ಅರ್ಥವ್ಯವಸ್ಥೆಯ ಮೇಲೆ ವಿದೇಶ ವ್ಯಾಪಾರ ಕೊರತೆಯ ಬಿರುಮೋಡಗಳು

ಆಮದುಗಳು ಏರುತ್ತಿವೆ-ರಫ್ತುಗಳು ಇಳಿಯುತ್ತಿವೆ : ಪರಿಸ್ಥಿತಿ ಕಳವಳಕಾರಿಯಾಗಿದೆ

ಪ್ರೊ.ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್

ಚಾಲ್ತಿ ಖಾತೆ ಕೊರತೆಯು ಮೊದಲ ತ್ರೈಮಾಸಿಕದ ಕೊರತೆಗೆ ಹೋಲಿಸಿದರೆ ಜಿಡಿಪಿಯ ಶೇಕಡಾವಾರು ಪ್ರಮಾಣದಲ್ಲಿ ದುಪ್ಪಟ್ಟಾಗಿದೆ ಮತ್ತು ಒಂದು ವರ್ಷದ ಹಿಂದಿನ ಎರಡನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಮೂರು ಪಟ್ಟಾಗಿದೆ. ರಿಸರ್ವ್ ಬ್ಯಾಂಕ್ ಈಗಾಗಲೇ ಸುಮಾರು ನೂರು ಬಿಲಿಯನ್ ಡಾಲರ್ ಹಣವನ್ನು ವೆಚ್ಚ ಮಾಡಿದ್ದರೂ ಸಹ, ರೂಪಾಯಿಯ ಮೌಲ್ಯ ಕುಸಿಯುತ್ತಲೇ ಇದೆ. ವಿದೇಶಿ ವ್ಯಾಪಾರ ಕೊರತೆಯು ಇನ್ನೂ ಸ್ವಲ್ಪ ಸಮಯದವರೆಗೂ ಪ್ರತಿಕೂಲವಾಗಿಯೇ ಮುಂದುವರಿಯುವಂತೆ ಕಾಣುತ್ತದೆ. ಈ ಎಲ್ಲ ಅಂಶಗಳೂ ನವ ಉದಾರವಾದಿ ಬಂಡವಾಳಶಾಹಿಯು ಮುಂದಿನ ದಾರಿ ಕಾಣದ ಪರಿಸ್ಥಿತಿಯಲ್ಲಿದೆ ಎಂಬುದನ್ನು ಮತ್ತು ಪಾಶ್ಚಾತ್ಯ ಸಾಮ್ರಾಜ್ಯಶಾಹಿಯ ಪ್ರಾಬಲ್ಯಕ್ಕೆ ತೀವ್ರವಾದ ಸವಾಲು ಎಸೆಯಲಾಗಿದೆ ಎಂಬುದನ್ನು ಸೂಚಿಸುತ್ತವೆ. ಜಾಗತಿಕ ಬಂಡವಾಳಶಾಹಿಯು ಯಾವ ಅವಸ್ಥೆಯಲ್ಲಿದೆ ಎಂದರೆ, ಅದನ್ನು ಮೀರುವ ಹೊಸ ಸಾಧ್ಯತೆಗಳು ಸೃಷ್ಟಿಯಾಗುತ್ತವೆ. ಆದರೆ, ಈ ಅವಕಾಶವನ್ನು ಬಳಸಿಕೊಳ್ಳುವ ಬದಲು, ನಮ್ಮ ಸರಕಾರ ನವ ಉದಾರವಾದಿ ಧೋರಣೆಗಳಲ್ಲೇ ಸಿಲುಕಿಕೊಂಡಿದ್ದರೆ ದೇಶವು ಈಗ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟು ಭವಿಷ್ಯದಲ್ಲಿ ಇನ್ನಷ್ಟು ಉಲ್ಬಣಗೊಳ್ಳುತ್ತದಷ್ಟೇ.

2022-23ರ ಎರಡನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್) ಭಾರತದ ಚಾಲ್ತಿ ಖಾತೆಯ ಕೊರತೆಯು 36.4 ಬಿಲಿಯನ್ ಡಾಲರ್ ಮಟ್ಟವನ್ನು ತಲುಪಿದೆ. ಜಿಡಿಪಿಯ ಶೇ. 4.4ರಷ್ಟಿರುವ ಈ ಕೊರತೆಯು ಕಳೆದ ಒಂಬತ್ತು ವರ್ಷಗಳಲ್ಲೇ ಅತಿ ಹೆಚ್ಚಿನದು. 2012ರ ಅಕ್ಟೋಬರ್-ಡಿಸೆಂಬರ್‌ನಲ್ಲೊಮ್ಮೆ ಮಾತ್ರ 32.6 ಬಿಲಿಯನ್ ಡಾಲರ್ ಮಟ್ಟದಲ್ಲಿದ್ದ ಈ ಕೊರತೆಯು ಜಿಡಿಪಿಯ ಶೇ.6.7ರಷ್ಟಿತ್ತು.

