈರಲ್ ಆಗಿದೆ.

ಆರೋಪಿಯನ್ನು ಕಾನ್‌ಸ್ಟೆಬಲ್ ಚೇತನ್ ಸಿಂಗ್ ಎಂದು ಗುರುತಿಸಲಾಗಿದ್ದು, ತನ್ನ ಎಸ್ಕಾರ್ಟ್ ಡ್ಯೂಟಿ ಇನ್‌ಚಾರ್ಜ್ ಎಎಸ್‌ಐ ಟಿಕಾ ರಾಮ್ ಮೀನಾ ಅವರನ್ನು ಚಲಿಸುತ್ತಿರುವ ರೈಲಿನಲ್ಲಿ ಗುಂಡಿಕ್ಕಿ ಕೊಂದಿದ್ದಾರೆ. ನಂತರ ಮತ್ತೊಂದು ಕೋಚ್‌ಗೆ ತೆರಳಿ ಮೂವರು ಪ್ರಯಾಣಿಕರನ್ನು ಗುಂಡಿಕ್ಕಿ ಕೊಂದಿದ್ದಾನೆ. ಘಟನೆಯ ನಂತರ ಆರೋಪಿ ರೈಲಿನ ಚೈನ್ ಎಳೆದು ಪರಾರಿಯಾಗಲು ಯತ್ನಿಸಿದಾಗ ರೈಲ್ವೆ ಪೊಲೀಸರು ಅವನನ್ನು ಸೆರೆ ಹಿಡಿದಿದ್ದಾರೆ.

ಇದನ್ನೂ ಓದಿ: ಮುಸ್ಲಿಂ ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ : ಆರ್‌ಎಸ್‌ಎಸ್‌ ಕಾರ್ಯಕರ್ತನ ಬಂಧನ

ಗುಂಡಿನ ದಾಳಿಗೆ ಕಾರಣವೇನು ಎಂಬ ಬಗ್ಗೆ ಇನ್ನೂ ಅಧಿಕೃತವಾಗಿ ತಿಳಿದಿಲ್ಲವಾದರೂ, ಸಮುದಾಯಗಳ ಬಗ್ಗೆ ನಡೆದ ವಾಗ್ವಾದದ ನಂತರ ಗಲಾಟೆ ಭುಗಿಲೆದ್ದಿದೆ ಎಂದು ಮುಂಬೈನ ಪಶ್ಚಿಮ ರೈಲ್ವೆಯ ಕೆಲವು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಅಲ್ಲದೆ ಆರೋಪಿಯು,  ಪಾಕಿಸ್ತಾನ, ಯೋಗಿ, ಮೊದಿ, ನಿಮ್ಮ ಮಾಧ್ಯಮ ಹಾಗೂ ನಮ್ಮ ಮಾಧ್ಯಮ ಎಂಬ ಹಲವು ವಿಚಾರಗಳ ಬಗ್ಗೆ ತಾನು ಗುಂಡು ಹಾರಿಸಿ ಕೊಂದ ಮುಸ್ಲಿಂ ವ್ಯಕ್ತಿಯ ಮೃತದೇಹದ ಮುಂದೆ ನಿಂತು ಮಾತನಾಡುತ್ತಿರುವ ವಿಡಿಯೊ ವೈರಲ್ ಆಗಿದೆ. ವಿಡಿಯೊದಲ್ಲಿ ಆರೋಪಿ, “ನೀವು (ಮುಸ್ಲಿಮರು) ಮತ ನೀಡಬೇಕೆಂದರೆ, ಭಾರತದಲ್ಲಿ ಬದುಕಬೇಕೆಂದರೆ ಮೋದಿ ಹಾಗೂ ಯೋಗಿಗೆ ಮತ ಹಾಕಬೇಕು” ಎಂದು ಹೇಳಿದ್ದು ವಿಡಿಯೊದಲ್ಲಿ ಸ್ಪಷ್ಟವಾಗಿದಾಖಲಾಗಿದೆ.

