ಹಾಸನ: ಹಾಸನ ಜಿಲ್ಲೆ ಪೆನ್ ಡ್ರೈವ್ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ಹಾಗೂ ಅವನ ತಂದೆ ಮಾಜಿ ಸಚಿವ ಎಚ್.ಡಿ. ರೇವಣ್ಣ ರನ್ನು ಬಂಧಿಸಿ ಸೂಕ್ತ ತನಿಖೆ ನಡೆಸಿ, ಶಿಕ್ಷೆಗೊಳಪಡಿಸಿ, ಮಹಿಳೆಯರನ್ನು ರಕ್ಷಿಸಬೇಕೆಂದು ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟ ಆಗ್ರಹಿಸಿದೆ. ಪೆನ್ಡ್ರೈವ್
ಈ ಕೃತ್ಯದ ಕುರಿತು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಮಹಿಳೆಯರ ಖಾಸಗಿ ಮತ್ತು ಕೌಟುಂಬಿಕ ಬದುಕು ಛಿದ್ರವಾಗಿದೆ. ಕೆಲವರು ಆತ್ಮಹತ್ಯೆಗೂ ಪ್ರಯತ್ನಿಸಿರುವ ವರದಿಗಳಿವೆ. ಯಾವ ಕ್ಷಣದಲ್ಲಿ ಯಾವಾಗ ಮತ್ತೊಂದು ಪೆನ್ ಡ್ರೈವ್ ಹೊರ ಬರುತ್ತದೆಯೋ, ಅದರಲ್ಲಿ ಯಾವ ಮಹಿಳೆಯ ಖಾಸಗಿ ಚಿತ್ರಗಳು ಮತ್ತು ದೃಶ್ಯಗಳು ಬಿತ್ತರಗೊಳ್ಳಲಿವೆಯೋ ಎಂಬ ಆತಂಕ ಮತ್ತು ಕುತೂಹಲ ಎಲ್ಲೆಡೆ ಹರಡಿದೆ. ಈ ಪ್ರಕರಣದ ಪ್ರಮುಖ ಆರೋಪಿ ಎಂದು ಹೇಳಲಾಗುತ್ತಿರುವ ಪ್ರಜ್ವಲ್ ರೇವಣ್ಣ ಮತ್ತು ಹೊಳೆನರಸೀಪುರದಲ್ಲಿ ಪ್ರಕರಣ ದಾಖಲಾಗಿದ್ದು ಅದರಲ್ಲಿ ಮೊದರಲ್ಲಿ ಆರೋಪಿಯಾಗಿರುವ ಎಚ್.ಡಿ.ರೇವಣ್ಣ ರನ್ನು ಕೂಡಲೇ ಬಂಧಿಸಿ ವಿಚಾರಣೆಗೊಳಪಡಿಸಬೇಕು ಎಂದು ದಲಿತ, ರೈತ, ಕಾರ್ಮಿಕ, ಮಹಿಳೆ, ವಿದ್ಯಾರ್ಥಿ, ಯುವಜನ, ಅಲ್ಪಸಂಖ್ಯಾತ ಸಂಘಟನೆಗಳು ಮತ್ತು ಸಮಾನ ಮನಸ್ಕರ ಐಕ್ಯ ವೇದಿಕೆ ಜಿಲ್ಲಾಧಿಕಾರಿಗಳ ಮೂಲಕ ಪತ್ರ ಸಲ್ಲಿಸಿ ಸಿಎಂ ಸಿದ್ದರಾಮಯ್ಯರನ್ನು ಆಗ್ರಹಿಸಿವೆ.
ಇದನ್ನೂ ಓದಿ: ಪೆನ್ಡ್ರೈವ್ ಪ್ರಕರಣ : ಪ್ರಜ್ವಲ್ ರೇವಣ್ಣ ಉಚ್ಛಾಟನೆ ಸಾಧ್ಯತೆ?