ಈ ಪರಿಸ್ಥಿತಿಗೆ ವ್ಯತಿರಿಕ್ತವಾಗಿ ಚಾಲ್ತಿ ಖಾತೆ ಕೊರತೆಯು 2022-23ರ ಮೊದಲ ತ್ರೈಮಾಸಿಕದಲ್ಲಿ 18.2 ಬಿಲಿಯನ್ ಡಾಲರ್ ಅಥವಾ ಜಿಡಿಪಿಯ ಶೇ. 2.2ರಷ್ಟಿತ್ತು ಮತ್ತು 2021-22ರ ಎರಡನೇ ತ್ರೈಮಾಸಿಕದಲ್ಲಿ 9.7 ಬಿಲಿಯನ್ ಡಾಲರ್‌ಗಳಷ್ಟಿತ್ತು ಅಥವಾ ಜಿಡಿಪಿಯ ಶೇ. 1.3ರಷ್ಟಿತ್ತು. ಈ ಅಂಶವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಮೊದಲ ತ್ರೈಮಾಸಿಕದ ಕೊರತೆಗೆ ಹೋಲಿಸಿದರೆ ಚಾಲ್ತಿ ಖಾತೆ ಕೊರತೆಯು ಜಿಡಿಪಿಯ ಶೇಕಡಾವಾರು ಪ್ರಮಾಣದಲ್ಲಿ ದ್ವಿಗುಣಗೊಂಡಿದೆ ಮತ್ತು ಒಂದು ವರ್ಷದ ಹಿಂದಿನ ಎರಡನೇ ತ್ರೈಮಾಸಿಕಕ್ಕೆ ಹೋಲಿಸಿದರೆ ತ್ರಿಗುಣಗೊಂಡಿದೆ.

ಚಾಲ್ತಿ ಖಾತೆಯ ಅಗಾಧ ಕೊರತೆಯಷ್ಟೇ ಅಲ್ಲ, ವಿದೇಶಗಳೊಂದಿಗೆ ನಮ್ಮ ವ್ಯಾಪಾರ ಮತ್ತು ಇತರ ವಹಿವಾಟುಗಳ ಸಂಬಂಧವಾಗಿ ಒಟ್ಟು ಒಳಹರಿದ ಮತ್ತು ಹೊರಹರಿದ ಹಣದ (ವಿದೇಶಿ ವಿನಿಮಯ) ಬಾಬ್ತು ಶಿಲ್ಕು ಗಾತ್ರವು ಕನಿಷ್ಠ ಮೂರು ಕಾರಣಗಳಿಗಾಗಿ ಕಳವಳಕಾರಿಯಾಗಿದೆ. ಮೊದಲನೆಯದಾಗಿ, ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ, ಚಾಲ್ತಿ ಖಾತೆ ಕೊರತೆಯು 18.2 ಬಿಲಿಯನ್ ಡಾಲರ್‌ಗಳಷ್ಟು ಹೆಚ್ಚಾಗಲು ಕಾರಣವೆಂದರೆ, ನಮ್ಮ ವ್ಯಾಪಾರ ಕೊರತೆಯ ಹೆಚ್ಚಳವೇ. ಅಂದರೆ, ನಮ್ಮ ರಫ್ತಿಗಿಂತ ಆಮದುಗಳು ಹೆಚ್ಚಿವೆ. ಮೊದಲ ಮತ್ತು ಎರಡನೇ ತ್ರೈಮಾಸಿಕಗಳ ನಡುವೆ ವ್ಯಾಪಾರದ ಕೊರತೆಯು 63 ಬಿಲಿಯನ್ ಡಾಲರ್‌ನಿಂದ 83.5 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಕಾರ, ಎರಡು ಅಂಶಗಳು ಈ ಕೊರತೆಯನ್ನು ಹೆಚ್ಚಿಸಿವೆ. ಮೊದಲನೆಯದು, ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಉಂಟಾದ ತೈಲ ಬೆಲೆಗಳ ಹೆಚ್ಚಳವು ನಮ್ಮ ಆಮದು ವೆಚ್ಚವನ್ನು ಹೆಚ್ಚಿಸಿದೆ. ಎರಡನೆಯದು, ಜಾಗತಿಕ ಅರ್ಥವ್ಯವಸ್ಥೆಯ ನಿಧಾನಗತಿಯಿಂದಾಗಿ ನಮ್ಮ ರಫ್ತುಗಳು ನೀರಸವಾಗಿವೆ. ವ್ಯಾಪಾರ ಕೊರತೆಯು ಈ ರೀತಿಯಲ್ಲಿ ವಿಸ್ತರಿಸಲು ದುರ್ಬಲ ರೂಪಾಯಿ ಮತ್ತು ದೇಶೀಯ ಬೇಡಿಕೆಯ ಚೇತರಿಕೆಯಂತಹ ಅಂಶಗಳನ್ನು ಮಾಧ್ಯಮಗಳ ಆರ್ಥಿಕ ವ್ಯಾಖ್ಯಾನಕಾರರು ಮಂಡಿಸುತ್ತಾರೆ. ಆದರೆ ಈ ಪ್ರತಿಪಾದನೆಗಳು ತಪ್ಪಾಗಿವೆ. ಏಕೆಂದರೆ, ರೂಪಾಯಿಯು ದುರ್ಬಲಗೊಂಡಾಗ ಅದು ವ್ಯಾಪಾರ ಕೊರತೆಯನ್ನು ತಗ್ಗಿಸುತ್ತದೆ. ಮೇಲಾಗಿ, ಆದಾಯದ ಪ್ರಾಥಮಿಕ ಮೂಲವಾದ ಜಿಡಿಪಿಯ ಬೆಳವಣಿಗೆಯೇ ಕುಗ್ಗಿರುವಾಗ ಬೇಡಿಕೆಯ ಚೇತರಿಕೆಯು ಕೊರತೆಯನ್ನು ಅಷ್ಟು ಮಟ್ಟಿಗೆ ವಿಸ್ತರಿಸುವುದು ಶಕ್ಯವಿಲ್ಲ.

