ಶಿವಮೊಗ್ಗ : ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಯಾದ ನಂತರ ಸಮಾಜದಲ್ಲಿ ಶಾಂತಿ ಕಾಪಾಡುವಂತೆ ಹರ್ಷ ಸಹೋದರಿ ಅಶ್ವಿನಿ ಮನವಿ ಮಾಡಿದ್ದಾರೆ. ಮಾಧ್ಯಮದ ಮುಂದೆ ಮಾತನಾಡಿರುವ ಅವರ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಸಾಮರಸ್ಯದ ಮಾತುಗಳ ಮೂಲಕ ಅವರು ಗಮನ ಸೆಳೆದಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು,” ಹಿಂದುತ್ವ, ಹಿಂದೂ ಎಂದಿದ್ದಕ್ಕೆ ಇವತ್ತು ಆ ಸ್ಟೇಜ್‌ನಲ್ಲಿ ಬಿದ್ದಿದ್ದಾನೆ ನನ್ನ ತಮ್ಮ, ದಯವಿಟ್ಟು ಎಲ್ಲರೂ ಒಂದು ಸಲ ನೋಡಿ. ಎಲ್ಲರೂ ನನ್ನ ಸಹೋದರರೇ. ಹಿಂದೂ ಮುಸ್ಲಿಂ ಎಲ್ಲರೂ ಮನುಷ್ಯರೆ. ಹಿಂದೂ ಮುಸ್ಲಿಂ ಗಲಾಟೆ ಬೇಡ. ಪ್ರತಿಯೊಬ್ಬರು ನನ್ನ ಅಣ್ಣ ತಮ್ಮಂದಿರೇ. ನಿಮ್ಮಲ್ಲಿ ಯಾರಿಗೇ ನೋವಾದರೂ ನನಗೆ ನೋವಾಗುತ್ತದೆ ಎಂದು ಹೇಳಿದ್ದಾರೆ.
ಎಲ್ಲರೂ ಮೊದಲು ಮನೆಗೆ, ತಂದೆ-ತಾಯಿಗೆ ಉತ್ತಮ ಮಕ್ಕಳಾಗಿರಬೇಕು, ಯಾರೂ ತೊಂದರೆ ಮಾಡಿಕೊಳ್ಳಬೇಡಿ, ದೇಶದಲ್ಲಿ ಪ್ರತಿಯೊಬ್ಬರೂ ಅಣ್ಣತಮ್ಮಂದಿರು, ಇಲ್ಲಿ ಜಾತಿ,ಮತದ ಭೇದವಿಲ್ಲ, ಹರ್ಷ ಕಳೆದುಕೊಂಡ ನೋವಲ್ಲಿದ್ದೇವೆ, ಇಲ್ಲಿ ಜಾತಿ, ಮತಕ್ಕಿಂತ ಮನುಷ್ಯತ್ವ ಮುಖ್ಯ, ನನ್ನ ಅಮ್ಮ ನೋವನುಭವಿಸುತ್ತಿದ್ದಾರೆ, ಅದನ್ನೇ ನೋಡಲಾಗುತ್ತಿಲ್ಲ, ಇನ್ನು ಮುಂದಾದರೂ ಇಂತಹ ಘಟನೆಗಳಾಗುವುದು ಬೇಡ, ಎಲ್ಲರೂ ಹೊಡೆದಾಡುವುದಕ್ಕಿಂತ ಶಾಂತಿಯಿಂದ ಅಣ್ಣತಮ್ಮಂದಿರಂತೆ ನೆಲೆಸೋಣ ಎಂದು ಕೇಳಿಕೊಂಡರು.
ಇವತ್ತು ಹರ್ಷನನ್ನು ಕಳೆದುಕೊಂಡಿರುವ ನೋವು ಈ ನಾಡಿನ ಪ್ರತಿಯೊಬ್ಬರಿಗೂ ಆಗಿದೆ. ನೋವಾದರೆ ಎಲ್ಲರಿಗೂ ನೋವಾಗುತ್ತದೆಯಲ್ಲವೇ, ರಕ್ತ ಎಲ್ಲರದ್ದೂ ಒಂದೇ ಅಲ್ಲವೇ ಎಂದು ಮನವಿ ಮಾಡಿದ್ದಾರೆ. ಅಶ್ವಿನಿಯವರ ಈ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿವೆ.
ಇದನ್ನೂ ನೋಡಿ : ದ್ವೇಷ ಬಿಡಿ, ಅಣ್ಣ ತಮ್ಮಂದಿರ ಹಾಗೆ ಇರಿ
ಶಿವಮೊಗ್ಗದಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ನಡೆಸುತ್ತಿರುವ ಈ ಸಂದರ್ಭದಲ್ಲಿ ಅಶ್ವಿನಿಯವರ ಈ ಮಾತುಗಳು ಧಾರ್ಮಿಕ ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಕೇವಲ ಧರ್ಮದ ಅಮಲಿಗೆ ಸಿಲುಕಿ ಜೀವ ಕಳೆದುಕೊಂಡು ಮನೆಯವರಿಗೆ ತೊಂದರೆ ಕೊಡುವುದರ ಬದಲಿಗೆ ಒಳ್ಳೆಯ ವ್ಯಕ್ತಿಗಳಾಗಿ ಸಮಾಜಕ್ಕೆ, ಮನೆಯವರಿಗೆ ಸಂತೋಷ ನೀಡಿ ಎನ್ನುವ ಆಶಯವನ್ನು ಹರ್ಷ ಅವರ ಅಕ್ಕ ವ್ಯಕ್ತಪಡಿಸಿದ್ದು, ಅದು ಯುವಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮಹತ್ವ ಪಡೆದುಕೊಳ್ಳಲಿದೆ.