ಆರೋಪಿ ಚೇತನ್ ಸಿಂಗ್  ಬಿ -5 ಕೋಚ್‌ನೊಳಗೆ ತನ್ನ ಮೇಲಾಧಿಕಾರಿ ಎಎಸ್‌ಐ ಟಿಕಾರಾಂ ಮೀನಾ ಅವರ ಮೇಲೆ ತನ್ನ ಎಆರ್‌ಎಂ ರೈಫಲ್‌ನಿಂದ ಗುಂಡು ಹಾರಿಸಿದ್ದಾನೆ. ನಂತರ ಮಧುಬನಿಯಿಂದ ಬಂದ ಅಬ್ದುಲ್ ಖಾದಿರ್ ಎಂಬ ವ್ಯಕ್ತಿಯ ಮೇಲೆ ಮೇಲೆ ಗುಂಡು ಹಾರಿಸಿದ್ದಾನೆ. ನಂತರ ಪ್ಯಾಂಟ್ರಿ ಕಾರಿನಲ್ಲಿ ಅಪರಿಚಿತ ವ್ಯಕ್ತಿಯನ್ನು ಕೊಂದು, ನಂತರ ಎಸ್ -6 ಕೋಚ್‌ಗೆ ತೆರಳಿ ಅಲ್ಲಿ ಜೈಪುರದ ಬಳೆ ಮಾರಾಟಗಾರ ಅಸ್ಗರ್ ಕಾಯಿ ಎಂಬವರಿಗೆ ಗುಂಡು ಹಾರಿಸಿದ್ದಾನೆ.

ಇದನ್ನೂ ಓದಿ: ಲೂಟಿಕೋರ ಕಾರ್ಪೋರೇಟ್ ಪರ ನೀತಿಗಳೇ ಮುಸ್ಲಿಂ – ನಾಗರೀಕರ ಮೇಲಿನ ದಾಳಿಗಳ ಮೂಲ : ಸಿಪಿಐಎಂ ಆರೋಪ

ಘಟನೆಯ ವಿವರ ಹೀಗಿದೆ:

  • ಜೈಪುರ-ಮುಂಬೈ ಸೆಂಟ್ರಲ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಪಾಲ್ಘರ್ ರೈಲು ನಿಲ್ದಾಣದ ಬಳಿ ಇರುವಾಗ ಬೆಳಿಗ್ಗೆ 5 ಗಂಟೆಗೆ ಈ ಘಟನೆ ಸಂಭವಿಸಿದೆ.
  • ಚೇತನ್ ಸಿಂಗ್, ಇತರ ಇಬ್ಬರು ಕಾನ್‌ಸ್ಟೆಬಲ್‌ಗಳು ಮತ್ತು ಸಹಾಯಕ ಸಬ್-ಇನ್ಸ್‌ಪೆಕ್ಟರ್ (ಎಎಸ್‌ಐ) ಟಿಕಾ ರಾಮ್ ರೈಲಿಗೆ ಬೆಂಗಾವಲು ಮಾಡುವ ಜವಾಬ್ದಾರಿಯನ್ನು ಹೊಂದಿದ್ದರು.
  • ಎಕ್ಸ್‌ಪ್ರೆಸ್‌ ರೈಲುಗಳಿಗೆ ಭದ್ರತೆ ನೀಡುವುದಕ್ಕೆ ಅದರಲ್ಲಿ ಬೆಂಗಾವಲಾಗಿ ಹಿರಿಯ ಅಧಿಕಾರಿಗಳು ಮತ್ತು ಕಾನ್‌ಸ್ಟೆಬಲ್‌ಗಳ ತಂಡವನ್ನು ನಿಯೋಜಿಸಲಾಗುತ್ತದೆ.
  • ಆರೋಪಿ ಚೇತನ್ ಸಿಂಗ್ ಸೂರತ್ ರೈಲು ನಿಲ್ದಾಣದವರೆಗೆ ಬೆಂಗಾವಲು ತಂಡದ ಭಾಗವಾಗಿದ್ದರು.
  • ರೈಲು ಪಾಲ್ಘರ್ ರೈಲು ನಿಲ್ದಾಣವನ್ನು ದಾಟುತ್ತಿದ್ದಂತೆ, ಚೇತನ್ ಸಿಂಗ್ ಅನಿರೀಕ್ಷಿತವಾಗಿ ತನ್ನ ಸ್ವಯಂಚಾಲಿತ ಆಯುಧವಾದ AKM (AK-47 ನ ಮಾರ್ಪಡಿಸಿದ ಆವೃತ್ತಿ) ನಿಂದ ಗುಂಡು ಹಾರಿಸಲು ಪ್ರಾರಂಭಿಸಿದನು.
  • ASI ಟಿಕಾರಾಂನನ್ನು ಗುಂಡಿಕ್ಕಿ ಕೊಂದ ನಂತರ, ಆರೋಪಿ B5, S6 ಮತ್ತು ಪ್ಯಾಂಟ್ರಿ ಕಾರ್‌ಗಳ ಬೋಗಿಗಳ ಮೂಲಕ ಗುಂಡು ಹಾರಿಸಿ ಮೂವರು ಪ್ರಯಾಣಿಕರನ್ನು ಗುಂಡಿಕ್ಕಿ ಕೊಂದಿದ್ದಾನೆ.
  • ಆರೋಪಿ 12 ಸುತ್ತು ಗುಂಡು ಹಾರಿಸಿದ್ದು, ಇದರ ಪರಿಣಾಮವಾಗಿ ನಾಲ್ವರು ಸಾವನ್ನಪ್ಪಿದ್ದಾರೆ.
  • ನಾಲ್ವರನ್ನು ಕೊಂದ ನಂತರ ಆರೋಪಿ ತುರ್ತು ಸರಪಳಿಯನ್ನು ಎಳೆದು ಪಲಾಯನ ಮಾಡಲು ಪ್ರಯತ್ನಿಸಿದ್ದಾನೆ, ಆದರೆ ಅವರನ್ನು ಸೆರೆಹಿಡಿಯಲಾಗಿದೆ.

