- ಹರ್ಯಾಣದ ಅರಾವಳಿ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ
- ಗಣಿಗಾರಿಕೆ ತಡೆಯಲು ಹೋಗಿದ್ದ ಅಧಿಕಾರಿ ಮೇಲೆ ಹರಿದ ಲಾರಿ
- ಪೊಲೀಸ್ ಅಧಿಕಾರಿಯನ್ನು ಕೊಂದು ಪರಾರಿಯಾದ ಟ್ರಕ್ ಚಾಲಕ
ಚಂಡೀಗಡ: ಹರ್ಯಾಣದ ನುಹ್‌ನಲ್ಲಿ ಅಕ್ರಮ ಗಣಿಗಾರಿಕೆ ಮಾಫಿಯಾವನ್ನು ತಡೆಯಲು ಹೋದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಆರೋಪಿಗಳು ಲಾರಿ ಹರಿಸಿ ಕೊಲೆ ಮಾಡಿರುವ ದುರಂತ ಘಟನೆ ನಡೆದಿದೆ.
ಡಿಎಸ್‌ಪಿ ಶ್ರೇಣಿಯ ಅಧಿಕಾರಿ ಸುರೇಂದ್ರ ಸಿಂಗ್ ಬಿಶ್ನೋಯಿ, ಗಣಿ ಮಾಫಿಯಾಕ್ಕೆ ಬಲಿಯಾದ ದುರ್ದೈವಿ. ಅರಾವಳಿ ಪರ್ವತ ಶ್ರೇಣಿಯ ಸಮೀಪದ ಪಚಗಾಂವ್ ಪ್ರದೇಶದಲ್ಲಿ ಕಲ್ಲುಗಳ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬ ಮಾಹಿತಿ ಅವರಿಗೆ ದೊರೆತಿತ್ತು. ಅದನ್ನು ತಡೆಯುವುದಕ್ಕಾಗಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ಪೊಲೀಸ್ ತಂಡವೊಂದರ ಜತೆ ಅವರು ಸ್ಥಳಕ್ಕೆ ತೆರಳಿದ್ದರು.
ಅಕ್ರಮ ಗಣಿಗಾರಿಕೆಯಲ್ಲಿ ನಿರತರಾಗಿದ್ದ ದುಷ್ಕರ್ಮಿಗಳು ಆರಂಭದಲ್ಲಿ ಪೊಲೀಸರ ಜತೆ ವಾಗ್ವಾದ ನಡೆಸಿದರು. ಬಳಿಕ ಅಲ್ಲಿಂದ ಪರಾರಿಯಾಗಲು ಆರಂಭಿಸಿದರು. ಆಗ ದಾರಿಗೆ ಅಡ್ಡಲಾಗಿ ನಿಂತ ಹಿರಿಯ ಅಧಿಕಾರಿ ಸುರೇಂದ್ರ ಸಿಂಗ್ ಬಿಶ್ನೋಯಿ, ಕಲ್ಲು ತುಂಬಿದ್ದ ಟ್ರಕ್‌ಗಳನ್ನು ನಿಲ್ಲಿಸುವಂತೆ ಸೂಚಿಸಿದ್ದರು. ಆದರೆ ಟ್ರಕ್ ಒಂದರ ಚಾಲಕ ಅವರ ಮೇಲೆಯೇ ವಾಹನ ನುಗ್ಗಿಸಿದ್ದಾನೆ. ಟ್ರಕ್ ಹರಿದು ಅಧಿಕಾರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಇನ್ನಿಬ್ಬರು ಪೊಲೀಸ್ ಸಿಬ್ಬಂದಿ ಪಕ್ಕಕ್ಕೆ ಜಿಗಿದಿದ್ದರಿಂದ ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾಗಿದ್ದಾರೆ. ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
यह क्या हाल बना दिया हमारे प्रदेश का @mlkhattar जी?
ना प्रदेश में विधायक सुरक्षित हैं, ना ही पुलिस।
जनता का क्या हाल होगा?
बहुत दुखद समाचार। हम प्रार्थना करते हैं कि डीएसपी सुरेंद्र सिंह जी की आत्मा को शांति मिले और परिवार को तुरंत न्याय मिले। https://t.co/aXchjfo4G9
— Haryana Congress (@INCHaryana) July 19, 2022
ಚಾಲಕನನ್ನು ಬಂಧಿಸಲು ಪೊಲೀಸರು ಪತ್ತೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಘಟನೆ ಬಗ್ಗೆ ಟ್ವಿಟ್ಟರ್‌ನಲ್ಲಿ ಸಂತಾಪ ಸೂಚನೆ ಮಾಡಿರುವ ಹರ್ಯಾಣ ಪೊಲೀಸ್ ವಿಭಾಗ, ತಪ್ಪಿತಸ್ಥರನ್ನು ನ್ಯಾಯದ ಕುಣಿಕೆ ಒಡ್ಡಲು ಯಾವ ಪ್ರಯತ್ನವನ್ನೂ ಬಿಡುವುದಿಲ್ಲ ಎಂದು ಹೇಳಿದೆ.
ಹರ್ಯಾಣದಲ್ಲಿ ನಡೆದ 2021-22ನೇ ಸಾಲಿನ ಆರ್ಥಿಕ ಸಮೀಕ್ಷೆ ಪ್ರಕಾರ, ರಾಜ್ಯದಲ್ಲಿ 21,450 ಅಕ್ರಮ ಗಣಿಗಾರಿಕೆ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 2014-15 ರಿಂದ 2021ರ ಸೆಪ್ಟೆಂಬರ್‌ವರೆಗೆ ಸೂಕ್ತ ದಾಖಲೆಗಳು ಇಲ್ಲದೆ ಖನಿಜಗಳನ್ನು ಸಾಗಿಸುವುದು ಸೇರಿದೆ. 2009ರಲ್ಲಿಯೇ ಸುಪ್ರೀಂಕೋರ್ಟ್ ಗಣಿಗಾರಿಕೆಗೆ ನಿಷೇಧ ವಿಧಿಸಿ ಆದೇಶಿಸಿತ್ತು. ಆದರೂ ಅರಾವಳಿ ಪ್ರದೇಶದಲ್ಲಿನ ಅನೇಕ ಭಾಗಗಳಲ್ಲಿ ಅಕ್ರಮ ಗಣಿಗಾರಿಕೆ ಅಡೆತಡೆಯಿಲ್ಲದೆ ಮುಂದುವರಿದಿದೆ.
ಅರಾವಳಿ ಬಚಾವೋ ನಾಗರಿಕ ಚಳವಳಿ ಎಂಬ ಸಂಘಟನೆಯೊಂದು ಈ ವರ್ಷ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯನ್ನು ಸಂಪರ್ಕಿಸಿತ್ತು. ಈ ಪ್ರದೇಶದ ಕನಿಷ್ಠ 16 ಭಾಗಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿತ್ತು. ಈ ಬಗ್ಗೆ ಅನೇಕ ದೂರುಗಳನ್ನು ನೀಡಿದ್ದರೂ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿತ್ತು.