ಶೀಘ್ರದಲ್ಲೇ ಮರೆಯಾಗುವಂತಹ ಸಮಸ್ಯೆಗಳಲ್ಲ

ರಿಸರ್ವ್ ಬ್ಯಾಂಕ್ ಗುರುತಿಸಿರುವ ಈ ಎರಡು ಅಂಶಗಳ ಸಮಸ್ಯೆಯೆಂದರೆ ಅವು ಶೀಘ್ರದಲ್ಲೇ ಮರೆಯಾಗುವಂತಹ ಸಮಸ್ಯೆಗಳಲ್ಲ. ಉಕ್ರೇನ್ ಯುದ್ಧವು ಕೆಲವು ದ್ವಿಪಕ್ಷೀಯ ವಿಷಯಗಳಿಗೆ ಸಂಬಂಧಿಸಿ ಕೇವಲ ಎರಡು ದೇಶಗಳ ನಡುವೆ ನಡೆಯುತ್ತಿರುವ ಒಂದು ಯುದ್ಧವಲ್ಲ. ಈ ಯುದ್ಧವು ಭವಿಷ್ಯದಲ್ಲಿ ಸಾಮ್ರಾಜ್ಯಶಾಹಿಯು ಯಾವ ರೂಪವನ್ನು ತಳೆಯುತ್ತದೆ ಎಂಬುದಕ್ಕೆ ಸಂಬಂಧಿಸಿರುವುದರಿಂದ ಅದು ಒಂದು ನಿರ್ಣಾಯಕ ಮಹತ್ವವನ್ನು ಪಡೆಯುತ್ತದೆ. ಈ ಕಾರಣದಿಂದಾಗಿ ಯುದ್ಧವು ಯಾವುದೇ ಸರಳವಾದ ಹಾಗೂ ಸೌಹಾರ್ದಯುತವಾದ ಪರಿಹಾರದ ಮೂಲಕ ಅಂತ್ಯವಾಗುವುದನ್ನು ಸಾಮ್ರಾಜ್ಯಶಾಹಿಯು ಪ್ರತಿರೋಧಿಸುತ್ತದೆ. ಅದೇ ರೀತಿಯಲ್ಲಿ, ಉಕ್ರೇನ್ ಯುದ್ಧ ಆರಂಭವಾಗುವ ಮುನ್ನವೇ ತಲೆದೋರಿದ ಹಣದುಬ್ಬರವು ಮೆಟ್ರೋಪಾಲಿಟನ್ ದೇಶಗಳಲ್ಲಿ ಈಗ ಒಂದು ಅತ್ಯಂತ ಗಂಭೀರ ಸ್ವರೂಪವನ್ನು ಪಡೆದಿದೆ. ಈ ಹಣದುಬ್ಬರವನ್ನು ಆರ್ಥಿಕ ಹಿಂಜರಿತ ಮತ್ತು ನಿರುದ್ಯೋಗ ಸೃಷ್ಟಿಯ ಮೂಲಕ ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ. ಈ ಪ್ರಯತ್ನವೂ ಸಹ, ದೀರ್ಘ ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ, ವಿದೇಶಿ ವ್ಯಾಪಾರ ಕೊರತೆಯು 2022-23ರ ಎರಡನೇ ತ್ರೈಮಾಸಿಕದಲ್ಲಿದ್ದ ರೀತಿಯಲ್ಲಿಯೇ ಇನ್ನೂ ಸ್ವಲ್ಪ ಸಮಯದವರೆಗೂ ಪ್ರತಿಕೂಲವಾಗಿಯೇ ಮುಂದುವರಿಯುತ್ತದೆ.

