ಬೆಂಗಳೂರು: ಧಾರವಾಡ ಜಿಲ್ಲೆಯ ನುಗ್ಗಿಕೇರಿಯಲ್ಲಿ ಕಳೆದ ಎರಡು ದಶಕಗಳಿಂದ ಹಣ್ಣು ವ್ಯಾಪಾರದಲ್ಲಿ ತೊಡಗಿದ್ದ ಸಣ್ಣ ವ್ಯಾಪಾರಿಗಳ ಮೇಲೆ ಏಪ್ರಿಲ್ 09ರಂದು ಧಾಳಿ ನಡೆಸಿ ಹಲ್ಲೆ ಮಾಡಿರುವುದಲ್ಲದೇ ಅವರು ಮಾರಾಟಕ್ಕಾಗಿ ಸಂಗ್ರಹಿಸಿದ್ದ ಕಲ್ಲಂಗಡಿ ಹಣ್ಣುಗಳನ್ನು ರಸ್ತೆಗೆ ದೂಡಿ ನಾಶಪಡಿಸಿದ ಶ್ರೀರಾಮ ಸೇನೆಯ ಗುಂಡಾಧಾಳಿಯನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸಿದೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಅವರು, ರಾಜ್ಯ ಸರಕಾರ ಕೂಡಲೇ ಈ ಗುಂಡಾದಾಳಿಯಲ್ಲಿ ತೊಡಗಿದವರನ್ನು ಮತ್ತು ಅವರಿಗೆ ನಿರ್ದೇಶನ ನೀಡಿದ ಗುಂಡಾ ನಾಯಕರನ್ನು ಬಂಧಿಸಿ ಗುಂಡಾ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿ ಅಗತ್ಯ ಕಾನೂನು ಕ್ರಮವಹಿಸಬೇಕೆಂದು ಸಿಪಿಐ(ಎಂ) ಪಕ್ಷವು ಆಗ್ರಹಿಸಿದೆ.
ಇದನ್ನು ಓದಿ: ಮುಸ್ಲಿಂ ವರ್ತಕರ ಅಂಗಡಿಗಳ ಧ್ವಂಸ ; ಶ್ರೀರಾಮಸೇನೆ ಕಾರ್ಯಕರ್ತರಿಂದ ಗೂಂಡಾಗಿರಿ
ದಾಳಿಯಿಂದಾಗಿ ನಷ್ಟಕ್ಕೊಳಗಾದ ಮುಸ್ಲಿಂ ವ್ಯಾಪಾರಿಗಳಿಗೆ ತಕ್ಷಣವೇ ನಷ್ಟ ಪರಿಹಾರವನ್ನು ಒದಗಿಸಲು ಕ್ರಮವಹಿಸಬೇಕು. ಅದೇ ರೀತಿ, ರಾಜ್ಯದಾದ್ಯಂತ ಇರುವ ಎಲ್ಲ ಅಲ್ಪಸಂಖ್ಯಾತ ಹಾಗು ಮುಸ್ಲಿಂ ವ್ಯಾಪಾರಿಗಳಿಗೆ ಇಂತಹ ಗುಂಡಾಗಳಿಂದ ರಕ್ಷಣೆ ಒದಗಿಸಬೇಕೆಂದು ಸಿಪಿಐ(ಎಂ) ಪಕ್ಷ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಒತ್ತಾಯಿಸಿದೆ.
ಇಂತಹ ಘಟನೆಗಳು ರಾಜ್ಯದ ಸೌಹಾರ್ಧತೆಯನ್ನು ದುರ್ಬಲಗೊಳಿಸುವುದು ಮಾತ್ರವಲ್ಲ, ಎಲ್ಲ ಜನತೆಯ ಮೇಲೆ ಧಾಳಿ ನಡೆಸಿ ಹಫ್ತಾ ವಸೂಲಿ ಮಾಡುವಂಹ ಮಾಫಿಯಾ ಶಕ್ತಿಗಳಿಗೆ ಜನ್ಮ ನೀಡಲಿವೆ. ಇದರಿಂದ ಕೇವಲ ಮುಸ್ಲಿಂ ಧರ್ಮದ ವ್ಯಾಪಾರಿಗಳು ಮಾತ್ರವಲ್ಲಾ ಎಲ್ಲ ಧರ್ಮೀಯರು ಸಂಕಷ್ಟಕ್ಕೆ ಈಡಾಗುತ್ತಾರೆ ಎಂಬುದು ಅವಶ್ಯವಾಗಿ ಗಮನಿಸಬೇಕೆಂದು ವ್ಯಾಪಾರಿಗಳಿಗೆ ಮತ್ತು ನಾಗರೀಕರಿಗೆ ಸಿಪಿಐ(ಎಂ) ಪಕ್ಷವು ಎಚ್ಚರಿಸಿದೆ.
