ಚೆನ್ನೈ: 2021ರ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ 14ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಮುಂಬೈ ಇಂಡಿಯನ್ಸ್ ವಿರುದ್ಧ 2 ವಿಕೆಟ್ ಜಯ ಗಳಿಸಿದೆ.
ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಕಾರಣ ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ನಿಗದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತ್ತು.
ಮುಂಬೈ ಪರ ಕ್ರಿಸ್ ಲಿನ್ (49), ಸೂರ್ಯಕುಮಾರ್ ಯಾದವ್ (31), ಇಶಾನ್ ಕಿಶನ್ (29) ಉತ್ತಮ ಮೊತ್ತ ಕಲೆ ಹಾಕಿದ್ದರು. ಆರ್ಸಿಬಿ ಪರ ಹರ್ಷಲ್ ಪಟೇಲ್ 5 ವಿಕೆಟ್ ಪಡೆದು ಮಿಂಚಿದರೆ ವಾಷಿಂಗ್ಟನ್ ಸುಂದರ್, ಕೈಲ್ ತಲಾ ಒಂದು ವಿಕೆಟ್ ಪಡೆದರು.
ಮುಂಬೈನಿಂದ 160 ರನ್ ಗುರಿ ಪಡೆದ ಬೆಂಗಳೂರು ಪರ ಜಿಜೆ ಮ್ಯಾಕ್ಸ್ ವೆಲ್ (39), ಎಬಿಡಿ (43), ನಾಯಕ ಕೊಹ್ಲಿ (33) ಉತ್ತಮ ಪ್ರದರ್ಶನ ನೀಡಿದ್ದರು. ಬೆಂಗಳೂರು ನಿಗದಿತ ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು ಗುರಿ ತಲುಪಿದೆ.
ಮುಂಬೈ ಪರ ಜಸ್ ಪ್ರೀತ್ ಬುಮ್ರಾ, ಜನ್ಸೆನ್ ತಲಾ ಎರಡು ವಿಕೆಟ್, ಬೋಲ್ಟ್, ಕುನಾಲ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದರು.
ಹರ್ಷಲ್ ಪಟೇಲ್ ಮ್ಯಾಜಿಕ್ & ಪಂದ್ಯ ಗೆಲ್ಲಿಸಿದ ಎಬಿಡಿ : ಈ ಪಂದ್ಯದಲ್ಲಿ ಹರ್ಷಲ್ ಪಟೇಲ್ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಯ ನಿರೀಕ್ಷೆಗೆ ತಕ್ಕಂತೆ ಉತ್ತಮ ಆಟ ಆಡಿದರು. ಅವರು ತಮ್ಮ 4 ಓವರ್ ನಲ್ಲಿ 6.75 ಸರಾಸರಿಯಲ್ಲಿ 27 ರನ್ ನೀಡಿದರು ಮತ್ತು ಅವರ ಹೆಸರಿನಲ್ಲಿ 5 ವಿಕೆಟ್ ಪಡೆದರು. ಅವರು ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ ಮತ್ತು ಮಾರ್ಕೊ ಜೆನ್ಸನ್ ಅವರನ್ನು ಔಟ್ ಮಾಡಿದರು.
ಮುಂಬೈ ನಿಡಿದ 160 ರನ್ಗಳ ಟಾರ್ಗೆಟನ್ನು ಬೆನ್ನಟ್ಟಿದ ಆರ್ಸಿಬಿಯ ಆರಂಭ ಅಷ್ಟು ಉತ್ತಮವಾಗಿರಲಿಲ್ಲ. ಆರಂಭಿಕನಾಗಿ ಬಂದ ಸುಂದರ್ 10 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ರಜತ್ ಕೂಡ ಹೆಚ್ಚು ಸಮಯ ನಿಲ್ಲಲಿಲ್ಲ. ಕೊಹ್ಲಿ ಜೊತೆಗೂಡಿದ ಮ್ಯಾಕ್ಸ್ವೆಲ್ ಉತ್ತಮ ಆಟ ಆಡಿದರು. 28 ಎಸೆತ ಎದುರಿಸಿದ ಮ್ಯಾಕ್ಸ್ವೆಲ್ 39 ರನ್ಗಳಿಸಿದರು. ಇದರಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸೇರಿದ್ದವು.
ಉತ್ತಮ ಜೊತೆಯಾಟ ಆಡುತ್ತಿದ್ದ ಕೊಹ್ಲಿ 33 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಡಿವಿಲಿಯರ್ಸ್ ತಮ್ಮ ಎಂದಿನ ಆಟಕ್ಕೆ ಮುಂದಾದರು. ಒಂದು ಹಂತದಲ್ಲಿ ಉತ್ತಮವಾಗಿ ಆಡುತ್ತಿದ್ದ ಮ್ಯಾಕ್ಸ್ವೆಲ್ ಇಲ್ಲದ ಹೊಡೆತ ಆಡಲು ಹೋಗಿ ಔಟಾದರು. ಈ ವಿಕೆಟ್ ಬಳಿಕ ಏಕಾಂಗಿ ಹೋರಾಟ ನಡೆಸಿದ ಡಿವಿಲಿಯರ್ಸ್ ತಂಡವನ್ನು ಗೆಲುವಿನ ಅಂಚಿಗೆ ತಂದು ರನ್ ಔಟ್ ಆದರು. ವಿಕೆಟ್ಗೂ ಮುನ್ನ ಡಿವಿಲಿಯರ್ಸ್ ಕೇವಲ 27 ಬಾಲ್ಗಳಲ್ಲಿ 48 ರನ್ ಗಳಿಸಿದ್ದರು. ಅಂತಿಮವಾಗಿ ಬೌಲಿಂಗ್ನಲ್ಲಿ ಮಿಂಚಿದ್ದ ಹರ್ಷಲ್ ಪಟೇಲ್ ಕೊನೆಯ ಎಸೆತದಲ್ಲಿ ಸಿಂಗಲ್ ತೆಗೆದುಕೊಳ್ಳುವ ಮೂಲಕ ಆರ್ಸಿಬಿಗೆ ಗೆಲುವಿನ ಮಾಲೆ ತೋಡಿಸಿದರು.
ಈ ಸೋಲಿನೊಂದಿಗೆ ಮುಂಬೈ ಇಂಡಿಯನ್ಸ್ ತಮ್ಮ ಮುಜುಗರದ ದಾಖಲೆಯನ್ನು ಉಳಿಸಿಕೊಂಡಿದೆ. ಐಪಿಎಲ್‌ನ ಅತ್ಯಂತ ಯಶಸ್ವಿ ತಂಡ ಮುಂಬೈ ಇಂಡಿಯನ್ಸ್ 2013 ರಿಂದ ಪಂದ್ಯಾವಳಿಯ ಮೊದಲ ಪಂದ್ಯವನ್ನು ಗೆದ್ದಿಲ್ಲ ಎಂದರೆ ಆಶ್ಚರ್ಯವನ್ನುಂಟು ಮಾಡುತ್ತದೆ. ಐಪಿಎಲ್ ನ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಮುಖಾಮುಖಿಯಾಗಲಿವೆ.