ಇಂತಹ ಹೀನ ಕೃತ್ಯ ನಡೆಸಿರುವ ವ್ಯಕ್ತಿಯ ಮತ್ತು ಕುಟುಂಬದ ರಾಜಕೀಯ ಪ್ರಭಾವ ಕೆಲಸ ಮಾಡಿರುವ ಸಾಧ್ಯತೆಯಿದೆ. ಆದರೆ ಯಾವ ಯಾವ ಒತ್ತಡಗಳ ಕಾರಣಕ್ಕೂ, ಕೆಲಸ ಕಾರ್ಯ ಮತ್ತು ಪ್ರಯೋಜನದ ಕಾರಣಕ್ಕೋ ಆತನಿಂದ ಲೈಂಗಿಕವಾಗಿ ಬಳಕೆಯಾಗಿ ವೀಡಿಯೋ ದೃಶ್ಯಗಳಲ್ಲಿ ಸೆರೆಯಾಗಿ ಸಾರ್ವಜನಿಕವಾಗಿ ಮಾನ ಕಳೆದುಕೊಳ್ಳುತ್ತಿರುವ ಮಹಿಳೆಯರು ಮತ್ತವರ ಕುಟುಂಬದ ಗೋಳು ಮಾತ್ರ ಹೇಳತೀರದಾಗಿದೆ. ಇಂತಹ ಸಂದರ್ಭದಲ್ಲಿ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ.ಇದರೊಂದಿಗೆ ಹಕ್ಕೋತ್ತಾಯಗಳನ್ನು ಕೂಡ ಸಂಘಟನೆಗಳು ಈಡೇರಿಸುವಂತೆ ಬೇಡಿಕೆ ಸಲ್ಲಿಸಿವೆ. ಪೆನ್ಡ್ರೈವ್
- ತಡವಾಗಿಯಾದರೂ ಕರ್ನಾಟಕ ಸರ್ಕಾರ ಹಾಸನದ ‘ಪೆನ್ಡೈವ್’ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಗೆ ‘ವಿಶೇಷ ತನಿಕಾ ದಳ ರಚಿಸಿರುವುದನ್ನು ನಾವು ಸ್ವಾಗತಿಸಿರುವ ಸಂಘಟನೆಗಳು, ಪ್ರಕರಣದ ತನಿಖೆಗೆ ಹಾಗು ಆರೋಪಿಗಳ ಬಂಧನಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಅಧಿಕಾರ ಮತ್ತು ಸೂಕ್ತ ವ್ಯವಸ್ಥೆಯನ್ನು ಎಸ್ ಐಟಿಗೆ ಒದಗಿಸಬೇಕು. ಇಡೀ ಪ್ರಕರಣದ ತನಿಖೆಗೆ ಜನಸ್ನೇಹಿ ಹಾಗೂ ಮಹಿಳಾಪರ ಸಂವೇದನೆ ಹೊಂದಿರುವ ಪೋಲೀಸು ಅಧಿಕಾರಿಗಳನ್ನು ಬಳಸಿಕೊಳ್ಳಬೇಕು.
- ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡು ಸಾವಿರಾರು ವೀಡಿಯೋಗಳನ್ನು ಸಂಗ್ರಹಿಸಿಕೊಂಡಿರು ‘ಪೆನ್ಡ್ರೈವ್’ ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ರುವಾರಿ ಪ್ರಜ್ವಲ್ ರೇವಣ್ಣನನ್ನು ಕೂಡಲೇ ಬಂಧಿಸಿ ಆತನ ಮೇಲೆ ಪ್ರಕರಣ ದಾಖಲಿಸಬೇಕು.
- ಸಾರ್ವಜನಿಕರಿಗೆ ವಿತರಿಸಿ ವಾಟ್ಸ್ಆಪ್ ಮುಖಾಂತರ ಎಲ್ಲೆಡೆ ಹರಡಲು ಕಾರಣವಾದವರನ್ನು ಪತ್ತೆಹಚ್ಚಿ ಅವರನ್ನು ಬಂಧಿಸಿ ಅವರ ಮೇಲೆ ಪ್ರಕರಣ ದಾಖಲಿಸಿಬೇಕು.
- ಪ್ರಜ್ವಲ್ ರೇವಣ್ಣ ನಡೆಸಿರುವ ಲೈಂಗಿಕ ದೌರ್ಜನ್ಯಗಳಿಗೆ ಸಂಬಂಧಿಸಿದ ಸಾವಿರಾರು ವೀಡಿಯೋಗಳನ್ನು ಒಳಗೊಂಡಿರುವ ‘ಪೆನ್ಡೈವ್’ ತನ್ನ ಬಳಿ ಇದೆ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿರುವ ಬಿಜೆಪಿ ಮುಖಂಡ ಜಿ. ದೇವರಾಜೇಗೌಡರನ್ನು ವಿಚಾರಣೆಗೆ ಒಳಪಡಿಸಿ ಅವರಿಗೆ ಪೆನ್ಡೈವ್ ಯಾರಿಂದ ಬಂತು ಆ ವ್ಯಕ್ತಿಯಿಂದ ಯಾರ್ಯಾರಿಗೆ ಪೆನ್ ಡ್ರೈವ್ ಹಂಚಿಕೆಯಾಗಿದೆ ಮತ್ತು ಯಾವ ಮೊಬೈಲ್ನಿಂದ ಚಿತ್ರೀಕರಣವಾಗಿದೆ ಎನ್ನುವುದನ್ನು ಪತ್ತೆಹಚ್ಚಬೇಕು. ಹಾಗೂ ಮೊಬೈಲ್ ಮತ್ತು ಪೆನ್ ಡ್ರೈವ್ಗಳನ್ನು ವಶಪಡಿಸಿಕೊಳ್ಳಬೇಕು ಹಾಗೂ ಅವುಗಳು ಸಾರ್ವಜನಿಕವಾಗಿ ಮತ್ತಷ್ಟು ಹಂಚಿಕೆಯಾಗದಂತೆ ತಡೆಗಟ್ಟಬೇಕು.