ರಾಜ್ಯ ಸರಕಾರ ಇಂತಹ ಗುಂಡಾ ಧಾಳಿಯನ್ನು ನಿಗ್ರಹಿಸಲಾಗದಂತೆ ದುರ್ಬಲಗೊಳಿಸುತ್ತಿದೆ. ಆರ್.ಎಸ್.ಎಸ್. ಹಿಡಿತದಲ್ಲಿ ಸರಕಾರ ಸಿಲುಕಿರುವುದರಿಂದ ಈ ಮತಾಂಧ ಗುಂಡಾಗಳು ಬಹಿರಂಗ ಧಾಳಿಗೆ ಮುಂದಾಗುತ್ತಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಇಂಹತ ಗೂಂಡಾಗಿರಿಗಳು ಹೆಚ್ಚಾಗುವಂತಾಗಿದೆ.
ಈಗಾಗಲೇ, ಗದಗ ಜಿಲ್ಲೆಯ ನರಗುಂದದಲ್ಲಿ ಇಬ್ಬರು ಅಲ್ಪಸಂಖ್ಯಾತ ಯುವಕರನ್ನು ಬಹಿರಂಗವಾಗಿ ಭಜರಂಗದಳದ ಕಾರ್ಯಕರ್ತರು ಮಾರಣಾಂತಿಕ ಹಲ್ಲೆ ನಡೆಸಿ ಒಬ್ಬ ಯುವಕನನ್ನು ಕೊಂದಿದ್ದಾರೆ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ಆದಿವಾಸಿ ಯುವಕನ ಮೇಲೆಯು ದಾಳಿ ಮಾಡಲಾಗಿದೆ. ಶಿವಮೊಗ್ಗದಲ್ಲಿ ಭಜರಂಗ ದಳದ ಕಾರ್ಯಕರ್ತನನ್ನು ಕೊಲ್ಲಲಾಗಿದೆ.
ಕಾನೂನು ಸುವ್ಯವಸ್ಥೆಯನ್ನು ಕಾಪಾಡಲಾಗದಂತೆ ಅಧಿಕಾರಿಗಳನ್ನು ದುರ್ಬಲಗೊಳಿಸಿರುವುದು ತೀವ್ರ ಖಂಡನೀಯ ಎಂದು ಸಿಪಿಐ(ಎಂ) ಪಕ್ಷ ತಿಳಿಸಿದೆ.
ಮುಖ್ಯಮಂತ್ರಿಗಳು ಇಂತಹ ಗುಂಡಾ ಮಾಫಿಯಾ, ಮತಾಂಧ ಶಕ್ತಿಗಳನ್ನು ನಿಗ್ರಹಿಸಲು ಮಧ್ಯಪ್ರವೇಶಿಸಿ ಕಾನೂನು ಸುವ್ಯವಸ್ಥೆಯನ್ನು ಬಲಗೊಳಿಸಬೇಕು. ಇಲ್ಲವಾದರೆ ನಿಮ್ಮಂತಹ ಮುಖ್ಯಮಂತ್ರಿಗಳ ಅವಶ್ಯಕತೆ ರಾಜ್ಯಕ್ಕಿಲ್ಲ. ಆದ್ದರಿಂದ ತಾವು ರಾಜೀನಾಮೆ ನೀಡಿ ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಿ ಎಂದು ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಆಗ್ರಹಿಸಿದ್ದಾರೆ.