ಕಳವಳ ಉಂಟುಮಾಡುವ ಎರಡನೇ ಕಾರಣವೆಂದರೆ, 2022ರ ಕ್ಯಾಲೆಂಡರ್ ವರ್ಷದಲ್ಲಿ ರೂಪಾಯಿಯ ವಿನಿಮಯ ದರದಲ್ಲಿ ಉಂಟಾದ ಶೇ.ಹತ್ತರಷ್ಟು ತೀವ್ರ ಕುಸಿತದ ನಡುವೆ ಈ ಕೊರತೆ ಸಂಭವಿಸಿದೆ. ಸಾಮಾನ್ಯವಾಗಿ, ವಿನಿಮಯ ದರದ ಇಳಿಕೆಯು ವಿದೇಶ ವ್ಯಾಪಾರ-ವಹಿವಾಟುಗಳಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುತ್ತದೆ ಎಂದು ಭಾವಿಸಲಾಗಿದೆ. ಸಮತೋಲನವನ್ನು ಕಾಪಾಡಿಕೊಳ್ಳುವ ಪ್ರಯತ್ನಗಳು ಸಾಕಷ್ಟು ಸಮಯ ತೆಗೆದುಕೊಳ್ಳುವುದರಿಂದ, ವ್ಯಾಪಾರ ಕೊರತೆ ಮತ್ತು ರೂಪಾಯಿಯ ಇಳಿಕೆ ಇವುಗಳು ಏಕಕಾಲದಲ್ಲಿ ಸಂಭವಿಸುವುದು ಆಶ್ಚರ್ಯದ ವಿಷಯವಾಗಬಾರದು, ನಿಜ. ಆದರೆ, ವ್ಯಾಪಾರದ ಬೃಹತ್ ಕೊರತೆಯು ಒಂದು ಪಟ್ಟು ಹಿಡಿದ ರೀತಿಯಲ್ಲಿ ಮುಂದುವರೆಯುವ ಅಂಶವು ವಿನಿಮಯ ದರಗಳು ಇಳಿಯುತ್ತವೆ ಎಂಬ ನಿರೀಕ್ಷೆಯನ್ನು ಹುಟ್ಟಿಹಾಕುತ್ತದೆ. ಈ ನಿರೀಕ್ಷೆಯು, ಹಣಕಾಸು ಬಂಡವಾಳ ಹೊರಕ್ಕೆ ಹರಿಯುವಂತೆ ಮಾಡುವ ಮೂಲಕ ವಿನಿಮಯ ದರದ ವಾಸ್ತವ ಅಪಮೌಲ್ಯಕ್ಕೆ ಕಾರಣವಾಗುತ್ತದೆ. ಹೆಚ್ಚುತ್ತಿರುವ ವ್ಯಾಪಾರ ಕೊರತೆಗೆ ಕಾರಣವೆಂದು ರಿಸರ್ವ್ ಬ್ಯಾಂಕ್ ಉಲ್ಲೇಖಿಸಿದ ಎರಡರಲ್ಲಿ ಯಾವ ಅಂಶವೂ, ಸಾಕಷ್ಟು ಸಮಯದ ನಂತರವೂ, ವಿನಿಮಯ ದರ ಇಳಿಕೆಯ ಮೇಲೆ ಪರಿಣಾಮ ಬೀರುವುದಿಲ್ಲವಾದ್ದರಿಂದ, ಅಂತಹ ಒಂದು ಪರಿಸ್ಥಿತಿಯಲ್ಲಿ ರೂಪಾಯಿಯ ಕುಸಿತವು ತೀವ್ರಗೊಳ್ಳುತ್ತದೆ ಮತ್ತು ರೂಪಾಯಿ ಕರೆನ್ಸಿಯನ್ನು ಈಗಾಗಲೇ ಏಷ್ಯಾದ ದುರ್ಬಲ ಕರೆನ್ಸಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇಂತಹ ಒಂದು ಪರಿಸ್ಥಿತಿಯಲ್ಲಿ ರೂಪಾಯಿಯ ಕುಸಿತವು ಮುಂದುವರೆದಿದ್ದೇ ಆದರೆ, ಆಗ, ಆಮದು ಮಾಡಿಕೊಂಡ ಒಳಹರಿವುಗಳಿಂದ ಹೊಮ್ಮುವ ವೆಚ್ಚ-ತಳ್ಳಿಕೆಯ ಪರಿಣಾಮವು ದೇಶದಲ್ಲಿ ಹಣದುಬ್ಬರವನ್ನು ನಿರಂತರಗೊಳಿಸುತ್ತದೆ.