ಹಿಂಸಾಚಾರದ ಹಿಂದೆ ನಿಖರವಾದ ಉದ್ದೇಶವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಆರಂಭಿಕ ತನಿಖೆಯಲ್ಲಿ ಆರೋಪಿ ಮಾನಸಿಕ ಅಸ್ವಸ್ಥ ಎಂದು ಹೇಳಲಾಗುತ್ತಿದೆ. ಆದರೆ ಹೋರಾಟಗಾರರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಮುಸ್ಲಿಮರ ವಿರುದ್ಧ ಹಿಂಸಾಚಾರ ನಡೆಸುವ ದುಷ್ಕರ್ಮಿಗಳೆಲ್ಲರೂ ಮಾನಸಿಕ ರೋಗಿಗಳೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಸಾಮಾಜಿಕ ಮಾಧ್ಯಮಗಳಲ್ಲಿ ಘಟನೆಯು ಮುಸ್ಲಿಮರ ವಿರುದ್ಧ ನಡೆಸಲಾದ ಉದ್ದೇಶಪೂರ್ವಕ ಹಿಂಸಾಚಾರ ಎಂದು ಆಪಾದಿಸಲಾಗಿದೆ. ಆರೋಪಿಯು ಮುಸ್ಲಿಮರು ಎಂದು ತಿಳಿದ ನಂತರ ಮೂವರು ಪ್ರಯಾಣಿಕರನ್ನು ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಬಂಟ್ವಾಳ: ಹಿಂದೂ ಯುವತಿ-ಮುಸ್ಲಿಂ ಯುವಕ ಪ್ರಯಾಣಿಸುತ್ತಿದ್ದ ಬಸ್ಸು ತಡೆದು ಭಜರಂಗದಳ ಕಾರ್ಯಕರ್ತರಿಂದ ಗಲಾಟೆ

ಪತ್ರಕರ್ತೆ ಅನು‍ಷಾ ರವಿ ಸೂದ್ ಅವರು, “ಒಬ್ಬ ನಾಯಕ ಜನರನ್ನು ‘ತಮ್ಮ ಬಟ್ಟೆಯಿಂದ ಗುರುತಿಸಿ’ ಎಂದು ಕೇಳುತ್ತಾರೆ. ಮಂತ್ರಿಗಳು ‘ಗೋಲಿ ಮಾರೋ’ ಘೋಷಣೆಗಳಲ್ಲಿ ಹೆಮ್ಮೆಪಡುತ್ತಾರೆ. ಸಂಸದರು ಸಹ ನಾಗರಿಕರನ್ನು ‘ಪಂಕ್ಚರ್‌ವಾಲಾಗಳು’ ಎನ್ನುತ್ತಾರೆ. ಅಷ್ಟೆ ಅಲ್ಲದೆ, ‘ಸುದ್ದಿ’ ಚಾನಲ್‌ಗಳು ಮತ್ತು ವಾಟ್ಸಾಪ್ ಗುಂಪುಗಳು ದ್ವೇಷ ಮತ್ತು ಧರ್ಮಾಂಧತೆಯ ದೈನಂದಿನ ಆಹಾರವನ್ನು ನೀಡುತ್ತದೆ. ಹೀಗೆಲ್ಲಾ ಇರಬೇಕಾದರೆ ನೀವು ಜೈಪುರ-ಮುಂಬೈ ರೈಲಿನಲ್ಲಿ ಗುಂಡಿನ ದಾಳಿಯ ರೀತಿಯ ಘಟನೆ ನಡೆಯುತ್ತದೆ.” ಎಂದು ಹೇಳಿದ್ದಾರೆ.

