ಕಲಬುರಗಿ: ತೊಗರಿ ನಾಡು ಎಂದೇ ಖ್ಯಾತಿ ಹೊಂದಿರುವ ಜಿಲ್ಲೆಯ ರೈತರು ಬೆಳೆದ ತೊಗರಿ ಬೆಳೆ ನೆಟೆ ರೋಗದಿಂದ ಭಾರೀ ಪ್ರಮಾಣದಲ್ಲಿ ಹಾಳಾಗಿದ್ದು, ಬೆಳೆ ಹಾನಿ ಪರಿಹಾರಕ್ಕೆ ಒತ್ತಾಯಿಸುತ್ತಿರುವ ರೈತ ಸಂಘಟನೆಗಳು ಕಲಬುರಗಿ ಬಂದ್ ಭಾಗವಾಗಿ ಇಂದು ಜಿಲ್ಲೆಯಲ್ಲಿ ಭಾರೀ ಪ್ರತಿಭಟನಾ ಪ್ರದರ್ಶನ ನಡೆಯಿತು. ರೈತರಿಗೆ ನಷ್ಟ ಪರಿಹಾರ ನೀಡುವಂತೆ ರೈತಪರ ಸಂಘಟನೆಗಳು ಸರ್ಕಾರವನ್ನು ಆಗ್ರಹಿಸಿದರು.
ತೊಗರಿ ಬೆಳೆ ಬೆಳೆದ ರೈತರು ಫಸಲು ಕೈಗೆ ಬರದೇ ಕಂಗಾಲಾಗಿದ್ದಾರೆ. ಒಂದು ಕಡೆ ಅತಿವೃಷ್ಠಿ, ಮತ್ತೊಂದು ಕಡೆ ನೆಟೆ ರೋಗದಿಂದ ಬೆಳೆ ಕಳೆದುಕೊಂಡು ರೈತರು ಕಣ್ಣೀರು ಹಾಕುವಂತಾಗಿದೆ. ನೆಟೆ ರೋಗದಿಂದಾಗಿ ತೊಗರಿ ಬೆಳೆದ ರೈತರು ಮತ್ತೆ ಸಂಕಷ್ಟದಲ್ಲಿದ್ದು, ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್) ವತಿಯಿಂದ ಜಂಟಿ ವೇದಿಕೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ಧರಣಿ ಉದ್ದೇಶಿಸಿ ಮಾತನಾಡಿದ ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್, ರಾಜ್ಯ ಹಾಗೂ ಕೇಂದ್ರ ಸರ್ಕಾರ, ರೈತಪರವೆಂದು ಹೇಳಿಕೊಂಡು ಜನತೆಗೆ ವಂಚನೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಕೇವಲ ಬಂಡವಾಳಶಾಹಿಗಳ ಪರವಾಗಿವೆ. ನರೇಂದ್ರ ಮೋದಿ ಕೇವಲ ಅದಾನಿ, ಅಂಬಾನಿ ಅವರಂಥ ಶ್ರೀಮಂತ ಬಂಡವಾಳದಾರರಿಗೆ ಮಾತ್ರ ಲಾಭ ತರುವಂತಹ ಯೋಜನೆಗಳನ್ನು ರೂಪಿಸುತ್ತಿದ್ದಾರೆ ಎಂದರು.
ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ಶರಣಬಸಪ್ಪಾ ಮಮಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಬರೋಬ್ಬರಿ 6 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆ ಬೆಳೆಯಲಾಗುತ್ತಿತ್ತು. ಈ ಬಾರಿ 4.78 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ತೊಗರಿ ಬೆಳೆಯಲಾಗಿದೆ. ಪ್ರಾಥಮಿಕ ವರದಿ ಪ್ರಕಾರ ಸುಮಾರು 70 ಸಾವಿರ ಹೆಕ್ಟೇರ್ ಪ್ರದೇಶದ ತೊಗರಿ ಬೆಳೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ರಾಜ್ಯ ಸರ್ಕಾರವಾಗಲಿ ಅಥವಾ ಕೇಂದ್ರ ಸರ್ಕಾರವಾಗಲಿ ಯಾವುದೇ ಕ್ರಮಕೈಗೊಂಡಿಲ್ಲ. ರೈತರಿಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಇಂದು ಕಲಬುರಗಿ ಬಂದ್‌ಗೆ ಕರೆ ನೀಡಲಾಯಿತು ಎಂದರು.
ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಸಾರಿಗೆ ಬಸ್ಸುಗಳ ಕಲಬುರಗಿ ನಗರ ಪ್ರವೇಶಕ್ಕೆ ಅವಕಾಶವಿರಲಿಲ್ಲ. ಬೆಳಗ್ಗೆಯಿಂದಲೇ ಆರಂಭವಾಗಿದ್ದ ಪ್ರತಿಭಟನೆಗಳು ಜಿಲ್ಲೆಯ ವಿವಿದೆಡೆ ನಡೆದಿದೆ ಎಂದು ವರದಿಯಾಗಿದೆ.