- ಪೆನ್ಡೈವ್ ಲೈಂಗಿಕ ದೌರ್ಜನ್ಯದಲ್ಲಿ ಸಂತ್ರಸ್ತರಾಗಿರುವ ಮಹಿಳೆಯ ಗೌಪ್ಯತೆಯನ್ನು ಕಾಪಾಡಬೇಕು ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಸಂತ್ರಸ್ತ ಮಹಿಳೆಯರಿಗಾಗಿ ಪ್ರತ್ಯೇಕ ಕೌನ್ಸೆಲಿಂಗ್ ಕೇಂದ್ರಗಳನ್ನು ತೆರೆಯಬೇಕು. ಹಾಗೂ ಸಂತ್ರಸ್ಥ ಮಹಿಳೆಯರಿಗೆ ದೂರು ದಾಖಲಿಸಲು ಸಾಧ್ಯವಾಗುವಂತೆ ಹಾಸನದಲ್ಲಿ ಹಾಗೂ ಬೆಂಗಳೂರಿನಲ್ಲಿ ಪ್ರತ್ಯೇಕವಾದು ದೂರು ಕೇಂದ್ರಗಳನ್ನು ಸ್ಥಾಪಿಸಬೇಕು. ಜೊತೆಗೆ ದೂರು ದಾಖಲಿಸಲು ಬರುವ ಸಂತ್ರಸ್ಥ ಮಹಿಳೆಯರಿಗೆ ಸೂಕ್ತ ಭದ್ರತೆ ಮತ್ತು ಪ್ರಯಾಣ ವ್ಯವಸ್ಥೆ ಒದಗಿಸಬೇಕು.
- ಇಡೀ ಪ್ರಕರಣದ ತನಿಖೆಯಲ್ಲಿ ಹಾಗೂ ಆರೋಪಿಗಳನ್ನು ಬಂಧಿಸುವ ಯಾವುದೇ ರಾಜಕೀಯ ಪ್ರಭಾವ ಹಾಗೂ ಒತ್ತಡಕ್ಕೆ ಒಳಗಾಗದಂತೆ ಎಸ್ಐಟಿ ಕೆಲಸ ಮಾಡುವುದನ್ನು ರಾಜ್ಯ ಸರ್ಕಾರ ಖಾತ್ರಿಪಡಿಸಬೇಕು ಎಂದೆಲ್ಲಾ ಹಕ್ಕೊತ್ತಾಯಗಳ ಮನವಿಯನ್ನು ಸಂಘಟನಕಾರರು ಸಲ್ಲಿಸಿದ್ದಾರೆ.
ಈ ವೇಳೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಕಾರ್ಯದರ್ಶಿ ದೇವಿ, ಗೌರಮ್ಮ,ಕೆ.ಎಸ್.ವಿಮಲ, ಎಐಎಂಎಸ್ಎಸ್ ರಾಜ್ಯ ಕಾರ್ಯದರ್ಶಿ ಶೋಭಾ ವಕೀಲರಾದ ಅಖಿಲ ವಿದ್ಯಾಸಂದ್ರ, ಸಮತಾ ವೇದಿಕೆಯ ಸವಿತಾ, ಸುಶೀಲಾ, ವಿಶ್ರಾಂತ ಕುಲಪತಿ ಸಬಿಹಾ ಭೂಮಿಗೌಡ, ಲೇಖಕರಾದ ರೂಪ ಹಾಸನ, ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಮಮತಾ, ಶಿವು, ಸೌಮ್ಯ ಅರವಿಂದ, ಸಂದೇಶ್ ದಸಂಸ, ವಿಜಯ್ ಕುಮಾರ್ ಮಾದಿಗ ದಂಡೋರ, ಮುಬಶೀರ್ ಅಹಮದ್, ಪುಷ್ಪ, ಜಯಂತಿ, ಸಾಹಿತಿ ಸುವರ್ಣ, ಕಲಾವಿದ ಶಿವಪ್ರಸಾದ್, ಡಿವೈಎಫ್ಐ ಪೃಥ್ವಿ, ಪ್ರಾಂತ ರೈತ ಸಂಘದ ಎಚ್.ಆರ್. ನವೀನ್ ಕುಮಾರ್, ದಸಂಸ ಮುಖಂಡರಾದ ಎಸ್ ಎನ್ ಮಲ್ಲಪ್ಪ, ಕೃಷ್ಣ ದಾಸ್, ಎಂಸಿ ಡೋಂಗ್ರೆ, ಧರ್ಮರಾಜ್ ಸೇರಿದಂತೆ ಅನೇಕರಿದ್ದರು.
ಇದನ್ನೂ ನೋಡಿ: ಮಂಗಳೂರು | ಮತಗಟ್ಟೆ ಬಳಿ ಬಿಜೆಪಿ ಕಾರ್ಯಕರ್ತರ ದಾಂಧಲೆ Janashakthi Media