ಖ್ಯಾತ ಪತ್ರಕರ್ತೆ ರಾಣಾ ಅಯೂಬ್ ಅವರು, “ಪ್ರಧಾನಿ ಮೋದಿಯವರೆ ಇದು ನಿಮ್ಮ ಪಕ್ಷದ ಮುಸ್ಲಿಂ ವಿರೋಧಿ ಭಾಷಣದ ಪರಿಣಾಮ. ಆರ್‌ಪಿಎಫ್ ಕಾನ್ಸ್‌ಟೇಬಲ್ ತನ್ನ ಹಿರಿಯ ಅಧಿಕಾರಿಯನ್ನು ಮತ್ತು ಮೂವರು ಅಮಾಯಕ ಮುಸ್ಲಿಮರನ್ನು ಗುಂಡಿಕ್ಕಿ ಕೊಂದಿದ್ದಾನೆ. ಗುಂಡಿಕ್ಕಿದ ನಂತರ ಪ್ರಯಾಣಿಕರಿಗೆ ಹೇಳುತ್ತಿರುವುದು, ನೀವು ಭಾರತದಲ್ಲಿ ಇರಬೇಕಾದರೆ, ಮೋದಿ ಮತ್ತು ಯೋಗಿ ಸಾಕು’. ಇಡೀ ಸಮುದಾಯವನ್ನು ರಾಕ್ಷಸೀಕರಣಗೊಳಿಸುವ ರಕ್ತ ದಾಹದ ಸುದ್ದಿ ಆಂಕರ್‌ಗಳಲ್ಲಿಯೂ ಇದೇ ಮನಸ್ಥಿತಿಯಿದೆ” ಎಂದು ಹೇಳಿದ್ದಾರೆ. ಆದರೆ ಅವರ ಈ ಟ್ವೀಟ್ ಮತ್ತು ವಿಡಿಯೊವನ್ನು ಭಾರತ ಸರ್ಕಾರದ ನಿರ್ದೇಶನದ ಮೇರೆಗೆ ಟ್ವಿಟರ್‌ ತೆಗೆದುಹಾಕಿದೆ.

ಮೂಲತಃ ಉತ್ತರ ಪ್ರದೇಶದ ಹತ್ರಾಸ್‌ನವನಾದ ಚೇತನ್ ಕುಮಾರ್ ಈ ಹಿಂದೆ ಗುಜರಾತ್‌ನಲ್ಲಿ ನೇಮಕಗೊಂಡಿದ್ದನು. ಅವನನ್ನು ಇತ್ತೀಚೆಗೆ ಮುಂಬೈಗೆ ನಿಯೋಜಿಸಲಾಗಿತ್ತು. ಆರೋಪಿ ಕಾನ್‌ಸ್ಟೆಬಲ್ ಚೇತನ್ ಸಿಂಗ್ ಮುಂಗೋಪಿ ಸ್ವಭಾವದವನಾಗಿದ್ದ ಎಂದು ಆರ್‌ಪಿಎಫ್ ಇನ್ಸ್‌ಪೆಕ್ಟರ್ ಜನರಲ್ ಪ್ರವೀಣ್ ಸಿನ್ಹಾ ಹೇಳಿದ್ದಾರೆ.

ವಿಡಿಯೊ ನೋಡಿ: ಭಾವೈಕ್ಯ ಭಾರತದ ಪ್ರತಿಬಿಂಬ ಮೊಹರಂ – ವಿಶ್ಲೇಷಣೆ : ಅರುಣ್ ಜೋಳದ ಕೂಡ್ಲಿಗಿ Janashakthi Media

Donate Janashakthi Media

Leave a Reply

Your email address will not be published. Required fields are marked *