- ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಒಟ್ಟು 13 ಪದಕ
- ದೇಶಕ್ಕೆ ಪದಕ ಗೆದ್ದ ಮೊದಲ ಆರ್ಚರಿಪಟು ಹರ್ವಿಂದರ್
- ಭಾರತಕ್ಕೆ 2 ಚಿನ್ನ, 6 ಬೆಳ್ಳಿ, 5 ಕಂಚು
- ಆರ್ಚರಿಯಲ್ಲಿ ಕಂಚಿನ ಪದಕ ಗೆದ್ದ ಹರ್ವಿಂದರ್ ಸಿಂಗ್
ಟೋಕಿಯೋ: ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಪ್ಯಾರಾಥ್ಲೀಟ್‌ಗಳ ಪದಕಗಳ ಬೇಟೆ ಮುಂದುವರೆದಿದೆ. ಪುರುಷರ ವೈಯುಕ್ತಿಕ ರಿಕರ್ವ್ ಆರ್ಚರಿ ಸ್ಪರ್ಧೆಯಲ್ಲಿ ಹರ್ವಿಂದರ್ ಸಿಂಗ್ ಕಂಚಿನ ಪದಕ ಜಯಿಸಿದ್ದಾರೆ. ಇದರೊಂದಿಗೆ ಭಾರತಕ್ಕೆ ಇದುವರೆಗೆ 13 ಪದಕಗಳು ಲಭಿಸಿದೆ.
ಭಾರತವು ಪದಕ ಪಟ್ಟಿಯಲ್ಲಿ 37ನೇ ಸ್ಥಾನದಲ್ಲಿದ್ದು, ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅತ್ಯಧಿಕ ಪದಕವನ್ನು ಗಳಿಸಿ ಸಾಧನೆ ಮಾಡಿದೆ.
ಇದನ್ನು ಓದಿ: ಅವನಿ ಲೇಖರಾಗೆ ಒಂದೇ ಕ್ರೀಡಾಕೂಟದಲ್ಲಿ 2 ಪದಕ: ಐತಿಹಾಸಿಕ ಸಾಧನೆಗೈದ ಭಾರತದ ಮಹಿಳೆ
ಭಾರತದ ಆರ್ಚರಿ ಪಟು ಹರ್ವಿಂದರ್ ಸಿಂಗ್ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಕೊರಿಯಾದ ಪ್ರತಿಸ್ಪರ್ಧಿ ಎದುರು 6-5 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಕಂಚಿಗೆ ಕೊರಳೊಡ್ಡಿದ್ದಾರೆ. ಸಾಕಷ್ಟು ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಆರ್ಚರಿಪಟುಗಳು ಸಮಬಲ ಸಾಧಿಸಿದ್ದರು. ಹೀಗಾಗಿ ಫಲಿತಾಂಶಕ್ಕಾಗಿ ಶಾಟ್‌ಆಫ್ ಮೊರೆ ಹೋಗಲಾಯಿತು. ಶಾಟ್‌ಆಫ್‌ನಲ್ಲಿ ಹರ್ವಿಂದರ್ ಅವರಿಗೆ 10 ಅಂಕ ಗಳಿಸಿದರೆ, ಕಿಮ್ ಮಿನ್ ಸು 8 ಅಂಕ ಗಳಿಸಿದರು.
ಹರ್ಯಾಣ ಮೂಲದ ಅರ್ಚರಿ ಪಟು ಪದಕ ಗೆದ್ದು, ಹೊಸ ಇತಿಹಾಸ ನಿರ್ಮಿಸಿದ್ದಾರೆ. ಭಾರತದ ಕ್ರೀಡಾಪಟುಗಳು ಇನ್ನಷ್ಟು ಪದಕಗಳನ್ನು ಗೆಲ್ಲುವ ಸಾಧ್ಯತೆಗಳಿವೆ.
ಹಾಲಿ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. 2 ಚಿನ್ನ, 6 ಬೆಳ್ಳಿ ಮತ್ತು 5 ಕಂಚಿನ ಪದಕ ಗಳಿಸಿಕೊಂಡಿವೆ.