ಹಾಸನ: ಹಾಸನಾಂಬೆ ದೇವಾಲಯದ ಮುಖ್ಯದ್ವಾರದ ಬಳಿ ಸರ್ಕಾರಿ ನೌಕರ ಜಿಲ್ಲಾ ಪಂಚಾಯತಿಯಲ್ಲಿ ಕಾರ್ಯನಿರ್ವಹಿಸುವ ಶಿವೇಗೌಡ ಎಂಬವರಿಗೆ ಹಾಸನ ಉಪ ವಿಭಾಗಧಿಕಾರಿ ಜಗದೀಶ್ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ. ದೇವರ ದರ್ಶನಕ್ಕೆ ನೂರಾರು ಜನರು ಒಳ ಬರುತ್ತಿದ್ದಾಗ ಅವರ ಜೊತೆಯಲ್ಲಿಯೇ ಶಿವೇಗೌಡ ಬಂದಿದ್ದರು. ಆ ವೇಳೆ ಜಗದೀಶ್ ಆತನನ್ನು ತಡೆದು, ಯಾಕೋ ಓಡಿ ಬರುತ್ತಿದ್ದಿಯಾ, ನಿನಗೆ ಯಾರು ಒಳಬಿಟ್ಟಿದ್ದು ಎಂದು ಏಕವಚನದಲ್ಲಿ ನಿಂದನೆ ಮಾಡಿ ಕಪಾಳ ಮೋಕ್ಷ ಮಾಡಿದ್ದಾರೆ.
ಕುಟುಂಬ ಸಮೇತ ಹಾಸನಾಂಬೆ ದರ್ಶನಕ್ಕೆ ಬಂದಿದ್ದ ಶಿವೇಗೌಡ ಅವರು ಸರತಿ ಸಾಲಿನಲ್ಲಿ ಬರದೆ ಬೇಕಾಬಿಟ್ಟಿಯಾಗಿ ನುಗ್ಗಿದ ಹಿನ್ನೆಲೆ ಜಗದೀಶ್ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಶಿವೇಗೌಡ ಕುಟುಂಬಸ್ಥರು, ಭಕ್ತರು, ಅಧಿಕಾರಿಗಳು ನಡುವೆ ಕಪಾಳಮೋಕ್ಷ ಮಾಡಿದ್ದು, ಜಗದೀಶ್ ಅವರ ನಡೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಲ್ಲದೆ, ಶಿವೇಗೌಡ ತಾನು ಜಿಲ್ಲಾ ಪಂಚಾಯತಿ ನೌಕರ ಎಂದು ಗುರುತಿನ ಚೀಟಿ ತೋರಿಸಿದ್ದಾರೆ. ಆದರೆ ಜಗದೀಶ್ ಕೊರಳಲ್ಲಿ ಧರಿಸಿದ್ದ ಕಾರ್ಡ್ ಕಿತ್ತು ಎಸೆದಿದ್ದು, ಸಣ್ಣ ಕಾರಣಕ್ಕೆ ನೂರಾರು ಭಕ್ತರು, ಪೊಲೀಸರು, ಅಧಿಕಾರಿಗಳ ಸಮ್ಮುಖದಲ್ಲೇ ಕಪಾಳಮೋಕ್ಷ ಮಾಡಿದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.