ತಂದೆ ಶಾಲೆಗೆ ದಾನ ನೀಡಿದ್ದ ಭೂಮಿಯನ್ನು ವಾಪಸ್ ಕಿತ್ತುಕೊಂಡ ಮಾಜಿ ಶಾಸಕ

ಹಾಸನ: ತಂದೆ ದಾನಶೂರ ಕರ್ಣನಂತೆ, ಕೊಡುಗೈ ದಾನಿಯಾಗಿ ಮಕ್ಕಳ ಶಿಕ್ಷಣಕ್ಕಾಗಿ ಶಾಲೆಯೊಂದಕ್ಕೆ ಜಾಗವನ್ನು ದಾನ ಕೊಟ್ಟಿದ್ದರು. ಆದರೆ ಈಗ ಅವರ ಮಗ, ಮಾಜಿ ಶಾಸಕರೊಬ್ಬರು ತಂದೆ ಕೊಟ್ಟಿದ್ದ ಜಮೀನನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದಾರೆ.

ತಂದೆ ನೀಡಿದ್ದ ಭೂಮಿಯನ್ನು ಮರಳಿ ಕೇಳುತ್ತಿರುವ ಮಾಜಿ ಶಾಸಕರ ನಡೆಗೆ ಹಳೇ ವಿದ್ಯಾರ್ಥಿಗಳು ಬೇಸರ ಹೊರಹಾಕಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯಲ್ಲಿ ನಡೆದಿದೆ. ಬಾಳ್ಳುಪೇಟೆಯ ಬಿ. ಸಿದ್ದಣ್ಣಯ್ಯ ಪ್ರೌಢಶಾಲೆ 1973ರಲ್ಲಿ ನಿರ್ಮಾಣವಾಗಿರುವ ಶಾಲೆಯಾಗಿದ್ದು, ಬಾಳ್ಳುಪೇಟೆಯ ಕಾಫಿ ಬೆಳೆಗಾರರು ಮಕ್ಕಳ ಭವಿಷ್ಯ ರೂಪಿಸಲು ವಿನಾಯಕ ಎಜುಕೇಷನ್ ಸೊಸೈಟಿ ಮೂಲಕ ಬಿ. ಸಿದ್ದಣ್ಣಯ್ಯ ಶಾಲೆ ಆರಂಭಿಸಿದ್ದರು. ವಿನಾಯಕ ಎಜುಕೇಷನ್ ಸೊಸೈಟಿಯ ಅಧ್ಯಕ್ಷರಾಗಿದ್ದ ಮಾಜಿ ಶಾಸಕ ಬಿ.ಆರ್. ಗುರುದೇವ್ ರ ತಂದೆ ಬಿ.ಜಿ. ಗುರಪ್ಪ ಶಾಲೆಗಾಗಿ ತನ್ನ ಸ್ವಂತ ಆಸ್ತಿ ನಾಲ್ಕು ಎಕರೆಯನ್ನು ದಾನ ಮಾಡಿದ್ದರು. 50 ವರ್ಷಗಳ ಹಿಂದೆ ಅಂದರೆ, ಅದು 1971ರಲ್ಲಿ ಆಗಿನ ಕಾರ್ಯದರ್ಶಿ ಬಿ. ಸಿದ್ದಣ್ಣಯ್ಯ ಹಾಗೂ ಕಾಫಿ ಬೆಳೆಗಾರರು ಶಾಲಾ ಕಟ್ಟಡ ನಿರ್ಮಾಣದ ಹೊಣೆ ಹೊತ್ತು ಶಾಲೆ ಕಟ್ಟಿದ್ದರು.

ತಂದೆ ದಾನ ಕೊಟ್ಟಿದ್ದ ಆಸ್ತಿ ಮೇಲೆ ಮಾಜಿ ಶಾಸಕ ಬಿ.ಆರ್. ಗುರುದೇವ್ ಕಣ್ಣು ಬಿದ್ದು, ಶಾಲಾ ಆಟದ ಮೈದಾನಕ್ಕೆ ಕಾಂಪೌಂಡ್ ಹಾಕಲು ಮುಂದಾಗಿ ತಮ್ಮ ವಶಕ್ಕೆ ಪಡೆದಿದ್ದಾರೆ.ತಂದೆ ದಾನ ಕೊಟ್ಟಿದ್ದ ಜಮೀನು ಇನ್ನೂ ಶಾಲೆಯ ಆಡಳಿತ ಮಂಡಳಿ ತನ್ನ ಹೆಸರಿಗೆ ಮಾಡಿಸಿಕೊಂಡಿರಲಿಲ್ಲ. ಅಲ್ಲದೇ ಶಾಲೆ ಪಕ್ಕ ರಾಷ್ಟ್ರೀಯ ಹೆದ್ದಾರಿ ಹೊಸ ರಸ್ತೆ ನಿರ್ಮಾಣವಾಗಿದ್ದು, ಕೋಟ್ಯಂತರ ರೂಪಾಯಿ ಮೌಲ್ಯ ಈ ಆಸ್ತಿಗೆ ಬಂದಿದೆ. ಹೀಗಾಗಿ ದಾನ ನೀಡಿದ್ದ 4 ಎಕರೆ ಜಮೀನು ಪೈಕಿ 2 ಎಕರೆಯನ್ನು ತಮ್ಮ ಸ್ವಾಧೀನಕ್ಕೆ ಪಡೆಯಲು ಮುಂದಾಗಿದ್ದಾರೆ. ಹೀಗಾಗಿ ಶಾಲೆ ಉಳಿಸಿ ಎಂದು ಹಳೆಯ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದಾರೆ.