ಭಾರತವು ಹೊಂದಿರುವ ಅಪಾರ ಪ್ರಮಾಣದ ವಿದೇಶಿ ವಿನಿಮಯ ಸಂಗ್ರಹವು ರೂಪಾಯಿಯ ಕುಸಿತವನ್ನು ತಡೆಯುತ್ತದೆ ಎಂದು ಭಾವಿಸಬಹುದು. ಆದರೆ, ರೂಪಾಯಿಯ ಮೌಲ್ಯವನ್ನು ಸ್ಥಿರಗೊಳಿಸುವ ಪ್ರಯತ್ನದಲ್ಲಿ ರಿಸರ್ವ್ ಬ್ಯಾಂಕ್ ಈಗಾಗಲೇ ಸುಮಾರು ನೂರು ಬಿಲಿಯನ್ ಡಾಲರ್ ಹಣವನ್ನು ವೆಚ್ಚ ಮಾಡಿದ್ದರೂ ಸಹ, ರೂಪಾಯಿಯು ಕುಸಿಯುತ್ತಲೇ ಇದೆ. 2022-23ರ ಎರಡನೇ ತ್ರೈಮಾಸಿಕದಲ್ಲೇ ಮೀಸಲು ಸಂಗ್ರಹವು 25 ಶತಕೋಟಿ ಡಾಲರ್‌ಗಳಷ್ಟು ಇಳಿಕೆಯಾಗಿದೆ. ಮೀಸಲುಗಳನ್ನು ಇಳಿಕೆಮಾಡಿಕೊಂಡರೂ ರೂಪಾಯಿಯ ಕುಸಿತವನ್ನು ತಡೆಯಲಾಗದು. ಅದೂ ಅಲ್ಲದೆ, ಮೀಸಲುಗಳ ಗಾತ್ರವು ಕುಗ್ಗುತ್ತಿದ್ದಂತೆಯೇ, ರೂಪಾಯಿಯ ಸ್ಥಿರತೆಯ ಬಗ್ಗೆ ಊಹಾಪೋಹಗಳು ಉಲ್ಬಣಗೊಳ್ಳುತ್ತವೆ. ಇದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ. ಆದ್ದರಿಂದ, ನಮ್ಮ ಬೃಹತ್ ಪ್ರಮಾಣದ ಮೀಸಲು ಸಂಗ್ರಹದ ಹೊರತಾಗಿಯೂ ಭಾರತದ ಪಾವತಿ ಶೇಷದ ಸಮಸ್ಯೆಯು ಕಳವಳಕಾರಿಯಾಗಿಯೇ ಉಳಿಯುತ್ತದೆ.

ಬಡ್ಡಿ ದರಗಳು ಮತ್ತಷ್ಟು ಏರಬಹುದು

ವಿದೇಶ ವ್ಯಾಪಾರ-ವಹಿವಾಟುಗಳ ಈ ಪರಿಸ್ಥಿತಿಯು ಅರ್ಥವ್ಯವಸ್ಥೆಗೆ ಹಾನಿಯುಂಟುಮಾಡುವ ಮೂರನೆಯ ಕಾರಣವು ಹೀಗಿದೆ: ಜಿಡಿಪಿಯ ಬೆಳವಣಿಗೆಯು ನಿಕೃಷ್ಟವಾಗಿರುವ ಪರಿಸ್ಥಿತಿಯಲ್ಲಿ ವ್ಯಾಪಾರ ಕೊರತೆ ಹೆಚ್ಚಿದೆ. 2022-23ರ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್), 2021-22ರ ಅದೇ ತ್ರೈಮಾಸಿಕಕ್ಕೆ ಹೋಲಿಸಿದರೆ, ಶೇ. 13.5ರಷ್ಟಿದ್ದ ಜಿಡಿಪಿ ಬೆಳವಣಿಗೆಯು ಕೋವಿಡ್‌ನಿಂದಾಗಿ ಕೆಳಗೆ ಬಿದ್ದ ಪ್ರಪಾತದಿಂದ ಮೇಲೇರುತ್ತಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಆದರೆ, 2022-23ರ ಎರಡನೇ ತ್ರೈಮಾಸಿಕದ ಜಿಡಿಪಿಯ ಬೆಳವಣಿಗೆಯು, 2021-22ರ ಅದೇ ತ್ರೈಮಾಸಿಕಕ್ಕೆ ಹೋಲಿಸಿದರೆ, ಕೇವಲ ಶೇ. 6.3 ರಷ್ಟಿದೆ. ಆದರೆ, ಈ ತ್ರೈಮಾಸಿಕದಲ್ಲಿ ಸೇರ್ಪಡೆಯಾದ ಒಟ್ಟು ಮೌಲ್ಯವರ್ಧನೆಯ (ಜಿವಿಎ-ಉತ್ಪಾದನೆಯಲ್ಲಿನ ನೈಜ ಹೆಚ್ಚಳವನ್ನು ಅಳೆಯುವ ವಿಧಾನ) ಪ್ರಕಾರ, ಜಿಡಿಪಿಯು ಒಳಗೊಂಡಿರುವ ತೆರಿಗೆಗಳಲ್ಲಿ ಆಗಿರುವ ಬದಲಾವಣೆಗಳನ್ನು ನಿರ್ಲಕ್ಷಿಸಿದರೆ, ಜಿಡಿಪಿಯು ಕೇವಲ ಶೇ. 5.6ರಷ್ಟಾಗುತ್ತದೆ. ಬೆಳವಣಿಗೆಯ ಈ ಮಂದಗತಿಗೆ ಕಾರಣವೆಂದರೆ, ಉತ್ಪಾದನಾ ವಲಯವು ನಿಧಾನಗತಿಯಲ್ಲಿದೆ ಎಂಬುದು. ಈ ವಿದ್ಯಮಾನವು ಪ್ರಾಸಂಗಿಕವೇನಲ್ಲ. ಹಠ ಹಿಡಿದ ರೀತಿಯಲ್ಲಿ ಅದು ಮುಂದುವರಿಯುತ್ತಲೇ ಇದೆ (ಜನಶಕ್ತಿ, ಸಂಚಿಕೆ 1/2023). ಸಂಕ್ಷಿಪ್ತವಾಗಿ ಹೇಳುವುದಾದರೆ, ಭಾರತದ ಕೈಗಾರಿಕಾ ಜಡತೆಯು ಜಿಡಿಪಿಯ ಬೆಳವಣಿಗೆ ದರವನ್ನು ತಗ್ಗಿಸುತ್ತಿದೆ ಮತ್ತು ಮಂದಗತಿಯ ಜಿಡಿಪಿಯ ಬೆಳವಣಿಗೆಯ ಹೊರತಾಗಿಯೂ ವ್ಯಾಪಾರ ಕೊರತೆಯ ಗಾತ್ರ ಏರಿಕೆಯಾಗಿದೆ.

ವ್ಯಾಪಾರ ಕೊರತೆಯ ಈ ಹೆಚ್ಚಳವು ಭಾರತದಲ್ಲಿ ಬಡ್ಡಿ ದರಗಳು ಖಂಡಿತವಾಗಿಯೂ ಮತ್ತಷ್ಟು ಏರಿಕೆಯಾಗಲು ಕಾರಣವಾಗುತ್ತದೆ. ಹಲವು ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ಬಡ್ಡಿ ದರಗಳನ್ನು ಮತ್ತಷ್ಟು ಏರಿಸಲಾಗುತ್ತದೆ: ವ್ಯಾಪಾರ ಕೊರತೆಗೆ ಹಣಕಾಸು ಒದಗಿಸಿಕೊಳ್ಳಲು ಜಾಗತಿಕ ಬಂಡವಾಳವನ್ನು ಆಕರ್ಷಿಸಿಸುವ ಸಲುವಾಗಿ; ದೇಶೀಯ ಬೇಡಿಕೆಯನ್ನು ಮೊಟಕುಗೊಳಿಸುವ ಮೂಲಕ ಕೊರತೆಯನ್ನು ಕಡಿಮೆ ಮಾಡುವ ಸಲುವಾಗಿ; ಮತ್ತು, ಕುಸಿಯುತ್ತಿರುವ ರೂಪಾಯಿಯಿಂದಾಗಿ ಅಂಕೆ ತಪ್ಪಿದ ಹಣದುಬ್ಬರವನ್ನು ನಿಗ್ರಹಿಸುವ ಸಲುವಾಗಿ. ಅನೇಕ ಆರ್ಥಿಕ ಸಂಕಷ್ಟಗಳನ್ನು ಎದುರಿಸಲು ನವ ಉದಾರೀ ಬಂಡವಾಳಶಾಹಿಯು ಹೊಂದಿದ ಏಕೈಕ ಸಾಧನವೆಂದರೆ, ಬಡ್ಡಿ ದರವೇ. ಆರ್ಥಿಕ ಹಿಂಜರಿತ ಮತ್ತು ನಿರುದ್ಯೋಗವನ್ನು ಸೃಷ್ಟಿಸುವ ಈ ಸಾಧನವನ್ನು ನವ ಉದಾರೀ ಬಂಡವಾಳಶಾಹಿಯು ಮುಂಬರುವ ದಿನಗಳಲ್ಲಿ ವ್ಯಾಪಕವಾಗಿ ಬಳಸಲಿದೆ. ಹಾಗಾಗಿ, ಜಿಡಿಪಿಯ ಬೆಳವಣಿಗೆಯ ದರ ಮತ್ತಷ್ಟು ಹಾಳಾಗುತ್ತದೆ. ನಿರುದ್ಯೋಗ ಉಲ್ಬಣಗೊಳ್ಳುತ್ತದೆ ಮತ್ತು ಸಂಕಷ್ಟಗಳು ಹೆಚ್ಚುತ್ತವೆ. ವಿಸ್ತಾರಗೊಳ್ಳುತ್ತಿರುವ ವ್ಯಾಪಾರ ಕೊರತೆಯು ಅರ್ಥವ್ಯವಸ್ಥೆಯ ಉತ್ಕರ್ಷದಿಂದ ಸಂಭವಿಸುತ್ತಿಲ್ಲ, ಬದಲಿಗೆ, ಕೈಗಾರಿಕಾ ಜಡತೆಯ ಅವಧಿಯಲ್ಲಿ ಸಂಭವಿಸುತ್ತಿದೆ ಎಂಬ ಅಂಶವು ಅರ್ಥವ್ಯವಸ್ಥೆಯು ಹದಗೆಡಲಿದೆ ಎಂಬುದರ ಮುನ್ಸೂಚನೆಯಾಗಿ ಕಾಣುತ್ತಿದೆ.

ಗಂಭೀರ ಕಾಳಜಿಯ ವಿಷಯ

ಪ್ರಸಕ್ತ ಪರಿಸ್ಥಿತಿ ಹೊಸದೇನಲ್ಲ ಎಂದು ಕೆಲವರು ಹೇಳಬಹುದು. 2012-13ರಲ್ಲಿ, ಅಮೆರಿಕಾ ಅನುಸರಿಸಲು ಹೊರಟ ಬಿಗಿ ಹಣಕಾಸು ನೀತಿಯ ಸೂಚನೆಯಾಗಿ, ಅದರ ಫೆಡರಲ್ ರಿಸರ್ವ್ ಬೋರ್ಡ್ ಬಾಂಡ್ ಖರೀದಿಯನ್ನು ಕ್ರಮೇಣ ಕಡಿಮೆ ಮಾಡಿದ ಪರಿಣಾಮವಾಗಿ, ಇದೇ ರೀತಿಯಲ್ಲಿ ನಮ್ಮ ವ್ಯಾಪಾರ ಕೊರತೆಯ ವಿಸ್ತರಣೆ ಮತ್ತು ರೂಪಾಯಿಯ ಕುಸಿತದಿಂದಾಗಿ ದೇಶವು ಇದೇ ರೀತಿಯ ದುಃಸ್ಥಿತಿಯನ್ನು ಎದುರಿಸಿತ್ತು. ದೇಶವು ಆರ್ಥಿಕ ಸಂಕಷ್ಟಗಳ ಅವಧಿಗೆ ಒಳಗಾಯಿತು, ನಿಜ. ಆದರೆ ಅದು ದಾಟಲಾಗದ ರೀತಿಯ ಬಿಕ್ಕಟ್ಟನ್ನು ಸೃಷ್ಟಿಸಿರಲಿಲ್ಲ. ಹಾಗಾಗಿ, ಅದೇ ರೀತಿಯ ಒಂದು ಪರಿಸ್ಥಿತಿಯು ಈಗ ಒಂದು ಗಂಭೀರ ಕಾಳಜಿಯ ವಿಷಯವಾಗಬೇಕು ಏಕೆ?

ಅಂದಿನ ಮತ್ತು ಇಂದಿನ ಪರಿಸ್ಥಿತಿಗಳ ನಡುವೆ ಒಂದು ಮೂಲಭೂತ ವ್ಯತ್ಯಾಸವಿದೆ. ಜಾಗತಿಕ ಅರ್ಥವ್ಯವಸ್ಥೆಯ ಅಂದಿನಂತಲ್ಲದೆ ಇಂದು ಒಂದು ತೀವ್ರ ಹಣದುಬ್ಬರದ ಬಾಧೆಯಿಂದ ಬಳಲುತ್ತಿದೆ. ಹಣದುಬ್ಬರದ ಕಾರಣದಿಂದಾಗಿ ಎಲ್ಲೆಡೆ ಬಡ್ಡಿ ದರಗಳು ಏರಿಕೆಯಾಗಿವೆ. ಅದರಿಂದಾಗಿ ಇಡೀ ವಿಶ್ವವೇ ಒಂದು ತೀವ್ರ ಆರ್ಥಿಕ ಹಿಂಜರಿತಕ್ಕೆ ಒಳಗಾಗುತ್ತಿದೆ. ಅಂದು ಭಾರತದ ಬಡ್ಡಿ ದರಗಳನ್ನು ಏರಿಸುವ ಮೂಲಕ ಪರಿಸ್ಥಿತಿಗೆ ರಿಸರ್ವ್ ಬ್ಯಾಂಕ್ ಸ್ಪಂದಿಸಿತ್ತು. ಅಂದು ಇತರ ದೇಶಗಳು ಬಡ್ಡಿ ದರಗಳನ್ನು ಏರಿಸಲಿಲ್ಲ. ಹಾಗಾಗಿ, ರಿಸರ್ವ್ ಬ್ಯಾಂಕ್‌ನ ಸ್ಪಂದನೆಯು ಬಿಕ್ಕಟ್ಟನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿತ್ತು. ಆದರೆ ಈಗ, ಎಲ್ಲಾ ಬಂಡವಾಳಶಾಹಿ ದೇಶಗಳೂ ಬಡ್ಡಿ ದರಗಳನ್ನು ಏರಿಸುತ್ತಿರುವುದರಿಂದ ರಿಸರ್ವ್ ಬ್ಯಾಂಕ್‌ನ ಬಡ್ಡಿ ದರ ಏರಿಕೆಯ ನೀತಿಯು ಕೆಲಸ ಮಾಡುವುದಿಲ್ಲ. ಬಡ್ಡಿ ದರಗಳ ಈ ಏರಿಕೆಯು ಜಾಗತಿಕ ಆರ್ಥಿಕ ಹಿಂಜರಿತವನ್ನು ಉಂಟುಮಾಡುತ್ತದೆ. ಆದ್ದರಿಂದ ನಮ್ಮ ವ್ಯಾಪಾರ ಕೊರತೆಯು ಇನ್ನೂ ಕೆಲ ಕಾಲ ಮುಂದುವರಿಯುತ್ತದೆ. ಮತ್ತು, ಹೆಚ್ಚುತ್ತಿರುವ ವ್ಯಾಪಾರ ಕೊರತೆಯು ಮುಂದುವರೆಯುತ್ತಿರುವ ಭಾರತದ ಆರ್ಥಿಕ ಬಿಕ್ಕಟ್ಟನ್ನು ರಭಸಗೊಳಿಸುತ್ತದೆ ಎಂಬ ಅಂಶವನ್ನು ಈ ಹಿಂದೆ ಸೂಚಿಸಲಾಗಿದೆ.

ಈ ಎಲ್ಲ ಅಂಶಗಳೂ ನವ ಉದಾರವಾದಿ ಬಂಡವಾಳಶಾಹಿಯು ಮುಂದಿನ ದಾರಿಗಾಣದ ಪರಿಸ್ಥಿತಿಯಲ್ಲಿದೆ ಎಂಬುದನ್ನು ಮತ್ತು ಪಾಶ್ಚ್ಯಾತ್ಯ ಸಾಮ್ರಾಜ್ಯಶಾಹಿಯ ಪ್ರಾಬಲ್ಯಕ್ಕೆ ತೀವ್ರವಾದ ಸವಾಲು ಎಸೆಯಲಾಗಿದೆ ಎಂಬುದನ್ನು ಸೂಚಿಸುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಜಾಗತಿಕ ಬಂಡವಾಳಶಾಹಿಯು ಯಾವ ಅವಸ್ಥೆಯಲ್ಲಿದೆ ಎಂದರೆ, ಅದನ್ನು ಮೀರುವ ಹೊಸ ಸಾಧ್ಯತೆಗಳು ಸೃಷ್ಟಿಯಾಗುತ್ತವೆ. ಈ ಅವಕಾಶವನ್ನು ಬಳಸಿಕೊಳ್ಳುವ ಬದಲು, ನಮ್ಮ ಅರ್ಥವ್ಯವಸ್ಥೆಯು ನವ ಉದಾರವಾದಿ ಬಂಡವಾಳಶಾಹಿಯ ಆಳ್ವಿಕೆಯೊಳಗೇ ಸಿಲುಕಿದ್ದುಕೊಂಡು ಸಾಲ ಪಡೆಯುವ ಮೂಲಕ ತನ್ನ ದುಃಸ್ಥಿತಿಯಿಂದ ಪಾರಾಗಲು ಪ್ರಯತ್ನಿಸಿದರೆ, ದೇಶವು ಈಗ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟು ಭವಿಷ್ಯದಲ್ಲಿ ಉಲ್ಬಣಗೊಳ್ಳುತ್ತದಷ್ಟೇ.

Donate Janashakthi Media

Leave a Reply

Your email address will not be published. Required fields are marked *