ಹಾಸನ : ತುತ್ತು ಅನ್ನ ಬೇಡಿ ಬಂದ 18 ಜನ ಕಾರ್ಮಿಕರನ್ನು ಜೀತಕಿಟ್ಟುಕೊಂಡು ಉಪವಾಸದಿಂದ ಕೂಡಿ ಹಾಕಿದ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.
ಜೀತ ಪದ್ಧತಿ ಇನ್ನೂ ಕೂಡ ಜೀವಂತವಾಗಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಕೂಲಿ ಕೆಲಸಕ್ಕೆಂದು ಕರೆದುಕೊಂಡು ಬಂದು 18 ಮಂದಿಯನ್ನು ಕೂಡಿ ಹಾಕಿದ ಅವರಿಗೆ ಅನ್ನ, ನೀರು ನೀಡದೆ ಚಿತ್ರಹಿಂಸೆ ನೀಡಿದ್ದಾರೆ. ಸಧ್ಯ ಕಾರ್ಮಿಕರನ್ನು ಪೊಲೀಸರು ರಕ್ಷಿಸಿದ್ದು,ಜೊತೆಗೆ ಮುನೇಶ್ ಎಂಬ ಕಿರಾತಕ ಆರೋಪಿಯನ್ನು ಬಂಧಿಸಿದ್ದಾರೆ.
ಹಾಸನ ಜಿಲ್ಲೆ, ಅರಸೀಕೆರೆ ತಾಲೂಕಿನ, ಬಾಣಾವರ ಹೋಬಳಿ, ಚೆಲುವನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಬಂಧಿತ ಮುನೇಶ್ ಕಾರ್ಮಿಕರಿಗೆ ಕೆಲಸ ಕೊಡಿಸುತ್ತೇನೆಂದು ಕರೆದುಕೊಂಡು ಬಂದು ಎಲ್ಲರನ್ನೂ ಒಂದೆಡೆ ಕೂಡಿ ಹಾಕಿದ್ದ. ಮಾತ್ರವಲ್ಲ ಸರಿಯಾಗಿ ವೇತನ, ಆಹಾರ ನೀಡದೆ ದುಡಿಸಿಕೊಳ್ಳುತ್ತಿದ್ದ ಎಲ್ಲರನ್ನೂ ಒಂದೇ ವಾಹನದಲ್ಲಿ ಕೆಲಸಕ್ಕೆ ಕರೆದುಕೊಂಡು ಹೋಗಿ ಮತ್ತೆ ತೋಟದ ಮನೆಯಲ್ಲಿ ಕೂಡಿ ಹಾಕುತ್ತಿದ್ದ. ಮಾತ್ರವಲ್ಲ ಯಾರನ್ನೂ ಕೂಡ ಹೊರಗೆ ಬಿಡದೆ ದುಡಿಸಿಕೊಂಡು ಚಿತ್ರಹಿಂಸೆ ನೀಡುತ್ತಿದ್ದ. ಮುನೇಶ್ ನ ಚಿತ್ರಹಿಂಸೆಗೆ ಸ್ನಾನ, ಬಟ್ಟೆ, ಆಹಾರವಿಲ್ಲದೆ ಕಾರ್ಮಿಕರು ನೋವು ಅನಿಭವಿಸಿದ್ದರು. ಮುನೇಶ್ ಬಂಧನ ಇದೇ ಮೊದಲೇನಲ್ಲ ನಾಲ್ಕನೇ ಭಾರಿ ಈತನ ಬಂಧಿತವಾಗುತ್ತಿದೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ : ಮೇ 26ರಂದು ಉಪ ವಿಭಾಗಾಧಿಕಾರಿ ಕೃಪಾಲಿನಿಯವರಿಗೆ ಖಚಿತ ಮಾಹಿತಿಯೊಂದಿಗೆ, ತಹಶೀಲ್ದಾರ್ ವಿದ್ಯಾ ವಿಭಾ ರಾಠೋಡ, ಕಂದಾಯ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳೊಂದಿಗೆ ಪೊಲೀಸರ ಸಹಕಾರದಲ್ಲಿ ದಾಳಿ ನಡೆಸುತ್ತಾರೆ. ಜಮೀನಿನಲ್ಲಿ ಶುಂಠಿ ಕೀಳುತ್ತಿದ್ದ ಕಾರ್ಮಿಕರನ್ನು ವಿಚಾರಣೆಗೆ ಒಳಪಡಿಸಿದ್ದರು. ಆಗ, ‘ಕೂಲಿ ಕೊಡದೇ ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದ್ದಾರೆ’ ಎಂದು ಕಾರ್ಮಿಕರು ತಿಳಿಸಿದ್ದರು.
ಗದಗ, ಬಳ್ಳಾರಿ, ಕಲ್ಬುರ್ಗಿ ಸೇರಿದಂತೆ ಕೆಲವು ಜಿಲ್ಲೆಗಳಿಂದ ಅರಸೀಕೆರೆ ರೈಲು ನಿಲ್ದಾಣಕ್ಕೆ ಆಗಮಿಸಿದ್ದ ಕಾರ್ಮಿಕರಿಗೆ ಕೆಲಸ ಕೊಡಿಸುವ ನೆಪದಲ್ಲಿ ಅನಿಲ್ ಎಂಬ ವ್ಯಕ್ತಿ, ಮನೀಶ್ ಬಳಿ ಕರೆದುಕೊಂಡು ಬರುತ್ತಾನೆ.
ಎರಡು ತಿಂಗಳಿಂದ ಕಾರ್ಮಿಕರನ್ನು ಶೆಡ್ನಲ್ಲಿ ಇರಿಸಿಕೊಂಡಿದ್ದು, ಹೊರಗೆ ಹೋಗದಂತೆ ಬೇಲಿ ನಿರ್ಮಿಸಿದ್ದ. ನಿತ್ಯ ವಾಹನಗಳಲ್ಲಿ ಚನ್ನರಾಯಪಟ್ಟಣ, ಬಾಣಾವರ, ಅಣತಿ, ಕೆಂಬಾಳು ಸೇರಿದಂತೆ ಹಲವೆಡೆ ಕರೆದೊಯ್ದು ಶುಂಠಿ ಕೀಳುವ ಕೆಲಸ ಮಾಡಿಸುತ್ತಿದ್ದ. ಸಂಜೆ ಶೆಡ್ಗೆ ತಂದು ಬಿಡುತ್ತಿದ್ದ. ಈ ವಿಷಯವನ್ನು ತಿಳಿಸಲು ಕಾರ್ಮಿಕರ ಬಳಿ ಮೊಬೈಲ್ ಫೋನ್ ಕೂಡ ಇರಲಿಲ್ಲ. ಕೆಲಸ ಮಾಡುತ್ತಿದ್ದ ಹೊಲದಲ್ಲಿನ ಕೆಲವರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.