ಬಾಳ್ಳುಪೇಟೆ ಅಂದರೆ ಹೆಚ್ಚಿನ ಕಾಫಿ ಬೆಳೆಗಾರರು ಇರುವ ಸ್ಥಳ. 50 ವರ್ಷಗಳ ಹಿಂದೆ ಕಾಫಿ ಬೆಳೆಗಾರರು ಮುಂದೆ ಮಕ್ಕಳಿಗೆ ಉಜ್ವಲ ಭವಿಷ್ಯ ಸಿಗಲೆಂದು ಶಾಲೆ ಕಟ್ಟಿದ್ದರು. 50 ವರ್ಷಗಳಿಂದ ಲಕ್ಷಾಂತರ ಮಕ್ಕಳಿಗೆ ಈ ಶಾಲೆ ವಿದ್ಯೆ ನೀಡಿದೆ. ಆದರೆ ಆಡಳಿತ ಮಂಡಳಿಯವರು ಶಾಲೆಗೆ ನೀಡಲಾಗಿದ್ದ ದಾನದ ಜಮೀನನ್ನು ತಮ್ಮ ಎಜುಕೇಷನ್ ಸೊಸೈಟಿ ಹೆಸರಿಗೆ ಮಾಡಿಸಿಕೊಂಡಿರಲಿಲ್ಲ. ಇದರ ಲಾಭ ಪಡೆಯಲು ಈಗ ಬಿ.ಜಿ. ಗುರಪ್ಪ ಮಗ, ಮಾಜಿ ಶಾಸಕ ಗುರುದೇವ್ ಮುಂದಾಗಿದ್ದಾರೆಂಬುದು ಸ್ಥಳೀಯರು ಆರೋಪ ಮಾಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನಾಗಿದ್ದರಿಂದ ಆಸ್ತಿಗೆ ಕೋಟ್ಯಂತರ ರೂಪಾಯಿ ಬೆಲೆ ಬಂದಿದೆ. ರಸ್ತೆಗೆ 20 ಗುಂಟೆ ಜಮೀನು ಸ್ವಾಧೀನ ಪಡಿಸಿಕೊಂಡಿದ್ದು, ಆ ಪರಿಹಾರ ಹಣವನ್ನು ಗುರುದೇವ್ ಪಡೆದಿದ್ದಾರೆ. ಈ ಬಗ್ಗೆ ಆಡಳಿತ ಮಂಡಳಿ ಕಾನೂನು ಹೋರಾಟ ಸಹ ನಡೆಸುತ್ತಿದೆ. 1971ರಲ್ಲಿ ಸ್ವತಃ ಬಿ.ಜಿ. ಗುರಪ್ಪನವರೇ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ 4 ಎಕರೆ ಜಮೀನು ನೀಡುತ್ತಿರುವುದಾಗಿ ತಿಳಿಸಿ ಸಹಿ ಹಾಕಿದ್ದಾರೆ. ಆದರೆ ಅವರ ಮಗ ಜಮೀನು ವಾಪಸ್ ಪಡೆಯಲು ಮುಂದಾಗಿರುವುದು ಸರಿಯಲ್ಲ ಎಂಬುದು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಶಾಂತರಾಜ್ ವಾದವಾಗಿದೆ.
ಅನುದಾನಿತ ಬಿ. ಸಿದ್ದಣ್ಣಯ್ಯ ಶಾಲೆ ಜಾಗಕ್ಕೆ ಈಗ ಆಡಳಿತ ಮಂಡಳಿ ಮತ್ತು ದಾನ ನೀಡಿದ್ದವರ ಮಗನ ನಡುವೆ ಹೋರಾಟ ನಡೆಯುತ್ತಿದೆ. ಹಳೆಯ ವಿದ್ಯಾರ್ಥಿಗಳು ನಮಗೆ ಭವಿಷ್ಯ ರೂಪಿಸಿದ್ದ ಶಾಲೆ ಉಳಿಸಿ ಎಂದು ಹೋರಾಟ ಮಾಡಲು ಮುಂದಾಗಿದ್ದಾರೆ. ಸದ್ಯ ಶಾಲೆಯಲ್ಲಿ 240 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಮಕ್ಕಳ ಶಿಕ್ಷಣಕ್ಕೆ ತೊಂದರೆ ಉಂಟಾಗಿದೆ. ಶಾಸಕರು, ಶಿಕ್ಷಣ ಸಚಿವರು ಶಾಲೆ ಜಾಗ ಉಳಿಸಿ, ಅನುದಾನಿತ ಶಾಲೆ ಉಳಿಸಿಕೊಡಿ ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *