ಹರ್ಯಾಣ ರಾಜ್ಯದ ಕ್ರೀಡಾ ವಿಭಾಗದಲ್ಲಿ ಜೂನಿಯರ್ ಕೋಚ್ ಆಗಿ ಸೇವೆ ಸಲ್ಲಿಸುತ್ತಿರುವ ಖ್ಯಾತ ಅಂತರರಾಷ್ಟ್ರೀಯ ಮಹಿಳಾ ಕ್ರೀಡಾ ಪಟುವಿಗೆ ಲೈಂಗಿಕ ಕಿರುಕುಳ ಕೊಡುತ್ತಿರುವ ಆರೋಪಕ್ಕೆ ಒಳಗಾಗಿರುವ ಅಲ್ಲಿನ ಕ್ರೀಡಾಮಂತ್ರಿಯನ್ನು ಸರಕಾರದ ಎಲ್ಲ ಸರಕಾರೀ ಹುದ್ದೆಗಳಿಂದ ತೆಗೆದು ಹಾಕಿ ಆತನ ವಿರುದ್ಧ ಕಾನೂನು ಕ್ರಮ ಆರಂಭಿಸಬೇಕಾಗಿತ್ತು. ಆದರೆ ಬಹಳ ಒತ್ತಡದ ನಂತರ ಆತ ಕ್ರೀಡಾ ಇಲಾಖೆಯ ಹೊಣೆಯಿಂದ ರಾಜೀನಾಮೆ ಕೊಟ್ಟಿದ್ದಾರಷ್ಟೇ, ಆದರೆ ಸಚಿವ ಸಂಪುಟದಲ್ಲಿ ಮುಂದುವರೆಯುತ್ತಿದ್ದಾರೆ. ತನ್ನ ಪ್ರಭಾವೀ ಸ್ಥಾನವನ್ನು ಬಳಸಿ ಆತ ನ್ಯಾಯದ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಆದ್ದರಿಂದ ಇದರಲ್ಲಿ ಮಧ್ಯಪ್ರವೇಶಿಸಿ ಪೀಡಿತೆಗೆ ನ್ಯಾಯ ಸಿಗುವಂತೆ ಮಾಡಬೇಕು ಎಂದು ಇತ್ತೀಚೆಗೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್‍ನ(ಐಒಎ) ಮೊದಲ ಮಹಿಳಾ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡಿರುವ ಪಿ ಟಿ ಉಷಾರವರಿಗೆ, ಜನವಾದಿ ಮಹಿಳಾ ಸಂಘಟನೆಯ ಮುಖಂಡರಾದ ಜಗ್ಮತಿ ಸಂಗ್ವಾನ್ ಒಂದು ಬಹಿರಂಗ ಪತ್ರ ಬರೆದಿದ್ದಾರೆ.
ಇದನ್ನು ಓದಿ: ಲೈಂಗಿಕ ಕಿರುಕುಳ ಕೇಸ್ ದಾಖಲು- ಹರಿಯಾಣದ ಕ್ರೀಡಾ ಸಚಿವ ಸ್ಥಾನಕ್ಕೆ ಸಂದೀಪ್ ಸಿಂಗ್ ರಾಜೀನಾಮೆ
ಜಗ್ಮತಿ ಸಂಗ್ವಾನ್ ಸ್ವತಃ ಒಬ್ಬರು ಪ್ರಶಸ್ತಿ ವಿಜೇತ ಕ್ರೀಡಾಪಟುವಾಗಿದ್ದು 9ನೇ ಏಷ್ಯಾಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ ತಂಡದಲ್ಲಿ ಪಿ ಟಿ ಉಷಾರೊಂದಿಗೆ ಇದ್ದರು. ಅಲ್ಲದೆ ಹರ್ಯಾಣದ ರೋಹ್ತಕ್‍ನಲ್ಲಿರುವ ಮಹರ್ಷಿ ದಯಾನಂದ ವಿಶ್ವವಿದ್ಯಾಲಯದಲ್ಲಿ ಮಹಿಳಾ ಅಧ್ಯಯನದ ಮಾಜಿ ನಿರ್ದೇಶಕರು ಕೂಡ.
ಆರೋಪಿ ಸಚಿವ ಸಂಪುಟದಲ್ಲಿ ಮುಂದುವರೆಯುತ್ತಿರುವುದರಿಂದ ತನ್ನ ಪ್ರಭಾವವನ್ನು ಬಳಸಿ ದೂರುದಾರರ ಚಾರಿತ್ರ್ಯದ ಬಗ್ಗೆ ತನಿಖೆಗೆ ಎಸ್‍ಐಟಿ ನೇಮಿಸಬೇಕೆಂದು ರಾಜ್ಯ ಡಿಜಿಪಿಯನ್ನು ಕೇಳಿದ್ದಾರೆ. ಇದು ಪೀಡಿತರನ್ನೇ ದೂಷಿಸುವ ಎಂದಿನ ತಂತ್ರವಾಗಿದೆ. ಅಲ್ಲದೆ ಪ್ರತಿ ದಿನ ಒಂದಿಲ್ಲೊಂದು ರೀತಿಯಲ್ಲಿ ಆಕೆಗೆ ಕಿರುಕುಳ ಕೊಡಲು ಸರಕಾರೀ ಯಂತ್ರವನ್ನು ಬಳಸಿಕೊಳ್ಳುತ್ತಿದ್ದಾರೆ. ಪೋಲೀಸ್ ಪತ್ತೇದಾರರಿಗೆ ಆಕೆಯನ್ನು ಹಿಂಬಾಲಿಸುವಂತೆ ಹೇಳಲಾಗಿದೆ. ದೂರುದಾರರ ದೂರು ‘ನಂಬುವಂತದ್ದಲ್ಲ’ ಎಂದು ರಾಜ್ಯ ಮಹಿಳಾ ಆಯೋಗ ಕೇವಲ ಮಂತ್ರಿಯ ಮಾತನ್ನು ಆಧರಿಸಿ, ಮತ್ತು ದೂರುದಾರರನ್ನು ವಿಚಾರಿಸದೆಯೇ ಹಣೆಪಟ್ಟಿ ಹಚ್ಚಿದೆ ಎಂಬ ಸಂಗತಿಯನ್ನು ಜಗ್ಮತಿಯವರು ಪತ್ರದಲ್ಲಿ ಐಒಎ ಅಧ್ಯಕ್ಷೆಯ ಗಮನಕ್ಕೆ ತಂದಿದ್ದಾರೆ.
ಇದನ್ನು ಓದಿ: ದಲಿತ ಮಹಿಳೆ ಮೇಲೆ ಅತ್ಯಾಚಾರ: ಸ್ಯಾಂಟ್ರೋ ರವಿ ಮೇಲೆ ಕೇಸ್ ದಾಖಲು, ರಾಜಕಾರಣಿಗಳ ಶ್ರೀರಕ್ಷೆ..!?
ನಮ್ಮ ಕ್ರೀಡಾಪಟುಗಳು ತಮ್ಮ ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡುವುದಲ್ಲದೆ ಸುಲಿಗೆ ಪ್ರವೃತ್ತಿಯ ಪುರುಷರ ಕೈಯಿಂದ ಕಿರುಕುಳದಿಂದ ತಮ್ಮನ್ನು ತಾವು ಸುರಕ್ಷಿತವಾಗಿರಿಸಿಕೊಳ್ಳುವ ದುಪ್ಪಟ್ಟು ಹೊರೆಯನ್ನು ಹೊತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಕ್ರೀಡಾ ಆಡಳಿತ ಮತ್ತು ಸರ್ಕಾರಗಳ ರಕ್ಷಣೆಯ ಸರಿಯಾದ ಮತ್ತು ಜವಾಬ್ದಾರಿಯುತ ಕಾರ್ಯನಿರ್ವಹಣೆಯನ್ನು ನಾವು ಖಚಿತಪಡಿಸಿದರೆ, ಇಂತಹ ಕಷ್ಟಕರ ಸಂದರ್ಭಗಳಿಂದ ನಮ್ಮ ಮಹಿಳಾ ಆಟಗಾರರನ್ನು ನಾವು ಹೆಚ್ಚಿನ ಮಟ್ಟಿಗೆ ಉಳಿಸಬಹುದು. ದುರದೃಷ್ಟವಶಾತ್, ಈಗ ಪರಿಸ್ಥಿತಿ ಹಾಗಿಲ್ಲ, ನಮ್ಮ ಮಹಿಳಾ ಕ್ರೀಡಾಪಟುಗಳು ಇದಕ್ಕಾಗಿ ದೊಡ್ಡ ಬೆಲೆ ತೆರಬೇಕಾಗಿದೆ ಎಂದು ಜಗ್ಮತಿಯವರು ತಮ್ಮ ಬಹಿರಂಗ ಪತ್ರದಲ್ಲಿ ಹೇಳಿದ್ದಾರೆ.
“ಈ ನಿರ್ದಿಷ್ಟ ಪ್ರಕರಣವು ಕೇವಲ ಒಬ್ಬ ಕ್ರೀಡಾಪಟುವಿಗೆ ಸಂಬಂಧಿಸಿಲ್ಲ, ಬದಲಿಗೆ ನಮ್ಮ ದೇಶದ ಇಡೀ ಕ್ರೀಡಾ ವ್ಯವಸ್ಥೆಯ ಕಾರ್ಯನಿರ್ವಹಣೆಯ ಪ್ರತಿಬಿಂಬವಾಗಿದೆ. ಐಒಎ ಅಧ್ಯಕ್ಷೆಯಾಗಿ ಮತ್ತು ಪ್ರತಿಷ್ಠಿತ ಮಹಿಳಾ ಕ್ರೀಡಾಪಟುವಾಗಿ, ಈ ಪ್ರಕರಣದಲ್ಲಿ ನ್ಯಾಯಯುತ ತನಿಖೆ ಮತ್ತು ಸಂತ್ರಸ್ತರಿಗೆ ನ್ಯಾಯ ಸಿಗುವಂತೆ ಖಚಿತಪಡಿಸಲು ಆರೋಪಿಯನ್ನು ಎಲ್ಲಾ ಸರ್ಕಾರಿ ಸ್ಥಾನಗಳಿಂದ ತಕ್ಷಣವೇ ವಜಾಗೊಳಿಸಬೇಕೆಂದು ಒತ್ತಾಯಿಸಲು ನಿಮ್ಮ ಮಧ್ಯಪ್ರವೇಶವನ್ನು ಕೋರುತ್ತೇನೆ. ಇದು, ಐಒಎ ಭಾರತದ ಕ್ರೀಡಾಪಟುಗಳ ಕ್ರೀಡಾ ಸಂಬಂಧಿತ ಅಗತ್ಯಗಳನ್ನು ಪೂರೈಸಲು ಬದ್ಧವಾಗಿದೆ, ಅವರ ಮಾನಸಿಕ, ದೈಹಿಕ ಮತ್ತು ಸಾಮಾಜಿಕ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಕೂಡ ಅಷ್ಟೇ ಬದ್ಧವಾಗಿದೆ ಎಂಬ ಬಹಳ ಮುಖ್ಯವಾದ ಸಂದೇಶವನ್ನು ಕಳುಹಿಸುತ್ತದೆ. ಕಾನೂನಿನ ಅವಶ್ಯಕತೆಯಂತೆ ಎಲ್ಲಾ ಕ್ರೀಡಾ ಕಚೇರಿಗಳು ಮತ್ತು ಸಂಸ್ಥೆಗಳಲ್ಲಿ ಲೈಂಗಿಕ ಕಿರುಕುಳ ವಿರೋಧಿ ಸಮಿತಿಗಳ ಸರಿಯಾದ ರಚನೆ ಮತ್ತು ಆ ಕುರಿತು ಪ್ರಕಟಣೆಯನ್ನು ಖಚಿತಪಡಿಸಬೇಕು ಎಂದು ನಾನು ನಿಮ್ಮನ್ನು ವಿನಂತಿಸುತ್ತೇನೆ. ಇದು ಅಂತಹ ಪ್ರಕರಣಗಳಲ್ಲಿ ದೂರುಗಳನ್ನು ದಾಖಲಿಸುವ ವ್ಯವಸ್ಥೆಯನ್ನು ಸುಗಮಗೊಳಿಸುತ್ತದೆ ಮತ್ತು ಕ್ರೀಡಾ ಇಲಾಖೆಗಳಲ್ಲಿ ಕೆಲಸ ಮಾಡುವ ಮಹಿಳಾ ಕ್ರೀಡಾಪಟುಗಳು ಮತ್ತು ಇತರ ಮಹಿಳೆಯರು ಈ ನಿರ್ದಿಷ್ಟ ಪ್ರಕರಣದಲ್ಲಿ, ಆರೋಪಿಯ ವಿರುದ್ಧ ಎಫ್‌ಐಆರ್ ದಾಖಲಿಸಲು ಕೂಡ ಅಲ್ಲಿಂದಿಲ್ಲಿಗೆ ಅಲೆದಾಡುವ ಪಾಡು ಪಡುವುದನ್ನು ತಪ್ಪಿಸಬಹುದು. ಈ ಪ್ರಕರಣದಲ್ಲಿ ತಮ್ಮ ದೂರಿನೊಂದಿಗೆ ಹರಿಯಾಣ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, ಆಕೆ ರಾಜಕೀಯ ಉದ್ದೇಶಗಳನ್ನು ಹೊಂದಿದ್ದಾರೆಂದು ಆರೋಪಿಸಲಾಯಿತು” ಎಂದು ತಮ್ಮ ಪತ್ರದಲ್ಲಿ ಮುಂದುವರೆದು ಹೇಳಿರುವ ಜಗ್ಮತಿ ಸಂಗ್ವಾನ್ ನ್ಯಾಯಕ್ಕಾಗಿ ಬೆಂಬಲವನ್ನು ನಿರೀಕ್ಷಿಸುವುದಾಗಿ ಹೇಳಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